Wednesday, 29 December, 2010

ಹೊಸ ಕನಸಿನ ನನ್ನ ನಾಳೆಗಳು..

ಬದುಕಿನೆಡೆಗೊಂದಿಷ್ಟು ಪ್ರೀತಿ,
ರಾಶಿ ಕುತೂಹಲ, ಅಚ್ಚರಿ
ಎದೆಯೊಳೆಲ್ಲವ ಮುಚ್ಚಿಟ್ಟುಕೊಂಡು
ಪಿಳಿ ಪಿಳಿ ಎಂದು ಕಣ್ಣು ಬಿಟ್ಟಾಗಿನ ಪರಿ

ಯಾರೋ ಎತ್ತಿಕೊಂಡು
ಪ್ರೀತಿಯಿಂದ ಎದೆಗೊತ್ತಿಕೊಂಡು
ಕಣ್ಣಿಂದ ಪನ್ನೀರು ಸುರಿಸಿ
ಎದೆಯಿಂದ ಅಮೃತವ ಉಣಿಸಿ

ನೋಡನೋಡುತ್ತಿದ್ದಂತೆ
ಕಾಲ್ಗೆಜ್ಜೆ ಘಲ್ಲೆಂದು
ಯಾರದೋ ಹೃದಯದ ಪಿಸುಮಾತಿಗೆ
ಎದೆ ಝಾಲ್ಲೆಂದದ್ದೂ ಆಯಿತು..

ನನ್ನಷ್ಟಕ್ಕೆ ನಾನಿದ್ದೆ,
ಪುಟ್ಟ ಹುಡುಗಿ ನಾನು ಎಂದುಕೊಂಡಿದ್ದೆ
ನಾಳೆ ನಾಳೆ ಮದುವೆಯಂತೆ..
ನಿಶ್ಚಯಿಸಿದ್ದೂ ಆಯಿತು.

ಹೊಸ ಕನಸುಗಳು ಅರಳಿ
ನನ್ನವನ ಸ್ವಾಗತಿಸುವವಂತೆ
ನನ್ನ ನಾಳೆಗಳೆಲ್ಲ ಇನ್ನು
ನನ್ನಿನಿಯನಿಗಂತೆ...

ನನ್ನ ಗೆಳೆಯ ವಿನಾಯಕನೊಂದಿಗೆ ಡಿಸೆಂಬರ್ ೨೦ಕ್ಕೆ ನನ್ನ ನಿಶ್ಚಿತಾರ್ಥವಾಯಿತು. ನಿಮ್ಮೆಲ್ಲರ ಹಾರೈಕೆಗಳನ್ನು ಬಯಸಿ ಈ ಕವನವನ್ನು ನಿಮ್ಮ ಮುಂದಿಡುತ್ತಿದ್ದೇನೆ..

Tuesday, 7 September, 2010

ಎಚ್ಚರಾಗುವೆನೆ ನಾನು?


ಒಂಟಿ ಮರದಲಿ ಉಲಿಯುತಿಹ ಹಕ್ಕಿಯಂತೆ
ಕಡುಗಪ್ಪು ರಾತ್ರಿಯಲಿ ಜೊತೆ ಬಯಸಿ
ಉಕ್ಕುತಿಹ ಕಡಲಿನಂತೆ
ಜಾತ್ರೆಯಲಿ ತಾಯ ಕೈ ಬೆರಳು
ತಪ್ಪಿಹೋಗಿರುವ ಮಗುವಿನಂತೆ
ರಾಗ ಬೆರೆಸುವರಿಲ್ಲ, ದಾರಿ ಹೇಳುವರಿಲ್ಲ
ಬದುಕು ಎಲ್ಲಿಹುದೋ ತೋರುವವರರಿಲ್ಲ

ಸಂಜೆ ಮಳೆಯಲ್ಲಿ ಮನೆಬಿಟ್ಟ
ಮದುವೆಯಿಲ್ಲದ ಬಸುರಿಯಂತೆ
ಹಸಿದ ಎಳೆ ಕರು ಸತ್ತ ತಾಯಿಯ ಬಯಸಿ
ಅಂಬಾ.. ಎಂದು ಕರೆಯುವಂತೆ
ಭಾರವೆಷ್ಟಿಹುದೋ ಇಳಿಸುವವರಾರಿಲ್ಲ
ಭಾವವೆಂತಿಹುದೋ ಕೇಳುವವರಾರಿಲ್ಲ

ಅರಿತಿಲ್ಲ ಏನಿಹುದೋ ನನ್ನ ಒಳಗೆ
ಒಂಟಿತನ ಕಾಡುತಿದೆ ಸಂತೆಯೊಳಗೆ
ನಿದ್ದೆಗಣ್ಣಲೇ ನಿತ್ಯ ವಿಶ್ವ ಪರ್ಯಟನೆ
ಅಮಲಿನಲಿ ನಾ ಸತತ ತೇಲುತಿಹೆನೆ?

ಅಂಟಿಕೊಂಡಿಹುದು ಜಗದ
ಕೊಳೆಯೆಲ್ಲ ನನಗೆ...
ಖಚಿತವಾಗದೆ ಹೋದುದು ಒಳಗಿರುವ ಭಾವ
ಮಸುಕಾದ ಕನ್ನಡಿಯ ಹಾಗೆ

ಕಾದಿರುವೆ ಯಾರೋ ಕನಿಕರಿಸುವಂತೆ
ಮರುಗುತಿಹೆ ನಾನಿಲ್ಲಿ ಜೊತೆ ಬಯಸಿ 
ನಲ್ಲೆ ಇನಿಯನ ಬಳಿಸಾರಿ ಬರುವಂತೆ
ಸಾವು ಬರುತಿದೆ ಸನಿಹ ನನ್ನ ಅರಸಿ 

ಹುಟ್ಟಿದಾಗಲೇ ಶುರುವಾಗಿದೆ ಕ್ಷಣಗಣನೆ...
ನೋಡಬೇಕಿದೆ,
ನಾ ಇನ್ನಾದರೂ ಎಚ್ಚರಾಗುವೆನೆ?

Wednesday, 4 August, 2010

ಕನಸುಗಳು ಕಾದಿರಲಿ ಕೊಂಚ..


ಕಡುಗಪ್ಪು ರಾತ್ರಿಯಲಿ 
ಭೂತಾಯಿ ಮಡಿಲಲ್ಲಿ
ದಣಿದ ಜನಕೆಲ್ಲ 
ಬೆಚ್ಚಗಿನ ಸುಖನಿದ್ರೆ

ಧೋ ಮಳೆಯ ಜೋಗುಳಕೆ 
ಕಿವಿಯಾಗು ಎಂದೆ
ಸುರಿವ ಧಾರೆಗೆ ನೆನೆವ 
ಮೈಯ್ಯಾದೆ ಏಕೆ?

ಜುಳಜುಳನೆ ಹರಿವ 
ತೊರೆಯ ಗಾನವು ನಿನದು
ಸುಯ್ವ  ಗಾಳಿಯ ಹಾಡು
ನಿನಗೆಂದೇ ಹಾಡಿದ್ದು
ಕೇಳುತ್ತ ಹಿತವಾಗಿ 
ನೀ ಮಲಗು ಎಂದೆ

ತೊರೆಯ ತೀರಕೆ ನಡೆದು
ಕಡಲ ಸೇರುವ ನದಿಗೆ 
ಮೇಲ್ಮೇಲೆ ತಂಪು,
ಒಡಲೆಲ್ಲ ಬೆಂಕಿ 
ವಿರಹದುರಿಯನು ನೀನು ಬಲ್ಲೆಯೇನು?
ಎನುತ ಅಳುವೆಯೇಕೆ?

ಸಾಗರವ ಸೇರುವುದು 
ಸಹಜ ಧರ್ಮವು ಹೌದು
ಹುಟ್ಟಿ ಹರಿಯದೆಯೇ ಸೇರಿದರೆ
ಬದುಕು ಚೆಂದವಾಗುವುದೇನು?

ಆತುರತೆ ಬದಿಗಿರಲಿ
ಕನಸುಗಳು ಕಾದಿರಲಿ
ಸಹಜತೆಯು ಜೊತೆಗಿರಲಿ
ಮನದಾಳ ತಂಪಾಗಿ
ನದಿಯಂತೆ ನಲಿದಾಡಿ
ಸಾಗರದ ಕಡೆ ಪಯಣ ಸಾಗುತಿರಲಿ

Saturday, 31 July, 2010

ಆಗಾಗ ಹೊಸತಾಗುವ ಹಳೇ ಬದುಕು...


   ನಿನ್ನ ಅಹಂಕಾರವನ್ನುಬ್ಬಿಸುತ್ತ, ನಿನ್ನ ಹಿಂದೆ ಹಿಂದೆ ಅಲೆಯುತ್ತ, ನಮ್ಮ ಮಧ್ಯೆ ಇಲ್ಲದ ಪ್ರೀತಿಯನ್ನು ಪ್ರದರ್ಶಿಸಲು ಹೋಗಿ, ಪ್ರೀತಿಯ ಶವವನ್ನು ಇಟ್ಟುಕೊಂಡು ಬದುಕುತ್ತಿದ್ದೇವೆಂದು ಬುದ್ಧಿಯಿದ್ದವರಿಗೆ ಗೊತ್ತಾಗಿ,ಆಗ ನನಗೆ ಅವಮಾನವಾಗಿ, ಆ ಅವಮಾನ ಸಹಿಸಿಕೊಳ್ಳಲೇಬೇಕಾದಾಗೆಲ್ಲ ಮುಖ ಬಾಡಿಸಿಕೊಂಡು ಮನೆಗೆ ಅಂದರೆ ಪುನಃ ನೀನಿದ್ದಲ್ಲಿಗೆ ಬರುವುದು, ಮತ್ತೆ ನಿನ್ನೊಂದಿಗೆ ಜಗಳವಾಡುತ್ತಾ ಅಡುಗೆ ಮಾಡುವುದು, ಸಿಟ್ಟಿನಿಂದ ಬೇಯಿಸಿದ್ದನ್ನೇ ಉಂಡು, ಇದರಿಂದೆಲ್ಲ ಮುಕ್ತಿ ಯಾವಾಗಪ್ಪ ಎಂದುಕೊಳ್ಳುತ್ತ ಮಲಗಿದಲ್ಲೇ ಧಾರಾಕಾರ ಕಣ್ಣೀರು ಹರಿದು, ಮೂಗಿನಿಂದಲೂ  ಒಂದಷ್ಟು ಸುರಿದು, ಸೊರಗುಡುತ್ತ, ಒರೆಸಿಕೊಳ್ಳುತ್ತಾ, ನಿದ್ರಿಸಿ, ಕನಸು ಕಂಡು, ಬೆಳಗೂ ಆಗಿ ಬಿಡುತ್ತದೆ. ಮತ್ತೆ ಇವೆಲ್ಲವುಗಳ ಪುನರಾವರ್ತನೆಯ ಹೊಸ ಆರಂಭ..ಮತ್ತದೇ ಹಳೆಯ ಅಂತ್ಯಕ್ಕೆ ಹೊಸ ನಾಂದಿ.. ಥೂ... ಜೀವನ ಗಬ್ಬೆದ್ದು ಹೋಗಿದೆ...ಹಳಿ ತಪ್ಪಿ ಹೋಗಿದೆ...
  ನನಗೂ ಒಂದು ಹೊಸ ಬದುಕನ್ನು ಬದುಕಿ ನೋಡಬೇಕಿದೆ. ಬಹುಶಃ ಅದು ಕೂಡ ಇದೇ ಕಡಲಿನ ಕಾಣದ ಮತ್ತೊಂದು ತೀರವೋ ಏನೋ.. ಕಂಡಿದ್ದು, ಕಾಣದ್ದು ಎಂಬಷ್ಟೇ ವ್ಯತ್ಯಾಸವಾಗಿದ್ದರೂ ಪರವಾಗಿಲ್ಲ. ಇದೇ ಬದುಕಿನ ಇನ್ನೊಂದು ತೀರವಾದರೂ ಪರವಾಗಿಲ್ಲ, ಇನ್ನೊಮ್ಮೆ ಹೊಸ ಬದುಕು ಬದುಕಿಬಿಡುತ್ತೇನೆ ಎನಿಸಿಬಿಟ್ಟಿದೆ.
   ಹೀಗೆಲ್ಲ ಅಂದಾಗ ಒಳಗ್ಯಾರೋ ನಕ್ಕಂತೆ, ನಕ್ಕು ನುಡಿದಂತೆ, "ಈಗ ಅಂತ್ಯಗೊಳಿಸಬೇಕೆಂದು ಹೊರಟ ಜೀವನವೂ ಕೂಡ ಹಿಂದೊಮ್ಮೆ ಆಸೆಪಟ್ಟು ಆರಂಭಿಸಿದ ಹೊಸ ಜೀವನವೇ ಆಗಿತ್ತು. ಇಬ್ಬರ ಮೆಲ್ಲುಸಿರುಗಳು ಸೇರಿ ಹಾಡಿದ ಸವಿ ಗಾನಗಳೆಷ್ಟು? ಈಗಿನ ನಿಟ್ಟುಸಿರುಗಳೆಲ್ಲ ಅವುಗಳದೇ ಪಳೆಯುಳಿಕೆಗಳಿರಬೇಕು.ಆಗೆಲ್ಲ ಕೈ ಕೈ ಹಿಡಿದು, ಕೊಂಚ ಹೆಚ್ಚಾಗೇ ಮೈಗೆ ಮೈ ತಾಕುತ್ತ ನಡೆದ ಹೆಜ್ಜೆಗಳೆಷ್ಟು? ಮನಸಿನಲ್ಲೇ ಮಾಡಿದ ಪ್ರಮಾಣಗಳೆಷ್ಟು, ಕೊನೆಯುಸಿರಿನವರೆಗೂ ಹೀಗೇ ನಡೆಯುತ್ತೇವೆ ಬಾಳ ಹಾದಿಯಲ್ಲಿ ಎಂದು ಕಣ್ತುಂಬಿ ಕೈಹಿಡಿದು ನುಡಿದ ಮಾತುಗಳೆಷ್ಟು? ಆಣೆಗಳೆಷ್ಟು? ಈಗಿನ ಕಿತ್ತಾಟಗಳು, ಪ್ರತಿದಿನದ ಅಳು, ಕಿರುಚಾಟಗಳು, ಅವುಗಳದೇ ಅವಶೇಷಗಳಿರಬೇಕು.ಇಂದಿನ ಬದುಕು ಸುಂದರ ಶಿಲ್ಪವೊಂದು ಭಗ್ನವಾದಂತಾಗಿದೆ!" ಎಂದಂತೆ ಭಾಸವಾಗಿ, ಬದುಕನ್ನು ಬದಲಿಸಲು ಹೊರಡುವ ನಿರ್ಧಾರ ಕೊಂಚ ಸಡಿಲಗೊಳ್ಳುತ್ತದೆ. ನಾಳೆಯಿಂದ ನಸುಕಿಗೆ ಎದ್ದು ಓದಿಕೊಳ್ಳುತ್ತೇನೆ ಎಂದು ದಿನವೂ ನಿರ್ಧರಿಸುವ ವಿದ್ಯಾರ್ಥಿಯಂತಾಗಿ ಹೋಗುತ್ತೇನೆ ನಾನು. ಹೌದಾ? ಇನ್ನು ಈ ಬದುಕನ್ನು ಹೊಸದು ಮಾಡಿಕೊಳ್ಳುವುದು ಸಾಧ್ಯವೇ ಇಲ್ಲವಾ? ಇನ್ನೇನಿದ್ದರೂ ಕೇವಲ ರಿಪೇರಿಯಷ್ಟೇನಾ? ಎನಿಸಿ ಖಿನ್ನಳಾಗುತ್ತೇನೆ.
    ದಿನವೂ ಹೀಗೇ ಆಗಿದ್ದರೆ,ಜೀವನ ಇಷ್ಟೇ ಎಂದಾಗಿದ್ದರೆ, ನನ್ನವರೊಡನೆ ನಾನು ದಿನವೂ ಹೀಗೆ ಜಗಳವಾಡುತ್ತಲೇ ಇರುತ್ತಿದ್ದರೆ ಜೀವನ ನಿಜವಾಗಲೂ ನರಕವಾಗಿ ಹೋಗುತ್ತಿತ್ತು. ಆದರೂ ಕೆಲವೊಮ್ಮೆ ಅಪರೂಪಕ್ಕೆ ಹೀಗೆಲ್ಲ ಅನ್ನಿಸಿಬಿಡುವುದು ಸುಳ್ಳಲ್ಲ. ಎಷ್ಟೋ ಶತ ವರ್ಷಗಳಿಂದ ಇದೇ ಜೀವನವನ್ನು ಬದುಕುತ್ತಿದ್ದೆನೇನೋ ಎನಿಸಿ, ಜೀವನ ಅಸಹನೀಯ ಅಂತೆಲ್ಲ ಅನಿಸಿ ಹೋಗುತ್ತದೆ. ಆದರೆ ಯಾವ ದೇವರ ಪುಣ್ಯವೋ ಗೊತ್ತಿಲ್ಲ, ದಿನವೂ ಹೀಗನಿಸುವುದಿಲ್ಲ. ಅಳುಮುಖ ಮಾಡಿಕೊಂಡು ಮುದುಡಿ  ಕೂತಾಗಲೂ ಗೊತ್ತಿಲ್ಲದ ಯಾವುದೋ ಒಂದು ಶಕ್ತಿ ಅಲ್ಲಿಂದ ಎತ್ತಿಕೊಂಡು ಬಂದು 'ಈ ಬದುಕು ನಿನಗಾಗಿ ಕೊಟ್ಟಿದ್ದು, ಬದುಕಿಬಿಡು' ಎಂದು ಜೀವನಾಭಿಮುಖವಾಗಿ ನಿಲ್ಲಿಸಿಬಿಡುತ್ತದೆ. ಮತ್ತೆ ಖುಷಿ ಉಕ್ಕಿ ಹರಿಯತೊಡಗುತ್ತದೆ. ಮತ್ತೆ ಹಳೆಯ ಬದುಕೇ ಹೊಸದಾಗಿ ಕಾಣತೊಡಗುತ್ತದೆ.ತಪ್ಪುಗಳ ರಿಪೇರಿ ಕೂಡ ನವಿರಾಗಿ ನಡೆಯತೊಡಗುತ್ತದೆ. ಚಿಕ್ಕ ಚಿಕ್ಕ ಖುಷಿಗಳೆಲ್ಲ ಸೇರಿ ಒಂದು ದೊಡ್ಡ ಮೊತ್ತದ ಧನ್ಯತೆ ಹೊಮ್ಮುತ್ತದೆ ಹೃದಯದಾಳದಿಂದ.  ಇದು ಹುಚ್ಚು ಮನಸ್ಸಿನ ಸ್ವಭಾವವಾ? ಅಥವಾ ಅಶಕ್ತಳಾದಾಗ  ಬದುಕನ್ನು ನೀಡಿದ ಶಕ್ತಿಯೇ ಹೀಗೆ ಆಧಾರಕ್ಕೆ ನಿಂತು ಪೊರೆಯುತ್ತದಾ? ಗೊತ್ತಿಲ್ಲ. ಅಂತೂ ಹೀಗೆಲ್ಲ ಆಗಿ ಬದುಕು ಮತ್ತೆ ಮತ್ತೆ ಹಳಿ ತಪ್ಪುತ್ತದೆ, ಮತ್ತೆ ಮತ್ತೆ ಹದಕ್ಕೆ ಬರುತ್ತದೆ. ಆದರೂ ಬದುಕು ತುಂಬ ಸುಂದರವಾಗಿದೆ ಅಥವಾ ಆದ್ದರಿಂದಲೇ ಇಷ್ಟು ಸುಂದರವಾಗಿದೆ.

Friday, 16 July, 2010

ಹೇಳು ನಾ ಕಾಯಲೇನು?

ಎಲ್ಲಾದರೂ ಆದೀತು,
ಆ ನದಿಯ ದಂಡೆಯಾದರೂ
ಈ ತೀರದ ಬಂಡೆಯಾದರೂ
ನೀನೆಲ್ಲಿರುವೆಯೆಂದು ಗೊತ್ತಿಲ್ಲದಿರುವಾಗ...

ಮನವ ಹೊತ್ತೊಯ್ಯಲ್ಲಿ 
ಅಪ್ಪಳಿಸಿದ ಅಲೆಗಳಿಂದು
ಗುರಿಯೇ  ಇಲ್ಲದಿರುವಾಗ
ನಾವಿಕನೇಕೆ? ನೌಕೆಯೇಕೆ?
ಹೋಗಿ ಸೇರಲಿ ಎಲ್ಲಾದರೂ
ಮನಸು ಮೈಮರೆಯುವಲ್ಲಿಗೆ

ಬಯಕೆಗಳ ಭಾರಕ್ಕೆ
ಬೆನ್ನು ಬಾಗಿರುವಾಗ 
ಪಯಣ ಮಾಡಬೇಕೆ
ಬವಣೆಗಳ ಇನ್ನೊಂದು ತೀರಕ್ಕೆ?

ನಿನ್ನ ಇರುವಿಕೆಯ ಸುಳಿವಿಲ್ಲ
ನನ್ನೊಳಗೆ 'ನಾನು' ತುಂಬಿರುವಾಗ
ಬರುವಿಕೆಯ ಕಾಯುತಿರುವೆನೆಂದು 
ಹೇಳಿರುವುದು ಸುಳ್ಳಾಗಿರುವಾಗ
ನೀ ಬರುವ ಸೂಚನೆಯೂ ಇಲ್ಲ

ಆದರೂ ಕಾಯಲೇನು?
ಕ್ಷಮಿಸಲಾದರೂ ಒಮ್ಮೆ ಬರುವೆಯೇನು?
ಕರುಣೆಯಿಂದಾದರೂ..
ಪ್ರೀತಿಯಿಂದಾದರೂ...
ಭಿಕ್ಷೆಯೆಂದಾದರೂ...
ದಾನವೆಂದಾದರೂ..

ಹೇಗಾದರೂ ಸರಿ...
ಒಂದು ಹಿಡಿ ಪ್ರೀತಿಯ
ಕೊಡುವೆಯೇನು?
ಹೇಳು, ಹೇಳು,
ನಾ ಕಾಯಲೇನು?

Friday, 18 June, 2010

ಮತ್ತೆ ಕಡಲಿಗೆ ಮರಳಬೇಕು ...ಕಡಲ ದಂಡೆಗೆ ಮರಳಿ..
ಮರಳಿನಾಟವ ಆಡಿ...
ಮತ್ತೆ ಕಡಲಿಗೆ ಮರಳಬೇಕು ...

ಮರಳ ಮನೆಯನು ಕಟ್ಟಿ
ಮೋಹದಲಿ ಮರುಳಾಗಿ
ನನ್ನದೆನ್ನುತ ಬೀಗಿ
ಕಳೆದುಕೊಂಡು ಮತ್ತೆ
ಮರುಗುವೆನು ಮರುಳನಂತೆ

ಕಡಲೊಳಗೆ  ಕಳೆದೊಡನೆ 
ದಂಡೆಯಲಿ ಹುಡುಕುವೆನು
ಸಿಗದೇ ಒದ್ದಾಡುವೆನು
ಹುಡುಕುತಲಿ ಕಳೆದದ್ದೇ
ಮರೆಯುವೆನು

ಆಟವಾಡಲು ಬಂದು
ಆಟವನೆ ಮರೆತು
ದಂಡೆಯಲೇ ಕಾಲೂರಿ 
ಮರಳಲೊಲ್ಲೇನೆಂದು 
ಕಣ್ಣೀರು ಕರೆವಾಗ

ಮೇಲೆ ನಿಂತವನು
ನೋಡಿ ನಸುನಕ್ಕನಂತೆ !!!!

ಹೌದು ಮರೆತಿದ್ದೆ,
ಕಡಲ ದಂಡೆಗೆ ಮರಳಿ..
ಮರಳಿನಾಟವ ಆಡಿ...
ಮತ್ತೆ ಕಡಲಿಗೆ ಮರಳಬೇಕು ...

Thursday, 17 June, 2010

ಕಾರಣವೇನು?

ಅವನೊಡನೆ ಹೋಗಬೇಡವೆಂದ
ತಾಯ್ತಂದೆಯ ಕಾಳಜಿ
ಕಟ್ಟಳೆಯಂತೆ
ಅವರು ಒರೆಸಿಕೊಂಡ ಕಣ್ಣೀರು
ನಾಟಕದಂತೆ
ತೋರಿದ  ಹುಡುಗಿಗೆ,

ಹಳೆಯ ಗೆಳೆಯರೊಂದಿಗೆ
ಮಾತನಾಡಬೇಡವೆಂದು
ಸಿಡುಕಿದ ಪ್ರೇಮಿಯ
ಕಟ್ಟಳೆಗಳು
ಉತ್ಕಟ ಪ್ರೇಮವೆಂದು
ಭಾಸವಾದರೆ...

ಅದಕ್ಕೆ ಕಾರಣ
ವಯಸ್ಸೋ?
ಪ್ರೇಮವೋ?

Saturday, 12 June, 2010

ಹೊಟ್ಟೆ ತುಂಬಿದ ಮೇಲೆ...

ಪ್ರೀತಿ ಪ್ರೆಮವೆಲ್ಲ
ಹೊಟ್ಟೆ ತುಂಬಿದ ಮೇಲೆ...
ಬಯಕೆ ತೀರಿದವರಿಗೆ
ಬದುಕು ಭಗವಂತನ ಲೀಲೆ...

ಮಣ್ಣಾದರೂ ಅನ್ನವಾಗಲೆಂದು
ಕನಸು ಕಾಣುವಾಗ,
ನಿನ್ನ ಹಸಿವೆಲ್ಲ ಕನಸು
ಈ ಜಗವೊಂದು ಮಾಯೆ
ಎಂದರೆ ಕೇಳಲಾಗುವುದೇ?

ಹಾಲು ಬತ್ತಿದೆದೆಯನು ತೆರೆದು
ಹಸಿದ ಕೂಸಿನ ಬಾಯಿಗಿಡುವಾಗ
ಹೊನ್ನು ಕಾಣದ ಕಣ್ಣು
ನೀರು ಬತ್ತಿದ ಕೂಸಿನ ಕಣ್ಣಲ್ಲಿ 
ಹೊಂಬೆಳಕ ಕಂಡಾಗ
ಹೊನ್ನೆಲ್ಲ ಮಣ್ಣು
ಎಂದರೆ ನಂಬಲಾಗುವುದೇ?


ಬಿಟ್ಟು ಹೋಗಲು ಏನೂ 
ಇಲ್ಲದವನಿಗೆ 
ಎಲ್ಲ ಬಿಟ್ಟು ಹೋಗಿ ಬುದ್ಧನಾಗು
ಎಂದರೆ ಬಿಡುವುದಾದರೂ ಏನನ್ನು?
ಬಿಡಲಾದರೂ ಕೂಡಿಸಬೇಕಲ್ಲ
ಎನಿಸದೇ ಇದ್ದೀತೆ?

Wednesday, 19 May, 2010

ಹಾಗಾಗದೇ ಇದ್ದಿದ್ದರೆ..


ಕಲ್ಲು ಮಂಟಪದೊಳಗೆ
ನನ್ನೊಡನೆ ಕುಳಿತೆದ್ದು ಬಂದಾಗ
ಪರಧ್ಯಾನದೊಳಿದ್ದೆಯ?
ಎಂದು ನೀ ಕೇಳದಿರುತ್ತಿದ್ದರೆ...

ನಾನು ನಿನ್ನ ಮಡದಿಯಾಗಿ
ನಿನ್ನದೇ ಮಗುವಿನ ತಾಯಾಗಿ
ನಿನ್ನೊಡನೆ ಚಿತೆಯಲ್ಲಿ ಮಲಗಿರುವ
ಕನಸು ಕಂಡೆನೆಂದು 
ಹೇಳದೇ ಇರುತ್ತಿರಲಿಲ್ಲ...

ಗಳಿಗೆ ಮುಂಚೆ ಮುತ್ತುದುರಿದ
ತುಟಿಗಳಿಂದಲೇ ಮರುಗಳಿಗೆ 
ಕನಸೊಡೆಯುವ
ಮಾತುದುರಬಹುದೆಂದು 
ಗೊತ್ತಾಗದೆ ಹೋಗಿದ್ದರೆ...

ನಿದಿರೆಯ ತುಂಬೆಲ್ಲ
ನಿನ್ನ ಲಾಲಿ ತುಂಬಿಕೊಂಡು
ಎದೆಗೂಡ ತುಂಬೆಲ್ಲ 
ನಿನ್ನುಸಿರು ತುಂಬಿಕೊಂಡು
ಕಣ್ಣ ರೆಪ್ಪೆ ಮಿಟುಕಿಸದೆ 
ಕಾದು ಕೂತುಬಿಡುತ್ತಿದ್ದೆನಲ್ಲೋ ಹುಡುಗ...

ಆದರೂ..
ಹಾಗಾಗದೇ ಇದ್ದಿದ್ದರೆ...
ನನಗೆ ಏನೇನೂ ತಿಳಿಯದೆ ಇದ್ದಿದ್ದರೆ
ತುಂಬ ಒಳ್ಳೆಯದಿತ್ತು
ಎಂದು ಕಣ್ಣು ಕಡಲಾಗಿಸುವ
ಹುಡುಗಿಗೆ..

ಕಡಲಿನಾಳದಂತಹ 
ಅವಳ ಪ್ರಶಾಂತ ಪ್ರೇಮಕ್ಕೆ...
ಬುದ್ಧಿ ಎಂದಿಗೂ ಸವಾರಿ
ಮಾಡಲು ಸಾಧ್ಯವಿಲ್ಲದಂತಹ 
ಅವಳ ಹೃದಯಕ್ಕೆ...
ಕರುಣೆ ಬೇಡವೆನ್ನುವ ಅವಳ 
ಸ್ವಾಭಿಮಾನಕ್ಕೆ...

ನನ್ನಿಂದ ಏನೆಂದರೆ ಏನೂ 
ಕೊಡಲಾಗದು..
ಆದರೂ ಮನ ಬಯಸುತ್ತದೆ
'ಹಾಗಾಗದೇ ಇದ್ದಿದ್ದರೆ..'

Friday, 7 May, 2010

ಹೇಗೆ ಹೇಳಲಿ ನಿನಗೆ?ಸಾಗರದ ನಡುವೆ

ದೋಣಿಯ ತುದಿಗೆ ನಿಂತು

ಸಹಾಯ ಕೇಳುವಾಗ

ನೀ ಬಂದು,

ಸಖ್ಯ ಸುಖ ತಿಳಿಯಿತೆ?

ಎಂದು ಪಿಸುನುಡಿದರೆ

ಏನುತ್ತರಿಸಲಿ ನಿನಗೆ?ನಿನ್ನನ್ನು ರಸಿಕನೆನ್ನಲೋ?

ಮೂರ್ಖನೆನ್ನಲೋ?ನಾ ನಿನ್ನ ತಬ್ಬಿ ಅತ್ತಿದ್ದು

ಪ್ರೀತಿಗಲ್ಲ, ಭಯಕ್ಕೆ

ನಾನಂದು ನಕ್ಕಿದ್ದು

ನಿನ್ನ ಕಂಡ ಖುಷಿಗಲ್ಲ

ನನ್ನ ದುಃಖ ಮರಯಲಿಕ್ಕೆ

ಎಂದು ಹೇಳುವುದು

ಹೇಗೆ ನಿನಗೆ?


ಬಾಯ್ಬಿಟ್ಟು ನಾ ಸ್ವಾರ್ಥಿ

ಎನ್ನಲಾಗದೆ ತಳಮಳಿಸುತ್ತಿರುವಾಗ

ಹಸಿವಾಯಿತೆ? ಎಂದು ತುತ್ತಿಡಲು ಬಂದರೆ

ಏನೆನ್ನಲಿ ನಿನಗೆ?


ಬದುಕಿನಂಗಳದ ತುಂಬ

ನನ್ನದೇ ಬಿಂಬ

ತುಂಬಿಕೊಳ್ಳಬಯಸುವ ನೀನು

ನನ್ನ ಅಂಗಳದ ತರಗೆಲೆಯಂತೆ

ನನಗೆ ಕಂಡಾಗ

ಹೇಳುವುದು ಹೇಗೆ ನಿನಗೆ?

Friday, 30 April, 2010

ಅಮ್ಮನಂತಹ ಅಕ್ಕನ ಒಡಲು ತಣ್ಣಗಿರಲಿ...
ಮೋಡದೊಳಗಿಂದ ಇಣುಕಿ ನೋಡುತ್ತಿರುವ ಮಳೆ ಹನಿಯಂತೆ ಭಾಗೀರತಕ್ಕ ಮಹಡಿ ಮೇಲಿಂದ ಇಣುಕಿದಾಗ ನನಗೆ ತುಂಬ ಸಂತೋಷವೇನಾಗಲಿಲ್ಲ. ಕಾರಣವೂ ಗೊತ್ತಿಲ್ಲ. ಅವಳಿಂದ ನಾನು ತುಂಬ ದೂರವಾಗಿ ಹೋಗಿದ್ದೇನೆ ಅನಿಸಿತು. ಮನುಷ್ಯ ಸಂಬಂಧಗಳೇ ಇಷ್ಟೇನೋ ಅನ್ನಿಸಿಹೋಗುತ್ತದೆ ಕೆಲವೊಮ್ಮೆ. ನಿಧಾನವಾಗಿ ದೂರವಾಗುತ್ತ ಆಗುತ್ತ ಕೆಲವರು ಮರೆತೇ ಹೋದದ್ದು ಯಾವಾಗ ಎಂದು ಗೊತ್ತೇ ಆಗುವುದಿಲ್ಲ. ಒಬ್ಬರ ಮೇಲೆ ಎಷ್ಟು ಅವಲಂಬಿತರಾಗಿದ್ದರೂ ಅವರು ದೂರವಾದರೆ ಅವಲಂಬಿಸಲು ಬೇರೆ ಯಾರೋ ಸಿಗುತ್ತಾರೆ, ಅಮ್ಮನ ಬದಲು ತಮ್ಮನಿಗೆ ಅಕ್ಕ ಸ್ನಾನ ಮಾಡಿಸತೊಡಗುತ್ತಾಳೆ, ಅಜ್ಜಿ ಕಡೆಯುತ್ತಿದ್ದ ಮೊಸರನ್ನು ಈಗ ತಂಗಿ ಶಾಲೆಗೆ ಹೋಗುವ ಮೊದಲು ಗಡಿಬಿಡಿಯಲ್ಲಿ ಬೆಣ್ಣೆ ಕಟ್ಟಿಟ್ಟು ಹೋಗತೊಡಗುತ್ತಾಳೆ. ಅವಳು ಗಂಡನ ಮನೆಗೆ ಹೋದೊಡನೆ ಅದೇ ಕೆಲಸವನ್ನು ಹೊಸ ಸೊಸೆ ಮಾಡತೊಡಗುತ್ತಾಳೆ, ಅವಳು ಬರುವವರೆಗೆ ಅಪ್ಪ ಹೇಗೋ ಸರಿದೂಗಿಸಿಕೊಳ್ಳುತ್ತಾರೆ.

ಇಷ್ಟೆಲ್ಲ ಗೊತ್ತಿದ್ದರೂ ಭಾಗಕ್ಕ ಮನೆ ಬಿಟ್ಟು ಭಾವನೊಂದಿಗೆ ಓಡಿಹೋಗುವಾಗ ಖಂಡಿತ ನನ್ನನ್ನು ನೋಡಿಕೊಳ್ಳುವವರು ಯಾರು ಇನ್ನು ಮುಂದೆ ಎಂಬುದನ್ನು ನೆನೆದು ಅತ್ತಿದ್ದಳು. ಪುಣ್ಯಕೋಟಿ ಕರುವನ್ನು ಬಿಟ್ಟು ಹುಲಿ ಗುಹೆಗೆ ಹೋಗುವಾಗ ಅತ್ತಂತೆ! ನನ್ನ ಕರುವನ್ನು ನೋಡಿಕೊಳ್ಳಿ, ನಿಮ್ಮವನೇ ಎಂದುಕೊಳ್ಳಿ ಎಂದು ಬೇಡಿಕೊಳ್ಳುವಂತೆ ಪುಟ್ಟಕ್ಕನ ಬಳಿ ಸಣ್ಣಗೆ ಗದರಿಸಿದಂತೆ ಬೇಡಿಕೊಂಡಿದ್ದಳು. ಆ ಗದರುವಿಕೆಯಲ್ಲಿ ಒಂದು ಆರ್ತತೆ ಇದ್ದಿದ್ದನ್ನು ಪುಟ್ಟಕ್ಕ ಗಮನಿಸಿದ್ದಳೋ ಇಲ್ಲವೋ ಗೊತಿಲ್ಲ, ಒಪ್ಪಿಕೊಂಡಿದ್ದಂತೂ ಹೌದು. ಅವಳ ಕಣ್ಣಲ್ಲಿ ಮೂಡಿದ ನೀರಿನ ಸಣ್ಣ ತೆರೆಯನ್ನು ಕಂಡು ನಾನು, ಪುಟ್ಟಕ್ಕ ಇಬ್ಬರೂ ಗಾಬರಿಗೊಂಡು ಮುಖ ಬಾಡಿಸಿಕೊಂಡದ್ದು ನೋಡಲಾಗದೇ ಭಾಗಕ್ಕ ಬಿಕ್ಕಿ ಬಿಕ್ಕಿ ಅಳತೊಡಗಿದಾಗ ಸಮಾಧಾನ ಮಾಡಲು ಯತ್ನಿಸಿದ ನಮ್ಮ ಕಪ್ಪೆ ಚಿಪ್ಪಿನಷ್ಟು ದೊಡ್ದ ಕೈಗಳು ಸೋತವು. ಅಪ್ಪನ ಕೈ ತುಂಬ ದೊಡ್ಡದಿತ್ತು, ಅದರಲ್ಲಿ ಸಾರಾಯಿ ಬಾಟಲಿಗಳಿಗಲ್ಲದೇ, ಕಣ್ಣೀರಿನಂತಹ ಕ್ಷುಲ್ಲಕ ವಸ್ತುಗಳಿಗೆಲ್ಲ ಜಾಗ ಕೊಡಲು ಸಾಧ್ಯವಿರಲಿಲ್ಲ.

ಆ ರಾತ್ರಿಯೆಲ್ಲ ಅಕ್ಕ ನಮ್ಮಿಬ್ಬರನ್ನು ಅಪ್ಪಿಕೊಂಡು ಬಹುಶಃ ಅಳುತ್ತಲೇ ಇದ್ದಿರಬೇಕು. ನನಗೆ ಎಚ್ಚರವಾದಾಗೆಲ್ಲ ಅವಳು ಬಿಕ್ಕುವ ಸದ್ದು ಕೇಳುತ್ತಿತ್ತು. ಅಥವಾ ಅವಳು ಬಿಕ್ಕುವ ಸದ್ದಿಗೇ ನನಗೆ ಎಚ್ಚರವಾಗಿತ್ತಾ? ನನ್ನ ಭಾಗೀರತಕ್ಕನನ್ನು ಅಳುವಾಗ ನಾನು ಯಾವತ್ತೂ ನೋಡಿರಲೇ ಇಲ್ಲ. ಅವಳು ನನಗೆ ’ಅಮ್ಮ’ ಆಗಿ ತುಂಬ ವರ್ಷಗಳಾಗಿದ್ದವು. ಅವಳು ಹಾಕುವ ನೀಲಿ ನೈಟಿ, ಕೆಂಪು ಪ್ಲಾಸ್ಟಿಕ್ ಬಳೆ, ಕಪ್ಪು ರಬ್ಬರ್ ಬ್ಯಾಂಡು ಎಲ್ಲದರ ಮೇಲೂ ನನಗೂ ಸ್ವಲ್ಪ ಹಕ್ಕಿದೆ ಎಂದು ಎಲ್ಲರ ಮುಂದೆ ತೋರಿಸಿಕೊಳ್ಳಬೇಕೆನಿಸುತ್ತಿತ್ತು. ಆದರೆ ಅವಳು ಅಳತೊಡಗಿದಾಗ ಮಾತ್ರ ನನ್ನ ಪಾಲಿಗೆ ಮುಚ್ಚಿದ ಯಾವುದೋ ಬಾಗಿಲ ಹಿಂದಿನ ಕತ್ತಲಲ್ಲಿ, ದೂರ ಲೋಕದಲ್ಲಿ ಅವಳೊಬ್ಬಳೇ ಇರುವಂತೆ ತೋರಿತ್ತು. ಆದರೆ ಇಷ್ಟೆಲ್ಲ ಸಚಿತ್ರ ವಿವರ ಮನದಲ್ಲಿ ತಂತಾನೆ ಮೂಡಿ ಬರುವ ವಯಸ್ಸಲ್ಲ ಅದು, ಹಾಗಾಗಿದ್ದರೆ ಆಗಿಂದಾಗಲೇ ಅದನ್ನೆಲ್ಲ ಭಾಗಕ್ಕನಿಗೆ ಹೇಳಿ ಅವಳ ಕಣ್ಣಲ್ಲಿ ನೀರಿನ ನಡುವೆಯೂ ನನ್ನ ಪ್ರತಿಭೆಯನ್ನು ಕಂಡು ಹೊಳೆಯುವ ಮೆಚ್ಚಿಗೆಯನ್ನು ನೋಡಿ, ಕಣ್ಣೀರನ್ನು, ಆನಂದ ಭಾಷ್ಪವನ್ನು ಬೇರ್ಪಡಿಸಲಾಗದೇ ಕಂಗಾಲಾಗುತ್ತಿದ್ದೆನೋ ಏನೋ! ಆಗ ಭಾಗಕ್ಕ ನನ್ನನ್ನು ಬಿಟ್ಟು ಹೋಗುತ್ತಿರಲಿಲ್ಲವಾ?!

ಶಾಲೆಯಿಂದ ಬಂದೊಡನೆ ಗಟ್ಟಿಯಾಗಿ ಸುತ್ತಿಟ್ಟ ಕಂಬಳಿ ಹಾಸಿಗೆಯ ಮೇಲೆ ಪಾಟಿಚೀಲ ಒಗೆದದ್ದೇ ಓಡುವುದು ಅಲ್ಲಿಗೇ. ಉದ್ದನೆಯ ಅಡಿಗೆ ಮನೆಯ ಈ ತುದಿಗೆ ಬಾಗಿಲು, ಆ ತುದಿಗೆ ದೀಪ ಇಟ್ಟುಕೊಂಡು ಅಕ್ಕಿ ಬೀಸುತ್ತ ಕೂರುವ ಭಾಗಕ್ಕನಲ್ಲಿಗೆ. ಮಳೆಗಾಲದಲ್ಲಿ ಮಾತ್ರ ಅಲ್ಲಿ ಅಕ್ಕಿ ಬೀಸಲು ಕೂರುವಂತಿರಲಿಲ್ಲ. ಬಾಳೆ ಗಿಡದಲ್ಲಿ ಭೂರಿ ಭೋಜನವನ್ನು ಸಂಪಾದಿಸಿಕೊಂಡ ಮಹಾ ಬುದ್ಧಿವಂತ ಕಪಿಗಳಿಗೆ ತೋಟದಿಂದ ಮನೆಗೆ ಮನೆಯಿಂದ ತೋಟಕ್ಕೆ ಓಡಾಡಲು ತೋಚುತ್ತಿದ್ದ ಏಕೈಕ ಕಾಲುದಾರಿ ಎಂದರೆ ನಮ್ಮ ಒರ‍ಳು ಕಲ್ಲಿನ ಮೇಲ್ಬಾಗದ ಮಾಡು ಮಾತ್ರ. ಗಂಡಸರು ಗಟ್ಟಿ ಇಲ್ಲದ ಮನೆ ಎಂದು ಗೊತ್ತಾಗಿರಬೇಕು ಅವಕ್ಕೆ ನೋಡು, ಎಷ್ಟು ಧೈರ್ಯವಾಗಿ ಕೂರುತ್ತವೆ ಎನ್ನುತ್ತಾ ಹೊಡೆದ ಕಲ್ಲುಗಳೆಲ್ಲ ಬೀಳುತ್ತಿದ್ದುದು ಹಂಚಿಗೆ. ’ಇದನ್ನೆಲ್ಲ ನೀನು ದೊಡ್ಡವನಾದ ಮೇಲೆ ಸರಿ ಮಾಡಬೇಕು ಪುಟ್ಟ, ಅಲ್ಲಿತನಕ ಮಳೆಗಾಲದಲ್ಲಿ ಹಿಟ್ಟು ಬೀಸುವುದಿಲ್ಲ, ದೋಸೆ ಮಾಡುವುದಿಲ್ಲ’ ಎಂದು ನಗುತ್ತಿದ್ದಳು ಭಾಗಕ್ಕ. ದೋಸೆಯ ಬದಲು ಅವಲಕ್ಕಿ ತಿನ್ನಬಹುದಿತ್ತು, ಆದರೆ ಹಿಟ್ಟು ಬೀಸುವಾಗ ಅವಳು ಹೇಳುತ್ತಿದ್ದ ಕಥೆಗಳು ತಪ್ಪಿ ಹೋಗುತ್ತಿದ್ದವು.ಮಳೆಗಾಲದಲ್ಲಿ ಮಾತ್ರ ತಪ್ಪಿ ಹೋಗುತ್ತಿದ್ದ ಕಥೆಗಳು ಆಮೇಲೆ ಶಾಶ್ವತವಾಗಿ ತಪ್ಪಿ ಹೋದವು ಮತ್ತು ಒಂದು ಕಥೆ ಮಾತ್ರ ಶಾಶ್ವತವಾಗಿ ಉಳಿದುಹೋಯಿತು ಎಲ್ಲರ ಬಾಯಲ್ಲಿ. ’ಭಾಗಕ್ಕ ಓಡಿ ಹೋದಳಂತೆ” ಎಂಬ ಶೀರ್ಷಿಕೆಯಡಿಯಲ್ಲಿ.

ಈಗ ನಾನು ಮನೆಯ ಹಂಚುಗಳನ್ನೆಲ್ಲ ಸರಿ ಮಾಡಿಸಿದ್ದೇನೆ.ಮಳೆಗಾಲದಲ್ಲಿ ನಮ್ಮ ಮನೆಯೀಗ ಸೋರುವುದಿಲ್ಲ.ಈಗ ನನ್ನ ಹೆಂಡತಿ ಗ್ರೈಂಡರಿನಲ್ಲಿ ಅಕ್ಕಿ ಬೀಸುತ್ತಾಳೆ.ಆದರೆ ನನಗೆ ಅವಳು ಕಥೆ ಹೇಳುವುದಿಲ್ಲ.ನನ್ನ ಮಗನಿಗೂ ಹೇಳುವುದಿಲ್ಲ.ನನ್ನ ಮಗಳು ಅವಳ ತಮ್ಮನಿಗೆ ಇಂಗ್ಲೀಷ್ ಪದ್ಯ ಬಾಯಿಪಾಠ ಮಾಡಿಸುವಾಗ ನನಗೆ ನನ್ನ ಅಕ್ಕ ನೆನಪಾಗುತ್ತಾಳೆ. ಹಾಗೆ ನೆನಪಾದಾಗೆಲ್ಲ ಹುಡುಕುವ ಯತ್ನ ಮಾಡಿ ಮಾಡಿ ಈಗ ಅವಳೆಲ್ಲೋ ಇದ್ದಾಳೆಂದು ಗೊತ್ತಾಗಿ ಇಲ್ಲಿ ಬಂದರೆ ನನಗೆ ಖುಷಿಯೇ ಆಗುತ್ತಿಲ್ಲ. ಓಡಿ ಹೋಗಿ ಅವಳನ್ನು ಅಪ್ಪಿಕೊಳ್ಳಬೇಕೆಂದು ಅನಿಸುತ್ತಿಲ್ಲ. ಬಹುಶಃ ನಾನು ಅವಳಿಂದ ದೂರವಾಗಿ ಬೆಳೆದಿದ್ದಕ್ಕೆ! ಅಥವಾ ಬೆಳೆದು ದೊಡ್ಡವನಾಗಿದ್ದರಿಂದ ದೂರವಾದೆನಾ?! ನನ್ನಲ್ಲಿ ಹಳೆಯ ತಮ್ಮನನ್ನು ಅವಳ ಕಣ್ಣುಗಳು ಹುಡುಕಲು ಹೋಗಿ ನಿರಾಸೆಯಾಗಬಹುದಾ ಅವಳಿಗೆ? ಅಥವಾ ಅವಳಿಗೂ ನನ್ನ ಹಾಗೇ ಆಗುತ್ತಿರಬಹುದಾ? ಪ್ರೀತಿ ಉಕ್ಕುತ್ತದೆ ಎಂದು ಕಲ್ಪನೆ ಮಾಡಿಕೊಂಡಿದ್ದೇ ಅತಿಯಾಯಿತೇನೋ. ಪರೀಕ್ಷೆ ಮುಗಿದ ದಿನ ತುಂಬ ಖುಷಿಯಾಗುತ್ತದೆ ಎಂದುಕೊಳ್ಳುತ್ತಿದ್ದೆ. ಆದರೆ ಪ್ರತೀಸಲವೂ ಪರೀಕ್ಷೆ ಮುಗಿದಾಗ ಏನೋ ಕಳೆದುಹೋದಂತೆ, ಎಲ್ಲ ಖಾಲಿ ಖಾಲಿ ಯಾಕೋ ಬೇಜಾರು ಎನಿಸಿಬಿಡುತ್ತಿತ್ತು. ಖುಷಿಯನ್ನು ಒತ್ತಾಯದಿಂದ ತಂದುಕೊಳ್ಳಬೇಕಾಗುತ್ತಿತ್ತು. ಈಗಲೂ ಹಾಗೇ ಆಗುತ್ತಿದೆಯೇನೋ ಎನಿಸುತ್ತಿದೆ.

ನನಗೆ ನನ್ನ ಹಳೇ ಭಾಗಕ್ಕ ಬೇಕು. ಅವಳಲ್ಲಿನ ಅಮ್ಮ ನನಗೆ ಬೇಕು, ಅವಳು ಹೇಳಿದ ಕಥೆ ಕೇಳುವ ಅವಳ ತಮ್ಮ ಮತ್ತೆ ನನ್ನಲ್ಲಿ ಹುಟ್ಟಬೇಕು, ನಾನು ತಪ್ಪಿ ಅವಳ ಬಗ್ಗೆ ಆಡಿದ ಮಾತುಗಳಿಗಾಗಿ ಅವಳಲ್ಲಿ ಕ್ಷಮೆ ಕೇಳಬೇಕು, ಎಂದೆಲ್ಲ ಯೋಚಿಸುತ್ತ ನಿಂತಾಗ ಬಂದು ಬಾಗಿಲು ತೆರೆದವಳಲ್ಲಿ ನನ್ನ ಭಾಗಕ್ಕನ ಕಿಂಚಿತ್ತು ಸುಳಿವು ಕೂಡ ಇಲ್ಲ. ಅವಳು ಅವಳ ದೊಡ್ಡ ಮನೆಯ, ಸುಖೀ ಸಂಸಾರದಲ್ಲಿ ಹೆಂಡತಿ, ಅಮ್ಮ ಎಲ್ಲ ಆಗಿ ’ಅಕ್ಕ’ನನ್ನು ಜನುಮದ ಹಿಂದೆಂಬಂತೆ ದಾರಿಯಲ್ಲೆಲ್ಲೋ ಬಿಟ್ಟು ಬಂದಿದ್ದಾಳೆ ಎನಿಸಿಹೋಯಿತು. ಅಥವಾ ನಾನು ಯಾರದೋ ಬಳಿ ಅವಳ ಬಗ್ಗೆ ಆಡಿದ ಮಾತುಗಳೆಲ್ಲ ಅವಳಿಗೆ ತಿಳಿದು ಹೋಗಿರಬಹುದಾ?ಹೇಗಾದರೂ ಮಾಡಿ ಅವೆಲ್ಲ ನಾನು ಆಡಿದ್ದೇ ಅಲ್ಲ ಎಂದು ವಾದಿಸಿ ಬಿಡಬೇಕು ಎನಿಸಿತು. ಆ ಮಾತುಗಳೆಲ್ಲ ಒಂದೊಂದಾಗಿ ಬಂದು ಕಿವಿಯಲ್ಲಿ ಗುಂಯ್ ಗುಟ್ಟಿ ಹೋಗುತ್ತಿರುವಂತೆ ಭಾಸವಾಗತೊಡಗಿದಾಗ ಕಣ್ಣಲ್ಲಿ ನೀರಾಡಿತು.ನನ್ನ ಮರ್ಯಾದೆ ಕಾಪಾಡಿಕೊಳ್ಳಲು ಹೋಗಿ, ಅವಳ ಮರ್ಯಾದೆಯನ್ನು ಸ್ವಲ್ಪ ಜಾಸ್ತಿಯೇ ಹರಾಜು ಹಾಕಿಬಿಟ್ಟಿದ್ದೇನೆ ಎನಿಸಿತು. ಎಲ್ಲರೂ ”ನಿನ್ನ ಅಕ್ಕ ಹೀಗಂತೆ’ ಎಂದಾಗ, ಅವಳು ನನ್ನ ಅಕ್ಕನೇ ಅಲ್ಲ ಎಂದುಬಿಟ್ಟಿದ್ದೇನೆ ಎಂಬುದೆಲ್ಲ ನೆನಪಾಯಿತು.

ಏನಾದರೂ ಆಗಲಿ ಅವಳ ಕಾಲಿಗೆ ಬಿದ್ದಾದರೂ ’ಕ್ಷಮಿಸು’ ಎಂದು ಕೇಳಿಬಿಡಬೇಕು ಎಂದರೆ, ಉಹೂಂ..ಅಲ್ಲಿ ನನ್ನನ್ನು ಕ್ಷಮಿಸುವ ಭಾಗಕ್ಕ ಇಲ್ಲ ಎನ್ನಿಸಿ ಕಣ್ಮುಚ್ಚಿ ಕುಳಿತ ಮರುಗಳಿಗೆ ಭಾಗಕ್ಕನ ಕೈ ನನ್ನ ಕೈಯ್ಯಲ್ಲಿತ್ತು, ಮತ್ತು ಅವಳ ಕಣ್ಣಲ್ಲೂ ನೀರಿತ್ತು. ಅವಳ ಮೌನ ’ಕ್ಷಮಿಸು’ ಎಂದು ಉಸುರಿತ್ತು. ನನ್ನ ಮೌನವೂ ಅವಳ ಮೌನದೊಡನೆ ಕ್ಷಮೆ ಕೇಳಿತ್ತು. ಅಮ್ಮ ಇಲ್ಲದ ಅಕ್ಕಂದಿರೆಲ್ಲ ಎಷ್ಟೊಂದು ಅಮ್ಮನಂತಿರುತ್ತಾರಲ್ಲ, ಅಲೆಯುಕ್ಕುವ ಕಡಲಿನಂತೆ ಇಂತಹ ಅಮ್ಮಂದಿರ ಕರುಣೆಯುಕ್ಕುವ ಒಡಲು ಎಂದಿಗೂ ಬರಡಾಗದಿರಲಿ ಎಂದು ಅಮ್ಮನಂತಹ ಅಕ್ಕನ ಮಡಿಲಿನಲ್ಲಿ ಮಲಗಿದ ಮನಸ್ಸು ಪಿಸುನುಡಿಯುತ್ತಿತ್ತು.

Friday, 19 March, 2010

ನಿನ್ನ ’ಒಂದು ದಿನ’...ಬರಿಸದಷ್ಟು ಚಿಕ್ಕ ಚಿಕ್ಕ ಬಯಕೆಗಳಿವೆ ಹುಡುಗಾ! ತುಸುವಾದರೂ ಕೊಟ್ಟುಬಿಡು, ನಿಟ್ಟುಸಿರು ಬರಲಿ. ಬೆಟ್ಟದ ಬಯಕೆಗೆ ತೃಣವಾದರೂ ಸಿಗಲಿ. ನಿನ್ನನ್ನು ಪೀಡಿಸಿ ಪಡೆವ ಆಸೆಗಳೇನಿಲ್ಲ. ಕಂಡ ಕಂಡದ್ದಕ್ಕೆಲ್ಲ ಕಣ್ಣರಳಿಸಿ, ಕೊಡಿಸೆಂದು ನಿನ್ನೆಡೆಗೆ ನೋಡುವ ಜಾಯಮಾನವೂ ನನ್ನದಲ್ಲವೆಂದು ನಿನಗೂ ಗೊತ್ತು.

ಜಡಿಮಳೆ ಸುರಿಯುವ ಬೆಳಗಿನಲ್ಲಿ ಕೊಡೆ ಹಿಡಿದು ದೇವರಿಗೆ ಹೂ ಕೊಯ್ದು ಒದ್ದೆ ಕಾಲಲ್ಲಿ ಒಳಗೆ ಬರುತ್ತೀಯಲ್ಲ, ಅಂತಹ ನಿನ್ನ ’ಒಂದು ದಿನ’ ನನಗೆ ಬೇಕು. ಆ ದಿನ ನಿನ್ನ ಹೆಜ್ಜೆ ಮೂಡಿದಲ್ಲೆಲ್ಲ ನಡದಾಡಿ ನಾನು ನಿನ್ನ ಬಳಿ ಬರಬೇಕು. ಉಹೂಂ... ಬಳಿ ಬರುವುದಿಲ್ಲ. ತೆಳ್ಳವು ಎರೆಯುತ್ತಿರುವ ಆಯಿಯ ಬಳಿ ನಿಂತು, ಬೆಂಕಿಯನ್ನೇ ನೋಡುತ್ತಾ ನೀನು ಬೆಚ್ಚಗಾಗುತ್ತಿರುವಾಗ ನಿನ್ನ ಕಣ್ಣಲ್ಲಿ ಕುಣಿಯುತ್ತಿರುವ ಬೆಂಕಿಯ ಬಿಂಬವನ್ನು ಬಾಗಿಲ ಹಿಂದೆ ನಿಂತು ನಾನು ಇಣುಕಿ ನೋಡಬೇಕು.ಯಾವುದೋ ಗಳಿಗೆಯಲ್ಲಿ ತಲೆಯೆತ್ತಿದ ನೀನು ಅಡಗಿ ನೋಡುತ್ತಿರುವ ನನ್ನನ್ನು ನೋಡಿಬಿಡಬೇಕು. ನಿನ್ನ ಮುಖದಲ್ಲೊಂದು ನಗು ಖುಷಿಯ ಮಿಂಚು ಸುಳಿದಂತೆ. ಏನೋ ಕೆಲಸವಿರುವವನಂತೆ ನಾನಿರುವಲ್ಲಿಗೆ ನೀನು ಬರತೊಡಗಿದಾಗ ನಿನ್ನ ಕೆಲಸವೇನೆಂದು ಅರ್ಥವಾದ ನಾನು ನಿನ್ನಿಂದ ತಪ್ಪಿಸಿಕೊಳ್ಳುವ ವಿಫಲ ಪ್ರಯತ್ನ ಮಾಡುತ್ತೇನೆ. ಅಷ್ಟೆ!
ನಾನು ನಿನ್ನ ಕೈಯ್ಯಲ್ಲಿ ಸಿಕ್ಕಿ ಬೀಳುತ್ತೇನೆ.ಜಡೆಯಿಂದ ತಪ್ಪಿಸಿಕೊಂಡು ಕಿವಿಯ ಮೇಲೆ ಕುಳಿತು ನಿನ್ನನ್ನೇ ಪ್ರೀತಿಯಿಂದ ನೋಡುತ್ತಿರುವ ನನ್ನ ಕೂದಲೆಳೆಗಳೊಂದಿಗೆ ನಿನ್ನುಸಿರು ಮಾತನಾಡುತ್ತದೆ. ನಾಚಿಕೆ ಭಯಗಳಿಂದ ನನ್ನ ಕಿವಿ-ಕೆನ್ನೆ ಕೆಂಪಾಗುತ್ತದೆ. ನಿನ್ನನ್ನು ನೋಡಬೇಕೆನಿಸಿದರೂ ನೋಡಲಾಗದೆ ನಾನು ಕಣ್ಮುಚ್ಚಿಕೊಳ್ಳುತ್ತೇನೆ. ಅಷ್ಟರಲ್ಲಿ ಅಪ್ಪಯ್ಯನ ಕೂಗು ನಿನಗೆ! ನಾನು ಬೆಚ್ಚುತ್ತೇನೆ. ನಿನ್ನ ಮುಖದಲ್ಲಿ ತುಂಟ ನಗು. ನಿನಗೆ ಎಂಥ ಸಮಯದಲ್ಲೂ ಗಾಬರಿಯೇ ಆಗುವುದಿಲ್ಲವಲ್ಲ, ಅದೂ ಇಷ್ಟ ನನಗೆ ನಿನ್ನಲ್ಲಿ. ಅದನ್ನೇ ಹೇಳಬೇಕೆಂದುಕೊಳ್ಳುತ್ತೇನೆ ನಿನಗೆ, ಆದರೆ ಅಷ್ಟರಲ್ಲಿ ನೀನು ಹೊರಟಾಗಿರುತ್ತದೆ ನಿನ್ನ ಸ್ಪರ್ಷದ ಬಿಸುಪನ್ನು ಮಾತ್ರ ನನ್ನಲ್ಲಿ ಉಳಿಸಿ. ನಿನ್ನ ಮುಂದೆ ನನಗೆ ಮಾತು ಹೊರಡುವುದೇ ಕಷ್ಟ.
ಭಾವ - ಬದುಕಿನ ನಡುವೆ ಹುಟ್ಟಿಕೊಂಡ ಸೇತುವೆಯೊಂದು ನದಿ-ದಂಡೆಯೊಡನೆ ಪ್ರೇಮವನ್ನು ಪಿಸುಗುಟ್ಟಿದ್ದನ್ನು ಕದ್ದು ಕೇಳಿ ಧನ್ಯತೆಯಿಂದ ತುಂಬಿಹೋಗುತ್ತದೆಯಂತೆ. ಎಲ್ಲೋ ಒಂದು ಕಡೆ ತಾನೂ ಕಾರಣವಾಗಿದ್ದೇನೆ ಈ ಪ್ರೇಮಕ್ಕೆ ಎಂಬ ಭಾವ ತಂದ ನಲಿವು. ಅದೇ ಭಾವ ತಂದ ನಲಿವು ಆ ದಿನ ಮಳೆಗೂ ಸಿಗುತ್ತದೆ. ನಮ್ಮಿಬ್ಬರ ಪ್ರೇಮಕ್ಕೆ ಎಲ್ಲೋ ಒಂದು ಕಡೆ ತಾನೂ ಕಾರಣವಾಗಿದ್ದೇನೆ ಎಂಬ ಭಾವದಿಂದ ಮಳೆ ಹಿಗ್ಗಿ ಹೋಗುತ್ತದೆ ಆ ದಿನ.
ಇಷ್ಟು ದಿನ ನಿನಗೆ ನಾನು ಸಿಗದೇ ಹೋದದ್ದಕ್ಕೆ ನಿನ್ನ ಮುಖದಲ್ಲೊಂದು ಹುಸಿಮುನಿಸು. ಅದರಲ್ಲಿ ನನ್ನ ತಪ್ಪೇನಿಲ್ಲ, ಇಷ್ಟು ದಿನ ಮದುವೆ ಮಾಡಿಸದೇ ಇದ್ದದ್ದು ಹಿರಿಯರ ತಪ್ಪು ಎಂಬ ಉತ್ತರ ನನ್ನ ಕಣ್ಣಲ್ಲಿ. ಪರವಾಗಿಲ್ಲ ಬಿಡು ಇನ್ನು ಜೀವನಪೂರ್ತಿ ನೀನು ನನ್ನವಳಲ್ಲವೇ ಎಂಬ ಕ್ಷಮೆ ಮಿಶ್ರಿತ ಸಾರ್ಥಕತೆಯೊಂದು ನಮ್ಮಿಬ್ಬರ ಮೌನದಲ್ಲಿ ಮಿಳಿತಗೊಂಡಾಗ ನಾನು ನಿನ್ನ ಹೃದಯದ ಭಾಷೆಯನ್ನು ಕಲಿತುಕೊಳ್ಳುವ ಪ್ರಯತ್ನದಲ್ಲಿ ತೊಡಗಿರುತ್ತೇನೆ.
ಮಳೆರಾತ್ರಿ ಆಕಾಶದಿಂದ ಪ್ರೇಮವನ್ನೇ ಸುರಿಯುತ್ತದೆ. ಬನ್ನಿ, ಎಷ್ಟು ಬೇಕಾದರೂ ಮೊಗೆದುಕೊಳ್ಳಿ ಎಂದು ನಮ್ಮಿಬ್ಬರನ್ನು ಆಮಂತ್ರಿಸುತ್ತದೆ. ಇಷ್ಟು ದಿನ ನಿನಗಾಗಿ ಭೂಮಿಯಂತೆ ಕಾದುಕೊಂಡಿದ್ದರೂ ಈಗ ನಿನ್ನ ಈ ಅಂತರವೇ ಇಲ್ಲದಷ್ಟು ಸನಿಹವನ್ನು ಅರಗಿಸಿಕೊಳ್ಳಲು ಕೊಂಚ ಸಮಯ ಹಿಡಿಯಬಹುದು. ಆದರೂ ನಿಧಾನವಾಗಿ ನಾನು ನನ್ನ ಇರವನ್ನು ಮರೆಯುತ್ತೇನೆ. ನಿನ್ನೊಳಗೆ ಕರಗಿಹೋಗುತ್ತೇನೆ. ನಿನ್ನುಸಿರು ನನ್ನ ನೆತ್ತಿಯನ್ನು ಪ್ರೀತಿಯಿಂದ ನೇವರಿಸಿ ಮುದ್ದಿಸುತ್ತದೆ. ನಿನ್ನ ಹೃದಯ ಬಡಿತ ಮಳೆಯೊಂದಿಗೆ ಸ್ಪರ್ಧೆಗೆ ಬೀಳುತ್ತದೆ. ಮಳೆ ನಾನು ಲಾಲಿ ಹಾಡುತ್ತೇನೆ ಎನ್ನುತ್ತದೆ. ಬೇಡ ಇವಳು ನನ್ನವಳು ನಾನೇ ಲಾಲಿ ಹಾಡುತ್ತೇನೆ ಎನ್ನುತ್ತದೆ ನಿನ್ನ ಹೃದಯ. ಮಳೆಯೇ ಸೋಲುತ್ತದೆ. ನಿನ್ನ ಗೆಲುವು ನನ್ನ ಮೌನದ ತುಂಬೆಲ್ಲ ವಿಜೃಂಭಿಸುತ್ತದೆ. ಆಗ ನಾನೂ ಸೋಲುತ್ತೇನೆ.

Friday, 12 February, 2010

ಬದುಕು ಸಂಭ್ರಮವಾಯಿತು ಮತ್ತೆ...!


       ಬದುಕು ಇಷ್ಟು ದೊಡ್ಡ ಸಂಭ್ರಮವಾಗಬಹುದೆಂದು ಅಂದು ಅಂದುಕೊಂಡಿರಲಿಲ್ಲ. ಮನೆಯ ಮೆತ್ತಿನ ಕತ್ತಲಲ್ಲಿ, ಮೊಣಕಾಲುಗಳ ಮಧ್ಯೆ ಮುಖ ಹುದುಗಿಸಿ ಕುಳಿತು ಬಿಕ್ಕಿ ಬಿಕ್ಕಿ ಅಳುವಾಗ ನಾನು ಕೂಡ ಮುಂದೊಂದು ದಿನ ಎಲ್ಲರಂತೆ ಮನಸಾರೆ ನಗುತ್ತೇನೆ ಎಂದು ಖಂಡಿತ ಅನ್ನಿಸಿರಲಿಲ್ಲ. ಬಹುಶಃ ತುಂಬ ದೊಡ್ಡ ದೊಡ್ಡ ದುಃಖಗಳನ್ನು ಅನುಭವಿಸಿದ ಮೇಲೆ ಅರ್ಥವಾಗಬಹುದೇನೋ, ಬದುಕೆಂದರೆ ಹೀಗೆ, ಹಗಲು-ರಾತ್ರಿ, ಕಷ್ಟ-ಸುಖ ಎಂದು. ಆದರೆ ಅದು ನನ್ನ ಮೊದಲ ದುಃಖ ಮತ್ತು ಅವನು ನನ್ನ ಮೊದಲ ಹುಡುಗ! ಇಂಥ ದುಃಖಗಳೆಲ್ಲ ಅಷ್ಟಷ್ಟಾಗಿ ಕಡಿಮೆಯಾಗಿ, ಕೊನೆಗೆ ಮರೆತು ಹೋಗುತ್ತವೆ ಒಂದು ದಿನ ಎಂದೆಲ್ಲ ನನಗೆ ಗೊತ್ತಿರಲಿಲ್ಲ. ತುಂಬ ದೊಡ್ಡವರು, ಅನುಭವಿಗಳು ಹೇಳಿದ್ದನ್ನೆಲ್ಲ ಅರ್ಥ ಮಾಡಿಕೊಳ್ಳಲು ನಾವು ಕೂಡ ಸ್ವಲ್ಪ ದೊಡ್ಡವರಾಗಬೇಕಲ್ಲ! ನಾನಾಗ ಚಿಕ್ಕವಳು. ಪ್ರೀತಿಸುವಷ್ಟು ದೊಡ್ಡವಳು, ಆದರೆ ಪ್ರೀತಿಯನ್ನು ಮರೆಯುವಷ್ಟು, ಆ ಪ್ರೀತಿ ನನ್ನನ್ನು ಮರೆಯುವುದನ್ನೆಲ್ಲ ಸಹಜವೆಂದು ಸ್ವೀಕರಿಸುವಷ್ಟು ದೊಡ್ಡವಳಾಗಿರಲಿಲ್ಲ.
    ದುಃಖವೆಂದರೆ ಹೇಗೆ, ತಿರಸ್ಕಾರವೆಂದರೆ ಹೇಗೆ ಎಂಬುದನ್ನೆಲ್ಲ ಅವನು ನನಗೆ ಅರ್ಥ ಮಾಡಿಸಿದ. ನನಗೆ ತಿರಸ್ಕರಿಸುವುದು ಹೇಗೆ ಎಂಬುದು ಮಾತ್ರ ಗೊತ್ತಿತ್ತು. ಅವಮಾನ ಮಾಡುವುದು ಹೇಗೆ ಎಂಬುದು ಗೊತ್ತಿತ್ತು. ಅವಮಾನ ಮಾಡಿಸಿಕೊಳ್ಳುವುದನ್ನು ಕಲಿಸಿದವನು ಅವನು.ಅದು ಕೂಡ ಬಲಿಯುವ ಮೊದಲೇ ಚಿವುಟಿದ ಚಿಗುರಿನಂತಲ್ಲ, ನೀರುಣಿಸಿ ಮರವಾದ ಮೇಲೆ ಕಡಿದ ಹಾಗೆ.ತುಂಬ ದಿನ ಪ್ರೀತಿಸಿ, ನಂತರ ’ಅಯ್ಯೋ ಯಾಕೆ ಹಿಂದೆ ಬರ್ತಿಯಾ?’ ಎಂದಾಗ ಆಗುವ ಅವಮಾನವನ್ನು ಸಹಿಸಿಕೊಳ್ಳುವುದನ್ನು ಕಲಿಸಿದ.  ಯಾರಾದರೂ ಒಂದು ಮಾತು ಆಡಿದರೆ ನಾನು ಹತ್ತು ಮಾತು ತಿರುಗಿಸಿ ಆಡಿ ಬರುತ್ತಿದ್ದೆ. ಆದರೆ ಅವನು ನನಗೆ ಯಾವತ್ತೂ ತಿರುಗಿ ಮಾತನಾಡುವ ಅವಕಾಶ ಕೊಡಲಿಲ್ಲ. ಅನ್ನಿಸಿಕೊಂಡು, ಅವಮಾನಿಸಿಕೊಂಡು, ಸಹಿಸಿಕೊಳ್ಳುವುದನ್ನು ಕಲಿಸಿದ. ಅಪ್ಪ- ಅಮ್ಮನ ಎದುರು ಎಂದಿಗೂ ನಾನು ತಲೆ ತಗ್ಗಿಸುವಂತ ಕೆಲಸ ಮಾಡಿರಲಿಲ್ಲ, ಇವನನ್ನು ಪ್ರೀತಿಸುವವರೆಗೆ! ಇವನು ನನಗೆ ತಲೆತಗ್ಗಿಸುವುದನ್ನು ಕಲಿಸಿದ. ಸುಳ್ಳು ಹೇಳುವುದನ್ನು ಕಲಿಸಿದ. ಕಲಿತದ್ದು ನನ್ನದೇ ತಪ್ಪು ಹೌದು. ಆದರೂ ಕಲಿಸಿದ್ದು ಅವನು.
    ’ಇ’ ಅಕ್ಷರ ಬರೆಯಲು ಬಾರದೆ ಅಮ್ಮನ ಕೈಲಿ ಹೊಡೆಸಿಕೊಂಡಿದ್ದೆ, ಅದರ ನಂತರ ಯಾವತ್ತೂ ನಾನು ಹೊಡೆತ ತಿನ್ನುವಂಥ ತಪ್ಪು ಮಾಡಲಿಲ್ಲ, ಅಥವಾ ಪ್ರೀತಿಯಿದ್ದುದರಿಂದ ಯಾರೂ ನನಗೆ ಹೊಡೆಯಲಿಲ್ಲ ಇವನನ್ನು ಪ್ರೀತಿಸುವವರೆಗೆ! ಅವನು ನನಗೆ ಹೊಡೆಸಿಕೊಂಡು ಸುಮ್ಮನಿರುವುದು ಹೇಗೆಂದು ಕಲಿಸಿದ.ಮೊದಲು ನನ್ನ ಮೇಲೆ ಅವನ ಅಧಿಕಾರ,ನಂತರದ ಅವನ ತಿರಸ್ಕಾರ ಇವೆಲ್ಲ ನನ್ನ ಸ್ವಾಭಿಮಾನಕ್ಕೆ ಬಿದ್ದ ಮೊದ ಮೊದಲ ಪೆಟ್ಟುಗಳು. ಅದರಿಂದ ಚೇತರಿಸಿಕೊಂಡು ಪೂರ್ತಿ ’ನಾನು’
ಏಳಲು ಸಾಧ್ಯ ಮುಂದೊಂದು ದಿನ ಎಂದು ಅನ್ನಿಸಿರಲೇ ಇಲ್ಲ ಆವತ್ತು. ಬಹುಶಃ ರೋಗ ಬಂದಾಗ ಆರೋಗ್ಯ ಎಂದರೇನು ಎಂದು ಊಹಿಸಿಕೊಳ್ಳಲು ಕಷ್ಟವಾಗುವ ಹಾಗೆ ಇದು ಕೂಡ! ನಾನು ಹೇಳುತ್ತಿದ್ದೆ, ನನ್ನಿಂದ ಬಹುಶಃ ಹೀಗೆ ಇನ್ಯಾರನ್ನೂ ಪ್ರೀತಿಸಲು ಸಾಧ್ಯವಿಲ್ಲ,ಕೊಡಲು ನನ್ನ ಬಳಿ ಮತ್ತೊಂದು ಹೃದಯವಿಲ್ಲ ಎಂದೆಲ್ಲ. ಈಗ ಅವೆಲ್ಲ ಎಲ್ಲಿಂದಲೋ ಕದ್ದು ಆಡಿದ ಮಾತುಗಳಂತೆ ಕ್ಷುಲ್ಲಕವಾಗಿ ಕಾಣುತ್ತವೆ. ಆದರೆ ಆ ವಯಸ್ಸಿಗೆ ಆ ಭಾವನೆಯ ಭಾರ ತುಂಬ ದೊಡ್ಡದು. ಒಬ್ಬರ ತಿರಸ್ಕಾರಕ್ಕೆ ನಮ್ಮ ಆತ್ಮವಿಶ್ವಾಸವನ್ನೆಲ್ಲ ಹೀರಿ ಗಹಗಹಿಸುವಷ್ಟು ಶಕ್ತಿಯಿದೆ, ಕನಸಿನಲ್ಲೂ ಪ್ರೀತಿಸಲು ಭಯಪಡುವ ಹಾಗೆ ಮಾಡುವಷ್ಟು ಶಕ್ತಿಯಿದೆ, ಮನುಷ್ಯರನ್ನು ನಂಬುವುದಕ್ಕೆ ಹಿಂಜರಿಯುವ ಹಾಗೆ ಮಾಡುವ ಶಕ್ತಿಯಿದೆ ಎಂದೆಲ್ಲ ಅನ್ನಿಸಿತ್ತು. ಆದರೆ ಯಾರೂ ಕೂಡ ತಮ್ಮ ಇಲ್ಲದಿರುವಿಕೆಯಿಂದ ಮತ್ತೊಬ್ಬರ ಪ್ರಪಂಚವನ್ನು ಪೂರ್ತಿ ಬರಡು ಮಾಡಿ ಹಾಕುವುದು ಸಾಧ್ಯವೇ ಇಲ್ಲ ಎಂದು ಚೇತರಿಸಿಕೊಂಡ ಮೇಲೆ ಅರ್ಥವಾಯಿತು.
    ಬದುಕು ಇಷ್ಟು ಬೇಗ ಮೊದಲಿಗಿಂತ ಹಚ್ಚ ಹಸಿರಾಗಿ ತೊನೆಯತೊಡಗುತ್ತದೆ ಎಂದು ಆವತ್ತು ಸ್ವಲ್ಪವೂ ಅನಿಸಿರಲಿಲ್ಲ. ಕಳೆದುಹೋದ ಪ್ರೇಮ, ರಾಶಿ ರಾಶಿ ನೆನಪುಗಳೊಂದಿಗೆ, ಪ್ರಬುದ್ಧತೆಯನ್ನು ತಂದು ಕೊಡುತ್ತದೆಯೆಂದು ಗೊತ್ತಿರಲಿಲ್ಲ. ಅದರ ನಂತರ ’ಯಾವತ್ತೂ ನಿನ್ನ ಜೊತೆಗೇ ಬದುಕುತ್ತೇನೆ, ನೀನಿಲ್ಲದೇ ನಾನು ಖಂಡಿತ ಬದುಕಲಾರೆ’ ಎಂಬ ಮಾತುಗಳೆಲ್ಲ ಆ ಕ್ಷಣಕ್ಕೆ ಹೃದಯದಿಂದ ಉಕ್ಕಿ ಬರುವ ಪ್ರೀತಿಯನ್ನು ಸ್ಪಷ್ಟವಾಗಿ ಅಭಿವ್ಯಕ್ತಿಸಲು ಮಾತ್ರ ಬಳಸುವ ಶಬ್ದಗಳೇ ಹೊರತು ಸಾರ್ವಕಾಲಿಕ ಸತ್ಯಗಳಲ್ಲ ಎಂದು ಅರ್ಥವಾಯಿತು. ಆವತ್ತು ನೆನಪಾಗುತ್ತಿದ್ದ ಒಡೆದ ಕನಸುಗಳೆಲ್ಲ ಒಡೆದೇ ಇಲ್ಲ, ನಾನು ಕಟ್ಟಿರಲೇ ಇಲ್ಲ ಎನಿಸತೊಡಗಿತು. ಆದರೂ ಆಗಿನ ಪುಟ್ಟ ’ನಾನು’ ಈಗಿನ ದೊಡ್ಡ ’ನನ್ನ’ ಒಳಗೆ ಕರುಣೆ ಉಕ್ಕಿಸುವ ಹುಡುಗಿಯ ಚಿತ್ರವಾಗಿ ಸುಳಿದು ಹೋಗುತ್ತೇನೆ. ಆ ನೆನಪುಗಳಿಗೆ ಈಗ ಕೊಡುವ ಸಮಯ, ಪ್ರಾಮುಖ್ಯತೆ ಎಲ್ಲ ಅಷ್ಟಕ್ಕಷ್ಟೆ!
    ಒಂದು ದಿನವೂ ನನ್ನನ್ನು ಬಿಟ್ಟಿರಲಾಗದ ಇವರಿದ್ದಾರೆ, ಪ್ರೀತಿಯ ಜೊತೆಗೆ ನಮ್ಮಿಬ್ಬರಿಗೂ ಪರಸ್ಪರರ ಅಗತ್ಯ, ಅನಿವಾರ್ಯತೆ, ಅವಲಂಬನೆ ತುಂಬ ಇದೆ. ಒಬ್ಬರನ್ನೊಬ್ಬರು ತಿರಸ್ಕರಿಸುವ ಸಾಧ್ಯತೆ ತೀರ ಕಡಿಮೆ ಇದೆ. ಹಾಗೆ ತಿರಸ್ಕರಿಸಿದರೂ ಪುನಃ ಬೆಸೆಯಲು ಮದುವೆಯೆಂಬ ಬಂಧನ ಅಥವಾ ಅನುಬಂಧವಿದೆ ನಮ್ಮ ನಡುವೆ. ಮಾತು ಮನೆಯ ಜಗುಲಿ ದಾಟುವುದಿಲ್ಲ,ಅಕಸ್ಮಾತ್ ದಾಟಿದರೆ ಅಂಗಳಕ್ಕೆ ಹೋಗುವಷ್ಟರಲ್ಲಿ ಮದುವೆ ಮಾಡಿಸಿದ ಹಿರಿಯರು ಹಾಜರಾಗುತ್ತಾರೆ ಅನುಸಂಧಾನ ಮಾಡಿಸಲು. ನೆನಪುಗಳನ್ನು ನೆನಪಿಸಿಕೊಳ್ಳಲು ಕೂಡ ನೆನಪಾಗದಷ್ಟು ಪ್ರೀತಿಸಲು ಮಗುವಿದೆ. ಈಗ ಅಪರೂಪಕ್ಕೆ ಹಳೆಯ ದುಃಖವೆಲ್ಲ ನೆನಪಾದರೆ ನಗು ಬರುತ್ತದೆ.ಅದನ್ನೆಲ್ಲ ಎಷ್ಟು ದೊಡ್ಡದೆಂದುಕೊಂಡು ಅತ್ತಿದ್ದೆ. ಮರೆಯಲು ಸಾಧ್ಯವೇ ಇಲ್ಲವೆಂದುಕೊಂಡಿದ್ದೆ ಎಂದು! ಆದರೂ ಗೊತ್ತು ಅದು ದೊಡ್ಡದಾಗಿತ್ತು ಭರಿಸಲಾಗದ ಪುಟ್ಟ ಮನಸಿಗೆ ಎಂದು.
    ಬಹುಶಃ ಇವರು ಅವನಿಗಿಂತ ಹೆಚ್ಚು ಪ್ರೀತಿಸಿದ್ದಕ್ಕೆ ಮರೆತೆನೋ, ಅಥವಾ ಕಾಲಕ್ಕೆ ಎಲ್ಲವನ್ನೂ ಮರೆಸುವ ಶಕ್ತಿಯಿದೆಯೋ ಏನೋ ಗೊತ್ತಿಲ್ಲ. ಬಹುಶಃ ಕೆಟ್ಟ ಗಂಡ ಸಿಕ್ಕಿದ್ದರೆ ಅವನ ನೆನಪಾಗುತ್ತಿತ್ತೋ ಏನೋ ಅದೂ ಗೊತ್ತಿಲ್ಲ. ಬದುಕು ಎಂದಿಗಿಂತ ದೊಡ್ಡ ಸಂಭ್ರಮವಾಯಿತು ಅನ್ನೋದು ಮಾತ್ರ ತುಂಬ ಆಶ್ಚರ್ಯದ ಸಂಗತಿ ನನಗೆ!

Friday, 22 January, 2010

ಈ ದಿನಾಂತ ಸಮಯದಲಿ...


                                 
     ’ಈ ದಿನಾಂತ ಸಮಯದಲಿ.....’ ಎಂದು ಪ್ರತೀ ದಿನಾಂತದಲ್ಲಿ ಗಟ್ಟಿ ದನಿಯಲ್ಲಿ ಹಾಡುವಾಗ ಬರೆದ ಕೆ.ಎಸ್.ನಿಸಾರ್ ಅಹ್ಮದ್ ರೆಡೆಗೆ ಅವಳ ಮನಸ್ಸಿನಲ್ಲಿ ಒಂದು ಧನ್ಯವಾದವಿರಲು ಸಾಧ್ಯವಿಲ್ಲ. ಬದುಕಿನ ಬಗ್ಗೆ ಕೂಡ! ಬದುಕು ತನಗೆ ಧನ್ಯವಾದ ಅರ್ಪಿಸುವಂತಹುದನ್ನು ಏನೇನೂ ಮಾಡಿಲ್ಲ ಎಂದೇ ಅವಳ ಭಾವನೆ.
          "ತನು ಮನದಲಿ ನೀನೆ ನೆಲೆಸಿ, ಕಣ ಕಣವೂ ನಿನ್ನ ಕನಸಿ....... ಬರದೆ ಹೋದೆ ನೀನು" ಎಂದು ಕಣ್ಣ ಮುಂದಿನ ಕಡಲಿನೆದುರು ಹಾಡಿಕೊಳ್ಳುತ್ತಾಳೆ.ಆಗೆಲ್ಲ ಕುಣಿಕುಣಿದು ಹತ್ತಿರ ಬರುವ ಕಡಲಿಗೆ, ’ಅಯ್ಯೋ..ಹೋಗು, ನಿನ್ನನ್ನಲ್ಲ ಕರೆದಿದ್ದು..’ ಎಂದು ಲಲ್ಲೆಗರೆಯುತ್ತಾಳೆ.’ನಾನಿಷ್ಟು ಬೇಡಿಕೊಂಡರೂ ಕನಿಕರ ಬಾರದೇ ಜೀವನವೇ?’ ಎಂದು ಕೂಡ ಎದುರಿಗಿದ್ದ ಸಮುದ್ರವನ್ನೇ ಕೇಳಿದರೆ, ಪಾಪ ಅದಾದರೂ ಏನೆಂದು ಉತ್ತರಿಸೀತು? ಕೆಲವೊಮ್ಮೆ ಅವಳಿಗೆ ಅನಿಸಿದ್ದಿದೆ,ಎಷ್ಟೋ ವರ್ಷದಿಂದ  ತನ್ನ ಕಣ್ಣೀರು ಹರಿದು ಈ ಕಡಲನ್ನು ಸೇರಿ ಸೇರಿಯೇ ಇಷ್ಟು ಉಪ್ಪಾಗಿರಬೇಕು ಇದರ ನೀರು ಎಂದು. ಆಗೆಲ್ಲ ಅವಳಿಗೆ ಹೆಮ್ಮೆಯಾಗುತ್ತದೆ, ದುಃಖದಲ್ಲೂ ಯಾರಿಗೋ ಏನನ್ನೋ ಕೊಟ್ಟ ಸಮಾಧಾನ. ಮರುಗಳಿಗೆ ’ಏನು ಕೊಟ್ಟೆ ನಾನು?’ ಎಂದು ತನ್ನಷ್ಟಕ್ಕೆ ತಾನೇ ವ್ಯಂಗ್ಯದ ನಗು ಬೀರಿಕೊಂಡು ಸುಮ್ಮನಾಗುತ್ತಾಳೆ.ಕೊಡಬೇಕಾದ್ದನ್ನು ಕೊಡಲಾಗಲಿಲ್ಲ.ಬೇರೆ ಏನಾದರೇನು? ತಾನು ಪಡೆಯಬೇಕಾದ್ದನ್ನು ಪಡೆಯಲಿಲ್ಲ, ತನಗೆ ಸಿಗಬೇಕಾದ್ದು ಸಿಗಲಿಲ್ಲ, ಆದ್ದರಿಂದ ಖಂಡಿತ ಜೀವನ ತನ್ನಿಂದ ಒಂದು ಧನ್ಯವಾದವನ್ನು ಕೂಡ ಬಯಸುವ ಹಕ್ಕನ್ನು ಹೊಂದಿಲ್ಲ ಎಂಬುದು ಅವಳ ಭಾವಕ್ಕೆ ಅವಳು ಕೊಡುವ ಸಮರ್ಥನೆ.
                                ****
    ಮಗುವಾಗಿದ್ದಾಗ ತಾಯಿಯನ್ನು ಕಿತ್ತುಕೊಂಡಿತು ಜೀವನ. ಈಗ ತಾಯಿಯಾಗುವ ಅವಕಾಶವನ್ನು ಕಿತ್ತುಕೊಂಡದ್ದು ಅದೇ ಜೀವನ. ಹೇಳು ನಾನೇನು ಪಾಪ ಮಾಡಿದ್ದೇನೆ? ಎಲ್ಲರ ಹಾಗೆ ನಾನೂ ಹೆಣ್ಣಲ್ಲವೇ? ನನಗೂ ಆಸೆಗಳಿಲ್ಲವೇ? ಅವರೇಕೆ ಬರುವುದಿಲ್ಲ ನನ್ನ ಬಳಿಗೆ? ನಿನ್ನ ಮಡಿಲಿಗೆ ಬಂದು ಸೇರುವ ನದಿಗಳಿಗೆ ಲೆಕ್ಕವಿಲ್ಲ, ಅವು ಹರಿಸುವ ಪ್ರೇಮ ಧಾರೆಯನ್ನುಂಡು ಸಂತುಷ್ಟವಾಗಿ ಉಕ್ಕಿ ನರ್ತಿಸುವ ನಿನ್ನ ನೋಡಿದರೆ ನನಗೆ ಹೊಟ್ಟೆಯಲ್ಲಿ ಹಸಿಸೌದೆ ಉರಿಯಲೆತ್ನಿಸಿದಂತೆ ಹೊಗೆ ಏಳುತ್ತದೆ. ಎಂಥ ಸಂಭ್ರಮ ನಿನ್ನದು! ಖಂಡಿತ ಜೀವನ ನನ್ನನ್ನೂ ನಿನ್ನಂತೆ ಸಂತುಷ್ಟಗೊಳಿಸಿದ್ದರೆ ನಾನೂ ನಿನ್ನಂತೆ ಹಾಡಿ ಕುಣಿಯುತ್ತಿದ್ದೆ. ನನ್ನಿನಿಯನನ್ನು ನೆನೆದು ನಾಚುತ್ತಿದ್ದೆ. ಅವನಿಗಾಗಿ ಭೋರ್ಗರೆವ ಜಲಪಾತವಾಗುತ್ತಿದ್ದೆ. ಸಂಭ್ರಮಿಸುತ್ತಿದ್ದೆ ಕ್ಷಣ ಕ್ಷಣಕ್ಕೂ!
    ಹೇಳುತ್ತಲೇ ಹೋಗುತ್ತೇನೆ.ಸಮುದ್ರಕ್ಕೆ ಏನೆನಿಸಿತೆಂದು ಅದು ಹೇಳುವುದಿಲ್ಲ.ನಾನೂ ಕೇಳುವುದಿಲ್ಲ.ಆ ದನಿಯಲ್ಲಿ ಇದ್ದದ್ದು ವೇದನೆಯೋ, ಆಕ್ಷೇಪಣೆಯೋ,ಅಥವಾ ವೇದನೆ ಆಕ್ಷೇಪಣೆಗಳು ತಂದ ಅಸಹಾಯಕತೆಯೋ ಕೇಳಿಸಿಕೊಳ್ಳುತ್ತಿದ್ದ ಕಡಲು ತಿಳಿಯಲೆತ್ನಿಸಿ ಹತ್ತಿರ ಬಂದು ನನ್ನೆಡೆಗೆ ಇಣುಕುತ್ತದೆ. ಉಹೂಂ..ನಾನು ಗುಟ್ಟು ಬಿಟ್ಟು ಕೊಡುವವಳಲ್ಲ.
    ಗಂಡಸು ಯಾಕೆ ತಾಯಿಯಂಥವಳು ಹೆಂಡತಿಯಾಗಿ ಸಿಗಲೆಂದು ಬಯಸುತ್ತಾನೆ ಎಂದು ಎಷ್ಟು ಯೋಚಿಸಿದರೂ ಅರ್ಥವೇ ಆಗಲಿಲ್ಲ ನನಗೆ. ಅಷ್ಟಕ್ಕೂ ’ತಾಯಿ’ಯ ಬಗ್ಗೆ ತನಗೆ ಇರುವಷ್ಟು ಪ್ರೀತಿ ಬಹುಶಃ ತಾಯಿಯಿದ್ದವರಿಗೂ ಇರಲಿಕ್ಕಿಲ್ಲ, ಯಾವಾಗಲೂ ಹಾಗೇ ಅಲ್ಲವೇ ಇಲ್ಲದಿದ್ದಾಗ ಅದರ ಬೆಲೆ ಚೆನ್ನಾಗಿ ಗೊತ್ತಾಗುತ್ತದೆ. ಅಷ್ಟಕ್ಕೂ ತಾಯ್ತನವೆಂಬುದು ಗೊತ್ತಿಲ್ಲದೇ ಹೆಣ್ಣಿನಲ್ಲಿ ಹುಟ್ಟಿನಿಂದಲೇ ಹುಟ್ಟಿ ಬಂದುಬಿಡುವ ಅಂಶವಲ್ಲವೇ ಎಂದುಕೊಳ್ಳುತ್ತೆನೆ. ಆದರೂ ನನ್ನಲ್ಲಿ ಏನೋ ಕೊರತೆಯಿದೆ ಎನ್ನುವುದು ಸುಳ್ಳಲ್ಲ. ಪ್ರೀತಿಯನ್ನು ಅಂದುಕೊಳ್ಳುವುದು ಬೇರೆ, ಅನುಭವಿಸುವುದು ಬೇರೆ ಅಲ್ಲವೇ? ತುಂಬ ಗಾಢವಾಗಿ ಗಂಡನನ್ನು ಮಗುವಿನಂತೆ ಪ್ರೀತಿಸಿ, ತನ್ನ ವ್ಯಕ್ತಿತ್ವಕ್ಕೆ ಪ್ರತ್ಯೇಕ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬಿಡದೇ ಪೂರ್ತಿಯಾಗಿ ಕಳೆದುಹೋಗುವುದು ಹೇಗೆಂಬುದು ನನಗೆ ಗೊತ್ತಿಲ್ಲವಂತೆ ಅವರು ಹೇಳುತ್ತಾರೆ ಹಾಗೆಂದು.ಇದ್ದರೂ ಇರಬಹುದು ಎನಿಸುತ್ತದೆ ತುಂಬ ಸಲ. ಆದರೆ ಅದಕ್ಕಿಂತ ಹೆಚ್ಚು ಬಾರಿ ನನಗೆ ನನ್ನತನವನ್ನು ಉಳಿಸಿಕೊಳ್ಳಲು ಬಿಡಬಾರದೆಂದು ಶಪಥ ಮಾಡಿದವರಂತೆ ಸಂಚು ಹೂಡುತ್ತಿದ್ದಾರೆ ಇವರು ಎನಿಸಿಬಿಡುತ್ತದೆ. ಆದ್ದರಿಂದ ಅದನ್ನೇ ಹೆಚ್ಚು ನಂಬಿಬಿಡುತ್ತೇನೆ. ಆದರೂ ಮನದಾಳದಲ್ಲೆಲ್ಲೋ ಒಂದು ಕರೆಯಿದೆ. ಅದು ತನ್ನನ್ನು ತಾನು ಕಳೆದುಕೊಂಡು ಅವರಲ್ಲಿ ಮುಳುಗಿಹೋಗಬಯಸುತ್ತದೆ.ಅದೇ ಇರಬಹುದು ತಾಯ್ತನದ ಕರೆ ಅಂತಲೂ ಅನಿಸುತ್ತದೆ ಕೆಲವೊಮ್ಮೆ. ಆದರೆ ನನ್ನ ಅಹಂಕಾರ ಯಾವತ್ತಿಗೂ ನನ್ನ ಸ್ವಂತಿಕೆಯನ್ನು ಕಳೆದುಕೊಂಡು ಪೂರ್ತಿಯಾಗಿ ಅವರ ಹೆಂಡತಿಯಾಗಲು ಬಿಡಲೇ ಇಲ್ಲ.
    ಹೌದು, ನನಗೆ ತಾಯಿಯಾಗಿಯೂ ಗೊತ್ತಿಲ್ಲ. ತಾಯಿಯ ಮಡಿಲಲ್ಲಿ ಮಗುವಾಗಿಯೂ ಗೊತ್ತಿಲ್ಲ. ಬಹುಶಃ ಅದಕ್ಕಾಗಿಯೇ ನಿನಗೆ ಪ್ರೀತಿಸಲು ಬರುವುದೇ ಇಲ್ಲ ಎಂದು ಹೇಳಿ ಇವರು ಹೊರಟು ಹೋದದ್ದಿರಬಹುದು. ಇಷ್ಟೊಂದು ಅಗಾಧ ಅಸಹಾಯಕತೆಯೊಂದು ಯಾವಾಗಲೂ ನನ್ನ ಜೊತೆಗಾತಿಯಾಗಿ ಉಳಿದುಬಿಡುತ್ತದೆ. ಬೇರೆ ಯಾರೂ ಕೂಡ ನನ್ನ ಜೊತೆ ತುಂಬ ದಿನ ಇರುವುದಿಲ್ಲವೆಂಬುದು ಸತ್ಯ. ನಾನೇನು ತಪ್ಪು ಮಾಡಿದ್ದೇನೆ? ಎಂದು ಎಂದಿಗೂ ಬಾಯಿಬಿಟ್ಟು ಯಾರನ್ನೂ ಕೇಳುವ ತಪ್ಪು ನಾನು ಮಾಡಲಾರೆ ಎಂಬುದು ನನಗೂ ಗೊತ್ತಿತ್ತು. ಆದರೆ ಅದಕ್ಕೆಲ್ಲ ನನ್ನ ಅಹಂಕಾರ ಕಾರಣ, ನನ್ನತನವನ್ನು ಉಳಿಸಿಕೊಳ್ಳಲು ಅತಿಯಾಗಿ ಹಪಹಪಿಸುವ ವ್ಯಕ್ತಿತ್ವ ಕಾರಣ ಎಂಬುದನ್ನು ನಾನು ಎಂದಿಗೂ ಒಪ್ಪಲಾಗದು. ಅದನ್ನು ಉಳಿಸಿಕೊಂಡು ಪಟ್ಟ ಸುಖವೇನು? ಕಳೆದುಕೊಂಡವರು ಪಡೆದುಕೊಂಡದ್ದೇನು ಎಂಬುದು ಕಣ್ಣ ಮುಂದಿನ ಸತ್ಯ, ಕಾಣದ ದೇವರನ್ನು ನೆನೆದು ಕೈ ಮುಗಿದಂತಲ್ಲ ಇದು. ಆದರೂ ನಾನು ಅದನ್ನು ಒಪ್ಪುವುದೇ ಇಲ್ಲ ಎಂದಿಗೂ. ನನಗನ್ನಿಸಿದೆ ಎಷ್ಟೋ ಸಲ, ಕಾಣುವ ವಾಸ್ತವಕ್ಕಿಂತ ಕಾಣದ ಕಲ್ಪನೆಯನ್ನು ನಂಬುವುದೇ ಸುಲಭವೆಂದು.
    "’ನೀನು’ ಕಳೆದುಹೋದಾಗ ಎಷ್ಟೊಂದು ಪಡೆದುಕೊಳ್ಳುತ್ತೀಯ ಗೊತ್ತೆ ನೀನು? ನಿನಗೆ ಕಳೆದು ಹೋಗಲು ಬರುವುದೇ ಇಲ್ಲ. ಕಳೆದು ಹೋಗುವವರೆಗೆ, ನಿನ್ನನ್ನು ನೀನು ಅರ್ಪಿಸಿಕೊಳ್ಳುವವರೆಗೆ ನಿನ್ನ ಪ್ರೀತಿ ಪ್ರೀತಿಯೇ ಅಲ್ಲ. ಮೈಮರೆತು ಪ್ರೀತಿಸಿಕೊಳ್ಳುವುದು ತಪ್ಪೆಂದು ಏಕೆ ಭಾವಿಸುತ್ತೀಯಾ? ಉಳಿದುಹೋಗುತ್ತಿರುವ ಅಹಂಕಾರವನ್ನೇಕೆ ಉಳಿಸಿಕೊಳ್ಳುತ್ತಿರುವ ವ್ಯಕ್ತಿತ್ವವೆಂದು ಸಮರ್ಥಿಸಿಕೊಳ್ಳುತ್ತೀಯಾ?" ತುಂಬ ದಿನ ಅವರು ಹೀಗೆಲ್ಲ ಕೇಳಿದಾಗ ನಾನು ಉರಿದುಹೋಗುತ್ತಿದ್ದೆ. ನನ್ನನ್ನು ಇವರು ಸಾಧಾರಣ ಹೆಂಗಸಿನಂತೆ ಇವರಿಗೆ ಶರಣಾಗಿಬಿಡಲೆಂದು ಬಯಸುತ್ತಿದ್ದಾರೆ ಎನಿಸುತ್ತಿತ್ತು. ನಾನು ಕೂಡ ಎಲ್ಲರಂತೆ ಸಾಧಾರಣ ಹೆಂಗಸು ಯಾಕಲ್ಲ ಎಂದು ಒಂದು ದಿನವೂ ನನ್ನನ್ನು ನಾನು ಕೇಳಿಕೊಂಡಿಲ್ಲ. ಅಸಾಧಾರಣ ಹೆಂಗಸಾದರೆ ಪ್ರೀತಿಯನ್ನು ಕೊಡುವ ಅಥವಾ ಪಡೆಯುವ ಸಾಧ್ಯತೆ ಯಾಕಿಲ್ಲ ಎಂದು ಕೂಡ ನಾನು ಯೋಚಿಸಲಿಲ್ಲ.
    ಪಾಪ! ಅವರಿಗೆ ಪ್ರೀತಿಯ ಅಗತ್ಯ ತುಂಬ ಇತ್ತು. ನನಗೆ ಗೊತ್ತಾಗಲೇ ಇಲ್ಲ. ಸರಿಯಾಗಿಯೇ ಇದೆ ಅವರು ಅವಳನ್ನು ಪ್ರೀತಿಸಿದ್ದು. ನನ್ನನ್ನು ಬಿಟ್ಟು ಹೋಗಿದ್ದು.ನನ್ನಿಂದ ಅವರನ್ನು ಪೂರ್ತಿಯಾಗಿ ಪ್ರೀತಿಸಲು ಆಗಲೇ ಇಲ್ಲ. ನಾನು ಭೋಜ್ಯೇಶು ಮಾತಾ ಆಗಲಿಲ್ಲ, ಕಾರ್ಯೇಶು ದಾಸಿಯಾಗಲಿಲ್ಲ, ಸಲಹೇಶು ಮಂತ್ರಿಯೂ ಆಗಲಿಲ್ಲ, ಶಯನೇಶು ವೇಶ್ಯಾ ಆಗಲೂ ನನ್ನಿಂದ ಸಾಧ್ಯವೇ ಆಗಲಿಲ್ಲ. ಬಹುಶಃ ನನಗೂ ತಾಯಿ ಇದ್ದಿದ್ದರೆ ಅವಳು ನನಗೆ ಎಲ್ಲ ಹೇಳಿಕೊಡುತ್ತಿದ್ದಳೇನೋ ಎನಿಸುತ್ತದೆ. ಆಗ ಹೀಗಾಗುತ್ತಿರಲಿಲ್ಲವೇನೋ ಎನಿಸುತ್ತದೆ.
     ನಾನು ಅವರಿಗೆ ಏನೇನೂ ಆಗಲಿಲ್ಲ. ಹೃದಯದ ಬಾಗಿಲನ್ನು ತಟ್ಟಿದರೂ ನಾನು ತೆರೆಯಲಿಲ್ಲ. ಅವರು ಅವಳನ್ನು ಮದುವೆಯಾದದ್ದು ಸುಮ್ಮನೇ ಅಲ್ಲ. ಅವಳು ಅವರನ್ನು ತಾಯಿಯಂತೆ ನೋಡಿಕೊಳ್ಳುತ್ತಾಳೆ. ಪರವಾಗಿಲ್ಲ ಅವರು ಅವಳೊಡನೆ ಸುಖವಾಗಿರಲಿ ಎನಿಸುತ್ತದೆ. ಆದರೂ ಮನದ ಮೂಲೆಯಲ್ಲೆಲ್ಲೋ ಆಸೆಯಿದೆ.ಅವರ ಮೇಲೆ ನನಗೆ ಅಧಿಕಾರವಿದೆ ಎಂದು ಮನಸು ಕೂಗುತ್ತದೆ. ನಾನು ಮೊದಲು ಬಂದವಳು ಎನ್ನುತ್ತದೆ. ಆದರೂ ನನಗೆ ಗೊತ್ತು, ಸಂಬಂಧಗಳೆಂದರೆ ಹಾಗೇ ಮೊದಲು ಆರಂಭವಾದದ್ದಾ ನಂತರವಾ ಎಂಬುದು ಮುಖ್ಯವಾಗುವುದೇ ಇಲ್ಲ. ಎಲ್ಲಿ ಹೆಚ್ಚು ಒಲವಿದೆ ಎಂದಷ್ಟೇ ನೋಡುತ್ತದೆ ಮನಸ್ಸು. ಬೇಕೆಂದೇ ಅವರು ಅವಳನ್ನು ಪ್ರೀತಿಸುವುದಿಲ್ಲ. ಹೃದಯ ಎಳೆದುಕೊಂಡು ಹೋಗಿಬಿಡುತ್ತದೆ ಒಲವಿದ್ದಲ್ಲಿಗೆ. ತಗ್ಗಿನ ಕಡೆಗೆ ಹರಿವ ನೀರಿನಂತೆ!
    ನನಗೆ ಈಗಲೂ ಇದೆಲ್ಲ ಅರ್ಥವಾಗಲೇಬಾರದಾಗಿತ್ತು. ಅರ್ಥವಾದಮೇಲೆ ಅವರನ್ನು ಬಿಟ್ಟು ಬದುಕುವುದು ಕಷ್ಟವಾಗುತ್ತಿದೆ. ಬಹುಶಃ ಹೀಗೆಯೇ ಅವರ ಮೇಲೆ ಕೋಪಿಸಿಕೊಂಡು ಇನ್ನೊಂದು ಇಪ್ಪತ್ತು ವರ್ಷ ಬದುಕಿದ್ದರೆ ಬದುಕೇ ಮುಗಿದು ಹೋಗುತ್ತಿತ್ತು ಅವರದು ಅಥವಾ ನನ್ನದು. ಆಗ ನನಗೆ ಅವರು ಬೇಕು ಎನ್ನಿಸಿದರೂ ಅಥವಾ ಅವರಿಗೆ ನಾನು ಬೇಕು ಎನಿಸಿದ್ದರೂ ಏನೂ ಮಾಡಲಾಗುತ್ತಿರಲಿಲ್ಲ. ಈಗ ಹಾಗಲ್ಲ, ಅವರು ಸಿಗಬೇಕಿತ್ತು ಎಂದು ಅನಿಸಿದಾಗ ಸಿಗಬಹುದಾ ಎಂಬ ಆಸೆ ಇಣುಕಿ ನೋಡುತ್ತದೆ ಮನದ ಕದ ಸರಿಸಿ.ಅದೇ ಕಷ್ಟ! ಅವರು ನನ್ನನ್ನೇ ಪ್ರೀತಿಸಲಿ ಎಂಬ ಆಸೆಯಿಲ್ಲ. ನನ್ನನ್ನೂ ಪ್ರೀತಿಸಲಿ ಎಂದು ಮನಸ್ಸು ಬಯಸುತ್ತಿದೆ. ಪ್ರತೀ ದಿನಾಂತದಲ್ಲೂ ಕಾಯತೊಡಗಿದ್ದೇನೆ. ಅವರು ನನ್ನನ್ನೂ ಪ್ರೀತಿಸುತ್ತಾರಾ? ಇಷ್ಟು ದಿನ ನಾನು ಅವರಿಗೆ ಕೊಟ್ಟ ನೋವನ್ನೆಲ್ಲ ಮರೆತು ನನ್ನನ್ನು ಸ್ವೀಕರಿಸುತ್ತಾರಾ?         
   
   

Tuesday, 12 January, 2010

ನಿನಗೆ ಪ್ರಣಾಮ.
ತುಂತುರುವಿನಂತೆ
ಶುರುವಾಗಿ
ಭೋರ್ಗರೆದು
ಮಳೆಯಾಗಿ
ನನ್ನೊಡಲ ಆವರಿಸಿ
ಹಸಿರು ಚಿಗುರಿಸಿ
ನಲಿದವನೆ
ನಿನಗೆ ಅನಂತ ಪ್ರಣಾಮ.

ನನ್ನ ಭಾವದೆಳೆಗಳ
ತುಂಬ
ನಿನ್ನ ಮುತ್ತುಗಳ
ತಂದಿರಿಸಿ
ಪೋಣಿಸಿ
ಸಿಂಗರಿಸಿ
ನನ್ನ ಮೆರೆಸಿ
ನಲಿದವನೆ
ನಿನಗೆ ಅನಂತ ಪ್ರಣಾಮ.

ನಿನ್ನ ಬಿಸಿಯುಸಿರ
ಭಾರಕ್ಕೆ
ದಣಿದು ನಿನಗೇ ಒರಗಿದಾಗ
ಮಡಿಲಾಗಿ
ತಾಯಾಗಿ
ನನ್ನ ಸಂತೈಸಿ
ನಲಿಸಿ
ನಲಿದವನೆ
ನಿನಗೆ ಅನಂತ ಪ್ರಣಾಮ.

Tuesday, 5 January, 2010

ನೀನೆನಗೆ ಆತ್ಮ ಸಂಗಾತಿ.

ನಿನ್ನೊಡನೆ ಇರಬಲ್ಲೆ
ನನ್ನೊಳಗೆ ನಾನಿದ್ದರೂ
ನನ್ನಾತ್ಮ ನಿನ್ನ ಮನೆ
ಆದರೂ ನನಗಾಶ್ರಯ ನೀನೆ


ನನ್ನೊಡಲ ತುಂಬೆಲ್ಲ
ನಿನ್ನದೇ ಘಮ ತುಂಬಿ
ಕೊರೆವುದೊಡಲನು ಏಕೆ
ಮತ್ತೆ ಬಯಕೆಯ ದುಂಬಿ


ಜೀವ ಭಾವಗಳ ಹಂಗಿಲ್ಲ
ಕಾಲ ದೇಶಗಳ ಮಿತಿಯಿಲ್ಲ
ಅಳಿವೆನೆಂಬ ಭಯವಿಲ್ಲ
ಉಳಿಯಲೆಂಬ ಮೋಹವಿಲ್ಲ


ನೀನೆನಗೆ ಆತ್ಮ ಸಂಗಾತಿ.


Friday, 1 January, 2010

ನಿನ್ನೊಲವು ಕಡಲಿನಂತಹದು


ಹನಿಯಾಗಿ ಬಿದ್ದಿದ್ದೆ
ನಿನ್ನೆದೆಯ ಚಿಪ್ಪಿನಲಿ
ಒಡಲೊಳಗೆ ಬಚ್ಚಿಟ್ಟು ಮುತ್ತಾಗಿಸಿ
ಮುದ್ದುಗರೆದೆ ನೀನು.

ಮುತ್ತಾದದ್ದು ನಾನಲ್ಲ, ನಿನ್ನೊಲವು
ನೀನೊಲವ ಸುರಿಯದಿದ್ದರೆ
ಹನಿಯಾಗಿಯೇ ಇಂಗುತ್ತಿದ್ದೆ ನಾನು

ತಪ್ಪರಿತ ಮಗುವಿನಂತೀಗ
ನಿನ್ನೆದೆಯ ತಬ್ಬಿ  ಬಿಕ್ಕುವಾಸೆ 

ಬಿಕ್ಕಿ  ನಿನ್ನೊಡಲ ನೆನೆಸುವಾಸೆ

ನೆನೆದೊಡಲ ಒಳಗಿಂದ
ಉಕ್ಕುವುದು ನಿನ್ನೊಲವು
ಉಕ್ಕುತಿಹ ನಿನ್ನೊಲವ
ಬೊಗಸೆಯಲಿ ಮೊಗೆವಾಸೆ
ಮೊಗೆ ಮೊಗೆದು ಕುಡಿವಾಸೆ

ಪುಟ್ಟ ಬೊಗಸೆ ನನ್ನದು
ನಿನ್ನೊಲವು ಕಡಲಿನಂತಹದು
ಕಡಲೆಲ್ಲ ನಿನ್ನದು
ಅಲೆಯಾಗಿ ಬಳಿಬಂದು
ಪ್ರೇಮಿಸುವೆಯಾ?