Wednesday 19 May, 2010

ಹಾಗಾಗದೇ ಇದ್ದಿದ್ದರೆ..


ಕಲ್ಲು ಮಂಟಪದೊಳಗೆ
ನನ್ನೊಡನೆ ಕುಳಿತೆದ್ದು ಬಂದಾಗ
ಪರಧ್ಯಾನದೊಳಿದ್ದೆಯ?
ಎಂದು ನೀ ಕೇಳದಿರುತ್ತಿದ್ದರೆ...

ನಾನು ನಿನ್ನ ಮಡದಿಯಾಗಿ
ನಿನ್ನದೇ ಮಗುವಿನ ತಾಯಾಗಿ
ನಿನ್ನೊಡನೆ ಚಿತೆಯಲ್ಲಿ ಮಲಗಿರುವ
ಕನಸು ಕಂಡೆನೆಂದು 
ಹೇಳದೇ ಇರುತ್ತಿರಲಿಲ್ಲ...

ಗಳಿಗೆ ಮುಂಚೆ ಮುತ್ತುದುರಿದ
ತುಟಿಗಳಿಂದಲೇ ಮರುಗಳಿಗೆ 
ಕನಸೊಡೆಯುವ
ಮಾತುದುರಬಹುದೆಂದು 
ಗೊತ್ತಾಗದೆ ಹೋಗಿದ್ದರೆ...

ನಿದಿರೆಯ ತುಂಬೆಲ್ಲ
ನಿನ್ನ ಲಾಲಿ ತುಂಬಿಕೊಂಡು
ಎದೆಗೂಡ ತುಂಬೆಲ್ಲ 
ನಿನ್ನುಸಿರು ತುಂಬಿಕೊಂಡು
ಕಣ್ಣ ರೆಪ್ಪೆ ಮಿಟುಕಿಸದೆ 
ಕಾದು ಕೂತುಬಿಡುತ್ತಿದ್ದೆನಲ್ಲೋ ಹುಡುಗ...

ಆದರೂ..
ಹಾಗಾಗದೇ ಇದ್ದಿದ್ದರೆ...
ನನಗೆ ಏನೇನೂ ತಿಳಿಯದೆ ಇದ್ದಿದ್ದರೆ
ತುಂಬ ಒಳ್ಳೆಯದಿತ್ತು
ಎಂದು ಕಣ್ಣು ಕಡಲಾಗಿಸುವ
ಹುಡುಗಿಗೆ..

ಕಡಲಿನಾಳದಂತಹ 
ಅವಳ ಪ್ರಶಾಂತ ಪ್ರೇಮಕ್ಕೆ...
ಬುದ್ಧಿ ಎಂದಿಗೂ ಸವಾರಿ
ಮಾಡಲು ಸಾಧ್ಯವಿಲ್ಲದಂತಹ 
ಅವಳ ಹೃದಯಕ್ಕೆ...
ಕರುಣೆ ಬೇಡವೆನ್ನುವ ಅವಳ 
ಸ್ವಾಭಿಮಾನಕ್ಕೆ...

ನನ್ನಿಂದ ಏನೆಂದರೆ ಏನೂ 
ಕೊಡಲಾಗದು..
ಆದರೂ ಮನ ಬಯಸುತ್ತದೆ
'ಹಾಗಾಗದೇ ಇದ್ದಿದ್ದರೆ..'

Friday 7 May, 2010

ಹೇಗೆ ಹೇಳಲಿ ನಿನಗೆ?



ಸಾಗರದ ನಡುವೆ

ದೋಣಿಯ ತುದಿಗೆ ನಿಂತು

ಸಹಾಯ ಕೇಳುವಾಗ

ನೀ ಬಂದು,

ಸಖ್ಯ ಸುಖ ತಿಳಿಯಿತೆ?

ಎಂದು ಪಿಸುನುಡಿದರೆ

ಏನುತ್ತರಿಸಲಿ ನಿನಗೆ?



ನಿನ್ನನ್ನು ರಸಿಕನೆನ್ನಲೋ?

ಮೂರ್ಖನೆನ್ನಲೋ?



ನಾ ನಿನ್ನ ತಬ್ಬಿ ಅತ್ತಿದ್ದು

ಪ್ರೀತಿಗಲ್ಲ, ಭಯಕ್ಕೆ

ನಾನಂದು ನಕ್ಕಿದ್ದು

ನಿನ್ನ ಕಂಡ ಖುಷಿಗಲ್ಲ

ನನ್ನ ದುಃಖ ಮರಯಲಿಕ್ಕೆ

ಎಂದು ಹೇಳುವುದು

ಹೇಗೆ ನಿನಗೆ?


ಬಾಯ್ಬಿಟ್ಟು ನಾ ಸ್ವಾರ್ಥಿ

ಎನ್ನಲಾಗದೆ ತಳಮಳಿಸುತ್ತಿರುವಾಗ

ಹಸಿವಾಯಿತೆ? ಎಂದು ತುತ್ತಿಡಲು ಬಂದರೆ

ಏನೆನ್ನಲಿ ನಿನಗೆ?


ಬದುಕಿನಂಗಳದ ತುಂಬ

ನನ್ನದೇ ಬಿಂಬ

ತುಂಬಿಕೊಳ್ಳಬಯಸುವ ನೀನು

ನನ್ನ ಅಂಗಳದ ತರಗೆಲೆಯಂತೆ

ನನಗೆ ಕಂಡಾಗ

ಹೇಳುವುದು ಹೇಗೆ ನಿನಗೆ?