Saturday 31 July, 2010

ಆಗಾಗ ಹೊಸತಾಗುವ ಹಳೇ ಬದುಕು...


   ನಿನ್ನ ಅಹಂಕಾರವನ್ನುಬ್ಬಿಸುತ್ತ, ನಿನ್ನ ಹಿಂದೆ ಹಿಂದೆ ಅಲೆಯುತ್ತ, ನಮ್ಮ ಮಧ್ಯೆ ಇಲ್ಲದ ಪ್ರೀತಿಯನ್ನು ಪ್ರದರ್ಶಿಸಲು ಹೋಗಿ, ಪ್ರೀತಿಯ ಶವವನ್ನು ಇಟ್ಟುಕೊಂಡು ಬದುಕುತ್ತಿದ್ದೇವೆಂದು ಬುದ್ಧಿಯಿದ್ದವರಿಗೆ ಗೊತ್ತಾಗಿ,ಆಗ ನನಗೆ ಅವಮಾನವಾಗಿ, ಆ ಅವಮಾನ ಸಹಿಸಿಕೊಳ್ಳಲೇಬೇಕಾದಾಗೆಲ್ಲ ಮುಖ ಬಾಡಿಸಿಕೊಂಡು ಮನೆಗೆ ಅಂದರೆ ಪುನಃ ನೀನಿದ್ದಲ್ಲಿಗೆ ಬರುವುದು, ಮತ್ತೆ ನಿನ್ನೊಂದಿಗೆ ಜಗಳವಾಡುತ್ತಾ ಅಡುಗೆ ಮಾಡುವುದು, ಸಿಟ್ಟಿನಿಂದ ಬೇಯಿಸಿದ್ದನ್ನೇ ಉಂಡು, ಇದರಿಂದೆಲ್ಲ ಮುಕ್ತಿ ಯಾವಾಗಪ್ಪ ಎಂದುಕೊಳ್ಳುತ್ತ ಮಲಗಿದಲ್ಲೇ ಧಾರಾಕಾರ ಕಣ್ಣೀರು ಹರಿದು, ಮೂಗಿನಿಂದಲೂ  ಒಂದಷ್ಟು ಸುರಿದು, ಸೊರಗುಡುತ್ತ, ಒರೆಸಿಕೊಳ್ಳುತ್ತಾ, ನಿದ್ರಿಸಿ, ಕನಸು ಕಂಡು, ಬೆಳಗೂ ಆಗಿ ಬಿಡುತ್ತದೆ. ಮತ್ತೆ ಇವೆಲ್ಲವುಗಳ ಪುನರಾವರ್ತನೆಯ ಹೊಸ ಆರಂಭ..ಮತ್ತದೇ ಹಳೆಯ ಅಂತ್ಯಕ್ಕೆ ಹೊಸ ನಾಂದಿ.. ಥೂ... ಜೀವನ ಗಬ್ಬೆದ್ದು ಹೋಗಿದೆ...ಹಳಿ ತಪ್ಪಿ ಹೋಗಿದೆ...
  ನನಗೂ ಒಂದು ಹೊಸ ಬದುಕನ್ನು ಬದುಕಿ ನೋಡಬೇಕಿದೆ. ಬಹುಶಃ ಅದು ಕೂಡ ಇದೇ ಕಡಲಿನ ಕಾಣದ ಮತ್ತೊಂದು ತೀರವೋ ಏನೋ.. ಕಂಡಿದ್ದು, ಕಾಣದ್ದು ಎಂಬಷ್ಟೇ ವ್ಯತ್ಯಾಸವಾಗಿದ್ದರೂ ಪರವಾಗಿಲ್ಲ. ಇದೇ ಬದುಕಿನ ಇನ್ನೊಂದು ತೀರವಾದರೂ ಪರವಾಗಿಲ್ಲ, ಇನ್ನೊಮ್ಮೆ ಹೊಸ ಬದುಕು ಬದುಕಿಬಿಡುತ್ತೇನೆ ಎನಿಸಿಬಿಟ್ಟಿದೆ.
   ಹೀಗೆಲ್ಲ ಅಂದಾಗ ಒಳಗ್ಯಾರೋ ನಕ್ಕಂತೆ, ನಕ್ಕು ನುಡಿದಂತೆ, "ಈಗ ಅಂತ್ಯಗೊಳಿಸಬೇಕೆಂದು ಹೊರಟ ಜೀವನವೂ ಕೂಡ ಹಿಂದೊಮ್ಮೆ ಆಸೆಪಟ್ಟು ಆರಂಭಿಸಿದ ಹೊಸ ಜೀವನವೇ ಆಗಿತ್ತು. ಇಬ್ಬರ ಮೆಲ್ಲುಸಿರುಗಳು ಸೇರಿ ಹಾಡಿದ ಸವಿ ಗಾನಗಳೆಷ್ಟು? ಈಗಿನ ನಿಟ್ಟುಸಿರುಗಳೆಲ್ಲ ಅವುಗಳದೇ ಪಳೆಯುಳಿಕೆಗಳಿರಬೇಕು.ಆಗೆಲ್ಲ ಕೈ ಕೈ ಹಿಡಿದು, ಕೊಂಚ ಹೆಚ್ಚಾಗೇ ಮೈಗೆ ಮೈ ತಾಕುತ್ತ ನಡೆದ ಹೆಜ್ಜೆಗಳೆಷ್ಟು? ಮನಸಿನಲ್ಲೇ ಮಾಡಿದ ಪ್ರಮಾಣಗಳೆಷ್ಟು, ಕೊನೆಯುಸಿರಿನವರೆಗೂ ಹೀಗೇ ನಡೆಯುತ್ತೇವೆ ಬಾಳ ಹಾದಿಯಲ್ಲಿ ಎಂದು ಕಣ್ತುಂಬಿ ಕೈಹಿಡಿದು ನುಡಿದ ಮಾತುಗಳೆಷ್ಟು? ಆಣೆಗಳೆಷ್ಟು? ಈಗಿನ ಕಿತ್ತಾಟಗಳು, ಪ್ರತಿದಿನದ ಅಳು, ಕಿರುಚಾಟಗಳು, ಅವುಗಳದೇ ಅವಶೇಷಗಳಿರಬೇಕು.ಇಂದಿನ ಬದುಕು ಸುಂದರ ಶಿಲ್ಪವೊಂದು ಭಗ್ನವಾದಂತಾಗಿದೆ!" ಎಂದಂತೆ ಭಾಸವಾಗಿ, ಬದುಕನ್ನು ಬದಲಿಸಲು ಹೊರಡುವ ನಿರ್ಧಾರ ಕೊಂಚ ಸಡಿಲಗೊಳ್ಳುತ್ತದೆ. ನಾಳೆಯಿಂದ ನಸುಕಿಗೆ ಎದ್ದು ಓದಿಕೊಳ್ಳುತ್ತೇನೆ ಎಂದು ದಿನವೂ ನಿರ್ಧರಿಸುವ ವಿದ್ಯಾರ್ಥಿಯಂತಾಗಿ ಹೋಗುತ್ತೇನೆ ನಾನು. ಹೌದಾ? ಇನ್ನು ಈ ಬದುಕನ್ನು ಹೊಸದು ಮಾಡಿಕೊಳ್ಳುವುದು ಸಾಧ್ಯವೇ ಇಲ್ಲವಾ? ಇನ್ನೇನಿದ್ದರೂ ಕೇವಲ ರಿಪೇರಿಯಷ್ಟೇನಾ? ಎನಿಸಿ ಖಿನ್ನಳಾಗುತ್ತೇನೆ.
    ದಿನವೂ ಹೀಗೇ ಆಗಿದ್ದರೆ,ಜೀವನ ಇಷ್ಟೇ ಎಂದಾಗಿದ್ದರೆ, ನನ್ನವರೊಡನೆ ನಾನು ದಿನವೂ ಹೀಗೆ ಜಗಳವಾಡುತ್ತಲೇ ಇರುತ್ತಿದ್ದರೆ ಜೀವನ ನಿಜವಾಗಲೂ ನರಕವಾಗಿ ಹೋಗುತ್ತಿತ್ತು. ಆದರೂ ಕೆಲವೊಮ್ಮೆ ಅಪರೂಪಕ್ಕೆ ಹೀಗೆಲ್ಲ ಅನ್ನಿಸಿಬಿಡುವುದು ಸುಳ್ಳಲ್ಲ. ಎಷ್ಟೋ ಶತ ವರ್ಷಗಳಿಂದ ಇದೇ ಜೀವನವನ್ನು ಬದುಕುತ್ತಿದ್ದೆನೇನೋ ಎನಿಸಿ, ಜೀವನ ಅಸಹನೀಯ ಅಂತೆಲ್ಲ ಅನಿಸಿ ಹೋಗುತ್ತದೆ. ಆದರೆ ಯಾವ ದೇವರ ಪುಣ್ಯವೋ ಗೊತ್ತಿಲ್ಲ, ದಿನವೂ ಹೀಗನಿಸುವುದಿಲ್ಲ. ಅಳುಮುಖ ಮಾಡಿಕೊಂಡು ಮುದುಡಿ  ಕೂತಾಗಲೂ ಗೊತ್ತಿಲ್ಲದ ಯಾವುದೋ ಒಂದು ಶಕ್ತಿ ಅಲ್ಲಿಂದ ಎತ್ತಿಕೊಂಡು ಬಂದು 'ಈ ಬದುಕು ನಿನಗಾಗಿ ಕೊಟ್ಟಿದ್ದು, ಬದುಕಿಬಿಡು' ಎಂದು ಜೀವನಾಭಿಮುಖವಾಗಿ ನಿಲ್ಲಿಸಿಬಿಡುತ್ತದೆ. ಮತ್ತೆ ಖುಷಿ ಉಕ್ಕಿ ಹರಿಯತೊಡಗುತ್ತದೆ. ಮತ್ತೆ ಹಳೆಯ ಬದುಕೇ ಹೊಸದಾಗಿ ಕಾಣತೊಡಗುತ್ತದೆ.ತಪ್ಪುಗಳ ರಿಪೇರಿ ಕೂಡ ನವಿರಾಗಿ ನಡೆಯತೊಡಗುತ್ತದೆ. ಚಿಕ್ಕ ಚಿಕ್ಕ ಖುಷಿಗಳೆಲ್ಲ ಸೇರಿ ಒಂದು ದೊಡ್ಡ ಮೊತ್ತದ ಧನ್ಯತೆ ಹೊಮ್ಮುತ್ತದೆ ಹೃದಯದಾಳದಿಂದ.  ಇದು ಹುಚ್ಚು ಮನಸ್ಸಿನ ಸ್ವಭಾವವಾ? ಅಥವಾ ಅಶಕ್ತಳಾದಾಗ  ಬದುಕನ್ನು ನೀಡಿದ ಶಕ್ತಿಯೇ ಹೀಗೆ ಆಧಾರಕ್ಕೆ ನಿಂತು ಪೊರೆಯುತ್ತದಾ? ಗೊತ್ತಿಲ್ಲ. ಅಂತೂ ಹೀಗೆಲ್ಲ ಆಗಿ ಬದುಕು ಮತ್ತೆ ಮತ್ತೆ ಹಳಿ ತಪ್ಪುತ್ತದೆ, ಮತ್ತೆ ಮತ್ತೆ ಹದಕ್ಕೆ ಬರುತ್ತದೆ. ಆದರೂ ಬದುಕು ತುಂಬ ಸುಂದರವಾಗಿದೆ ಅಥವಾ ಆದ್ದರಿಂದಲೇ ಇಷ್ಟು ಸುಂದರವಾಗಿದೆ.

Friday 16 July, 2010

ಹೇಳು ನಾ ಕಾಯಲೇನು?

ಎಲ್ಲಾದರೂ ಆದೀತು,
ಆ ನದಿಯ ದಂಡೆಯಾದರೂ
ಈ ತೀರದ ಬಂಡೆಯಾದರೂ
ನೀನೆಲ್ಲಿರುವೆಯೆಂದು ಗೊತ್ತಿಲ್ಲದಿರುವಾಗ...

ಮನವ ಹೊತ್ತೊಯ್ಯಲ್ಲಿ 
ಅಪ್ಪಳಿಸಿದ ಅಲೆಗಳಿಂದು
ಗುರಿಯೇ  ಇಲ್ಲದಿರುವಾಗ
ನಾವಿಕನೇಕೆ? ನೌಕೆಯೇಕೆ?
ಹೋಗಿ ಸೇರಲಿ ಎಲ್ಲಾದರೂ
ಮನಸು ಮೈಮರೆಯುವಲ್ಲಿಗೆ

ಬಯಕೆಗಳ ಭಾರಕ್ಕೆ
ಬೆನ್ನು ಬಾಗಿರುವಾಗ 
ಪಯಣ ಮಾಡಬೇಕೆ
ಬವಣೆಗಳ ಇನ್ನೊಂದು ತೀರಕ್ಕೆ?

ನಿನ್ನ ಇರುವಿಕೆಯ ಸುಳಿವಿಲ್ಲ
ನನ್ನೊಳಗೆ 'ನಾನು' ತುಂಬಿರುವಾಗ
ಬರುವಿಕೆಯ ಕಾಯುತಿರುವೆನೆಂದು 
ಹೇಳಿರುವುದು ಸುಳ್ಳಾಗಿರುವಾಗ
ನೀ ಬರುವ ಸೂಚನೆಯೂ ಇಲ್ಲ

ಆದರೂ ಕಾಯಲೇನು?
ಕ್ಷಮಿಸಲಾದರೂ ಒಮ್ಮೆ ಬರುವೆಯೇನು?
ಕರುಣೆಯಿಂದಾದರೂ..
ಪ್ರೀತಿಯಿಂದಾದರೂ...
ಭಿಕ್ಷೆಯೆಂದಾದರೂ...
ದಾನವೆಂದಾದರೂ..

ಹೇಗಾದರೂ ಸರಿ...
ಒಂದು ಹಿಡಿ ಪ್ರೀತಿಯ
ಕೊಡುವೆಯೇನು?
ಹೇಳು, ಹೇಳು,
ನಾ ಕಾಯಲೇನು?