Thursday, 24 December 2009

ಸಾವಿನೊಂದಿಗೆ ನಿಶ್ಚಿತಾರ್ಥ.....


      
       ಕನಸು ನಿಜವಾದಾಗ ಆಗುವ ಸಂಭ್ರಮಕ್ಕಿಂತ ’ಕನಸು ನಿಜವಾದಂತೆ ಕನಸಾಗಿದೆ...’ ಎಂದು ಕನಸು ಕಾಣುವಾಗಲೇ ಸುಖ ಎಂದು ಅನಿಸಿದ್ದು ನಮ್ಮ ಮದುವೆ ಮುಗಿದು, ನೆಂಟರಿಗೆಲ್ಲ ತಮ್ಮ ತಮ್ಮ ಮನೆಗಳ ನೆನಪಾಗಿ, ನಮ್ಮ ಮನೆ ಖಾಲಿಯಾದಾಗ..ಜೊತೆಗೆ ಮನಸ್ಸೂ...
      ಅತ್ತೆಗೆ ಖಿನ್ನಳಾಗಿ ಕುಳಿತಿದ್ದ ಹೊಸ ಸೊಸೆಯನ್ನು ಸಂತೈಸಿ ತಾನೇ ಇನ್ನುಮೇಲೆ ನಿನ್ನ ಅಮ್ಮನಾಗಿ ಪೊರೆಯುತ್ತೇನೆ ಎಂಬುದನ್ನು ಧೃಢಪಡಿಸುವ ತವಕ. ಮದುವೆಯಾಗಿ ಮನೆಗೆ ಬಂದ ಹೊಸದರಲ್ಲಿ ತನಗೂ ಹೀಗೆ ಆಗಿತ್ತು, ತವರನ್ನು ಬಿಟ್ಟು ಬರುವದು ಕಷ್ಟ,ಹೊಸಬರೊಂದಿಗೆ ಹೊಂದಾಣಿಕೆ ಕಷ್ಟ, ಆದರೂ ಹೆಣ್ಣಿಗೆ ಸಾಧ್ಯ, ಎಂದೆಲ್ಲ ಹೇಳಿ ಧೈರ್ಯ ತುಂಬತೊಡಗಿದ್ದರು. ಸಮಾಧಾನ ನನ್ನ ತಲೆಯ ಮೇಲಿಂದ ಹಾದು ಹೋಗುತ್ತಿತ್ತು. ನಾಲ್ಕು ವರ್ಷಗಳಿಂದ ಕಾದು, ಕಾದು, ಪರಿತಪಿಸಿ, ಬಯಸಿ ಮದುವೆ ಆದಮೇಲೆ ಕಷ್ಟವೇನಿದೆ?  ಯಾವಾಗಲೂ ಇದ್ದದ್ದು ಹಾಸ್ಟೇಲುಗಳಲ್ಲೇ. ನನಗೊಂದು ತವರಿದೆ ಎಂಬುದು ನೆನಪಾದದ್ದೇ ಅವರು ಮದುವೆಯ ದಿನವನ್ನು ನಿಶ್ಚಯಿಸುವ ಕೆಲಸವನ್ನು ಮುಂದೂಡುತ್ತಾ ಹೋದಾಗ.ಸಿಟ್ಟು ಬಂದು, ಯಾವಾಗ ಬಿಟ್ಟು ಹೋಗುವೆನೋ ಎನಿಸಿರುವ ತವರನ್ನು ಬಿಟ್ಟು ಹೋಗಲೇನು ಕಷ್ಟ?
       ಊಹುಂ,ನನಗೆ ಯಾರು ಸಮಾಧಾನ ಮಾಡುವುದೂ ಬೇಕಾಗಿರಲಿಲ್ಲ.ನೀನು ಕೂಡ! ಕೇವಲ ನಿನಗೆ ಏನಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಾಗಿತ್ತು.ನೀನು ನನಗೆ ಹೇಳದೇ ಯಾವ ಕೆಲಸವನ್ನು ಮಾಡುವುದಿಲ್ಲ, ಅಥವಾ ಮಾಡಿದ ಮೇಲಾದರೂ ಹೇಳದೇ ಇರುವುದಿಲ್ಲ ಎಂಬುದು ಗೊತ್ತಿತ್ತು, ಗೊತ್ತಿದ್ದದ್ದು ಅದು.ಭಾವಿಸಿದ್ದಲ್ಲ.ಆದರೆ ಮದುವೆಯ ಮರುದಿನ ನನಗೆ ಗೊತ್ತಿಲ್ಲದೇ ನೀನು ಆಸ್ಪತ್ರೆಗೆ ಹೋಗಿ ಬಂದಿದ್ದೆ. ಅಲ್ಲಿರುವವರೆಲ್ಲ ನನ್ನ ಹಿತೈಷಿಗಳೆಂದು ಹೇಳಿಕೊಳ್ಳುವವರೇ, ನನಗೆ ಸುದ್ದಿ ತಿಳಿಯದೇ ಇರುತ್ತದಾ? ಆದರೆ ನಿನ್ನ ಮುಖದಲ್ಲಿ ತುಂಬಿದ ಅಪರಾಧಿ ಪ್ರಜ್ಞೆಯನ್ನು ನಾನು ಆಶ್ಚರ್ಯದಿಂದ ನೋಡುತ್ತಲೇ ಇದ್ದೆ. ನಿನ್ನ ಮೇಲೆ ಕೋಪ ಅನುಮಾನ ಎಲ್ಲಕ್ಕಿಂತ ಹೆಚ್ಚಾಗಿ ಆಶ್ಚರ್ಯ ಮೂಡಿತ್ತು.  ನೀನು ಎರಡು ದಿನದಿಂದ ನನ್ನ ಕಣ್ಣಿಗೂ ಬೀಳಬಾರದೆಂಬಂತೆ, ಮದುವೆಗೆ ತಂದಿದ್ದ ಕಂಬಳಿ, ಗುಡಾರಗಳನ್ನು ಸಾಗಿಸುವ, ಚಪ್ಪರ ಬಿಚ್ಚಿಸುವ ಕೆಲಸದಲ್ಲಿ ತೊಡಗಿ, ನಾನು ಮಲಗಿದ ಮೇಲೆ ಒಳಗೆ ಬರತೊಡಗಿದ್ದು ನೋಡಿ ತುಂಬ ಆಶ್ಚರ್ಯವಾಗತೊಡಗಿತ್ತು. ನಿನಗೆ ಸಾವಿನ ಮುನ್ಸೂಚನೆ ಸಿಕ್ಕಿಯಾಗಿತ್ತೆಂದು ತೋರುತ್ತದೆ. ನನಗೂ ನೀನು ದೂರವಾಗುತ್ತಿರುವುದರ ಸೂಚನೆ ಸಿಕ್ಕಿಯಾಗಿತ್ತು. ಆದರೆ ಖಂಡಿತ ಹೀಗಾಗುತ್ತದೆಯೆಂದು ಕನಸಿನಲ್ಲೂ ಎಣಿಸಿರಲಿಲ್ಲ.ಕನಸಿನಲ್ಲಿ ಏನು ಎಣಿಸುವುದು? ನೀನು ಮಾತನಾಡದೇ ಉಳಿದ ದಿನಗಳನ್ನು ನಿಜವಾಗಿಯೂ ಎಣಿಸಿ ಎಣಿಸಿ ಸುಸ್ತಾಗಿದ್ದೆ. ಬಾಯಿಬಿಟ್ಟು ಕೇಳಲು ಸ್ವಾಭಿಮಾನ (ಅಹಂಕಾರ ಎಂದರೆ ಸಮಂಜಸವಾಗಬಹುದು). ವಿನಾಕಾರಣ ಹೀಗೆ ಮಾಡುತ್ತಿದ್ದೀಯ ಎನಿಸಿದರೂ ಹಾಗಲ್ಲ ಎಂದು ಗೊತ್ತಿತ್ತು.
    ಪ್ರತಿ ಕ್ಷಣ ನಿನ್ನ ಹೃದಯ ಬಡಿತದೊಂದಿಗೇ ನಾನು ಉಸಿರಾಡಿದ್ದೆ ನಾಲ್ಕು ವರ್ಷಗಳಿಂದ! ಆದರೂ ನೀನು ಹೀಗೆ ಮಾಡಬಹುದೇ? ನೀನು ನನ್ನ ಪಾವಿತ್ರ್ಯತೆಯನ್ನು ಉಳಿಸಿ, ನಾನು ಬೇರಾರನ್ನೋ ಮದುವೆಯಾಗಿ ಸುಖವಾಗಿರಲೆಂದು ಬಯಸಿದ್ದು ತಪ್ಪಲ್ಲ, ಆದರೆ ನನ್ನಿಂದ ಅದು ಸಾಧ್ಯ ಎಂದು ಯೋಚಿಸಲು ಮನಸ್ಸಾದರೂ ಹೇಗೆ ಬಂತು ನಿನಗೆ? ನಿನ್ನ ಜಾಗದಲ್ಲಿ ನಾನಿದ್ದರೂ ಹಾಗೆಯೇ ಮಾಡುತ್ತಿದ್ದೆನೇನೋ. ಆದರೂ...ಅಷ್ಟೆಲ್ಲ ಮಾಡುವ ಅಗತ್ಯವಿರಲಿಲ್ಲ. ನೀನು ನನ್ನನ್ನು ಮುಟ್ಟಿದ್ದರೆ ನಾನು ಖಂಡಿತ ಮತ್ತಷ್ಟು ಪವಿತ್ರಳಾಗುತ್ತಿದ್ದೆ, ರಾಮ ಮುಟ್ಟಿದ ಬಂಡೆ ಅಹಲ್ಯೆಯಾದಂತೆ.ನೀನು ಅಷ್ಟೊಂದು ಅಪರಾಧಿ ಪ್ರಜ್ಞೆ ಇಟ್ಟುಕೊಂಡು ಹೊರಟು ಹೋಗಿದ್ದು ಸರಿಯಾ? ಇಷ್ಟೊಂದು ಪ್ರೀತಿಸಿದ ನನ್ನನ್ನು ಬಿಟ್ಟು ಹೋಗಲು ನಿನಗೂ ಮನಸಿರಲಿಲ್ಲವೆಂದು ಗೊತ್ತು ನನಗೆ. ಆದರೆ ಅದನ್ನು ನೀನು ಮಾಡಿದ ತಪ್ಪೆಂದು ಹೇಗೆ ಅಂದುಕೊಂಡೆ ನೀನು? ಸಾವು ನಮ್ಮ ಕೈಯಲ್ಲಿಲ್ಲ ಎಂದು ನನಗೆ ಗೊತ್ತಿರುವ ಹಾಗೇ ನಿನಗೂ ಗೊತ್ತಿತ್ತು. ’ಕೊನೆವರೆಗೂ ಜೊತೆಗಿರುತ್ತೇನೆ’ ಎಂಬ ಮಾತನ್ನು ಉಳಿಸಿಕೊಳ್ಳಲಾಗಲಿಲ್ಲವೆಂದು ನೀನು ಕೊನೆ ಗಳಿಗೆಯಲ್ಲಿ ಎಷ್ಟೊಂದು ನೊಂದುಕೊಂಡೆಯಲ್ಲವೇ? ಹೊಸ ಜೀವನದ ಆರಂಭದ ದಿನವೇ ಜೀವನ ಅಂತ್ಯದ ದಿನವನ್ನು ಕೂಡ ತಿಳಿಸಿಬಿಟ್ಟಿತು. ಅದರಲ್ಲಿ ನಿನ್ನ ತಪ್ಪೇನು?ಬೇರೆಯವರಿಗೆ ಆ ದಿನದ ನಿಶ್ಚಯವಾಗಿರುವುದು ಗೊತ್ತಾಗಿರುವುದಿಲ್ಲ, ನಿನಗೆ ಗೊತ್ತಾಗಿತ್ತು ಅಷ್ಟೇ ತಾನೇ ವ್ಯತ್ಯಾಸ? ನಿಶ್ಚಯವಂತೂ ಆಗಿಯೇ ಇರುತ್ತದೆಯಲ್ಲವೇ?
ನನ್ನ-ನಿನ್ನ ಮದುವೆಯ ಮರುದಿನ ನಿನಗೆ ಇನ್ನೊಬ್ಬರೊಂದಿಗೆ ನಿಶ್ಚಿತಾರ್ಥ. ಅದೂ ಸಾವಿನೊಂದಿಗೆ! ನಾನು ನೊಂದುಕೊಳ್ಳುತ್ತೇನೆ ಎಂದುಕೊಂಡೆ ಅಲ್ಲವೇ?ಅಥವಾ ಸಾವನ್ನು ನನ್ನ ಸವತಿಯಂತೆ ತಿಳಿದು ಅಸೂಯೆ ಪಡುತ್ತೇನೆ ಎಂದುಕೊಂಡೆಯೇನೋ? ಇಲ್ಲ, ನಿನಗೆ ಗೊತ್ತಿತ್ತು ನನಗೆ ’Possessiveness’ ಯಾವತ್ತಿಗೂ ಇರಲಿಲ್ಲವೆಂದು.
    ಒಂದು ಖುಷಿಯ ವಿಷಯ ಹೇಳಬೇಕು ನಿನಗೆ, ನೀನು ನನಗೆ ಕೊಟ್ಟ ಮಾತು, ನಾನು ನಿನಗೆ ಕೊಟ್ಟ ಮಾತು ಎರಡೂ ಉಳಿಯುತ್ತಿದೆ. ಮಾತು ಉಳಿಸುವ ಸಲುವಾಗಿಯಲ್ಲ, ನಿನ್ನನ್ನು ಬಿಟ್ಟು ಹೇಗೆ ಬದುಕುವುದೆಂಬುದು ನನಗೆ ಮರೆತು ಹೋಗಿದೆ ಆದ್ದರಿಂದ ನಿನ್ನ ಹಿಂದೆಯೇ ಬರುತ್ತಿದ್ದೇನೆ. ನೀನು ಹೋರಟು ಒಂದು ಘಂಟೆಯಾಗಿರಬಹುದು ಅಲ್ಲವೇ? ಅದನ್ನು ಅರ್ಥಮಾಡಿಕೊಳ್ಳಲು ನನಗೆ ಸ್ವಲ್ಪ ಸಮಯ ಹಿಡಿಯಿತು.ತಡವಾದದ್ದಕ್ಕೆ ಕ್ಷಮಿಸು ನನ್ನನ್ನು. ನಂಬಲಾಗಲಿಲ್ಲ ನೀನು ನನ್ನನ್ನು ಬಿಟ್ಟು ಹೊರಟುಬಿಟ್ಟೆಯೆಂದು.ಯಾವಾಗಲೂ ಹಾಗೆ ಮಾಡುತ್ತಿರಲಿಲ್ಲ.ಇವತ್ತು ಯಾಕೆ ಅಷ್ಟು ಅವಸರ ಮಾಡಿದೆ? ಯಾವಾಗಲೂ ನಾನು ಸಿಂಗರಿಸಿಕೊಂಡು ಬರಲು ಎಷ್ಟು ತಡವಾದರೂ ಕಾಯುತ್ತಿದ್ದೆ. ನನಗಿಂತ ಸಾವಿನ ಮೇಲೆಯೇ ಹೆಚ್ಚು ಪ್ರೀತಿ ಬಂದಿತಾ ನಿನಗೆ? ಗೊತ್ತು ನನಗೆ, ನಿನಗೂ ಕಷ್ಟವಾಗುತ್ತದೆ ಅಲ್ಲಿ, ಮೊದಲೇ ಆರೊಗ್ಯ ಸರಿಯಿಲ್ಲ ನಿನಗೆ. ನಿನ್ನ ಕೆಲಸಗಳನ್ನು ನಾನಲ್ಲದೇ ಬೇರೆ ಯಾರೋ ಮಾಡುವುದು, ಅದು ಸರಿಯಾಗದೇ ನೀನು ಬೇಸರಿಸಿಕೊಂಡು ಕಣ್ಣಲ್ಲಿ ನೀರು ತುಂಬಿಕೊಳ್ಳುವುದು, ಇದನ್ನೆಲ್ಲ ನನ್ನಿಂದ ಸಹಿಸಲಾಗುವುದಿಲ್ಲ.
    ನೀನು ಮಾಡಿದ್ದರಲ್ಲಿ ಒಂದೇ ಒಂದು ನನಗೆ ತಪ್ಪೆಂದು ಕಂಡಿದ್ದು. ಪ್ರತಿಯೊಂದನ್ನೂ ಹೇಳುತ್ತೇನೆ ಎಂದು ಹೇಳಿ ಸಾವಿನೊಡನೆ ನಿನ್ನ ನಿಶ್ಚಿತಾರ್ಥವಾಗಿ ಒಂದು ವರ್ಷವಾದರೂ ನನಗೆ ಹೇಳಲೇ ಇಲ್ಲ ನೀನು.ಗೊತ್ತಾಗಿದ್ದರೆ ಆವತ್ತೇ ನಾನೂ ಮಾಡಿಕೊಳ್ಳುತ್ತಿದ್ದೆ. ಪರವಾಗಿಲ್ಲ ಬಿಡು, ಅವಸರವಸರವಾಗಿ ನನ್ನ ಮದುವೆಯೇ ಆಗುತ್ತಿದೆ ಅದರೊಂದಿಗೆ.ನನ್ನ ಎರಡನೆಯ ಮದುವೆ ನಿಶ್ಚಿತಾರ್ಥವಿಲ್ಲದೆಯೇ ಆಗುತ್ತಿದೆ! ನೀನು ಹೊರಟಕೂಡಲೇ ಸಿಂಗರಿಸಿಕೊಳ್ಳುತ್ತೇನೆಂದು ಹೇಳಿ ಒಳಗೆ ಬಂದುಬಿಟ್ಟೆ ನಾನು, ಅದನ್ನು ನೋಡಿ, ಅವರೆಲ್ಲ ಭಯಪಟ್ಟರು ಎನಿಸುತ್ತದೆ ಹುಚ್ಚು ಹಿಡಿದಿದೆಯೆಂದು.ಏನೋ... ಗೊತ್ತಾಗುತ್ತಿಲ್ಲ ನನಗೆ, ಇದ್ದರೂ ಇರಬಹುದು ಎನಿಸುತ್ತಿದೆ. ಬೇರೆ ಯಾರಿಗೂ ಸರಿಯಾಗಿ ಗೊತ್ತಾಗುವುದಿಲ್ಲ ನನ್ನ ಮನಸ್ಸಿನಲ್ಲಿ  ಏನಾಗುತ್ತಿದೆಯೆಂದು. ನನಗೆ ಗೊತ್ತಾಗದಿದ್ದರೂ ನಿನಗೆ ಗೊತ್ತಾಗುತ್ತದೆ.ಆದ್ದರಿಂದಲೇ ಬರುತ್ತಿದ್ದೇನೆ. ಹೌದು, ನಾನೂ ಬರುತ್ತಿದ್ದೇನೆ.ದಯವಿಟ್ಟು ಎಲ್ಲಿದ್ದೀಯೋ ಅಲ್ಲಿಯೇ ನಿಲ್ಲು...ಒಂದು ಘಂಟೆ ತಡವಾದದ್ದಕ್ಕೆ ಬೇಸರಿಸಿಕೊಳ್ಳಬೇಡ. ನಿನ್ನ ಕಣ್ಣಲ್ಲಿ ಒಂದು ಹನಿ ನೀರು ಬಂದರೂ ಅದನ್ನು ನಾನೇ ಒರೆಸಬೇಕು.

Monday, 21 December 2009

ಇನ್ನಾದರೂ....



ನಾವಿಕನಂತೆ ನೀನಿರಲು
ನಿನ್ನೆದೆಯ ನೌಕೆಯಲಿ
ನನ್ನುಸಿರ ಪಯಣ
ಬಾರದೆಯೆ ಇರಲೆನ್ನ ನಿಲ್ದಾಣ

ಪಯಣಿಗಳು ನಾನೆಂದು ತಿಳಿದು
ಇಳಿಯೆನ್ನದಿರು ನನ್ನ
ನಿರ್ಜೀವ ನೌಕೆಯಾಗಿಯಾಗಿಯಾದರೂ
ಬಳಿಯಿರುವೆನು.

ಕಣ್ಣೆದುರು ನಾನಿರಲು
ಕಣ್ಣು ಮುಚ್ಚಿ ಮರೆಯಬಹುದು ನೀನು
ಅದೃಶ್ಯವಾಗುವ ದೃಶ್ಯವಾಗಲಾರೆ ನಾನು
ರೆಪ್ಪೆಯೊಳಗಿನ ಕತ್ತಲಾದರೂ ಆಗಿ
ಜೊತೆಗಿರುವೆನು.

ಕಡಲಂತೆ ನೀನಿರಲು
ಬಳಿ ಬಾ ಎನಲಾರೆನು
ನದಿಯಾಗಿ ಹರಿದಿಹೆನು
ಇನ್ನಾದರೂ ಬಂದು ನಿನ್ನ ಸೇರಲೇನು?



Tuesday, 8 December 2009

ಮರೆತಿಹೆನೆ ನಿನ್ನ?



ಕಳೆದು ಹೋದ ಓಲೆ
ನನ್ನೊಲವು....
ಬೇರೆ ಓಲೆ ಬರೆಯಲೋ?
ಹಳೆಯದನ್ನೇ ಹುಡುಕಲೋ?


ತಿಳಿದಿರುವುದೇನೆಂದು
ತಿಳಿಯದಾಗಿದೆ.
ತಿಳಿಸೆಂದು ನಿನ್ನನ್ನೇ ಕೇಳಲೋ?
ನನ್ನ ತಿಳಿವಿನೊಳವನ್ನೇ ಕೆದಕಲೋ?


ಮಿತಿಮೀರಿದೆಯಂತೆ ಮರೆವು
ಕಾರಣ ಕೇಳಲು ನಸುನಗುತಿದೆ ಮನವು
ನಿನ್ನ ಮರೆಯಲೆತ್ನಿಸಿ ಉಳಿದೆಲ್ಲವನ್ನು
ಮರೆತಾಗಿದೆಯೆಂದು ಕೆಣಕುತಿದೆ ತಿಳಿವು.

Tuesday, 1 December 2009

ಯಾವುದು ಹೆಚ್ಚು ತಪ್ಪು?



         "ಅರ್ಥ ಮಾಡಿಕೊಳ್ಳದೇ ಪ್ರೀತಿಸೋದು ತಪ್ಪು...ಆದರೆ ಆ ತಪ್ಪಿಗಾಗಿ ಜೀವನ ಪೂರ್ತಿ ಶಿಕ್ಷೆ ಅನುಭವಿಸೋದು ನ್ಯಾಯವಾ? ನಾವು ಪ್ರೀತಿ ಅಂತ ಅಂದುಕೊಂಡದ್ದು ಪ್ರೀತಿ ಅಲ್ಲ ಅಂತ ಅರ್ಥ ಆಗಿಯೂ ಜೀವಂತಿಕೆ ಇಲ್ಲದ ಜೀವನವನ್ನು ಅನುಭವಿಸುವುದಕ್ಕಿಂತ,ಈಗ ಅನುಭವಿಸುವ ಅಪರಾಧಿ ಪ್ರಜ್ಞೆ ಗಿಂತ ಹೆಚ್ಚಿನ ಯಾತನೆ ಕಾದಿದೆ ಮುಂದೆ ಅಂತ ಅರಿವಾದ ಮೇಲೂ ಜೊತೆಯಾಗಿರುತ್ತೇನೆ ಎನ್ನುವುದಕ್ಕಿಂತ, ಬಿಟ್ಟು ಬರುವುದು ತುಂಬ ಒಳ್ಳೆಯದು ಎನಿಸುತ್ತಿದೆ ಮರೀ.. ಅಷ್ಟು ದೈರ್ಯ ತಂದುಕೊಳ್ಳಲು ಮನಸ್ಸು ಒಪ್ಪಿದರೆ ಎದ್ದು ಬಂದುಬಿಡು"
       ಊಹುಂ...ಅಮ್ಮ ಹೇಳಿದ ಒಂದೇ ಒಂದು ಮಾತು ಕೂಡ ನನಗಾಗ ತಿಳಿಯಲಿಲ್ಲ. ನನ್ನ ಬದುಕಿನ ಎಲ್ಲ ಸಂತೋಷದ ಕ್ಷಣಗಳನ್ನು ಅವನಿಗಾಗಿ ಬಿಟ್ಟುಕೊಡಬಯಸಿದ್ದೆ, ನಾನೇನೋ ದೊಡ್ಡ ತ್ಯಾಗ ಮಾಡುತ್ತಿದ್ದೇನೆಂದು ನನಗೆಂದಿಗೂ ಅನ್ನಿಸಲಿಲ್ಲ, ಪ್ರೀತಿಯಲ್ಲವೇ? ಎಲ್ಲರೂ ಹೇಳಿದ್ದು ಮಾತ್ರವಾಗಿರಲಿಲ್ಲ, ಸ್ವತಃ ಅರ್ಥವಾಗಿತ್ತು ತನ್ನ ಅಹಂ ತೃಪ್ತಿಗಾಗಿ ನನ್ನನ್ನು ಪ್ರೀತಿಸುತ್ತಿದ್ದಾನೆ ಎಂದು. ಅವನೇ ಬಾಯಿ ಬಿಟ್ಟು ಹೇಳುತ್ತಿದ್ದ, " ಗೊತ್ತು ಕಣೇ, ನೀನು ಯಾವತ್ತೂ ನನ್ನ ಮಾತು ಮೀರುವುದಿಲ್ಲ ಅಂತ". ಅದನ್ನು ಕೂಡ ಅವನು ನನ್ನ ಅದಮ್ಯ ಪ್ರೀತಿಯನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಂಡ ರೀತಿಯೆಂದೇ ಭಾವಿಸುತ್ತಿದ್ದೆನಲ್ಲವೇ? ಅದು ನನ್ನ ದೊಡ್ಡ ಗುಣವೇನಾಗಿರಲಿಲ್ಲ. ಕಣ್ಣಿಗೆ ಪ್ರೀತಿಯೆಂಬ ಬಣ್ಣದ ಕನ್ನಡಕ ಹಾಕಿಕೊಂಡು ನೋಡಿದಾಗ ಜಗತ್ತು ಕಂಡದ್ದೇ ಹಾಗೆ ನನಗೆ. ಬಣ್ಣ ಬಣ್ಣವಾಗಿ, ರೋಮಾಂಚಕಾರಿಯಾಗಿ! ಅರಿತು ಮಾಡಿದ ತಪ್ಪು ಕೂಡ ಅಲ್ಲ ಅದು. ಆದರೆ ಅರಿಯದೇ ಮಾಡಿದ ತಪ್ಪಿನ ಅರಿವಾದಾಗ ತಿದ್ದಿಕೊಳ್ಳುವ ಅವಕಾಶ ಇನ್ನೂ ಕಳೆದು ಹೋಗಿಲ್ಲವೆಂದಾದರೆ, ತಿದ್ದಿಕೊಳ್ಳುವುದು ತಪ್ಪಾ? ಹೀಗೆಂದು ಕೇಳಿದ ಮನಸ್ಸೇ ಮರುಕ್ಷಣ ಅಪರಾಧಿ ಪ್ರಜ್ಞೆ ಮೂಡಿಸಿ, ಚುಚ್ಚಿ ಕೊಲ್ಲುತ್ತಿತ್ತು ನನ್ನನ್ನು. ಆದ್ದರಿಂದಲೇ ಸುಮ್ಮನಾಗಿಬಿಟ್ಟೆ, ಜೀವನ ಪರ್ಯಂತ ವಿಫುಲವಾಗಿ ದೊರೆಯಲಿರುವ ದುಃಖವನ್ನಾದರೂ ಅನುಭವಿಸಿಯೇನು, ಈ ಅಪರಾಧಿ ಪ್ರಜ್ನೆಯನ್ನಲ್ಲ ಎನಿಸಿದ್ದರಿಂದ. ಅಲ್ಲೇ ಸಂದಿಯಲ್ಲೊಂದು ಆಸೆ ಇಣುಕುತ್ತಿತ್ತು, ನಾನು ಅವನ ಎಲ್ಲ ಭಾವನೆಗಳನ್ನು ಗೌರವಿಸಿದಂತೆ, ಅವನು ನನ್ನ ಕೆಲವೊಂದು ಭಾವನೆಗಳನ್ನಾದರೂ ಕನಿಷ್ಠ ಪಕ್ಷ ಅರ್ಥ ಮಾಡಿಕೊಳ್ಳಬಹುದೇನೋ ಮುಂದೊಂದು ದಿನ ಎಂದು.
           "ಜೀವನ ಬರೀ ಒಣ ಮಾತುಗಳ, ಚಾಕ ಚಕ್ಯತೆಗಳ ವಾಗ್ವಾದವಲ್ಲ ಮರೀ.., ನಿನ್ನ ವಯಸ್ಸು, ಬಿಸಿ ರಕ್ತ, ನಿನ್ನ ಉತ್ಸಾಹ, ಬುದ್ಧಿವಂತಿಕೆಗಳ ಮುಂದೆ ನಾನು ವಾದ ಮಾಡಿದರೆ ಖಂಡಿತ ಗೆಲ್ಲುವುದಿಲ್ಲ ಅಂತ ಗೊತ್ತು. ಸೋತರೂ ನನಗೇನೂ ದುಃಖವಿಲ್ಲ ಏಕೆಂದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ. ಆದರೆ ಜೀವನ ನಿನ್ನ ವಾದಗಳಿಗೆ, ಲೆಕ್ಕಾಚಾರಗಳಿಗೆಲ್ಲ ತಲೆಬಾಗುವುದೇ ಇಲ್ಲ.ಅವನು ನನ್ನನ್ನು ವಸ್ತುವಿನಂತೆ ತಿಳಿದರೂ ನಾನು ಮಾತ್ರ ಅವನನ್ನು ಈಗಿನಂತೆಯೇ ಉತ್ಕಟವಾಗಿ ಜೀವನ ಪರ್ಯಂತ ಪ್ರೀತಿಸುತ್ತೇನೆ ಎಂಬುದನ್ನು ಯೋಚಿಸುವುದು ಕೂಡ ಯೌವ್ವನದಲ್ಲಿ ಮಾತ್ರ ಸಾಧ್ಯ.........." ಅಮ್ಮ ಹೇಳುತ್ತಲೇ ಹೋದಳು. ನಾನು ಬುದ್ಧಿಯ ಬಾಗಿಲನ್ನು ಮುಚ್ಚಿಕೊಂಡು ಕೂತಿದ್ದೆ. ನಿಜವಲ್ಲವೇ ಎಂದು ಈಗ ಅನಿಸುತ್ತದೆ. ಪ್ರಯೋಜನವಿಲ್ಲ.
ಈಗಲೂ ಯುವ ಪ್ರೇಮಿಗಳು ಆಡುವ ಆವೇಶದ ಮಾತುಗಳನ್ನು ಕೇಳಿದ್ದೇನೆ."ಪ್ರೀತಿಸಿದ ಮೇಲೆ ಕೊನೆ ಉಸಿರಿರುವವರೆಗೂ ಜೊತೆಯಾಗಿಯೇ ಇರಬೇಕು. ಸತ್ತರೂ ಜೊತೆಯಾಗಿಯೇ ಸಾಯಬೇಕು" ಎಂದು. ಜೊತೆಗಿರುವುದೆಂದರೇನು? ಅವನು ನನ್ನ ಜೊತೆಗಿದ್ದನಾ? ತುಂಬ ಸಲ ಕೇಳಿಕೊಂಡೆ ನನ್ನ ಮನಸ್ಸನ್ನು. ಇಲ್ಲ ಎನ್ನುವಷ್ಟು ಧೈರ್ಯವಿಲ್ಲ, ಹೌದೆನ್ನಲು ಮನಸ್ಸೊಪ್ಪುತ್ತಿಲ್ಲ. ನನ್ನ ಇಡೀ ಜಗತ್ತನ್ನು ಅವನಿಗಾಗಿ ಹಿಂದೆ ಬಿಟ್ಟು, ಅವನೇ ಜಗತ್ತೆಂದುಕೊಂಡು ನಡೆದು ಬಂದಾಗಿತ್ತು ನಾನು. ಅವನ ಮಾನಸಿಕ ಸಾಂಗತ್ಯ ಆ ದಿನಗಳಲ್ಲಿ ತೀರ ಅನಿವಾರ್ಯವಾಗಿತ್ತು ನನಗೆ. ಸಿಗುವುದಿಲ್ಲ ಎಂದು ಗೊತ್ತಿದ್ದರೂ ಎಲ್ಲೋ ಒಂದು ನಿರೀಕ್ಷೆ. ತುಂಬ ವರ್ಷಗಳು ಅರ್ಥಹೀನ ಕಾಯುವಿಕೆಯಲ್ಲಿ ಕಳೆದು ಹೋದವು. "ತಾಳ್ಮೆ" ಎಂಬ ಪದಕ್ಕೆ (ಗುಣಕ್ಕೆ ಎನ್ನಿ ಬೇಕಾದರೆ) ಯಾವುದೇ ಬೆಲೆಯಿಲ್ಲ ಎಂಬ ಅಭಿಪ್ರಾಯಕ್ಕೆ ಬಂದು ತಲುಪಿದ್ದೆ.
        ಅಮ್ಮ ಹೇಳಿದ ಮಾತು ತುಂಬ ನೆನಪಾಗುತ್ತದೆ. "ಬಿಟ್ಟು ಬರುವಷ್ಟು ಧೈರ್ಯ ತಂದುಕೊಳ್ಳಲು ಮನಸ್ಸು ಒಪ್ಪಿದರೆ ಎದ್ದು ಬಂದುಬಿಡು, ಈಗ ಕಾಡುವ ಅಪರಾಧಿ ಪ್ರಜ್ಞೆ ಗಿಂತ ಜೀವನ ಪೂರ್ತಿ ಅನುಭವಿಸುವ ಯಾತನೆ ದೊಡ್ಡದಿದೆ ಎಂದು ಅರ್ಥವಾದರೆ...."
       ಅರ್ಥ ಮಾಡಿಕೊಂಡೇ ಪ್ರೀತಿಸಬೇಕು ನಿಜ. ಆದರೆ ಪ್ರೀತಿಸಿದ ಮೇಲೆ ಅರ್ಥವಾಗುವ ತುಂಬ ವಿಷಯಗಳಿರುತ್ತವಲ್ಲ.ಆಮೇಲೆ ಅರ್ಥವಾದ ಮುಖವೇ ಬೇರೆ ಆಗಿಬಿಟ್ಟರೆ?ಆವತ್ತು ಹಾಗೆ ಅರ್ಥವಾದೊಡನೆ ಬಿಟ್ಟು ಬಂದಿದ್ದರೆ, ಮನಸ್ಸು ಅಷ್ಟು ಧೈರ್ಯ ಮಾಡಿದ್ದರೆ, ನನ್ನ ನಿರ್ಧಾರ ತಪ್ಪಾಗುತ್ತಿತ್ತಾ? ಆವತ್ತು ಅಮ್ಮನ ಮಾತು ಕೇಳಿದ್ದರೆ ನನ್ನ ಪ್ರೀತಿಗೆ ದ್ರೋಹ ಮಾಡಿದಂತಾಗುತ್ತಿತ್ತಾ? ಅರ್ಥವಾದ ಮೇಲೆ ಬಿಟ್ಟುಬರುವುದು ತಪ್ಪಾ ಅಥವಾ ಜೊತೆಗಿದ್ದು ಇಡೀ ಜೀವನವನ್ನು ವ್ಯರ್ಥಗೊಳಿಸಿಕೊಳ್ಳುವುದು ತಪ್ಪಾ?