Friday 19 March, 2010

ನಿನ್ನ ’ಒಂದು ದಿನ’...



ಬರಿಸದಷ್ಟು ಚಿಕ್ಕ ಚಿಕ್ಕ ಬಯಕೆಗಳಿವೆ ಹುಡುಗಾ! ತುಸುವಾದರೂ ಕೊಟ್ಟುಬಿಡು, ನಿಟ್ಟುಸಿರು ಬರಲಿ. ಬೆಟ್ಟದ ಬಯಕೆಗೆ ತೃಣವಾದರೂ ಸಿಗಲಿ. ನಿನ್ನನ್ನು ಪೀಡಿಸಿ ಪಡೆವ ಆಸೆಗಳೇನಿಲ್ಲ. ಕಂಡ ಕಂಡದ್ದಕ್ಕೆಲ್ಲ ಕಣ್ಣರಳಿಸಿ, ಕೊಡಿಸೆಂದು ನಿನ್ನೆಡೆಗೆ ನೋಡುವ ಜಾಯಮಾನವೂ ನನ್ನದಲ್ಲವೆಂದು ನಿನಗೂ ಗೊತ್ತು.

ಜಡಿಮಳೆ ಸುರಿಯುವ ಬೆಳಗಿನಲ್ಲಿ ಕೊಡೆ ಹಿಡಿದು ದೇವರಿಗೆ ಹೂ ಕೊಯ್ದು ಒದ್ದೆ ಕಾಲಲ್ಲಿ ಒಳಗೆ ಬರುತ್ತೀಯಲ್ಲ, ಅಂತಹ ನಿನ್ನ ’ಒಂದು ದಿನ’ ನನಗೆ ಬೇಕು. ಆ ದಿನ ನಿನ್ನ ಹೆಜ್ಜೆ ಮೂಡಿದಲ್ಲೆಲ್ಲ ನಡದಾಡಿ ನಾನು ನಿನ್ನ ಬಳಿ ಬರಬೇಕು. ಉಹೂಂ... ಬಳಿ ಬರುವುದಿಲ್ಲ. ತೆಳ್ಳವು ಎರೆಯುತ್ತಿರುವ ಆಯಿಯ ಬಳಿ ನಿಂತು, ಬೆಂಕಿಯನ್ನೇ ನೋಡುತ್ತಾ ನೀನು ಬೆಚ್ಚಗಾಗುತ್ತಿರುವಾಗ ನಿನ್ನ ಕಣ್ಣಲ್ಲಿ ಕುಣಿಯುತ್ತಿರುವ ಬೆಂಕಿಯ ಬಿಂಬವನ್ನು ಬಾಗಿಲ ಹಿಂದೆ ನಿಂತು ನಾನು ಇಣುಕಿ ನೋಡಬೇಕು.ಯಾವುದೋ ಗಳಿಗೆಯಲ್ಲಿ ತಲೆಯೆತ್ತಿದ ನೀನು ಅಡಗಿ ನೋಡುತ್ತಿರುವ ನನ್ನನ್ನು ನೋಡಿಬಿಡಬೇಕು. ನಿನ್ನ ಮುಖದಲ್ಲೊಂದು ನಗು ಖುಷಿಯ ಮಿಂಚು ಸುಳಿದಂತೆ. ಏನೋ ಕೆಲಸವಿರುವವನಂತೆ ನಾನಿರುವಲ್ಲಿಗೆ ನೀನು ಬರತೊಡಗಿದಾಗ ನಿನ್ನ ಕೆಲಸವೇನೆಂದು ಅರ್ಥವಾದ ನಾನು ನಿನ್ನಿಂದ ತಪ್ಪಿಸಿಕೊಳ್ಳುವ ವಿಫಲ ಪ್ರಯತ್ನ ಮಾಡುತ್ತೇನೆ. ಅಷ್ಟೆ!
ನಾನು ನಿನ್ನ ಕೈಯ್ಯಲ್ಲಿ ಸಿಕ್ಕಿ ಬೀಳುತ್ತೇನೆ.ಜಡೆಯಿಂದ ತಪ್ಪಿಸಿಕೊಂಡು ಕಿವಿಯ ಮೇಲೆ ಕುಳಿತು ನಿನ್ನನ್ನೇ ಪ್ರೀತಿಯಿಂದ ನೋಡುತ್ತಿರುವ ನನ್ನ ಕೂದಲೆಳೆಗಳೊಂದಿಗೆ ನಿನ್ನುಸಿರು ಮಾತನಾಡುತ್ತದೆ. ನಾಚಿಕೆ ಭಯಗಳಿಂದ ನನ್ನ ಕಿವಿ-ಕೆನ್ನೆ ಕೆಂಪಾಗುತ್ತದೆ. ನಿನ್ನನ್ನು ನೋಡಬೇಕೆನಿಸಿದರೂ ನೋಡಲಾಗದೆ ನಾನು ಕಣ್ಮುಚ್ಚಿಕೊಳ್ಳುತ್ತೇನೆ. ಅಷ್ಟರಲ್ಲಿ ಅಪ್ಪಯ್ಯನ ಕೂಗು ನಿನಗೆ! ನಾನು ಬೆಚ್ಚುತ್ತೇನೆ. ನಿನ್ನ ಮುಖದಲ್ಲಿ ತುಂಟ ನಗು. ನಿನಗೆ ಎಂಥ ಸಮಯದಲ್ಲೂ ಗಾಬರಿಯೇ ಆಗುವುದಿಲ್ಲವಲ್ಲ, ಅದೂ ಇಷ್ಟ ನನಗೆ ನಿನ್ನಲ್ಲಿ. ಅದನ್ನೇ ಹೇಳಬೇಕೆಂದುಕೊಳ್ಳುತ್ತೇನೆ ನಿನಗೆ, ಆದರೆ ಅಷ್ಟರಲ್ಲಿ ನೀನು ಹೊರಟಾಗಿರುತ್ತದೆ ನಿನ್ನ ಸ್ಪರ್ಷದ ಬಿಸುಪನ್ನು ಮಾತ್ರ ನನ್ನಲ್ಲಿ ಉಳಿಸಿ. ನಿನ್ನ ಮುಂದೆ ನನಗೆ ಮಾತು ಹೊರಡುವುದೇ ಕಷ್ಟ.
ಭಾವ - ಬದುಕಿನ ನಡುವೆ ಹುಟ್ಟಿಕೊಂಡ ಸೇತುವೆಯೊಂದು ನದಿ-ದಂಡೆಯೊಡನೆ ಪ್ರೇಮವನ್ನು ಪಿಸುಗುಟ್ಟಿದ್ದನ್ನು ಕದ್ದು ಕೇಳಿ ಧನ್ಯತೆಯಿಂದ ತುಂಬಿಹೋಗುತ್ತದೆಯಂತೆ. ಎಲ್ಲೋ ಒಂದು ಕಡೆ ತಾನೂ ಕಾರಣವಾಗಿದ್ದೇನೆ ಈ ಪ್ರೇಮಕ್ಕೆ ಎಂಬ ಭಾವ ತಂದ ನಲಿವು. ಅದೇ ಭಾವ ತಂದ ನಲಿವು ಆ ದಿನ ಮಳೆಗೂ ಸಿಗುತ್ತದೆ. ನಮ್ಮಿಬ್ಬರ ಪ್ರೇಮಕ್ಕೆ ಎಲ್ಲೋ ಒಂದು ಕಡೆ ತಾನೂ ಕಾರಣವಾಗಿದ್ದೇನೆ ಎಂಬ ಭಾವದಿಂದ ಮಳೆ ಹಿಗ್ಗಿ ಹೋಗುತ್ತದೆ ಆ ದಿನ.
ಇಷ್ಟು ದಿನ ನಿನಗೆ ನಾನು ಸಿಗದೇ ಹೋದದ್ದಕ್ಕೆ ನಿನ್ನ ಮುಖದಲ್ಲೊಂದು ಹುಸಿಮುನಿಸು. ಅದರಲ್ಲಿ ನನ್ನ ತಪ್ಪೇನಿಲ್ಲ, ಇಷ್ಟು ದಿನ ಮದುವೆ ಮಾಡಿಸದೇ ಇದ್ದದ್ದು ಹಿರಿಯರ ತಪ್ಪು ಎಂಬ ಉತ್ತರ ನನ್ನ ಕಣ್ಣಲ್ಲಿ. ಪರವಾಗಿಲ್ಲ ಬಿಡು ಇನ್ನು ಜೀವನಪೂರ್ತಿ ನೀನು ನನ್ನವಳಲ್ಲವೇ ಎಂಬ ಕ್ಷಮೆ ಮಿಶ್ರಿತ ಸಾರ್ಥಕತೆಯೊಂದು ನಮ್ಮಿಬ್ಬರ ಮೌನದಲ್ಲಿ ಮಿಳಿತಗೊಂಡಾಗ ನಾನು ನಿನ್ನ ಹೃದಯದ ಭಾಷೆಯನ್ನು ಕಲಿತುಕೊಳ್ಳುವ ಪ್ರಯತ್ನದಲ್ಲಿ ತೊಡಗಿರುತ್ತೇನೆ.
ಮಳೆರಾತ್ರಿ ಆಕಾಶದಿಂದ ಪ್ರೇಮವನ್ನೇ ಸುರಿಯುತ್ತದೆ. ಬನ್ನಿ, ಎಷ್ಟು ಬೇಕಾದರೂ ಮೊಗೆದುಕೊಳ್ಳಿ ಎಂದು ನಮ್ಮಿಬ್ಬರನ್ನು ಆಮಂತ್ರಿಸುತ್ತದೆ. ಇಷ್ಟು ದಿನ ನಿನಗಾಗಿ ಭೂಮಿಯಂತೆ ಕಾದುಕೊಂಡಿದ್ದರೂ ಈಗ ನಿನ್ನ ಈ ಅಂತರವೇ ಇಲ್ಲದಷ್ಟು ಸನಿಹವನ್ನು ಅರಗಿಸಿಕೊಳ್ಳಲು ಕೊಂಚ ಸಮಯ ಹಿಡಿಯಬಹುದು. ಆದರೂ ನಿಧಾನವಾಗಿ ನಾನು ನನ್ನ ಇರವನ್ನು ಮರೆಯುತ್ತೇನೆ. ನಿನ್ನೊಳಗೆ ಕರಗಿಹೋಗುತ್ತೇನೆ. ನಿನ್ನುಸಿರು ನನ್ನ ನೆತ್ತಿಯನ್ನು ಪ್ರೀತಿಯಿಂದ ನೇವರಿಸಿ ಮುದ್ದಿಸುತ್ತದೆ. ನಿನ್ನ ಹೃದಯ ಬಡಿತ ಮಳೆಯೊಂದಿಗೆ ಸ್ಪರ್ಧೆಗೆ ಬೀಳುತ್ತದೆ. ಮಳೆ ನಾನು ಲಾಲಿ ಹಾಡುತ್ತೇನೆ ಎನ್ನುತ್ತದೆ. ಬೇಡ ಇವಳು ನನ್ನವಳು ನಾನೇ ಲಾಲಿ ಹಾಡುತ್ತೇನೆ ಎನ್ನುತ್ತದೆ ನಿನ್ನ ಹೃದಯ. ಮಳೆಯೇ ಸೋಲುತ್ತದೆ. ನಿನ್ನ ಗೆಲುವು ನನ್ನ ಮೌನದ ತುಂಬೆಲ್ಲ ವಿಜೃಂಭಿಸುತ್ತದೆ. ಆಗ ನಾನೂ ಸೋಲುತ್ತೇನೆ.