Saturday, 17 September 2011

ಅವಳಿಗೂ ಅವನ ಜೊತೆ ಹೀಗೆಲ್ಲ ಆಗಿತ್ತಾ?

             
             ಮಧ್ಯ ರಾತ್ರಿಯಲಿ ಮುದ್ದಾಗಿ ಮಲಗಿರುವ ನಿನ್ನ ಕರೆದೆಬ್ಬಿಸಿ, ಒಮ್ಮೆ ಪ್ರೀತಿಸಬೇಕೆನಿಸಿದೆ ಎಂದು ನಾ ಬಿಕ್ಕುವಾಗ ನನ್ನ ಸಂತೈಸಿದ ನಿನ್ನೊಲವು ಎಷ್ಟೊಂದು ಚೆಂದವಿತ್ತು. ಯಾವ ದುಃಸ್ವಪ್ನ ಕಾಡಿತೋ ನನ್ನವಳ ಎಂದು ನನ್ನ ಸ್ವಪ್ನವ ಮನದಲ್ಲೇ ನೀ ಶಪಿಸಿದ ರೀತಿ ಎಷ್ಟು ಚೆಂದವಿತ್ತು. ನಿನ್ನೆದೆಗೆ ಕಿವಿಗೊಟ್ಟು ಮಲಗಿದ್ದೆ ಇನಿಯ, ನನಗೆ ಆ ದನಿ ಕೇಳಿಸಿತ್ತು. ನನ್ನ ತಲೆ ನೇವರಿಸುತ್ತಿದ್ದ ಆ ಕೈಗಳ ಬಿಸುಪಲ್ಲಿ ಜನ್ಮಕ್ಕಾಗುವಷ್ಟು ಒಲವಿತ್ತು.
              ನಮ್ಮ ಪ್ರೇಮವ ಕದ್ದು ನೋಡಲೆಂದೇ ಸೊಳ್ಳೆ ಪರದೆಯ ಒಳಗೆ ಕಳ್ಳನಂತೆ ಸೇರಿಕೊಂಡ ಖದೀಮ ಸೊಳ್ಳೆಯನ್ನು ಸದ್ದಾಗದಂತೆ ಹೊಡೆಯಲೆತ್ನಿಸುವಾಗ ನನ್ನ ನಿದ್ರೆಗೆ ಭಂಗವಾದೀತೆಂಬ ನಿನ್ನ ಕಾಳಜಿಯಲ್ಲಿ ಎಷ್ಟೊಂದು ಒಲವಿತ್ತು.
              ಯಾರೋ ಪ್ರೀತಿಸಿ ಮದುವೆಯಾದವರು ಹೆಂಡತಿಯನ್ನು ಕಳೆದುಕೊಂಡದ್ದನ್ನು ನೆನೆದು ಅರೆನಿದ್ರೆಯಲ್ಲಿದ್ದು ಕುಳಿತು ನಾನು ಅಳುವಾಗ, ನಮ್ಮಿಬ್ಬರನ್ನು ಯಾರೂ ಬೇರೆ ಮಾಡಲಾರರು, ಸಾವು ಕೂಡ....ಎಂದು ನೀ ಸಂತೈಸುವಾಗ ನಿನ್ನ ಕಂಗಳ ಕೊಳದ ಹನಿಯಲ್ಲಿ  ಹೃದಯಾಂತರಾಳದ ಪ್ರೇಮವೆಷ್ಟು ಚೆಂದವಾಗಿ ಪ್ರತಿಫಲಿಸಿತ್ತು. 
              ಜೀವಗಳು ದೇವರೇ ಬೆಸುಗೆ ಹಾಕಿದಂತೆ ಬೆಸೆದುಕೊಂಡ ಕ್ಷಣಗಳಲ್ಲಿ ಜಗತ್ತಿನ ಪರಿವೆಯೇ ಇಲ್ಲದೇ, ಒಬ್ಬರಿಗೊಬ್ಬರು ಸಂಪೂರ್ಣ ಸಮರ್ಪಿತರಾಗಿ ಪ್ರೀತಿಸುವಾಗಲೂ ನನ್ನ ಪ್ರೀತಿಗಿಂತ ನಿನ್ನ ಪ್ರೀತಿಯೇ ಚೆಂದವಿತ್ತೇನೋ ಎಂದೆನಿಸಿದಾಗ ನಿನ್ನ ಪ್ರೀತಿಯ ಮೇಲೆ ನನ್ನ ಪ್ರೀತಿಗೆ ಸಣ್ಣಗೆ ಹೊಟ್ಟೆ ಕಿಚ್ಚಾಗಿತ್ತು. 
               ಯಾರೋ ಯಾರನ್ನೋ ಪ್ರೀತಿಸಿಕೊಳ್ಳುತ್ತ ಬರೆದ ಸಾಲುಗಳಲ್ಲಿ ಭಾವಗಳು ತುಂಬಿ ತುಳುಕಿದ್ದು ಗೊತ್ತಾದದ್ದು ನಿನ್ನ ಪ್ರೀತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಓದಿದಾಗಲೇ. ನಿನ್ನ ಪ್ರೀತಿಯೇ ಈ ಜಗತ್ತನ್ನು ಇಷ್ಟು ಸುಂದರವಾಗಿಸಿದ್ದು ಅಂತ ಅರ್ಥವಾದಾಗ, ಖುಷಿಯ ಬೆನ್ನಲ್ಲೇ ನಿನ್ನ ಹೊರತು ಜಗತ್ತು ಬರಡು, ಭಾವರಹಿತ ಕಲ್ಲು ಮಣ್ಣುಗಳ ಸಂಗ್ರಹಣಾಲಯ ಎನ್ನಿಸಿ, ಮರುಭೂಮಿಯಲ್ಲಿ ಮಧ್ಯಾಹ್ನ ಒಂಟಿಯಾಗಿ ನಿಲ್ಲಲಾರದೇ ನಿಂತ ಹೆಣ್ಣಿನ ದೀನ ಮುಖ ಕಣ್ಣೆದುರು ಬರುತ್ತದೆ. ಆ ಮುಖ ನನ್ನದಾ? ಎನಿಸಿದಾಗ ಭಯ ತಾಳಲಾರದೇ ನಿನ್ನ ಎದೆಯಲ್ಲಿ ಹುದುಗಿಕೊಳ್ಳುತ್ತೇನೆ. ಮತ್ತದೇ ಒಲವು ತುಂಬಿದ ನಿನ್ನ ಕೈಗಳು ಬಲವಾಗಿ ನನ್ನ ಅಪ್ಪಿಕೊಳ್ಳುತ್ತವೆ. ಮತ್ತೆ ಜಗತ್ತು ಸುಂದರವಾಗುತ್ತದೆ.
              ಯಶೋಧರೆಗೂ ಸಿದ್ಧಾರ್ಥನ ಜೊತೆ ಹೀಗೆಲ್ಲ ಆಗಿದ್ದಿರಬಹುದಾ? ಅವನೂ ಅವಳನ್ನು ನೀ ನನ್ನ ಪ್ರೀತಿಸಿದ ಹಾಗೇ ಪ್ರೀತಿಸಿದ್ದನಾ? ಎನ್ನಿಸಿ ತುಂಬ ಅಳು ಬರುತ್ತಿದೆ ಈಗ...