ನನ್ನ ಪ್ರೀತಿಯ (?) .....,
'ನೀನು ಹೇಗಿದ್ದೀಯ' ಅಂತ ಕೇಳುವುದೇ ಇಲ್ಲ ನಾನು.. ಏಕೆಂದರೆ ನಿನ್ನ ಬದುಕು ಚಲಿಸುವುದೇ ಇಲ್ಲ. ನಿಂತ ನೀರಿನಂತೆ ಬದುಕೋದು ನಿನಗೆ ಮಾತ್ರ ಸಾಧ್ಯ ಅಂತ ತುಂಬಾ ಸಲ ಅನ್ನಿಸುತ್ತದೆ. ಯಾವಾಗಲೂ ಸತ್ತವರಂತೆ ಬದುಕುವುದಕ್ಕಿಂತ ಸಾಯುವುದೇ ಮೇಲು ಅಂತ ಹೇಳಿಬಿಡಬೇಕು ಅನ್ನಿಸಿದೆ ತುಂಬಾ ಸಲ.. ಆದರೆ ನಾನು ನಿನ್ನಲ್ಲಿ ಇಲ್ಲದ ಗುಣಗಳನ್ನೆಲ್ಲ ಕಲ್ಪಿಸಿಕೊಂಡು ಒಂದು ಸಲ ನಿನ್ನ ಪ್ರೀತಿಸಿಬಿಟ್ನಲ್ಲ, ಅದೊಂದೇ ಕಾರಣಕ್ಕೆ ನಿನ್ನ (ಇಲ್ಲದ - ಒಲ್ಲದ) ಮನಸ್ಸನ್ನ ನೋಯಿಸಲಾರೆ ಗೆಳೆಯಾ!!
ಇವತ್ತು ಕೂಡ ನೀನು ಮುಂಜಾನೆಯ ಸೂರ್ಯನನ್ನು ನೋಡಿಲ್ಲಾ ಅಂತ ನಂಗೆ ಚೆನ್ನಾಗಿ ಗೊತ್ತು. ಈಗೀಗ ನಿನ್ನ ಬಗ್ಗೆ ನನಗೆ ಆಶ್ಚರ್ಯವಾಗುವುದೇ ಇಲ್ಲ. ಆದರೆ ಕೆಲವೊಮ್ಮೆ ಅಸಹ್ಯವಂತೂ ಆಗುತ್ತದೆ. ಇವತ್ತು ಕೂಡ ಅದೇ ಹೊಗೆ ಹಿಡಿದ ಮಾಡು ನೋಡುತ್ತಾ, ವರ್ಷಗಟ್ಟಲೆ ತೊಳೆಯದೇ ಗಬ್ಬು ನಾರುತ್ತಿರುವ ಹಳೆಯ ಚಾದರ ಹೊದ್ದು ಮಲಗಿದ್ದೀಯಾ? ನಿನ್ನ ಜೀವನದಲ್ಲಿ ಒಂದೇ ಒಂದು ದಿನ ಬೇಗ ಎದ್ದು, ಮಂಜು ಮುಸುಕಿದ ಮುಂಜಾನೆಯನ್ನು ನೋಡು, "ಅಹಹಹಾ" ಎಂದು ನಡುಗುತ್ತ ಒಂದು round walk ಹೋಗಿ ಬಾ.. ಮರುದಿನದಿಂದ ನಿನ್ನ ಬದುಕು ಖಂಡಿತ ಬದಲಾಗತ್ತೆ..
'ಎಲ್ಲ ಪುಸ್ತಕದ ಬದನೇಕಾಯಿ' ಅಂತ ಗೊಣಗಬೇಡ. walk ಹೋಗಿದ್ದಕ್ಕೆ, ಅಥವಾ ಇಬ್ಬನಿಯ ನಸುಕು ನೋಡಿದ್ದಕ್ಕೆ ನಿನ್ನ ಬದುಕು ಬದಲಾಗುತ್ತದೆ ಅಂತ ನಾನು ಹೇಳುತ್ತಿಲ್ಲ . ನಿನ್ನಲ್ಲಿ ಅದಕ್ಕೆಲ್ಲ ಸ್ಪಂದಿಸುವ, ಸವಿಯುವ ಮನಸ್ಸು ಇಲ್ಲವೇ ಇಲ್ಲ ಅನ್ನೋದನ್ನ ಎಲ್ಲರಿಗಿಂತ ಚೆನ್ನಾಗಿ ಅರಿತವಳು ನಾನು. ಯಾಕೆ ಅಂದ್ರೆ ಅದನ್ನ ಎಲ್ಲರಿಗಿಂತ ಹೆಚ್ಚಾಗಿ ಬಯಸಿದ್ದು ನಾನು. ಯಾಕೆ ಬದಲಾಗಬಹುದು ನಿನ್ನ ಬದುಕು ಅಂತ ಊಹಿಸ್ತಿದಿನಿ ಅಂದ್ರೆ, ನೀನು walk ಮುಗಿಸಿ ಹಿಂದಿರುಗುವಾಗ ಒಂದೇ ಒಂದು ಸಲ Bus Stop ಕಡೆಗೆ ತಿರುಗಿ ನೋಡು. ಮುಂಜಾನೆಯ ಸೂರ್ಯ, ಇಬ್ಬನಿ ಎಲ್ಲವನ್ನು ನಾಚಿಸುವಷ್ಟು ಚೆಂದದ ಕಾಲೇಜು ಹುಡುಗಿಯರು ನಿಂತಿರುತ್ತಾರೆ ಕಣೋ.. ನಕ್ಷತ್ರ, ಬೆಳದಿಂಗಳು ಅಂತ ಸ್ವಲ್ಪ ಚೆನ್ನಾಗಿ ಮಾತಾಡು.. ದರಿದ್ರ ಭಾಷೆಯಲ್ಲಿ ಮಸ್ತ್ figure ಅಂತೆಲ್ಲ ಹೇಳಬೇಡ ಅಲ್ಲಿ.. ಪಾಪ ಕೆಲವರು ನೊಂದ್ಕೋತಾರೆ.
ಯಾಕೆ ಇದನ್ನೆಲ್ಲಾ ಹೇಳ್ತಿದೀನಿ ಅಂದ್ರೆ ನೀನು ಎಳೋವಾಗಲೇ ಸುಮಾರು ಮಧ್ಯಾಹ್ನ ಆಗಿರತ್ತೆ. ಯಥಾ ಪ್ರಕಾರ ನಿನ್ನ ಆಲಸ್ಯ ಸಂಜೆಯ ತನಕ ಮುಂದುವರೆಯಲೇಬೇಕು. ಸಂಜೆ ಪಾಪ ಎಲ್ಲರು ಬಸವಳಿದು ಹಿಂತಿರುಗುವಾಗ ಹೋಗಿ ನೋಡಿ ಏನು ಮಾಡುತ್ತೀಯಾ ಮಾರಾಯ!! ತಡವಾಗಿ ಹಿಂತಿರುಗುತ್ತಿರುವುದಕ್ಕೆ ಬಾಗಿಲಲ್ಲೇ ನಿಂತು ಗುರುಗುಟ್ಟುವ ಅಪ್ಪನಿಗೆ ಇವತ್ತು ಏನು ಕಾರಣ ಹೇಳಲಿ ಅಂತ ಹುಡುಗಿಯರು ತಲೆ ಕೆಡಿಸಿಕೊಂಡು ಅವಸರದಲ್ಲಿ ಬರುತ್ತಿರುತ್ತಾರೆ. ಜೋರಾಗಿ ನಡೆಯುತ್ತೇನೆಂದರೂ ನಡೆಯಲು ಬಿಡದ ಒಂದೊಂದು ಗೇಣೆತ್ತರ ಚಪ್ಪಲಿಯ ಮೇಲೆ ಕೋಪ, ಮುಖದ ಮೇಲೆ ನೇರವಾಗಿ ಬಿದ್ದು ಬೆಳಗಿನ ಮೇಕಪ್ ಪೂರ್ತಿ ಕರಗಿ ಹೋಗಿರುವುದನ್ನೇ ಎಲ್ಲರಿಗೂ ಎತ್ತಿ ತೋರಿಸುತ್ತಿರುವ ಬೀದಿ ದೀಪದ ಮೇಲೆ ಕೋಪ, ಇದೆಲ್ಲದರ ಮಧ್ಯೆ ನೀನು ಅವರ ಕಣ್ಣಿಗೆ ಬೀಳುವುದಿಲ್ಲ ಗೆಳೆಯಾ.
ಇಷ್ಟೆಲ್ಲಾ ಹೇಳಿ ನಿನ್ನನ್ನ ಸರಿಪಡಿಸಿ ನನಗೇನೂ ಆಗಬೇಕಿಲ್ಲ. ಮೊದಲಿನಂತೆ ಈಗ ನಿನ್ನ ಮೌನಕ್ಕೆ, ಮಾತಿಗೆ ಎಲ್ಲಕ್ಕೂ ಹೊಸ ಹೊಸ ಅರ್ಥ ಕಲ್ಪಿಸಿಕೊಂಡು ಖುಷಿಪಡುವ ಮುಗ್ಧ ಹುಡುಗಿಯಾಗಿ ಉಳಿದಿಲ್ಲ ನಾನು. ನೀನಲ್ಲದೆ ಬೇರೆ ಯಾರೇ ನಿನ್ನಂತೆ ಬದುಕುವುದನ್ನ ನೋಡಿದರೂ ಸಹಿಸೋದು ಕಷ್ಟವೇ ನನಗೆ. ಆದ್ದರಿಂದ ಹೇಳುತ್ತಿದ್ದೇನೆ.
ಭಾವನೆ ಎಂಬ ಶಬ್ದವೇ ಇಲ್ಲದ ಶಬ್ದಕೋಶ ನಿನ್ನದು.ಭಾವನೆಯೇ ಬದುಕು ಎನ್ನುವವಳು ನಾನು. 'ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ' ಎಂಬುದು ನನಗೆ ಪ್ರೀತಿಯ ಉತ್ತುಂಗದಂತೆ ಕಂಡರೆ, ನಿನಗೆ ಬಲಹೀನತೆಯಾಗಿ ಕಾಣುತ್ತದೆ. ಆದರೆ ನಿನ್ನ ಅಸಡ್ಡೆಗಳಿಗೆ ನನ್ನದೊಂದು ಧನ್ಯವಾದ. ಆವತ್ತಿನ ನಿನ್ನ ತಿರಸ್ಕಾರವೇ ಇವತ್ತಿನ ನನ್ನ ಉತ್ತಮ ಸ್ಥಿತಿಗೆ ಕಾರಣ ಅಂತ ಕೆಲವೊಂದು ಸಲ ಅನ್ನಿಸುತ್ತದೆ ನನಗೆ. ಇದನ್ನೆಲ್ಲಾ ಹೇಳ್ತಿದಾಳೆ ಅಂದ್ರೆ ಮನಸ್ಸಲ್ಲಿ ಏನೋ ಇದೆ ಅಂತೆಲ್ಲ ಊಹಿಸಿಕೊಂಡು ಖುಷಿಪಡಬೇಡ. ಹೆಣ್ಣೆಂದರೆ ಹಾಗೇ..! ಭಾವನೆಗಳನ್ನೆಲ್ಲ ಜಲಪಾತದಂತೆ ಭೋರ್ಗರೆಸಲೂ ಗೊತ್ತು, ಬತ್ತಿದ ಮರುಭೂಮಿಯಂತಿರಲೂ ಗೊತ್ತು. ಸಾಧ್ಯವಾದರೆ ಸಾಯುವ ತನಕ ಜೀವಂತಿಕೆಯಿಂದ ಬದುಕಲಿ ನೀನು ಎಂದು ಆಶಿಸುತ್ತೇನೆ..
ಇಂತಿ ನಿನ್ನ ಪ್ರೀತಿಯ (?)......
3 comments:
ಕೆಲವೊಂದಕ್ಕೆ ಅವೇ ಸಾಟಿ.....ಬೇರೆ ಉಪಮೆ ಸಿಗುವುದೇ ಇಲ್ಲ.... ನಿಜಕ್ಕೂ ಹಾಗಿದೆ ಈ ಬರವಣಿಗೆ.
ತಲೆಬರಹ ತುಂಬಾ ಇಷ್ಟವಾಯಿತು....ಇಡೀ ಲೇಖನ ಕೂಡ....
ಮೊದಲಿಂದ ಕೊನೆವರೆಗೂ ಬರವಣಿಗೆಯಲ್ಲಿ ಚೈತನ್ಯವಿದೆ. ಹೀಗೇ ಸಾಗಲಿ....
ಇಷ್ಟು ಹೇಳಿದ ಮೇಲೂ ಬದುಕಿನಲ್ಲಿ ಜೀವಂತಿಕೆ ತುಂಬಿ ಕೊಳ್ಳದೇ ಹೋದರೆ ಅವನು ಇದ್ದೂ ವೇಸ್ಟ್..!
ಇಷ್ಟು ಜಡತ್ವ ತುಂಬಿಕೊಂಡಿರೋ ಅವನ ಬಗ್ಗೆ ಏನೇನೋ ಕಲ್ಪಿಸಿಕೊಂಡು ಆಶ್ಚರ್ಯ ಪಟ್ರೆ ನಾವು ವೇಸ್ಟ್...!
"ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ' ಎಂಬುದು ನನಗೆ ಪ್ರೀತಿಯ ಉತ್ತುಂಗದಂತೆ ಕಂಡರೆ, ನಿನಗೆ ಬಲಹೀನತೆಯಾಗಿ ಕಾಣುತ್ತದೆ"
ಈ ಸಾಲನ್ನು ಮತ್ತೆ ಮತ್ತೆ ಓದಿದೆ... ಪೂರ್ತಿ ಪತ್ರವನ್ನೂ ಕೂಡಾ...!
ಬ್ಲಾಗ್ ನ ಹೆಸರೇ ದಿಲ್ ಖುಷ್ ಮಾಡಿಬಿಡ್ತು... ಮತ್ತೆ ಎರಡು ಸುಂದರ, ಅದ್ಭುತ ಪೋಸ್ಟ್ ಗಳು...!
ಇನ್ನಷ್ಟು, ಮತ್ತಷ್ಟು ಬರೆಯಿರಿ... ಅಭಿನಂದನೆಗಳು...
ನಿಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು...ನಿಮ್ಮ ಅಭಿನಂದನೆಗಳಿಗೆ ನಾನು ಋಣಿ...
Post a Comment