ಬೆಳಗಾದರೆ ಇವರ ಕಾಟ.ಇತ್ತೀಚೆಗೆ ಯಾಕಾದರೂ ಬೆಳಗಾಗುತ್ತದೋ ಎನಿಸುತ್ತಿದ್ದದ್ದು ಸುಳ್ಳಲ್ಲ. ದೇವರ ಮುಖ ನೋಡಬೇಕು ಎಂದೆಲ್ಲ ಹಿರಿಯರು ಹೇಳಿಕೊಟ್ಟಿದ್ದನ್ನ ಎಂದಿಗೂ ಪಾಲಿಸಿಲ್ಲ. ಆದರೂ ನನಗೆ ಇವರ ಮುಖ ನೋಡಲು ಇಷ್ಟವಿರುತ್ತಿರಲಿಲ್ಲ. ಎನೇನೋ ನೆನಿಸಿಕೊಳ್ಳುತ್ತ ಮಜವಾಗಿ ಏಳಬೇಕೆಂದು ಆಸೆ.ನನ್ನಾಸೆ ಬಾಲಿಶ ಎಂದು ತಿಳಿದವರು ಹೇಳಬಹುದೇನೋ,ಆದರೆ ನಾನು ಅದರ ಬಗ್ಗೆಯೆಲ್ಲ ಯೋಚಿಸುವುದೇ ಇಲ್ಲ, ಅಂಥವರನ್ನು ತಿಳಿದವರೆಂದು ಒಪ್ಪಿಕೊಳ್ಳಲು ನನ್ನ ಮನಸ್ಸು ಬಿಡುವುದೂ ಇಲ್ಲ.
ನಮ್ಮವರಿಗೆ ಅದರ ಬಗ್ಗೆಯೆಲ್ಲ ಕಾಳಜಿ ಜಾಸ್ತಿ. ಅದೇ ವಿಷಯಕ್ಕೆ ಆಗಾಗ ಒಂದು ಚಿಕ್ಕ ಬೆಂಕಿ ಹತ್ತಿ ಉರಿದು ರಾತ್ರಿಯೊಳಗೆ ಆರಿ ಹೊಗುತ್ತಿದ್ದುದು ನಿಜ. ಆಗೆಲ್ಲ ಬೆಂಕಿ ಆರಿಸುತ್ತಿದ್ದುದು ಇವರೇ ಅಲ್ಲವೆ? ನನಗೆ ತುಂಬ ಅಹಂಕಾರವಿತ್ತು. ಪಾಪ! ಚಿಕ್ಕಂದಿನಿಂದ ಬೆಳೆಸಿಕೊಂಡು ಬಂದ "ನಾನು ಗಂಡಸು" ವನ್ನು ಹೆಂಡತಿಯ ಮುಂದೆ ಬಿಡಬೇಕಾಗಿ ಬಂದಾಗ ಇವರಿಗೆ ಎಷ್ಟು ಅವಮಾನವಾಗಿರಬಹುದು? ನಾನು ಅದನ್ನೆಲ್ಲ ಯೋಚಿಸಲೇ ಇಲ್ಲ. ನಾನಾಯಿತು, ನನ್ನ ಕನಸಾಯಿತು ಎಂದು ಇದ್ದು ಬಿಡುತ್ತಿದ್ದೆ. ನನ್ನ ಉದಾಸೀನವನ್ನು ಇವರು ಪ್ರಶ್ನಿಸುವಂತಿರಲಿಲ್ಲ. ವಾದಕ್ಕೆ ನಿಂತರೆ ಅವರ ಜನ್ಮ ಜಾಲಾಡಿ, ಅವರ ಚಿಕ್ಕ ಚಿಕ್ಕ ಗುಟ್ಟುಗಳನ್ನೆಲ್ಲ ಬಟ್ಟ ಬಯಲು ಮಾಡಿ, ಎಂದೋ ಮಾಡಿದ, ಯಾರಿಗೂ ಹೇಳದ ತಪ್ಪುಗಳನ್ನೆಲ್ಲ ನಿಂತ ನಿಲುವಿನಲ್ಲೇ ಗಾಳಿಗೆ ತೂರಿ ಬಿಡುತ್ತಿದ್ದೆ. ಅದಕ್ಕೆ ಹೆದರುತ್ತಿದ್ದರೋ ಅಥವಾ ’ಸಗಣಿಯವನೊಡನೆ ಗುದ್ದಾಟ....’ ಎಂಬ ನಿಲುವೋ ಗೊತ್ತಾಗಲಿಲ್ಲ ಕೊನೆಗೂ...
ಅವರು ನನ್ನನ್ನು ಮಗುವಿನಂತೆ ನೋಡಿಕೊಂಡದ್ದೇನೋ ಸತ್ಯ. ನಾನು ಮಾಡಿದ್ದಾದರೂ ಕಮ್ಮಿ ಇತ್ತಾ?ಹಿಂದಿನ ವರ್ಷ ಇವರಿಗೆ ಮಲಗಿದಲ್ಲಿಂದ ಏಳಲೇಬಾರದೆಂದು ಅಧಿಕಾರಯುತ ದನಿಯಲ್ಲಿ ಡಾಕ್ಟರ್ ಹೇಳಿದಾಗ ಇವರೂ ಅಷ್ಟೇ ಅಧಿಕಾರಯುತವಾಗಿ ಅಮೋಘ ೫ ತಿಂಗಳು ನನ್ನಿಂದ ಸೇವೆ ಪಡೆದಿಲ್ಲವೇ? ಆಮೇಲೂ ಅದನ್ನೇ ನನ್ನಿಂದ ಬಯಸಿದಾಗ ಮಾತ್ರ ನಾನು ಸಿಡುಕಾಡತೊಡಗಿದ್ದು. ನಾನು ಹಾಗೆ ಮಾಡಬಾರದಿತ್ತೋ ಎನೋ... ಈಗ ಯೋಚಿಸಿ ಫಲವಿಲ್ಲ. ಅಪರೂಪಕ್ಕೆ ಸಿಗುವ ವಿಶ್ರಾಂತಿ ಖುಶಿ ಕೊಡುತ್ತದೆ. ಆದರೆ ತೀರ ಕೆಲಸವಿಲ್ಲದೇ ೫ ತಿಂಗಳು ಮಲಗುವುದು ಅವಿರತ ದುಡಿಮೆಗಿಂತ ಕಷ್ಟವಲ್ಲವೇ? ಆದರೂ ಇವರು ಮಲಗಿರಲು ಬಯಸುತ್ತಿದ್ದರೆಂದರೆ ಅವರಿಗೆ ಮುರಿದ ಕಾಲು ಅಷ್ಟು ತೊಂದರೆ ಕೊಡುತ್ತಿತ್ತೋ ಏನೋ. ಅದನ್ನೆಲ್ಲ ನಾನು ನಾಟಕ ಎಂದುಕೊಂಡುಬಿಟ್ಟೆ. ತುಂಬ ದುಃಖವಾಗುತ್ತಿದೆ. ಹೇಳಿಕೊಳ್ಳಲು ಇವರಿಲ್ಲ. ದುಃಖವನ್ನೆಲ್ಲ ಸಿಟ್ಟಾಗಿಸಿ ಅಡಿಗೆ ಮನೆಯಲ್ಲಿ ಪಾತ್ರೆಗಳ ಮೇಲೆ ನನ್ನ ಪೌರುಷ ತೋರಿಸಿದರೂ ಸಾಕಿತ್ತು, ಇವರು ಅರ್ಥ ಮಾಡಿಕೊಂಡು ನನ್ನನ್ನು ತಣ್ಣಗಾಗಿಸಲು ಏನೇನು ಮಾಡಬೇಕೊ ಅದನ್ನೆಲ್ಲ ಮಾಡುತ್ತಿದ್ದರು. ನಾನು ""Do the needful" ಎಂದು ಹೇಳುವುದೂ ಬೇಕಿರಲಿಲ್ಲ.
ಅಸಲಿಗೆ ಇವರು ಈಗ ಮನೆ ಬಿಟ್ಟು ಹೋಗಿದ್ದು ನನ್ನ ಕಾಟ ತಡೆಯಲಾಗದೆಯೆ? ಅಥವಾ ಬೇರೆ ಏನಾದರೂ ಕಾರಣವಿರಬಹುದಾ? ನನಗೇಕೆ ಇಷ್ಟು ಅಪರಾಧಿ ಪ್ರಜ್ಞೆ ಕಾಡಬೇಕು? ಅಷ್ಟಕ್ಕೂ ಸಂಸಾರವೆಂದ ಮೇಲೆ ಒಂದು ಮಾತು ಬರುತ್ತದೆ ಒಂದು ಮಾತು ಹೋಗುತ್ತದೆ. ಅದೆಲ್ಲ ಸಹಜವೆಂದು ಸ್ವೀಕರಿಸಲೇಬೇಕಲ್ಲವೆ? ನನ್ನೊಂದಿಗೆ ೩೬ ವರ್ಷ ಸಂಸಾರ ಮಾಡಿದ ಇವರಿಗೆ ನನ್ನನ್ನು ಅಷ್ಟು ಅರ್ಥ ಮಾಡಿಕೊಳ್ಳಲೂ ಆಗಲಿಲ್ಲವೇ ಹಾಗಾದರೆ? ಒಂದು ಮಾತು ಬಂದು ಒಂದು ಮಾತು ಹೋಗಿದ್ದರೆ ಹೀಗಾಗುತ್ತಿರಲಿಲ್ಲವೇನೋ. ಅವರಿಂದ ಬಂದ ಮಾತಿಗಿಂತ ನನ್ನ ಕಡೆಯಿಂದ ಹೋದ ಮಾತುಗಳೇ ಹೆಚ್ಚಾಗಿದ್ದಕ್ಕೆ ಹೀಗಾಯಿತೋ ಏನೋ... ಮನಸ್ಸು ಚುಚ್ಚುತ್ತಿದೆ. ಕಾರಣ ಏನಾದರೂ ಇರಲಿ. ನನಗೆ ನಮ್ಮವರು ಬಂದರೆ ಸಾಕಾಗಿದೆ. ಇಷ್ಟು ವರ್ಷಗಳಲ್ಲಿ ಇರುತ್ತಿದ್ದ ಅಗತ್ಯಕ್ಕಿಂತ ಈಗ ಮುಪ್ಪಿನಲ್ಲೇ ಅವರ ಆಸರೆ ತುಂಬ ಅನಿವಾರ್ಯ ಎನಿಸುತ್ತಿದೆ.
ಮಗಳು ನನ್ನ ಹೊಟ್ಟೆಯಲ್ಲೇ ಹುಟ್ಟಿದವಳು, ಆದರೂ ಅವಳು ಇವರಷ್ಟು ಹತ್ತಿರವೆನಿಸುವುದಿಲ್ಲ. ಅದೂ ಮದುವೆಯಾಗಿ ಹೋದ ಮೇಲಂತೂ ನಮ್ಮದು ಬೇರೆ ಸಂಸಾರ, ಅವಳದು ಬೇರೆ ಎನಿಸಿಬಿಟ್ಟಿದೆ. ಪ್ರೀತಿಯೇನೂ ಕಡಿಮೆಯಾಗಿಲ್ಲ. ಆದರೆ ಮೊದಲಿನಂತೆ ಅವಳನ್ನು ಬೈಯ್ಯಲಾಗುವುದಿಲ್ಲ. ’ಅಪರೂಪಕ್ಕೆ ಬಂದರೂ ಅಮ್ಮ ಬೈಯ್ಯುತ್ತಾಳಲ್ಲ’ ಎಂದುಕೊಂಡಾಳೆಂದು ಸಂಕೋಚವಾಗುತ್ತದೆ. ಮನಸು ಬಿಚ್ಚಿ ಮಾತನಾಡಲಾಗುವುದಿಲ್ಲ. ಅವಳು ತನ್ನ ಗಂಡ ಮಗುವಿನೊಂದಿಗೆ ಬೇರೆಯದೇ ಲೋಕದಲ್ಲೆಂಬಂತೆ ಇರುತ್ತಾಳೆ. ಮೊದಲಿನಿಂದಲೂ ಅವಳಿಗೆ ನನ್ನನ್ನು ಕಂಡರೆ ಅಷ್ಟಕ್ಕಷ್ಟೇ.ತಡವಾಗಿ ಮನೆಗೆ ಬರಬೇಡ ಎನ್ನುತ್ತೇನಲ್ಲ, ಯಾವಗಲೂ ಫೊನಲ್ಲೇ ಇರಬೇಡ ಎನ್ನುತ್ತೇನಲ್ಲ. ಗೊತ್ತು, ಕಹಿ ಮಾತಿನಿಂದ ಒಳ್ಳೆಯದನ್ನು ಹೇಳುವವರು ಯಾರಿಗೆ ತಾನೆ ಇಷ್ಟವಾಗುತ್ತಾರೆ ಹೇಳಿ? ಅಪ್ಪನೇ ತುಂಬ ಒಳ್ಳೆಯವರು, ಅಮ್ಮ ಎಷ್ಟು ಬೈದರೂ ತಿರುಗಿ ಬೈಯ್ಯುವುದಿಲ್ಲ, ತುಂಬ ಸಹನೆಯಿದೆ ಎಂದೆಲ್ಲ ನನ್ನ ಮುಂದೆ ಹೇಳಿ ನನ್ನಿಂದ ಬೈಯ್ಯಿಸಿಕೊಂಡಿದ್ದಾಳೆ ಕೂಡ! ಅಷ್ಟು ಒಳ್ಳೆಯ ಅಪ್ಪ ಮನೆ ಬಿಟ್ಟು ಹೋಗಿದ್ದಾರೆಂದರೆ ಅವಳು ಬೈಯ್ಯುವುದು ನನ್ನನ್ನೇ.
ನನಗೇನೋ ಅನುಮಾನವಾಗುತ್ತಿದೆ, ಇವರು ಮಗಳ ಮನೆಯಲ್ಲೇ ಇರಬಹುದಾ ಅಂತ? ಅದನ್ನು ಕೇಳುವುದಾದರೂ ಹೇಗೆ? ಅಹಂ ಬಿಟ್ಟು ಮಗಳನ್ನು ಕೇಳಲೂ ಮನಸ್ಸು ಒಪ್ಪುತ್ತಿಲ್ಲ. ಆಗಲೇ ೩ ದಿನ ಆಗಿದೆ. ಎಂದಿಗೂ ಇವರನ್ನು ಬಿಟ್ಟು ೨ ದಿನ ಕೂಡ ಇದ್ದದ್ದೇ ಇಲ್ಲ ನಾನು. ತವರಿಗೆ ಹೋದರೂ ಇವರಿಗೆ ಅಡಿಗೆ ಊಟಕ್ಕೆ ತೊಂದರೆ ಆಗುತ್ತದೆಯೆಂದು ತವರಿನವರನ್ನೇ ಇಲ್ಲಿಗೆ ಕರೆಯುತ್ತಿದ್ದೆ. ಇಲ್ಲದಿದ್ದರೆ ಇವರನ್ನೂ ಕರೆದುಕೊಂಡೇ ಹೋಗುತ್ತಿದ್ದೆ.ಆಗೆಲ್ಲ ನನ್ನ ಮನಸ್ಸು ಎಷ್ಟು ಖುಷಿಪಡುತ್ತಿತ್ತು.ನಾನು ಒಬ್ಬರಿಗೆ ಅನಿವಾರ್ಯ ಎಂಬ ಭಾವ ಎಷ್ಟು ಹಿತ ಕೊಡುತ್ತದೆ ಅಲ್ಲವೆ? ಎಲ್ಲರ ಬಳಿ ಅದನ್ನೇ ಹೇಳಿಕೊಂಡು ಬೀಗುತ್ತಿದ್ದೆ. ಇವರಿಗೆ ನಾನಿಲ್ಲದೇ ಬದುಕಲು ಸಾಧ್ಯವೇ ಇಲ್ಲ ಎಂಬಂತೆ ಮಾತಡುತ್ತಿದ್ದೆ.ಈಗ! ಎಲ್ಲಿ ಹುಡುಕುವುದು ಇವರನ್ನ? ನಾನು ಬುದ್ಧಿ ಕಲಿತಿರುತ್ತೇನೆ ಇಷ್ಟೊತ್ತಿಗೆ ಎಂಬುದು ಇವರ ಮನಸ್ಸಿಗೆ ಹೇಗಾದರೂ ಗೊತ್ತಾಗಿ ಮರಳಿ ಬರಬಾರದೇ? ನನ್ನನ್ನು ಬಿಟ್ಟಿರಲು ಮನಸ್ಸಾದರೂ ಹೇಗೆ ಬಂದೀತು ಇವರಿಗೆ? ಬಹುಶಃ ಮಗಳು ಚೆನ್ನಾಗಿ ಉಪಚರಿಸಿ ನನ್ನನ್ನು ಮರೆಸಿಬಿಟ್ಟಿರಬಹುದೇನೊ? ಛೇ! ಈ ಮುದಿ ಮನಸ್ಸಿಗೆ ಯಾಕದರೂ ಇಷ್ಟು ಅಹಂಕಾರವೋ ಗೊತ್ತಿಲ್ಲ. ಗಂಡ ಮಕ್ಕಳ ಮುಂದೆಯೂ ಸೋಲಲಾರದು.
ನಾನೇನೂ ಕೇಳದೇಯೇ ಮರಳಿ ಬರುತ್ತಾರಲ್ಲ ನಮ್ಮವರು? ಇವರಿಲ್ಲದ ಮೇಲೆ... ನಾನು ಯಾರೊಡನೆ ಜಗಳವಾಡಬೇಕು? ಇವರಿಲ್ಲದ ಮೇಲೆ... ನಾನು ಯಾರಿಗಾಗಿ ತವರಿಗೆ ಹೋಗದೇ ಉಳಿಯಬೇಕು? ಇವರಿಲ್ಲದ ಮೇಲೆ... ನಾನು ಯಾರಿಗಾಗಿ ಬದುಕಬೇಕು?
5 comments:
hmmmm
ಮೊದಲು ಓದುವಾಗ ಎಲ್ಲಿ ಅತ್ತೆ ಬಗ್ಗೆ ಸೊಸೆ ಹೇಳಿದ್ದೇನೊ ಅನಿಸುತ್ತಿತ್ತು, ಹಾಗೆ ಮುಂದೆ ಓದಿದಂತೆ ಡಿವೋರ್ಸ ಆದ ತರುಣಿಯೇನೊ ಅನಿಸುತ್ತಿತ್ತು, ಕೊನೆಗೆ ಗೊತ್ತಾಗಿದ್ದು... ವರ್ಷಗಳ ಕಾಲ ಸಂಸಾರ ನಡೆಸಿದ ಗೃಹಿಣಿ ಅಂತ, ಚೆನ್ನಾಗಿ ನಿರೂಪಿಸಿದ್ದೀರಿ... ಇರುವಾಗ ಯಾರ ಮೌಲ್ಯವೂ ತಿಳಿಯುವುದಿಲ್ಲ, ಇಲ್ಲದಾಗಲೇ ಅದು ತಿಳಿದೀತು.. ಹಾಗಂತ ಅದು ಅವಳ ಅವಲಂಬನೆಯೇನಲ್ಲ, ಆತ್ಮೀಯತೆ ಅಕ್ಕರೆ ಕಾಳಜಿ ಮಾತ್ರ...
Jyoti....
ಬರಹ ಚಿಂತೆಗೀಡು ಮಾಡಿತು...
ವೃದ್ದಾಪ್ಯದಲ್ಲಿ ಸಂಗಾತಿ ತೊರೆದು ಹೋದರೆ ಆಗುವ ಬೇಸರ, ದುಃಖದ ನೈಜ ಚಿತ್ರಣ ನಿಮ್ಮ ಈ ಬರಹ... ಚೆನ್ನಾಗಿ ಬರೆದಿದ್ದೀರಾ..
ಧನ್ಯವಾದಗಳು...
ಜ್ಯೋತಿ ಮೇಡಂ,
ಅರ್ಧ ಪುಟದಲ್ಲಿ, ಮಗುವಾಗಿ, ತರುಣಿಯಾಗಿ, ಮದುವೆಯಾಗಿ, ತಾಯಿಯಾಗಿ, ಅಜ್ಜಿಯಾಗಿಸಿದ್ದೀರಾ..... ನಿರೂಪಣೆ ತುಂಬಾ ತುಂಬಾ ಚೆನ್ನಾಗಿದೆ... ಅಂತಿಮ ಘಟ್ಟದ ಕನವರಿಕೆ, ತೊಳಲಾಟವನ್ನು ಅರ್ಥಪೂರ್ಣವಾಗಿ ವಿವರಿಸಿದ್ದೀರಾ.....ಅಭಿನಂದನೆಗಳು... ...
Post a Comment