Saturday, 21 November 2009
ಅಮ್ಮನಿಗೂ ಒಂದು ಮನಸ್ಸಿತ್ತು
ಪ್ರತೀಸಲವೂ ಹೀಗೇ ಆಗುತ್ತದೆ.ದಿನಚರಿ ಪುಸ್ತಕದಲ್ಲಿ ೩-೪ ದಿನಗಳ ಹಿಂದೆ ಬರೆದ ಪುಟ ಇಂದು ತೀರ ಕ್ಷುಲ್ಲಕ ಎನಿಸಿಬಿಡುತ್ತದೆ. ಇಂದಿನ ನಾನು ತುಂಬ ದೊಡ್ಡವಳಂತೆ ಭಾವಿಸಿ ನಗುತ್ತೇನೆ ನನ್ನ ನಿನ್ನೆಯನ್ನು ನೋಡಿ! ನನ್ನ ಮಗಳಲ್ಲಿ ನಾನೀಗ ನನ್ನ ನಿನ್ನೆಯನ್ನು ಕಾಣ ಬಯಸುತ್ತೇನೆ. ಅದನ್ನು ಹೇಳಿದರೆ ಅವಳಿಗರ್ಥವಾಗುವುದಿಲ್ಲ. ನನಗೂ ನನ್ನ ಅಮ್ಮ ಹೇಳಿದಾಗ ಅರ್ಥವಾಗಿರಲಿಲ್ಲ. ಆದರೆ ಮಗಳು ಹೀಗೆ ಮಾಡಿದಾಗ ಅದನ್ನು ಆ ಕ್ಷಣಕ್ಕೆ ಅರಗಿಸಿಕೊಳ್ಳಲಾಗುವುದಿಲ್ಲ ನನಗೆ.ಬಹುಶಃ ನನ್ನ ಅಮ್ಮನಿಗೂ ಹೀಗೆ ಆಗಿರಬೇಕು.ಅದೂ ನನಗರ್ಥವಾಗಿರಲಿಲ್ಲ.
ತುಂಬ ತಲೆ ಕೆಡಿಸಿಕೊಂಡು ಕುಳಿತಿದ್ದಳು ಮಗಳು. ಕೇಳಿದರೆ ಸಿಟ್ಟು, ಮುಜುಗರ ಎಲ್ಲ ಒಟ್ಟೊಟ್ಟಿಗೆ ಬರುತ್ತದೆ. ಮಳೆಗಾಲದಂತವಳು ಇವಳು. ತುಂಬ ಸಮೃದ್ಧ, ಪ್ರಬುದ್ಧ ಎಂದುಕೊಳ್ಳುತ್ತೇನೆ.ಸುರಿದರೆ ಹಾಗೆ ಸುರಿಯುತ್ತಾಳೆ. ಮನೆ ತುಂಬಾ ಕೇಕೆ ಹಾಕಿಕೊಂಡು ತುಂಬಿ ತುಳುಕುತ್ತಾಳೆ. ಇಲ್ಲದಿದ್ದರೆ ಪರ್ಜನ್ಯ ಮಾಡಿ ಬೇಡಿದರೂ ಬರದೇ ಹಠ ಹಿಡಿದು ಮೋಡದಲ್ಲೇ ಕೂರುವ ಮಳೆಯಂತೆಯೇ ಕೂರುತ್ತಾಳೆ ಮುಖ ಬಿಗಿದುಕೊಂಡು. ಇವಳನ್ನು ತಬ್ಬಿ ಮುದ್ದಾಡುವ ಆಸೆಯಾದರೂ ಮುದ್ದಾಡುವಂತಿಲ್ಲ. ಕೆಲವೊಮ್ಮೆ ಮೌನವಾಗಿರಬೇಕೆನಿಸಿದರೂ ಮಾತಾಡಲೇಬೇಕು, ದೂರ ತಳ್ಳುವಂತಿಲ್ಲ. ತೀರ ಅಪ್ಪ-ಅಮ್ಮನ ಹೋಲಿಕೆಯೇ ಇರದಂಥ ವ್ಯಕ್ತಿತ್ವ. ತಾನಾಗಿಯೇ ಬಂತೋ, ಬೆಳೆಸಿಕೊಂಡಳೋ ಗೊತ್ತಾಗಲಿಲ್ಲ. ನನ್ನ ಯೌವ್ವನವನ್ನು ನಾನು ಅವಳಲ್ಲಿ ಕಾಣಲು ಬಯಸಿ ಬಯಸಿ ಸೋಲುತ್ತಿರುವುದಕ್ಕೆ ನನಗೆ ಅವಳು ತುಂಬ ಸ್ವತಂತ್ರ ವ್ಯಕ್ತಿತ್ವದವಳೆಂದು ಭಾಸವಾಗುತ್ತದೋ ಅಥವಾ 'ಜನರೇಶನ್ ಗ್ಯಾಪ್' ಕಾರಣವೋ ಗೊತ್ತಿಲ್ಲ.
ಬಹುಶಃ ಪ್ರತೀ ಮನುಷ್ಯನೂ ಗೊತ್ತಿದ್ದೋ, ಗೊತ್ತಿಲ್ಲದೆಯೋ ಹೀಗೊಂದು ಆಸೆಯ ಮೂಟೆಯನ್ನು ಹೊತ್ತುಕೊಂಡೇ ತಿರುಗುತ್ತಾನೇನೋ ಎನಿಸುತ್ತದೆ. ತನ್ನ ನಂತರವೂ ತಾನು ಉಳಿಯಲಿ ಮಕ್ಕಳ ರೂಪದಲ್ಲಿ ಎಂಬ ಆಸೆ ಏಕೆಂಬುದು ನನಗೂ ಗೊತ್ತಾಗಲಿಲ್ಲ!ಅವಳು ನನ್ನಂತಾಗುವುದಿರಲಿ, ತೀರ ನನ್ನದೇ ಮಗಳೊಂದಿಗೆ ನಾನೇ ಮಾತಾಡಲೋ ಬೇಡವೋ ಎಂದು ಯೋಚಿಸಬೇಕೆಂದಾದಾಗ ನನ್ನ ಮನಸ್ಸು ರೋಧಿಸತೊಡಗುತ್ತದೆ. ಎಲ್ಲರ ಹೃದಯದಲ್ಲೂ ನನಗೊಂದು ವಿಶೇಷ ಸ್ಥಾನವಿರಲೆಂದು ಬಯಸುವ ಮನಸ್ಸು, ಸುಲಭವಾಗಿ, ಜನ್ಮಸಿದ್ಧ ಹಕ್ಕಾಗಿ ದೊರೆಯಲೇಬೇಕಾದ ಮಗಳ ಹೃದಯದಲ್ಲಿನ ವಿಶೇಷ ಸ್ಥಾನವನ್ನು ಬಯಸಿ ಕೊರಗುತ್ತದೆ. ಛೇ! ಈ ಮನಸ್ಸನ್ನು ಮುದ್ದಿಸುವುದೋ, ಗದರಿಸುವುದೋ ಅರ್ಥವೇ ಆಗದೇ ಒದ್ದಾಡಿಬಿಡುತ್ತೇನೆ. ತೀರ ಇನ್ನು ಇದರ ತಾಳಕ್ಕೆ ಕುಣಿಯಲಾರೆನೆಂದು ಗಟ್ಟಿಯಾಗಿ ಕುಳಿತರೆ, ಸ್ವಲ್ಪ ಹೊತ್ತು, ಮತ್ತೆ ಬರುತ್ತದೆ ಲಲ್ಲೆಗರೆಯುತ್ತಾ...ಬಿಟ್ಟು ಹೋದ ಪ್ರೇಯಸಿಯು 'ಮಿಸ್ ಕಾಲ್ 'ಕೊಟ್ಟಂತೆ ಭಾಸವಾಗುತ್ತದೆ.ಮರಳುತ್ತೇನೆ.ಆಮೇಲೆ ಯಥಾಪ್ರಕಾರ ಮತ್ತದೇ ಹಳೇ ರಾಗ.
ಹೇಳಿಕೊಂಡರೆ ತಪ್ಪಾಗುತ್ತದೆಂದು ಗೊತ್ತು. ಆದರೂ ನಾನು ಪೂರ್ತಿ ವ್ಯಕ್ತಿತ್ವವನ್ನು ಕಳೆದುಕೊಂಡು, ಇವರನ್ನ, ಮಗಳನ್ನ ಅವರೆಂದರೆ ನಾನೇ ಎಂಬಂತೆ ಪ್ರೀತಿಸಿಕೊಂಡು ಬಂದಿದ್ದೆಲ್ಲ ಲೆಕ್ಕಕ್ಕಿಲ್ಲವಾ ಹಾಗಾದರೆ? ನೆನೆಸಿಕೊಳ್ಳತೊಡಗಿದರೆ ಕಣ್ತುಂಬಿ ಬರುತ್ತದೆ. ಬೇರೆ ಏನೂ ಉಪಯೋಗವಿಲ್ಲ. ಇವರೆಲ್ಲ ಆಡಿಕೊಂಡು ನಗುತ್ತಾರೆ ಪ್ರವಾಹ ಬರುತ್ತದೆ ಅಳಬೇಡ ಎಂದು. ಮೂರು ಹೊತ್ತು ಕೂಳು ಬೇಯಿಸಿಕೊಂಡು,ಇವರೆಲ್ಲ ನನ್ನನ್ನು ಒಂಟಿ ಮಾಡಿ ಹೊರಟಾಗಿನಿಂದ ಮನೆಗೆ ಮರಳುವವರೆಗೂ ಅಂಗೈಯಲ್ಲಿ ಜೀವ ಹಿಡಿದುಕೊಂಡು ಕಾಯುದಿಲ್ಲವೇ? ಸೌಖ್ಯವಾಗಿ ಮನೆಗೆ ಮರಳಿದರೆ ಸಾಕು ಎಂದುಕೊಳ್ಳುತ್ತಾ, ನನ್ನ ಪ್ರತೀ ಕೆಲಸದೊಂದಿಗೆ ಇವರ ಒಳಿತನ್ನೇ ತಳುಕು ಹಾಕಿಕೊಂಡು ಕುಳಿತಿರುತ್ತೇನಲ್ಲ ಇದೆಲ್ಲ ಇವರಿಬ್ಬರಿಗೂ ಅರ್ಥವೇ ಆಗುವುದಿಲ್ಲ.
ನಾನೇನೋ ಮಗಳನ್ನು ಸ್ನೇಹಿತೆಯಂತೆ ಕಾಣಬೇಕೆಂದೇ ಬಯಸುತ್ತೇನೆ. ಆದರೆ ಅಮ್ಮ ಕೂಡ ನನ್ನ ವಯಸ್ಸನ್ನು ದಾಟಿ ಬಂದಿದ್ದಾಳೆ ಎಂದು ಅವಳಿಗೆ ಅನಿಸುವುದಿಲ್ಲವೋ ಏನೋ. ಅಥವಾ ಅವಳಿಗೂ ಅನಿಸಿರಬಹುದು, ನಮ್ಮಿಬ್ಬರದು ಹೋಲಿಕೆಯಿಲ್ಲದ ವ್ಯಕ್ತಿತ್ವ ಹೇಳಿಕೊಂಡರೂ ಉಪಯೋಗವಿಲ್ಲವೆಂದು. ಅಸಲಿಗೆ ನನಗೊಂದು ವ್ಯಕ್ತಿತ್ವವಿದೆ ಎಂಬುದೇ ಅವಳಿಗೆ ಆಶ್ಚರ್ಯದಾಯಕ ವಿಷಯವೆನಿಸಬಹುದು.ಇನ್ನು ಅವಳು ನನ್ನನ್ನು ಹೋಲುವುದು ಸಾಧ್ಯವಿದೆಯೇ? ಯಾಕೆ ಹೀಗಾಗುತ್ತದೋ ಗೊತ್ತಿಲ್ಲ. ಅವರಿಗೊಂದು ಸ್ವಂತಿಕೆ ಅಂತ ಬರುವ ಮೊದಲೇ,ಅಥವಾ ಅದು ಬರದೆಯೇ ಇದ್ದರೂ ಪ್ರೀತಿಸಿದ, ಪ್ರೀತಿಸುತ್ತಲೇ ಇರುವ ತಾಯಂದಿರ ವ್ಯಕ್ತಿತ್ವದ ಇರುವಿಕೆ ಅವರ ಅರಿವಿಗೆ ಬರುವುದೇ ಇಲ್ಲವೇಕೆ?! ಅಪ್ಪನ ಬಗ್ಗೆ ಭಯವಾದರೂ ಇದೆ. ಹಿಂದಿನಿಂದ ಬೈದರೂ, ಎದುರೆದುರೇ ಆಡಿ ನೋಯಿಸುವುದಿಲ್ಲ. ನನಗಾದರೆ ಹಾಗಲ್ಲ, ಬಂದವರೆದುರು ಕೂಡ ನನ್ನ ಬಲಹೀನತೆಗಳನ್ನು ಆಡಿಕೊಳ್ಳಬಹುದು.ಅದನ್ನು ಸಲಿಗೆಯೆನ್ನುವುದೋ ಅಥವಾ ನಾನಷ್ಟು ಹಗುರವಾಗಿ ಹೋಗಿಬಿಟ್ಟೆ ಎಂದುಕೊಳ್ಳಲೋ ಗೊತ್ತಾಗುವುದಿಲ್ಲ. ನನಗಂತೂ ಸಕಾರತ್ಮಕವಾಗಿ ಯೋಚಿಸಲು ಪ್ರಯತ್ನಿಸಿ ಸಾಕಾಗಿ ಹೋಯಿತು. ಸ್ವಂತದ್ದು ಅಂತ ಒಂದು ಜೀವನ ಬದುಕದೇ ಕಳೆದುಬಿಟ್ಟೆ ಎನಿಸಿದಾಗೆಲ್ಲಾ ಸಂಕಟವಾಗುತ್ತದೆ. ಆಗೆಲ್ಲ ಇವರಿಗಾಗಿ ಬದುಕುವುದೇ ಒಂದು ಸಂಭ್ರಮವೆನಿಸುತ್ತಿತ್ತು.ಇವರಿಗಾಗಿ ಮಾಡಿದ ಯಾವ ಕೆಲಸವನ್ನೂ ಕರ್ತವ್ಯವೆಂದು ಮಾಡಿಲ್ಲ ನಾನು. ತುಂಬ ಪ್ರೀತಿಯಿಂದ, ಇಷ್ಟಪಟ್ಟುಕೊಂಡೇ ಮಾಡಿದೆ.ಆದರೆ ಈಗೀಗ ಎಲ್ಲರ ದಿವ್ಯ ನಿರ್ಲಕ್ಷ್ಯದ ಮಧ್ಯೆ ಹಾಯಾಗಿ ಬದುಕಲು ಸಾಧ್ಯವಾಗುತ್ತಿಲ್ಲ ನನಗೆ.
ನಾನೂ ಮನುಷ್ಯಳಲ್ಲವೇ ಎಲ್ಲರಂತೆ! ತಾಯಿಯೆಂದರೆ ಎಲ್ಲವನ್ನೂ ಮಕ್ಕಳ ಒಳಿತಿಗಾಗಿ ಮುಡಿಪಿಡಬೇಕು, ಹೆಂಡತಿಯೆಂದರೆ ತನ್ನ ಸುಖವನ್ನು ಗಂಡನ ಸಂತೋಷದಲ್ಲೇ ಕಾಣಬೇಕು ಎಂಬುದೆಲ್ಲ ಸರಿ. ಆದರೆ ಇಷ್ಟೆಲ್ಲ ಮಾಡಿದ ಮೇಲೆಯೂ ಗಂಡನಿಗೆ ಮಕ್ಕಳಿಗೆ ಇಂಥ ಪ್ರೀತಿಯ ಬೆಲೆಯೇ ತಿಳಿಯದೇ ಹೋದರೆ, ನನಗೂ ಒಂದು ಮನಸ್ಸಿದೆ ಎಂಬುದು ಕೂಡ ಅವರ ಊಹೆಗೆ ನಿಲುಕಲಾರದು ಎಂದಾದರೆ ಇನ್ನು ಮೇಲೆಯೂ ನಾನು ಎಲ್ಲವನ್ನೂ ಕರ್ತವ್ಯವೆಂದಲ್ಲದೇ ಪ್ರೀತಿಯಿಂದ ಮಾಡಲಾದೀತೆ ಎನಿಸುತ್ತದೆ.
ಬಹುಶಃ ನನ್ನ ಮತ್ತು ನನ್ನ ಅಪ್ಪನ ಬಗ್ಗೆ ನನ್ನ ಅಮ್ಮನಿಗೂ ಹೀಗೆಯೇ ಅನಿಸಿದ್ದಿರಬೇಕು. ಅಮ್ಮನಿಗೂ ಒಂದು ಮನಸ್ಸಿತ್ತು ಎನ್ನಿಸಿದಾಗ,ನನ್ನ ದುಃಖಕ್ಕಿಂತ ಅಮ್ಮನಿಗೆ ನಾನು ಕೊಟ್ಟ ದುಃಖವೇ ಹೆಚ್ಚೆಂದು ಅರಿವಾಗಿ ಇನ್ನಷ್ಟು ದುಃಖವಾಗುತ್ತದೆ.
Subscribe to:
Post Comments (Atom)
4 comments:
very nice:)heege barta irli :)
ವಾವ್
ತುಂಬಾ ಚೆನ್ನಾಗಿ ಬರಿತಿರ,
ಶೈಲಿ ಚೆನ್ನಾಗಿದೆ
Thank u so much....
ammana manasannu artha madikollada makkalige ondu patadantide nimma baraha.
Post a Comment