ನನ್ನನ್ನು ಪ್ರೀತಿಸುವ ಹುಡುಗಾ...,
ಕ್ಷಣ ಕ್ಷಣ ಎದೆಯಿಂದ ಹೊಮ್ಮುವ ಉಸಿರಲ್ಲಿ ನಿನ್ನ ನೆನಪು ಮಾತ್ರವಲ್ಲ, ಪಕ್ಕಾ ನಿನ್ನ ಇರುವಿಕೆಯನ್ನೇ ಕಾಣಲಾರಂಭಿಸಿದಾಗ ಮಾತ್ರ ನಿಜಕ್ಕೂ ಭ್ರಮೆ ಅಂತ ಗೊತ್ತಿದ್ದರೂ ಭಯವಾಯಿತು ನನಗೆ. ಪ್ರಯತ್ನಪೂರ್ವಕವಾಗಿ ಕಿತ್ತು ತಂದು ಮನಸ್ಸನ್ನು ನನ್ನ ಬಳಿಯಿಟ್ಟುಕೊಂಡರೂ, ಇರಲು ನಿರಾಕರಿಸತೊಡಗಿದಾಗ ಕೋಪ ಬರತೊಡಗಿತು.ಹೊಸದಾಗಿ ಶಾಲೆಗೆ ಸೇರಿದ ಮಗುವೊಂದು ನಿನ್ನೆ ಮೊನ್ನೆ ಸಿಕ್ಕ ಗೆಳೆಯ ಬಳಗವನ್ನೇ ಪ್ರಪಂಚವಾಗಿಸಿಕೊಂಡು ಅಮ್ಮನ ಮುಂದೆ ವರ್ಣಿಸುವಂತೆ ನನ್ನ ಮನಸ್ಸೇನು ನಿನ್ನನ್ನು ನನ್ನ ಮುಂದೆ ಹೊಗಳಿದ್ದೇ ಹೊಗಳಿದ್ದು. ಅತಿಯಾಯ್ತು ಸಾಕು ಎಂದರೂ ಕೇಳುವುದೇ ಇಲ್ಲವಲ್ಲ. ನನ್ನ ಮನಸ್ಸಿನ ಮೇಲೆ ನನಗೆ ಎಷ್ಟೊಂದು ಹಿಡಿತವಿದೆ ಎಂದುಕೊಂಡೆನಲ್ಲವೇ? ಬಹುಶಃ ಹಿಡಿತದಲ್ಲಿಟ್ಟಿದ್ದಕ್ಕೆ ಸೇಡು ತೀರಿಸಿಕೊಳ್ಳುತ್ತಿದೆಯೋ ಏನೋ ಎನ್ನಿಸಿತು.ನಿನ್ನ ಕಂಡೊಡನೆ ಮನ ಹಾಗೆ ಕುಣಿಯುವುದೇಕೋ ಗೊತ್ತಾಗಲಿಲ್ಲ ನನಗೆ.ಆಮೇಲೆ ಅರಿವಾಗಿ ಛೇ! ಎನ್ನಿಸುತ್ತಿತ್ತು, ಅಷ್ಟೊತ್ತು ಬಾಲಿಶವಾಗಿ ವರ್ತಿಸಿದ್ದನ್ನು ನೆನೆ ನೆನೆದು ಅವಮಾನಗೊಳ್ಳುತ್ತಿದ್ದೆ.
ನಿನ್ನ ಮುಗುಳ್ನಗು ನೋಡಿದೊಡನೆ ಅಪ್ರಯತ್ನಪೂರ್ವಕವಾಗಿ ಬಿರಿಯುವ ತುಟಿಗಳನ್ನು ತಡೆಯುವುದಾದರೂ ಹೇಗೆ?ಅದನ್ನಾದರೂ ಕಷ್ಟಪಟ್ಟು ತಡೆದೇನು. ಇಡೀ ಮೈಯ್ಯ ರಕ್ತವೆಲ್ಲ ಮುಖಕ್ಕೆ ನುಗ್ಗಿ ಕೆನ್ನೆ ಕೆಂಪೇರುವಾಗ ಮುಚ್ಚಿಡುವುದಾದರೂ ಹೇಗೆ ಖುಶಿಯನ್ನ? ನಾಚಿಕೆಯನ್ನ? ಆದರೂ ನಿನ್ನ ತುಂಟ ಕಣ್ಸನ್ನೆ, ಸುಂದರ ಮುಗುಳ್ನಗು ನನಗಿಷ್ಟವಿಲ್ಲ ಹುಡುಗಾ... ಅದು ನನ್ನ ಸೋಲಿನ ಕಟ್ಟಡದ ಅಡಿಪಾಯದಂತೆ ತೋರುತ್ತದೆ ನನಗೆ. ನನಗಿಷ್ಟವಿಲ್ಲ, ನಿಜಕ್ಕೂ ನಿನ್ನಂಥ ಗಂಡಸಿನ ಮುಂದೆ ಸೋಲಲು ನನಗಿಷ್ಟವಿಲ್ಲ.ಆದರೆ ಈ ಇಷ್ಟ-ಕಷ್ಟಗಳನ್ನೆಲ್ಲ ಮೀರಿ ನಿಲ್ಲುತ್ತದೆ ’ಇದು’ ಎಂದುಕೊಂಡಿರಲಿಲ್ಲ. ಏನೆನ್ನಲಿ ಇದನ್ನು? ಪ್ರೀತಿಯಾ? ನಿನ್ನ ಮೇಲಿನ ನಿಸರ್ಗ ಸಹಜ ಆಕರ್ಷಣೆಯಾ?ಗೊತ್ತಿಲ್ಲ. ಒಟ್ಟಾರೆ ನನ್ನಲ್ಲಿ ಗೊಂದಲ ಹುಟ್ಟಿಸಿರುವ ಏನೋ ಒಂದು.ಅದನ್ನೆಲ್ಲ ನಿರ್ಧರಿಸಿ, ವ್ಯಾಖ್ಯಾನಿಸಿ, ಪಂಡಿತಳಾಗಲು ನನಗಿಷ್ಟವಿಲ್ಲ.ನನ್ನ ಮನಸ್ಸು ನಾನು ಈ ಖುಷಿಯನ್ನ ಅನುಭವಿಸಲಿ ಅಂತ ಆಸೆಪಡುತ್ತಿದೆಯಾ ಅದನ್ನು ಕೂಡ ನಾನು ನಿರ್ಧರಿಸಲಾರೆ. ಏಕೆಂದರೆ ನಿರ್ಧಾರ ನನ್ನನ್ನು ನಿನ್ನೆದುರು ಸೋಲಿಸುತ್ತದೆ.
ಏನೇನೋ ನಿರ್ಧರಿಸಿ, ಎಲ್ಲೆಲ್ಲೋ ಸೋತು, ಕೊನೆಗೆ ಎಲ್ಲವೂ ಸುಳ್ಳೆನಿಸಿ, ಇಷ್ಟೆಲ್ಲ ಅನುಭವಕ್ಕೊದಗಿ ಆಗಿದೆ.ಒಂದು ಕಾಲದಲ್ಲಿ ಇವಳ ನೆರಳನ್ನಾದರೂ ಮುಟ್ಟಬೇಕೆಂದು ಬಯಸಿದವರೇ ಇಂದು ಎದುರಿಗೆ ಹೋಗಿ ನಿಂತರೂ 'ಅಯ್ಯೋ ಇವಳಾ..ಇಲ್ಲೇ ಬಿದ್ದಿರ್ತಾಳೆ ಬಿಡು, ಆಮೇಲೆ ನೋಡಿಕೊಂಡರಾಯಿತು’ ಎಂದು ಮನಸ್ಸಿನಲ್ಲಾಡಿಕೊಂಡದ್ದನ್ನ ಕೇಳಿಸಿಕೊಂಡಿದ್ದೇನೆ. ಅದು ಕೂಡ ಸಹಜವೇ ಅಂತ ಗೊತ್ತು.ಒಂದು ವಸ್ತುವಿಗೆ ಸಾಯುವಷ್ಟು ಹಂಬಲಿಸಿ ಪಡೆದ ನಂತರ ಅದು ಅಸಲಿಗೆ ಅಗತ್ಯವಿತ್ತಾ ನಮಗೆ? ಎಂಬ ಪ್ರಶ್ನೆ ತಲೆ ಎತ್ತಿಬಿಡುತ್ತದೆ. ಆದರೆ ಮತ್ತೆ ಅಂಥ ಸಹಜತೆಯ ಸುಳಿಯಲ್ಲಿ ಸಿಲುಕುವ ಮನಸ್ಸಿಲ್ಲ ನನಗೆ. ಪೆಟ್ಟು ತಿಂದ ಮನಸ್ಸು ಭಯಪಡುವುದು ಕೂಡ ಸಹಜವೇ ಅಲ್ಲವೇ! 'ಬಿಸಿ ಹಾಲಲ್ಲಿ ಬಾಯಿ ಸುಟ್ಟುಕೊಂಡವನು ಮಜ್ಜಿಗೆಯನ್ನೂ ಆರಿಸಿಕೊಂಡು ಕುಡಿಯಹೋಗುತ್ತಾನೆ.ಆದರೆ ಅದರ ಅಗತ್ಯವಿಲ್ಲ ಎನಿಸುತ್ತದೆ’ ಎಂದು ಹೇಳಿದೆ ನೀನು. ನಿನ್ನ ಮಾತುಗಳು ಯಾವಾಗಲೂ ಅಷ್ಟೇ ಆ ಕ್ಷಣಕ್ಕೆ ಹೌದೆನಿಸಿಬಿಡುತ್ತವೆ. ಅದು ನನ್ನ ಬಲಹೀನತೆಯೋ ಅಥವಾ ನಿನ್ನ ಸಾಮರ್ಥ್ಯವೋ ನನಗೆ ಗೊತ್ತಿಲ್ಲ. ಆದರೆ ಎದುರಿಗಿರುವುದು ಬಿಸಿ ಹಾಲೋ,ತಂಪು ಮಜ್ಜಿಗೆಯೋ ಎಂದು ಕೂಡ ಅರ್ಥ ಮಾಡಿಕೊಳ್ಳಲು ಸಮರ್ಥವಲ್ಲದ ಮನಸ್ಸನ್ನು ಹೊತ್ತು ಕೂತಿರುವಾಗ, ಖಂಡಿತವಾಗಿಯೂ ನಿರ್ಧರಿಸದೇ ಇರುವುದು ಒಳ್ಳೆಯದಲ್ಲವೇ?
ಪ್ರತೀ ಸಲ ನೀನು ನನ್ನೊಡನೆ ಮಾತನಾಡಿದಾಗ ನಿನಗೆ ನನ್ನ ಸೂಕ್ಷ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇಲ್ಲ ಎಂಬುದು ಧೃಡಪಡುತ್ತಲೇ ಹೋಗುತ್ತದೆ. ಆದರೂ ಮತ್ತೆ ಮತ್ತೆ ನೀನು ಅರ್ಥ ಮಾಡಿಕೊಂಡಂತೆ ಕಲ್ಪಿಸಿಕೊಳ್ಳುತ್ತೇನೆ. ನಿನ್ನ ಪ್ರತಿಯೊಂದು ವರ್ತನೆಯನ್ನು ನಾನು ಅರ್ಥಮಾಡಿಕೊಳ್ಳುವ ರೀತಿಯೇ ಬೇರೆ. ಹೀಗೆ ಹೇಳಿದರೆ ನಿನಗೆ, ಕ್ಷಮಿಸು, ನಿನ್ನ 'ಅಹಂ'ಗೆ ದುಃಖವಾಗಬಹುದೇನೋ. ಆದರೆ ನಿನ್ನ ಅಹಂ ತೃಪ್ತಿಗಾಗಿ ನನ್ನನ್ನು ಪ್ರೀತಿಸುವ ನಿನ್ನನ್ನು ಮೆಚ್ಚಿಸುವ ಅಗತ್ಯ ನನಗಿಲ್ಲ ಗೆಳೆಯ. ಹೇಳಿದರೆ ಹೆಚ್ಚಾಗುತ್ತದೆ, ಹೇಳದಿದ್ದರೆ ಅರ್ಥವಾಗುವುದಿಲ್ಲ ಆದ್ದರಿಂದಲೇ ಹೇಳುತ್ತಿದ್ದೇನೆ. ಖಂಡಿತವಾಗಿಯೂ ನಾನಿದ್ದಂತೆ ನನ್ನನ್ನು ಪ್ರೀತಿಸಲು ನಿನ್ನಿಂದ ಸಾಧ್ಯವಿಲ್ಲವೆಂದು ಮನವರಿಕೆಯಾಗಿದೆ ನನಗೆ. ಸ್ವಲ್ಪ ಸ್ವಲ್ಪವಾಗಿ ಪೂರ್ತಿ ಬದಲಾಯಿಸಿ ನಿನಗೆ ಬೇಕಾದಂತೆ ರೂಪಿಸಿಕೊಂಡು ಒಂದು ಹೆಣ್ಣನ್ನು ಪ್ರೀತಿಸಬಲ್ಲ ಬುದ್ಧಿವಂತ,ಚತುರ ಗಂಡಸು ನೀನು.ಬುದ್ಧಿಗಿಂತ ಹೆಚ್ಚಾಗಿ ನನಗೆ ಹೃದಯದೊಂದಿಗೆ ಬದುಕಬೇಕಿದೆ ಗೆಳೆಯ. ತಾನು ಅರ್ಜುನನಂತವನು ಎಂಬ ಹೆಮ್ಮೆ ನಿನಗಿದೆ ಎಂದು ಗೊತ್ತು, ಆದರೆ ನನಗೆ ನಿನ್ನ ಚತುರತೆ, ತೋಳ್ಬಲ, ರೂಪ ಯಾವುದೂ ಬೇಕಾಗಿಲ್ಲ. ನನಗೆ ನನ್ನತನವನ್ನು ಉಳಿಸಿಕೊಳ್ಳಲು ಬಿಡಬಲ್ಲ ಹೃದಯ ಬೇಕು. ನನ್ನ ವ್ಯಕ್ತಿತ್ವವನ್ನು ಗೌರವಿಸಬಲ್ಲ ವ್ಯಕ್ತಿಗೆ ನನ್ನ ಬದುಕನ್ನು ಪೂರ್ತಿಯಾಗಿ ಒಪ್ಪಿಸಿಕೊಂಡುಬಿಡಬೇಕು ಎಂಬಾಸೆಯಿದೆ.ಖಂಡಿತವಾಗಿಯೂ ನೀನು ಅಂಥವನಲ್ಲ ಅಂತ ಗೊತ್ತು.
ಆದರೂ ನಾನೇಕೆ ನಿರಾಯಾಸವಾಗಿ ಹಾಗೆ ನಿನ್ನ ಕಾಲ ಬುಡದಲ್ಲಿ ಬಂದು ಬಿದ್ದೆ ಎಂಬುದು ನನಗೆ ಈಗಲೂ ಗೊತ್ತಿಲ್ಲ.ನಾನು ಆಗ ಬಯಸದೇ ದೊರೆತ ಅಗ್ಗದ ವಸ್ತುವಾಗಿದ್ದೆ ನಿನ್ನ ಪಾಲಿಗೆ. ಬಹುಶಃ ಅದಕ್ಕಾಗಿಯೇ ನಿನಗೆ ನನ್ನ ಬೆಲೆ ತಿಳಿದೇ ಇರಲಿಲ್ಲ.ಆದರೆ ಈಗೇಕೆ ಹೀಗೆ? ಬೆಂಬಿಡದೆ ಒಪ್ಪಿಸುವ ಯತ್ನ ನಿನ್ನದು, ನಾನು ಒಪ್ಪಿಯೇ ಒಪ್ಪುತ್ತೇನೆಂಬ ಭರವಸೆಯಿದೆಯಲ್ಲವೇ ನಿನಗೆ? ಈಗ ನಾನು ಒಪ್ಪಿದರೂ ಮತ್ತದೇ ಹಳೇ ದಿನಗಳು ಮರಳಲು ತುಂಬ ಸಮಯ ಹಿಡಿಯುವುದಿಲ್ಲ. ನಾನು ಮತ್ತೆ ನಿನಗೆ 'ಓಹ್..ಇವಳಾ..'ಎನಿಸಿಬಿಡುತ್ತೇನೆ.ಇದು ನನ್ನ ಕಲ್ಪನೆ ಮಾತ್ರವಲ್ಲ, ಅನುಭವಿಸಿದ ಸತ್ಯ. ಆದ್ದರಿಂದಲೇ ಈಗ ನೀ ಕರೆದರೂ ನಾನು ಬರುವುದಿಲ್ಲ.ಬರುವುದೇ ಇಲ್ಲ ನಿನ್ನ ಬಳಿಗೆ, ನಿನ್ನ ಕನಸಿನ ಅರಮನೆಗೆ...
ಕ್ಷಮಿಸು ಹುಡುಗಾ ನನ್ನನ್ನು, ಒಮ್ಮೆ ನಿನ್ನ ಅಹಂಕಾರವನ್ನುಬ್ಬಿಸಿ ಈಗ ಮತ್ತೆ ದುಃಖ ಕೊಡುತ್ತಿರುವುದಕ್ಕೆ ಕ್ಷಮಿಸು ನನ್ನನ್ನು.ಸತತ ಎರಡು ವರ್ಷಗಳು ನಿನ್ನ ಕನಸಿಗೆ ಬಂದಿದ್ದಕ್ಕೆ ದಯವಿಟ್ಟು ಕ್ಷಮಿಸು ನನ್ನನ್ನು...
7 comments:
ಭಾವಹೀನ ವ್ಯಕ್ತಿಯ ಅರ್ಥಹೀನ ಕನಸಾಗಿ ಉಳಿಯೋದಕ್ಕಿಂತ ಒಬ್ಬರ ಬಾಳಲ್ಲಿ ನನಸಾಗಿ ಬದುಕೋದು ಚಂದ ಅಲ್ವೇ ಜೋ ?
ಜ್ಯೋತಿ
ನಿಜಾ, ನಿಮ್ಮ ಮಾತುಗಳ ಸತ್ಯತೆ ತುಂಬಾ ಪಕ್ವವಾಗಿದೆ
ಬರೆದ ಸಾಲುಗಳು ಬಹಳಷ್ಟು ಯೋಚನೆಯನ್ನು ಸೃಷ್ಟಿಸುತ್ತವೆ
ನಂಗೆ ಶೀಗೆಪಾಲ್ ತುಂಬಾ ಪರಿಚಯ,
ನಿಂಗೆ ಯಾರ ಮನೆ ಅಲ್ಲಿ?
ನಮ್ಮ ಸ್ವಾಭಿಮಾನಕ್ಕೆ ದಕ್ಕೆ ತರುವ ಪಾತ್ರಗಳು ನಮ್ಮ ಜೀವನವೆಂಬ ನಾಟಕದಲ್ಲಿ ಇರದಿದ್ದರೆ ಕ್ಷೇಮ... ಅಂತ ಒಂದು ಪಾತ್ರಕ್ಕೆ ಕನಸಲ್ಲಿ ಬಂದಿದ್ದಕ್ಕೆ ಕ್ಷಮೆ ಇರಲಿ ಅಂತ ಹೇಳ್ತಿರೋ ನಿಮ್ಮ ಈ Confession ತುಂಬಾ ಚೆನ್ನಾಗಿದೆ... ಆದರೂ ಒಂದು ಅರ್ಥವಾಗದ ವಿಷಯ... (ಜಾಸ್ತಿ ತಲೆ ಕೆಡಿಸಿಕೊಂಡರೆ ಅರ್ಥವಾಗುತ್ತಿತ್ತೋ ಏನೋ... ಆದರೆ ನಾನು ತಲೆ ಕೆಡಿಸಿಕೊಳ್ಳಲಿಲ್ಲ..) ಜನರನ್ನ ಅರ್ಥ ಮಾಡಿಕೊಳ್ಳದೆ ಇಷ್ಟ ಪಡೋದು, ಪ್ರೀತಿ ಮಾಡೋದು ನಂತರ ಅವರು "ಹಾಗಲ್ಲ, ಹೀಗೆ" ಅಂತ ಗೊತ್ತಾದ ಮೇಲೆ ಅವರನ್ನ ತೊರೆದು ಹೋಗೋದು ತಪ್ಪಲ್ವಾ..?? ನಾನು ಕೇಳಿದ್ರಲ್ಲಿ ತಪ್ಪಿದ್ರೆ ಕ್ಷಮೆಯಿರಲಿ...
ನಿಮ್ಮ ಅಭಿಪ್ರಾಯದ ಬಗ್ಗೆ ನನ್ನ ಅಭಿಪ್ರಾಯವನ್ನು ಮುಂದಿನ ಬರಹದಲ್ಲಿ ತಿಳಿಸಬಯಸುತ್ತೇನೆ.
ಜ್ಯೋತಿ ಮೇಡಂ,
ಕೆಲವರು ಅನಾಯಾಸವಾಗಿ ಸಿಕ್ಕ ಪ್ರೀತಿ ತುಂಬಾ ಹಗುರವಾಗಿ ತೆಗೆದುಕೊಳ್ಳುತ್ತಾರೆ... taken for granted . ಅಂತಾರಲ್ಲಾ ಹಾಗೆ... ಅವರ ಕನಸಿಗೆ ಹೋಗೋದು ತಪ್ಪೇ....... ಆದರೆ ಅವರಿಗೆ ಈ ಪ್ರೀತಿಯ ಅರ್ಥ ಆಗೇ ಆಗತ್ತೆ.....ನೋಡುತ್ತಿರಿ......
ಜ್ಯೋತಿ ,
ತುಂಬ ಚೆನ್ನಾಗಿ ಬರೆದಿದ್ದೀರ...
ಭಾವನೆಗಳನ್ನು ಚೆನ್ನಾಗಿ ಬಿಚ್ಚಿಟ್ಟಿದ್ದಿರ..
keep it up..:)
thank u....
Post a Comment