Tuesday, 1 December 2009
ಯಾವುದು ಹೆಚ್ಚು ತಪ್ಪು?
"ಅರ್ಥ ಮಾಡಿಕೊಳ್ಳದೇ ಪ್ರೀತಿಸೋದು ತಪ್ಪು...ಆದರೆ ಆ ತಪ್ಪಿಗಾಗಿ ಜೀವನ ಪೂರ್ತಿ ಶಿಕ್ಷೆ ಅನುಭವಿಸೋದು ನ್ಯಾಯವಾ? ನಾವು ಪ್ರೀತಿ ಅಂತ ಅಂದುಕೊಂಡದ್ದು ಪ್ರೀತಿ ಅಲ್ಲ ಅಂತ ಅರ್ಥ ಆಗಿಯೂ ಜೀವಂತಿಕೆ ಇಲ್ಲದ ಜೀವನವನ್ನು ಅನುಭವಿಸುವುದಕ್ಕಿಂತ,ಈಗ ಅನುಭವಿಸುವ ಅಪರಾಧಿ ಪ್ರಜ್ಞೆ ಗಿಂತ ಹೆಚ್ಚಿನ ಯಾತನೆ ಕಾದಿದೆ ಮುಂದೆ ಅಂತ ಅರಿವಾದ ಮೇಲೂ ಜೊತೆಯಾಗಿರುತ್ತೇನೆ ಎನ್ನುವುದಕ್ಕಿಂತ, ಬಿಟ್ಟು ಬರುವುದು ತುಂಬ ಒಳ್ಳೆಯದು ಎನಿಸುತ್ತಿದೆ ಮರೀ.. ಅಷ್ಟು ದೈರ್ಯ ತಂದುಕೊಳ್ಳಲು ಮನಸ್ಸು ಒಪ್ಪಿದರೆ ಎದ್ದು ಬಂದುಬಿಡು"
ಊಹುಂ...ಅಮ್ಮ ಹೇಳಿದ ಒಂದೇ ಒಂದು ಮಾತು ಕೂಡ ನನಗಾಗ ತಿಳಿಯಲಿಲ್ಲ. ನನ್ನ ಬದುಕಿನ ಎಲ್ಲ ಸಂತೋಷದ ಕ್ಷಣಗಳನ್ನು ಅವನಿಗಾಗಿ ಬಿಟ್ಟುಕೊಡಬಯಸಿದ್ದೆ, ನಾನೇನೋ ದೊಡ್ಡ ತ್ಯಾಗ ಮಾಡುತ್ತಿದ್ದೇನೆಂದು ನನಗೆಂದಿಗೂ ಅನ್ನಿಸಲಿಲ್ಲ, ಪ್ರೀತಿಯಲ್ಲವೇ? ಎಲ್ಲರೂ ಹೇಳಿದ್ದು ಮಾತ್ರವಾಗಿರಲಿಲ್ಲ, ಸ್ವತಃ ಅರ್ಥವಾಗಿತ್ತು ತನ್ನ ಅಹಂ ತೃಪ್ತಿಗಾಗಿ ನನ್ನನ್ನು ಪ್ರೀತಿಸುತ್ತಿದ್ದಾನೆ ಎಂದು. ಅವನೇ ಬಾಯಿ ಬಿಟ್ಟು ಹೇಳುತ್ತಿದ್ದ, " ಗೊತ್ತು ಕಣೇ, ನೀನು ಯಾವತ್ತೂ ನನ್ನ ಮಾತು ಮೀರುವುದಿಲ್ಲ ಅಂತ". ಅದನ್ನು ಕೂಡ ಅವನು ನನ್ನ ಅದಮ್ಯ ಪ್ರೀತಿಯನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಂಡ ರೀತಿಯೆಂದೇ ಭಾವಿಸುತ್ತಿದ್ದೆನಲ್ಲವೇ? ಅದು ನನ್ನ ದೊಡ್ಡ ಗುಣವೇನಾಗಿರಲಿಲ್ಲ. ಕಣ್ಣಿಗೆ ಪ್ರೀತಿಯೆಂಬ ಬಣ್ಣದ ಕನ್ನಡಕ ಹಾಕಿಕೊಂಡು ನೋಡಿದಾಗ ಜಗತ್ತು ಕಂಡದ್ದೇ ಹಾಗೆ ನನಗೆ. ಬಣ್ಣ ಬಣ್ಣವಾಗಿ, ರೋಮಾಂಚಕಾರಿಯಾಗಿ! ಅರಿತು ಮಾಡಿದ ತಪ್ಪು ಕೂಡ ಅಲ್ಲ ಅದು. ಆದರೆ ಅರಿಯದೇ ಮಾಡಿದ ತಪ್ಪಿನ ಅರಿವಾದಾಗ ತಿದ್ದಿಕೊಳ್ಳುವ ಅವಕಾಶ ಇನ್ನೂ ಕಳೆದು ಹೋಗಿಲ್ಲವೆಂದಾದರೆ, ತಿದ್ದಿಕೊಳ್ಳುವುದು ತಪ್ಪಾ? ಹೀಗೆಂದು ಕೇಳಿದ ಮನಸ್ಸೇ ಮರುಕ್ಷಣ ಅಪರಾಧಿ ಪ್ರಜ್ಞೆ ಮೂಡಿಸಿ, ಚುಚ್ಚಿ ಕೊಲ್ಲುತ್ತಿತ್ತು ನನ್ನನ್ನು. ಆದ್ದರಿಂದಲೇ ಸುಮ್ಮನಾಗಿಬಿಟ್ಟೆ, ಜೀವನ ಪರ್ಯಂತ ವಿಫುಲವಾಗಿ ದೊರೆಯಲಿರುವ ದುಃಖವನ್ನಾದರೂ ಅನುಭವಿಸಿಯೇನು, ಈ ಅಪರಾಧಿ ಪ್ರಜ್ನೆಯನ್ನಲ್ಲ ಎನಿಸಿದ್ದರಿಂದ. ಅಲ್ಲೇ ಸಂದಿಯಲ್ಲೊಂದು ಆಸೆ ಇಣುಕುತ್ತಿತ್ತು, ನಾನು ಅವನ ಎಲ್ಲ ಭಾವನೆಗಳನ್ನು ಗೌರವಿಸಿದಂತೆ, ಅವನು ನನ್ನ ಕೆಲವೊಂದು ಭಾವನೆಗಳನ್ನಾದರೂ ಕನಿಷ್ಠ ಪಕ್ಷ ಅರ್ಥ ಮಾಡಿಕೊಳ್ಳಬಹುದೇನೋ ಮುಂದೊಂದು ದಿನ ಎಂದು.
"ಜೀವನ ಬರೀ ಒಣ ಮಾತುಗಳ, ಚಾಕ ಚಕ್ಯತೆಗಳ ವಾಗ್ವಾದವಲ್ಲ ಮರೀ.., ನಿನ್ನ ವಯಸ್ಸು, ಬಿಸಿ ರಕ್ತ, ನಿನ್ನ ಉತ್ಸಾಹ, ಬುದ್ಧಿವಂತಿಕೆಗಳ ಮುಂದೆ ನಾನು ವಾದ ಮಾಡಿದರೆ ಖಂಡಿತ ಗೆಲ್ಲುವುದಿಲ್ಲ ಅಂತ ಗೊತ್ತು. ಸೋತರೂ ನನಗೇನೂ ದುಃಖವಿಲ್ಲ ಏಕೆಂದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ. ಆದರೆ ಜೀವನ ನಿನ್ನ ವಾದಗಳಿಗೆ, ಲೆಕ್ಕಾಚಾರಗಳಿಗೆಲ್ಲ ತಲೆಬಾಗುವುದೇ ಇಲ್ಲ.ಅವನು ನನ್ನನ್ನು ವಸ್ತುವಿನಂತೆ ತಿಳಿದರೂ ನಾನು ಮಾತ್ರ ಅವನನ್ನು ಈಗಿನಂತೆಯೇ ಉತ್ಕಟವಾಗಿ ಜೀವನ ಪರ್ಯಂತ ಪ್ರೀತಿಸುತ್ತೇನೆ ಎಂಬುದನ್ನು ಯೋಚಿಸುವುದು ಕೂಡ ಯೌವ್ವನದಲ್ಲಿ ಮಾತ್ರ ಸಾಧ್ಯ.........." ಅಮ್ಮ ಹೇಳುತ್ತಲೇ ಹೋದಳು. ನಾನು ಬುದ್ಧಿಯ ಬಾಗಿಲನ್ನು ಮುಚ್ಚಿಕೊಂಡು ಕೂತಿದ್ದೆ. ನಿಜವಲ್ಲವೇ ಎಂದು ಈಗ ಅನಿಸುತ್ತದೆ. ಪ್ರಯೋಜನವಿಲ್ಲ.
ಈಗಲೂ ಯುವ ಪ್ರೇಮಿಗಳು ಆಡುವ ಆವೇಶದ ಮಾತುಗಳನ್ನು ಕೇಳಿದ್ದೇನೆ."ಪ್ರೀತಿಸಿದ ಮೇಲೆ ಕೊನೆ ಉಸಿರಿರುವವರೆಗೂ ಜೊತೆಯಾಗಿಯೇ ಇರಬೇಕು. ಸತ್ತರೂ ಜೊತೆಯಾಗಿಯೇ ಸಾಯಬೇಕು" ಎಂದು. ಜೊತೆಗಿರುವುದೆಂದರೇನು? ಅವನು ನನ್ನ ಜೊತೆಗಿದ್ದನಾ? ತುಂಬ ಸಲ ಕೇಳಿಕೊಂಡೆ ನನ್ನ ಮನಸ್ಸನ್ನು. ಇಲ್ಲ ಎನ್ನುವಷ್ಟು ಧೈರ್ಯವಿಲ್ಲ, ಹೌದೆನ್ನಲು ಮನಸ್ಸೊಪ್ಪುತ್ತಿಲ್ಲ. ನನ್ನ ಇಡೀ ಜಗತ್ತನ್ನು ಅವನಿಗಾಗಿ ಹಿಂದೆ ಬಿಟ್ಟು, ಅವನೇ ಜಗತ್ತೆಂದುಕೊಂಡು ನಡೆದು ಬಂದಾಗಿತ್ತು ನಾನು. ಅವನ ಮಾನಸಿಕ ಸಾಂಗತ್ಯ ಆ ದಿನಗಳಲ್ಲಿ ತೀರ ಅನಿವಾರ್ಯವಾಗಿತ್ತು ನನಗೆ. ಸಿಗುವುದಿಲ್ಲ ಎಂದು ಗೊತ್ತಿದ್ದರೂ ಎಲ್ಲೋ ಒಂದು ನಿರೀಕ್ಷೆ. ತುಂಬ ವರ್ಷಗಳು ಅರ್ಥಹೀನ ಕಾಯುವಿಕೆಯಲ್ಲಿ ಕಳೆದು ಹೋದವು. "ತಾಳ್ಮೆ" ಎಂಬ ಪದಕ್ಕೆ (ಗುಣಕ್ಕೆ ಎನ್ನಿ ಬೇಕಾದರೆ) ಯಾವುದೇ ಬೆಲೆಯಿಲ್ಲ ಎಂಬ ಅಭಿಪ್ರಾಯಕ್ಕೆ ಬಂದು ತಲುಪಿದ್ದೆ.
ಅಮ್ಮ ಹೇಳಿದ ಮಾತು ತುಂಬ ನೆನಪಾಗುತ್ತದೆ. "ಬಿಟ್ಟು ಬರುವಷ್ಟು ಧೈರ್ಯ ತಂದುಕೊಳ್ಳಲು ಮನಸ್ಸು ಒಪ್ಪಿದರೆ ಎದ್ದು ಬಂದುಬಿಡು, ಈಗ ಕಾಡುವ ಅಪರಾಧಿ ಪ್ರಜ್ಞೆ ಗಿಂತ ಜೀವನ ಪೂರ್ತಿ ಅನುಭವಿಸುವ ಯಾತನೆ ದೊಡ್ಡದಿದೆ ಎಂದು ಅರ್ಥವಾದರೆ...."
ಅರ್ಥ ಮಾಡಿಕೊಂಡೇ ಪ್ರೀತಿಸಬೇಕು ನಿಜ. ಆದರೆ ಪ್ರೀತಿಸಿದ ಮೇಲೆ ಅರ್ಥವಾಗುವ ತುಂಬ ವಿಷಯಗಳಿರುತ್ತವಲ್ಲ.ಆಮೇಲೆ ಅರ್ಥವಾದ ಮುಖವೇ ಬೇರೆ ಆಗಿಬಿಟ್ಟರೆ?ಆವತ್ತು ಹಾಗೆ ಅರ್ಥವಾದೊಡನೆ ಬಿಟ್ಟು ಬಂದಿದ್ದರೆ, ಮನಸ್ಸು ಅಷ್ಟು ಧೈರ್ಯ ಮಾಡಿದ್ದರೆ, ನನ್ನ ನಿರ್ಧಾರ ತಪ್ಪಾಗುತ್ತಿತ್ತಾ? ಆವತ್ತು ಅಮ್ಮನ ಮಾತು ಕೇಳಿದ್ದರೆ ನನ್ನ ಪ್ರೀತಿಗೆ ದ್ರೋಹ ಮಾಡಿದಂತಾಗುತ್ತಿತ್ತಾ? ಅರ್ಥವಾದ ಮೇಲೆ ಬಿಟ್ಟುಬರುವುದು ತಪ್ಪಾ ಅಥವಾ ಜೊತೆಗಿದ್ದು ಇಡೀ ಜೀವನವನ್ನು ವ್ಯರ್ಥಗೊಳಿಸಿಕೊಳ್ಳುವುದು ತಪ್ಪಾ?
Subscribe to:
Post Comments (Atom)
8 comments:
namma preeti elloo vyarthavaguttide anisida melu adanna munduvarisodaralli artha illa babe, adanna tiddikondu hosa jeevana aarambha madode sari, nijvaglu arthapoorna baraha............
ನಿಜ ಬರಹ... ಹೆಚ್ಚಾಗಿ ಸುಮಾರಾಗಿ ಎಲ್ಲ ಪ್ರೀತಿಸಿದ ಹುಡುಗಿಯರ ಮನದಾಳದ ಮಾತಿನ ಪ್ರಥಿಧ್ವನಿಯಂತಿದೆ....ಅವರೆಲ್ಲರನ್ನ ನೀನು ಪ್ರತಿನಿಧಿಸಿದಂತಿದೆ ......ಯು
ಜ್ಯೋತಿ..
ನಿಜ.. ಪ್ರೀತಿಸಿದ ಮೇಲೂ ಅರ್ಥವಾಗುವ ಅದೆಷ್ಟೋ ವಿಷಯಗಳಿರುತ್ತವೆ.. ಅರ್ಥವಾದ ಮೇಲೂ ಜೊತೆಗಿದ್ದು ಜೀವನ ವ್ಯರ್ಥ ಮಾಡಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ...
ತುಂಬಾ ಚೆನ್ನಾಗಿ ಬರೆದಿದ್ದೀರಾ.. ಬರೆಯೋದನ್ನ ಮುಂದುವರೆಸಿ... All the best..
ಟೆಸ್ಟ್ ಮ್ಯಾಚ್ ಕಾಲದ ..ಅಲ್ಪ ಸ್ವಲ್ಪ ೫೦-೬೦ ಓವರ್ ನೋಡಿದ ಕ್ರಿಕೆಟಿಗ ನಾನು...೨೦-೨೦ ಅಲ್ಲಲ್ಲ ೧೦-೧೦ ಬಗ್ಗೆ ಬರೆಯೋದು ಕಷ್ಟ..ಆದ್ರೆ..ಬ್ಯಾಟು..ಬಾಲು...ಆಟ..ಫೋರ್, ಸಿಕ್ಸ್, ಸಿಂಗಲ್, ಔಟು..ಎಲ್ಬಿಡಬ್ಲ್ಯೂ,, ಎಲ್ಲಾ ಒಮ್ದೇ ಅಲ್ಲವಾ...ಹಾಗಾಗಿ...ಬಹಳ ತುಡಿತ ತುಂಬಿದ ಲೇಖನ...ಹೇಳಬಲ್ಲೆ ಜ್ಯೋತಿ....
ಪ್ರೀತಿ, ಅರ್ಥ ಆಗತ್ತಾ? ಸಾದ್ಯವಿಲ್ಲ..... ಕಾಲಕ್ಕೊಂದು ಅರ್ಥ ಕೊಡತ್ತಾ ಹೋಗತ್ತೆ..... ಆಗ ಮಾಡಿದ ಪ್ರೀತಿಗೆ ( ತಪ್ಪಿಗೆ) ಸಮರ್ಥನೆ ಕೊಡುತ್ತಾ, ಹೊಸ ತಪ್ಪು ಮಾಡುತ್ತಾ ಹೋಗುತ್ತೇವೆ.... ಇನ್ನೊಂದು ವಿಷ್ಯ, ತಾನು ಪ್ರೀತಿಸಿದ್ದು ತಪ್ಪು ವ್ಯಕ್ತಿಯನ್ನ ಅಂತ ಗೊತ್ತಾದ ತಕ್ಷಣ, ಅಲ್ಲಿಂದ ಎದ್ದು ಬಂದು ಹೊಸ ಬದುಕು ಕಟ್ಟಿಕೊಳ್ಳೋದು ಅಸ್ತು ಸುಲಭ ಅಲ್ಲ......ಸುಲಭವಾಗಿದ್ದರೆ ಎಲ್ಲರೂ ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದರು..... ಹಳೆಯ ನೆನಪುಒರೆಸುತ್ತಾ.....
ಹೌದು...ಖಂಡಿತ ಸುಲಭ ಅಲ್ಲ... ಆದ್ರೆ ಸಾಧ್ಯ...ಕಾಲಕ್ಕೊಂದು ಅರ್ಥ ಕೊಡತ್ತೆ ಮತ್ತೆ ಒಬ್ಬೊಬ್ಬರಿಗೊಂದು ಅರ್ಥ ಕೊಡತ್ತೆ, ಯಾರ ಭಾವನೆ ಸರಿ ಯಾರದ್ದು ತಪ್ಪು ಅಂತ ಹೇಳೋದು ಯಾರಿಂದಲೂ ಸಾದ್ಯ ಇಲ್ಲ...
ಪ್ರೀತಿಯ ವಿವಿಧ ಭಾವನೆಗಳನ್ನು ಬಹಳ ಚೆನ್ನಾಗಿ ಬರೆದಿದ್ದೀರಿ... ಈ ಆಕರ್ಷಣೆಯೇ ಪ್ರೀತಿ ಅಂತ ಹೊರಟು ಬಿಡುವವರ ಬಗ್ಗೆ ಏನೂ ಹೇಳಲಾಗಲ್ಲ.
Hai, ammana matu sari annisutte nanage.
Post a Comment