Thursday 29 June, 2017

ಎಷ್ಟೊಂದು ಪಾಪ ನೀನು !

     


    ಮಳೆಗಾಲದ ಬೆಳಗಿನಲ್ಲಿ ದನಗಳನ್ನ ಹೊಡೆದುಕೊಂಡು ಬೆಟ್ಟಕ್ಕೆ ಹೋಗುವಾಗ ಎಲ್ಲ ಮನೆಗಳ ಮಾಡಿನಿಂದ ಪದರು ಪದರಾಗಿ ಹೊರಬರುತ್ತಿರುವ ಬಚ್ಚಲೊಲೆಯ ಹೊಗೆಯನ್ನ ನೋಡಿದಾಗೆಲ್ಲ ನನಗೇನು ನಿನ್ನ ಸಿಗರೇಟಿನ ನೆನಪಾಗುತ್ತದೆ ಅಂದುಕೊಂಡಿದ್ದೀಯಾ? ಖಂಡಿತ ಇಲ್ಲ. ನಾನು ನಿನ್ನನ್ನು ಸಂಪೂರ್ಣವಾಗಿ ಮರೆತಿದ್ದೇನೆ. ಸುಮ್ಮನೆ ಹಾಗೆಲ್ಲ ಅಂದುಕೊಂಡು ಹೆಮ್ಮೆಪಡಬೇಡ. ಅಷ್ಟಕ್ಕೂ ಹಾಗೆ ನೆನಪಿಸಿಕೊಳ್ಳುವಂಥದ್ದು ಏನಿದೆ ನಿನ್ನಲ್ಲಿ? ಎಲ್ಲ ಹುಡುಗರಂತೆ ನೀನೂ ಇದ್ದೆ. ಎಲ್ಲ ಹುಡುಗಿಯರಂತೆ ನಾನೂ ಸೋತೆ ಅಷ್ಟೆ. ಊಹುಂ , ಅಷ್ಟೇ ಅಲ್ಲ ಎಲ್ಲ ಹುಡುಗಿಯರಂತೆ ನಾನೂ ನಿನ್ನ ಮರೆತೆ.
         ಅದರಲ್ಲಿ ಏನೂ ವಿಶೇಷವಿಲ್ಲ. ಆದರೆ ಆಗಿನ ನಾನು ತುಂಬ ಮುಗ್ಧಳಾಗಿದ್ದೆನಲ್ಲ. ನೀನೋ ಆಗಲೇ ದೊಡ್ಡ ಪ್ರೊಫೆಸರ್, ಈಗಂತೂ ಡೀನ್ ಅಂತೆ. ನನಗೆ ಈಗಲೂ ಈ ಪ್ರೊಫೆಸರ್ ಗೆ, ಲೆಕ್ಚರರ್ ಗೆ, ಡೀನ್ ಗೆ ಇದ್ಯಾವುದಕ್ಕೂ ವ್ಯತ್ಯಾಸವೇ ಗೊತ್ತಿಲ್ಲ. ಎಲ್ಲರನ್ನೂ ಸರ್ ಮೇಡಂ ಎಂದು ಕರೆಯುತ್ತಾರೆ ಎಂಬುದು ಮಾತ್ರ ಅರ್ಥವಾಗುತ್ತದೆ. ಆದರೆ ನೀನು ತುಂಬಾ ಜ್ಞಾನ ಸಂಪನ್ನ. ನಾನು ಚಿಕ್ಕಂದಿನಿಂದಲೂ ದನ ಮೇಯಿಸಿಕೊಂಡೇ ಇದ್ದವಳು. ಪುರುಸೊತ್ತಿದ್ದಾಗ ಶಾಲೆಗೆ ಹೋದವಳು. ಹಾಗೇ ಎಲ್ಲರ ಒತ್ತಾಯಕ್ಕೆ ಕಾಲೇಜಿಗೂ ಹೋದೆ ಸಮಯ ಸಿಕ್ಕಾಗ. ಆದರೆ ನೀನು ಎಲ್ಲ ಬಲ್ಲವನಾಗಿದ್ದೆ. ನನಗೆ ನಿನಗೆ ಮದುವೆಯಾಗಲು ಸಾಧ್ಯವಿಲ್ಲ ಎಂಬುದನ್ನು ಕೂಡ!
        ಆದರೂ ನೀನೇಕೆ ಕಡಲ ದಂಡೆಯಲ್ಲಿ ಕಪ್ಪೆ ಚಿಪ್ಪು ಹೆಕ್ಕುವ ಮಗುವನ್ನು "ಬಾ ಇಲ್ಲಿ, ಕಪ್ಪೆಚಿಪ್ಪಿನ ದೊಡ್ಡ ಅರಮನೆಯನ್ನೇ ತೋರಿಸುತ್ತೇನೆ, ನಿನಗೇ ಕೊಡಿಸಿಬಿಡುತ್ತೇನೆ ಅದನ್ನ", ಎಂದು ಕರೆದುಕೊಂಡು ಹೋಗುವ ಮೋಸಗಾರನಂತೆ ನನ್ನನ್ನ ಕರೆದೊಯ್ದೆ? ನಾನು ನಿನ್ನಷ್ಟು ಜ್ಞಾನವಿಲ್ಲದವಳಾದರೂ ನಿನ್ನಷ್ಟೇ ಜೀವವಿರುವವಳು ಎಂದು ಅನ್ನಿಸಲೇ ಇಲ್ಲವಾ ನಿನಗೆ? ನಾನು ಹೆಣ್ಣಾಗಿ ಮತ್ತು ಕೇವಲ ಹೆಣ್ಣು ಮಾತ್ರವಾಗಿ ನಿನಗೆ ಕಂಡೆನಾ ?
       ಆದರೆ ಒಂದು ವಿಷಯ ಗೊತ್ತಾ ನಿನಗೆ? ನಿನಗೆ ಎಷ್ಟೇ ಬುದ್ಧಿಯಿದ್ದರೂ ನನ್ನಷ್ಟು ಸುಂದರ ಕನಸು ಕಲ್ಪನೆಗಳು ನಿನಗೆ ಬರಲಾರವು, ನಾನು ನಿನ್ನನ್ನು ಪ್ರೀತಿಸುವಷ್ಟು ದಿನವೂ ಬೆಟ್ಟದಲ್ಲಿ ಕುಳಿತು ತೇಲುವ ಮೋಡಗಳಲ್ಲಿ, ಕಂಡ ಕಂಡ ಮರಗಳಲ್ಲಿ ,ಅವುಗಳ ನೆರಳುಗಳಲ್ಲಿ ಎಲ್ಲ ಕಡೆ ನಿನ್ನನ್ನು ಕಂಡು ಪಟ್ಟ ಖುಷಿ ನಿನಗೆ ಎಂದಿಗೂ ಸಿಗಲಾರದು. ಎಲ್ಲರನ್ನೂ ಕಳ್ಳರಂತೆ , ಮೋಸಗಾರರಂತೆ ಕಾಣುವ ಮನುಷ್ಯರಿಗೆ ಸಂಪೂರ್ಣ ಸಮರ್ಪಣೆಯ ಖುಷಿ ಹೇಗೆಂದೇ ಗೊತ್ತಿರುವುದಿಲ್ಲ. ನಿಜ ಹೇಳಬೇಕೆಂದರೆ ಅವರಿಗೆ ಯಾವ ಸುಖವೂ ಸುಖವಾಗುವುದೇ ಇಲ್ಲ. ನಿನಗೆ ನೋಡು , ಒಳ್ಳೆಯ ಹೆಂಡತಿ , ಮಕ್ಕಳು , ಸಂಪತ್ತು ಎಲ್ಲವೂ ಇದೆ, ಆದರೆ ಸುಖ ಮಾತ್ರ ಇಲ್ಲ.
     ನೀನು ಹಾಸಿ ಹೊದ್ದಿರುವ ಸಂಪತ್ತಿನ ಅರ್ಧದಷ್ಟನ್ನು ಕೂಡ ನಾನು ಹುಟ್ಟಿದಾಗಿನಿಂದ ಇದುವರೆಗೂ ಕಂಡಿಲ್ಲ. ಆದರೆ ದನಗಳ ಮೈಯ ಕಂಪು ಕೂಡ ನನಗೆ ಸುಖ ಕೊಡುತ್ತದೆ. ನೀನು ಮೋಸಮಾಡಿಬಿಟ್ಟೆ ಎಂಬ ಕಾರಣಕ್ಕೆ ನನ್ನ ಗಂಡನೂ ಹೀಗೆ ಮಾಡಬಹುದಾ ಅಂತ ಅನುಮಾನದಿಂದ ನೋಡುವ ಕಲ್ಪನೆಯೇ ಬರುವುದಿಲ್ಲ ನನಗೆ. ನಿನ್ನನ್ನು ಎಷ್ಟು ಪ್ರೀತಿಸಿದೆನೋ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಾಗೇ ನನ್ನ ಗಂಡನನ್ನ ಪ್ರೀತಿಸಲು ಆಗುತ್ತದೆ ನನ್ನಿಂದ. ನಿನ್ನ ಪ್ರೀತಿಸುವ ಮೊದಲೂ ನಾನು ಸುಖವಾಗಿದ್ದೆ. ಪ್ರೀತಿಸುವಾಗಲೂ ಸುಖವಾಗಿದ್ದೆ. ನೀನು ಬಿಟ್ಟ ಮೇಲೆ ಮಾತ್ರ ಸ್ವಲ್ಪ ದಿನ ಮಾತ್ರ ನಾನು ದುಃಖಪಟ್ಟಿದ್ದು . ಮತ್ತೆ ಈಗಲೂ ಸುಖವಾಗಿಯೇ ಇದ್ದೇನೆ.
      ಎಲ್ಲೋ ಅಪರೂಪಕ್ಕೆ ಹೀಗೆ ನೀನು ನೆನಪಾಗುತ್ತೀಯ . ಆದರೆ ನನಗೆ ದುಃಖವಾಗುವುದಿಲ್ಲ. ನಿನ್ನ ಬಗ್ಗೆ ಕರುಣೆ ಮೂಡುತ್ತದೆ. ನನಗಿರುವ ಸುಖ ನಿನಗಿಲ್ಲವಲ್ಲ ಅಂತ..
    ಈಗಲೂ ನನಗೆ ನೀನು ಎಲ್ಲಾದರೂ ಸಿಕ್ಕಿದರೆ ನಾನು ಖುಷಿಯಿಂದಲೇ ಮಾತನಾಡಿಸಬಲ್ಲೆ. ಆದರೆ ನಿನಗೆ ಆ ಭಾಗ್ಯವಿಲ್ಲ. ನೀನು ಕಂಡರೂ ಕಾಣದಂತೆ ಹೋಗುತ್ತೀಯಲ್ಲ ಕಣ್ತಪ್ಪಿಸಿಕೊಂಡು. ಎಷ್ಟು ದುಃಖಿ ನೀನು. ಮೋಸ ಮಾಡುವವರ ಮನಸ್ಸಿನಲ್ಲಿ ಎಷ್ಟು ನಿರಂತರ ಲೆಕ್ಕಾಚಾರಗಳು, ಯಾರ್ಯಾರ ಹತ್ತಿರ ಏನೇನು ಸುಳ್ಳು ಹೇಳಿದ್ದೇನೆ ಎಂದೆಲ್ಲ ನೆನಪಿಟ್ಟುಕೊಳ್ಳಬೇಕಾದ ಕಷ್ಟ, ಇನ್ನೂ ಏನೇನೆಲ್ಲ ಇರುತ್ತದೋ ಏನೋ ಅಲ್ಲವಾ? ಪಾಪ ನೀನು!
     No comments: