Wednesday, 20 April 2011

ಮದುವೆಗೆ ಎಲ್ಲರೂ ಬನ್ನಿ...



ನನ್ನ ಪ್ರೀತಿಯ ...........

    ನೆನ್ನೆ 'Bhagban' ನೋಡುತ್ತಿದ್ದೆ. ಅಮಿತಾಬ್ - ಹೇಮಾಮಾಲಿನಿ ಪ್ರೀತಿ ನೋಡಿ ಕಣ್ಣು ತುಂಬಿ ತುಂಬಿ ಬರ್ತಾ ಇತ್ತು. ಛೇ !! ಯಾಕಾದ್ರೂ ನಾನಿಷ್ಟು emotional ಅಂತ ಅಂದ್ಕೊಂಡೆ. ಅವಾಗ ಶುರುವಾಯ್ತು, ಧಾರಾವಾಹಿಯ ತರಹ ನಮ್ಮ ಮದುವೆ, ನಮ್ಮ  ಮನೆ, ಜಗಳ, sorryಗಳ ಕನಸು... ಆಹಾ..ಎಷ್ಟು ಚೆಂದ ಅನ್ನಿಸಿತು.. ನಲವತ್ತಲ್ಲ ನಾಲ್ಕು ನೂರು ವರ್ಷವೂ ನಾನು ನಿನ್ನ ಹೆಂಡತಿಯಾಗಿ ನಿನ್ನ ತೊಳನ್ನೇ ದಿಂಬಾಗಿಸಿಕೊಂಡು ಮಲುಗುವಂತಾಗಲಿ ಅಂತ ಕಾಣದ ದೇವರಲ್ಲಿ ಮನಸ್ಸು ಬೇಡಿಕೊಂಡೇಬಿಟ್ಟಿತು. ಬೇಡಿಕೆಗಳಿಗೇನೂ ಕಮ್ಮಿ ಇಲ್ಲದಿದ್ದರೂ, ಆ ದೇವರು ನನ್ನ ಈ ಬೇಡಿಕೆಯನ್ನು ಪೂರೈಸುತ್ತಾನಂತೆ.

ಎಲ್ಲ ವಿಚಿತ್ರವಾಗಿ ತೋರುತ್ತಿದೆ. ನನ್ನದೇ ಸ್ವಂತ ಗೆಳೆಯ ನನಗೆ ತಾಳಿ ಕಟ್ಟುತ್ತಾನೆ ಅಂದರೆ ನಂಬಲಿಕ್ಕೇ ಆಗುತ್ತಿಲ್ಲ.. ಗೆಳೆಯ ಗಂಡನಾಗಿ ಬದಲಾಗುವ ನಡುವೆ ಸುಮಾರು ಸಮಯ ಸಿಕ್ಕಿತ್ತು ನನಗೆ ಅದನ್ನು ಅರಗಿಸಿಕೊಳ್ಳಲು. ಆದರೂ ಈ ಖುಷಿಯನ್ನು ಅರಗಿಸಿಕೊಳ್ಳಳಾಗುತ್ತಿಲ್ಲ. ನಿನ್ನನ್ನ ಎಲ್ಲರೂ 'ನಿಮ್ಮೆಜಮಾನ್ರು' ಅಂತೆಲ್ಲ ಸಂಭೋದಿಸುತ್ತಾರೆ ನನ್ನೊಡನೆ ಮಾತಾಡುವಾಗ.ನನಗೆ ಅದನ್ನು ಕೇಳಿಸಿಕೊಂಡಾಗೆಲ್ಲ ಖುಷಿ ಧುಮ್ಮಿಕ್ಕಿದಂತೆ ಒಮ್ಮೆಲೇ ಪುಳಕ.. ಗೊತ್ತಾ? ಈಗ ನಾನು ಎಲ್ಲದಕ್ಕೂ ಅಮ್ಮನ ಅಥವಾ ಅಪ್ಪನ ಒಪ್ಪಿಗೆಗಿಂತ ನಿನ್ನ ಒಪ್ಪಿಗೆ ಕೇಳುವುದೇ ಮುಖ್ಯವಂತೆ. ಹಾಗಂತ ಅಮ್ಮನೇ ಹೇಳುವಾಗ ನನಗೆಷ್ಟು ಖುಷಿ ಆಯಿತು. ಮಗುವೊಂದು ಮಣ್ಣಿನಲ್ಲಿ ಆಟ ಆಡ  ಬಯಸಿ ಅಮ್ಮನನ್ನು ಕೇಳಲು ಹೋದಾಗ, ಅಮ್ಮ ನಿನ್ನ ಜೊತೆ ಆಡುವ ಗೆಳತಿಯನ್ನೇ ಕೇಳು 'ಆಡಲಾ?' ಎಂದು, ಎಂದು ಹೇಳಿದರೆ ಆ ಮಗುವಿಗೆ ಎಷ್ಟು ಖುಷಿಯಾಗಬಹುದೋ ಅಷ್ಟೇ ಖುಷಿ ನನಗೂ ಆಯಿತು.

ಎಲ್ಲರಿಗೂ ಹೀಗೆ ಆಗಬಹುದೇನೋ, ಏನೋ ಅವರ್ಣನೀಯ ಆನಂದ. ಪ್ರತಿ ದಿನವೂ ೨ ಸಲ ೩ ಸಲ ಎಣಿಸಿದರೂ  ಬೇಗ ಮೇ ೧೧ ಬರುತ್ತಿಲ್ಲ ಎನಿಸುತ್ತಿದೆ. ಇಷ್ಟು ದಿನ ವರ್ಷಗಳು ಕೂಡ ತುಂಬಾ ಬೇಗ ಓಡುತ್ತಿದ್ದವು. ಈಗ ಹಾಗಲ್ಲ..!!!
ಜಗತ್ತೆಲ್ಲ ಪ್ರೀತಿಯಿಂದ, ಸಂಗೀತದಿಂದ ತುಂಬಿ ಹೋದಂತೆ..ಹಗಲು ಕನಸುಗಳೆಲ್ಲ ಇನ್ನಷ್ಟು ಸುಂದರವಾದಂತೆ.. ಆದರೆ ರಾತ್ರಿ ಕನಸುಗಳು ಬೀಳುತ್ತಿಲ್ಲ. ಕನಸು ಬೀಳಲು ನಿದ್ದೆಯೇ ಬರುತ್ತಿಲ್ಲ.. ರಾತ್ರಿಯೆಲ್ಲಾ ನಿನ್ನ ಜೊತೆ ಮಾತನಾಡುತ್ತಾ ಇರಬಹುದಿತ್ತು ಅನ್ನಿಸುತ್ತಿದೆ. ಅನುಭವಿಗಳೆಲ್ಲ ಹೇಳತೊಡಗಿದ್ದಾರೆ, 'ಮೊದಮೊದಲೆಲ್ಲ ಚೆನ್ನಾಗಿರುತ್ತೆ, ಆಮೇಲೆ ನಿಂಗೆ ಗೊತ್ತಾಗುತ್ತೆ ಜೀವನ ಅಂದರೇನು ಅಂತ' ಎಂದು. 'ಇನ್ನು ಗಂಭೀರವಾಗು' ಎಂಬ ಅರ್ಥದಲ್ಲಿ ಅವರೆಲ್ಲ ಹೇಳಿದರೂ, ಅದೆಲ್ಲ ನನಗೆ ಅರ್ಥವಾಗುವಷ್ಟು ದಿನ ಖುಷಿಪಡುವ, ಕುಣಿಯುವ ಅವಕಾಶವಿದೆ ಎಂದು ಹೇಳುತ್ತಿದ್ದಾರೆ ಎಂದು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಮತ್ತೆ ಕನಸು ಕಾಣಲು ಶುರು ಮಾಡುತ್ತೇನೆ.

ಸ್ವಲ್ಪ ಭಯವೂ ಇದೆ ನನಗೆ. ಎರಡು ಕುಟುಂಬಗಳ ಮಧ್ಯೆ ಸೇತುವೆಯಾಗುವ, ಯಾರಿಗೂ ನೋವಾಗದಂತೆ ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡು ನಡೆದುಕೊಳ್ಳುವ ಕೆಲಸ ಕೊಂಚ ಕಷ್ಟವೇ ಎಂಬುದು ನಿಶ್ಚಿತಾರ್ಥವಾದಾಗಿನಿಂದ ಅರ್ಥವಾಗುತ್ತಿದೆ. ಆದರೂ ನಾನು ಎಲ್ಲವನ್ನೂ ನಿಭಾಯಿಸಬಲ್ಲೆ, ಜೊತೆಗೆ ನೀನಿದ್ದೀಯಲ್ಲ ಎಂಬ ಭಂಡ ಧೈರ್ಯವಿದೆ. ಆದರೆ ಸಂಬಂಧಗಳ ಎಳೆ ಸೂಕ್ಷ್ಮ ಎಂಬುದಂತೂ ಸತ್ಯ.

ಎಲ್ಲರೂ ಆಂಟಿ ಆಂಟಿ ಎಂದು ಅಣಕಿಸುವಾಗ, ನಾನೂ ಹೆಚ್ಚಿನ ಆಂಟಿಯರಂತೆ ಡುಮ್ಮು ಹೊಟ್ಟೆಯ ಆಂಟಿಯಾಗಿ, ಅಡಿಗೆ ಮನೆಯಲ್ಲಿ ಕೈ ಒರೆಸಿ ಒರೆಸಿ ಕೊಳಕಾದರೂ ಅದೇ ನೈಟಿ ಹಾಕಿಕೊಂಡು ಮಕ್ಕಳೊಂದಿಗೆ, ಗಂಡನೊಂದಿಗೆ ಕಿರುಚುತ್ತ, ಜಗಳವಾಡುತ್ತಾ, ದುಡಿದು ಹೈರಾಣಾಗಿ, ಜಗತ್ತಿನ ಯಾವ ಸೌಂದರ್ಯವೂ ಕಣ್ಣಿಗೆ ಕಾಣದಂತಾಗಿ, ಮುಂದೊಂದು ದಿನ ಯಾಕೋ ಎಲ್ಲರೂ ನನ್ನನ್ನು ದುಡಿಯುವ ಯಂತ್ರದಂತೆ ನೋಡುತ್ತಿದ್ದಾರೆ ಎಂದುಕೊಂಡು ಅತ್ತು ಕರೆದು, ಕೊನೆಗೆ ಖಿನ್ನಳಾಗಿ....... ಅಬ್ಬ..!! ನಿಜಕ್ಕ್ಕೂ ಸ್ವಲ್ಪ ಜಾಸ್ತಿಯೇ ಭಯವಾಗುತ್ತೆ. ಆದರೂ ನನ್ನ ಜೊತೆ ನೀನಿದ್ದಿಯಲ್ಲ..ನೀನಲ್ಲದೆ ಬೇರೆ ಯಾರೋ ಆಗಿದ್ದರೆ ಅವರನ್ನು ಅರ್ಥ ಮಾಡಿಕೊಳ್ಳುವ, ಅರ್ಥವಾಗದಿರುವ... ಇನ್ನೂ ಏನೇನೋ ಸಮಸ್ಯೆಗಳೂ ಇರುತ್ತಿದ್ದವೇನೋ...

ಜೀವನಪೂರ್ತಿ ಜೊತೆಗಿರುವ ಗೆಳೆಯನಿಗೆ ಕೋಟಿ ವಂದನೆಗಳು...

Wednesday, 16 February 2011

ನನ್ನೊಂದಿಗಿರಲೇಬೇಕು ನೀನು...



ನೀನು ಕಳೆದು ಹೋಗುವ 
ಭಯವಿಲ್ಲದಿದ್ದರೂ,
ನೀನು ನನಗಂಟಿಕೊಂಡೇ ಇರಬೇಕೆಂಬ 
ದುರಾಸೆಯಿಲ್ಲದಿದ್ದರೂ....

ನಿನ್ನ ಮನ ಸೆಳೆಯುವ
ಅಗತ್ಯವಿಲ್ಲದಿದ್ದರೂ,
ಇನ್ಯಾರೋ ನಿನ್ನ ಕದ್ದುಬಿಡಬಹುದೆಂಬ
ಅನುಮಾನವಿಲ್ಲದಿದ್ದರೂ...

ನಿನ್ನೊಡನೆ ಕಳೆದ ಸುಮಧುರ 
ಕ್ಷಣಗಳು ಮರೆತಿಲ್ಲವಾದ್ದರಿಂದ,
ಜೀವನದ ಪ್ರತಿ ಕ್ಷಣವೂ ಮಧುರವಾಗಲೆಂದು 
ಮನ ಬಯಸುತ್ತದಾದ್ದರಿಂದ...

ನೆನೆವ ಪ್ರತಿ ಮಳೆಯಲ್ಲೂ,
ಖುಷಿಯ ಪ್ರತಿ ನಗುವಿನಲ್ಲೂ,
ಕಾಡುವ ಪ್ರತಿ ಏಕಾಂತದಲ್ಲೂ,
ಸಂಭ್ರಮದ ಪ್ರತಿ ಬೆಳಗಿನಲ್ಲೂ, 
ನೀನು ಜೊತೆಗಿರಲೇಬೇಕೆಂದು
ಮನ ಬಯಸಿದರೆ,  ಅದು ತಪ್ಪಾದೀತಾ?

ಜನಜಂಗುಳಿಯ ಮಧ್ಯೆ
ನಿನ್ನ ಕೈ ಹಿಡಿದು ನಡೆವಾಗ
ತಕ್ಷಣ ನಿರ್ಮಿತವಾಗಿಬಿಡುವ
ಸುಂದರ ಏಕಾಂತ
ಮತ್ತೆ ಮತ್ತೆ ಬೇಕೆಂದು 
ಮನ ಬಯಸಿದರೆ, ಅದು ದುರಾಸೆಯಾದೀತಾ?

ತಪ್ಪಾದರೂ ಸರಿ,
ನನ್ನೊಂದಿಗಿರಲೇಬೇಕು ನೀನು
ನಾ ಬಯಸಿದಾಗೆಲ್ಲ..
ನಿನ್ನೆದೆಯಲ್ಲಿ ಅಡಗಿಕೊಂಡು 
ತಪ್ಪಿಸಿಕೊಳ್ಳಬೇಕು ನಾನು 
ನೀ ನನ್ನ ಹಿಡಿಯಲು ಬಂದಾಗೆಲ್ಲ...

Wednesday, 29 December 2010

ಹೊಸ ಕನಸಿನ ನನ್ನ ನಾಳೆಗಳು..

ಬದುಕಿನೆಡೆಗೊಂದಿಷ್ಟು ಪ್ರೀತಿ,
ರಾಶಿ ಕುತೂಹಲ, ಅಚ್ಚರಿ
ಎದೆಯೊಳೆಲ್ಲವ ಮುಚ್ಚಿಟ್ಟುಕೊಂಡು
ಪಿಳಿ ಪಿಳಿ ಎಂದು ಕಣ್ಣು ಬಿಟ್ಟಾಗಿನ ಪರಿ

ಯಾರೋ ಎತ್ತಿಕೊಂಡು
ಪ್ರೀತಿಯಿಂದ ಎದೆಗೊತ್ತಿಕೊಂಡು
ಕಣ್ಣಿಂದ ಪನ್ನೀರು ಸುರಿಸಿ
ಎದೆಯಿಂದ ಅಮೃತವ ಉಣಿಸಿ

ನೋಡನೋಡುತ್ತಿದ್ದಂತೆ
ಕಾಲ್ಗೆಜ್ಜೆ ಘಲ್ಲೆಂದು
ಯಾರದೋ ಹೃದಯದ ಪಿಸುಮಾತಿಗೆ
ಎದೆ ಝಾಲ್ಲೆಂದದ್ದೂ ಆಯಿತು..

ನನ್ನಷ್ಟಕ್ಕೆ ನಾನಿದ್ದೆ,
ಪುಟ್ಟ ಹುಡುಗಿ ನಾನು ಎಂದುಕೊಂಡಿದ್ದೆ
ನಾಳೆ ನಾಳೆ ಮದುವೆಯಂತೆ..
ನಿಶ್ಚಯಿಸಿದ್ದೂ ಆಯಿತು.

ಹೊಸ ಕನಸುಗಳು ಅರಳಿ
ನನ್ನವನ ಸ್ವಾಗತಿಸುವವಂತೆ
ನನ್ನ ನಾಳೆಗಳೆಲ್ಲ ಇನ್ನು
ನನ್ನಿನಿಯನಿಗಂತೆ...

ನನ್ನ ಗೆಳೆಯ ವಿನಾಯಕನೊಂದಿಗೆ ಡಿಸೆಂಬರ್ ೨೦ಕ್ಕೆ ನನ್ನ ನಿಶ್ಚಿತಾರ್ಥವಾಯಿತು. ನಿಮ್ಮೆಲ್ಲರ ಹಾರೈಕೆಗಳನ್ನು ಬಯಸಿ ಈ ಕವನವನ್ನು ನಿಮ್ಮ ಮುಂದಿಡುತ್ತಿದ್ದೇನೆ..

Tuesday, 7 September 2010

ಎಚ್ಚರಾಗುವೆನೆ ನಾನು?


ಒಂಟಿ ಮರದಲಿ ಉಲಿಯುತಿಹ ಹಕ್ಕಿಯಂತೆ
ಕಡುಗಪ್ಪು ರಾತ್ರಿಯಲಿ ಜೊತೆ ಬಯಸಿ
ಉಕ್ಕುತಿಹ ಕಡಲಿನಂತೆ
ಜಾತ್ರೆಯಲಿ ತಾಯ ಕೈ ಬೆರಳು
ತಪ್ಪಿಹೋಗಿರುವ ಮಗುವಿನಂತೆ
ರಾಗ ಬೆರೆಸುವರಿಲ್ಲ, ದಾರಿ ಹೇಳುವರಿಲ್ಲ
ಬದುಕು ಎಲ್ಲಿಹುದೋ ತೋರುವವರರಿಲ್ಲ

ಸಂಜೆ ಮಳೆಯಲ್ಲಿ ಮನೆಬಿಟ್ಟ
ಮದುವೆಯಿಲ್ಲದ ಬಸುರಿಯಂತೆ
ಹಸಿದ ಎಳೆ ಕರು ಸತ್ತ ತಾಯಿಯ ಬಯಸಿ
ಅಂಬಾ.. ಎಂದು ಕರೆಯುವಂತೆ
ಭಾರವೆಷ್ಟಿಹುದೋ ಇಳಿಸುವವರಾರಿಲ್ಲ
ಭಾವವೆಂತಿಹುದೋ ಕೇಳುವವರಾರಿಲ್ಲ

ಅರಿತಿಲ್ಲ ಏನಿಹುದೋ ನನ್ನ ಒಳಗೆ
ಒಂಟಿತನ ಕಾಡುತಿದೆ ಸಂತೆಯೊಳಗೆ
ನಿದ್ದೆಗಣ್ಣಲೇ ನಿತ್ಯ ವಿಶ್ವ ಪರ್ಯಟನೆ
ಅಮಲಿನಲಿ ನಾ ಸತತ ತೇಲುತಿಹೆನೆ?

ಅಂಟಿಕೊಂಡಿಹುದು ಜಗದ
ಕೊಳೆಯೆಲ್ಲ ನನಗೆ...
ಖಚಿತವಾಗದೆ ಹೋದುದು ಒಳಗಿರುವ ಭಾವ
ಮಸುಕಾದ ಕನ್ನಡಿಯ ಹಾಗೆ

ಕಾದಿರುವೆ ಯಾರೋ ಕನಿಕರಿಸುವಂತೆ
ಮರುಗುತಿಹೆ ನಾನಿಲ್ಲಿ ಜೊತೆ ಬಯಸಿ 
ನಲ್ಲೆ ಇನಿಯನ ಬಳಿಸಾರಿ ಬರುವಂತೆ
ಸಾವು ಬರುತಿದೆ ಸನಿಹ ನನ್ನ ಅರಸಿ 

ಹುಟ್ಟಿದಾಗಲೇ ಶುರುವಾಗಿದೆ ಕ್ಷಣಗಣನೆ...
ನೋಡಬೇಕಿದೆ,
ನಾ ಇನ್ನಾದರೂ ಎಚ್ಚರಾಗುವೆನೆ?

Wednesday, 4 August 2010

ಕನಸುಗಳು ಕಾದಿರಲಿ ಕೊಂಚ..


ಕಡುಗಪ್ಪು ರಾತ್ರಿಯಲಿ 
ಭೂತಾಯಿ ಮಡಿಲಲ್ಲಿ
ದಣಿದ ಜನಕೆಲ್ಲ 
ಬೆಚ್ಚಗಿನ ಸುಖನಿದ್ರೆ

ಧೋ ಮಳೆಯ ಜೋಗುಳಕೆ 
ಕಿವಿಯಾಗು ಎಂದೆ
ಸುರಿವ ಧಾರೆಗೆ ನೆನೆವ 
ಮೈಯ್ಯಾದೆ ಏಕೆ?

ಜುಳಜುಳನೆ ಹರಿವ 
ತೊರೆಯ ಗಾನವು ನಿನದು
ಸುಯ್ವ  ಗಾಳಿಯ ಹಾಡು
ನಿನಗೆಂದೇ ಹಾಡಿದ್ದು
ಕೇಳುತ್ತ ಹಿತವಾಗಿ 
ನೀ ಮಲಗು ಎಂದೆ

ತೊರೆಯ ತೀರಕೆ ನಡೆದು
ಕಡಲ ಸೇರುವ ನದಿಗೆ 
ಮೇಲ್ಮೇಲೆ ತಂಪು,
ಒಡಲೆಲ್ಲ ಬೆಂಕಿ 
ವಿರಹದುರಿಯನು ನೀನು ಬಲ್ಲೆಯೇನು?
ಎನುತ ಅಳುವೆಯೇಕೆ?

ಸಾಗರವ ಸೇರುವುದು 
ಸಹಜ ಧರ್ಮವು ಹೌದು
ಹುಟ್ಟಿ ಹರಿಯದೆಯೇ ಸೇರಿದರೆ
ಬದುಕು ಚೆಂದವಾಗುವುದೇನು?

ಆತುರತೆ ಬದಿಗಿರಲಿ
ಕನಸುಗಳು ಕಾದಿರಲಿ
ಸಹಜತೆಯು ಜೊತೆಗಿರಲಿ
ಮನದಾಳ ತಂಪಾಗಿ
ನದಿಯಂತೆ ನಲಿದಾಡಿ
ಸಾಗರದ ಕಡೆ ಪಯಣ ಸಾಗುತಿರಲಿ

Saturday, 31 July 2010

ಆಗಾಗ ಹೊಸತಾಗುವ ಹಳೇ ಬದುಕು...


   ನಿನ್ನ ಅಹಂಕಾರವನ್ನುಬ್ಬಿಸುತ್ತ, ನಿನ್ನ ಹಿಂದೆ ಹಿಂದೆ ಅಲೆಯುತ್ತ, ನಮ್ಮ ಮಧ್ಯೆ ಇಲ್ಲದ ಪ್ರೀತಿಯನ್ನು ಪ್ರದರ್ಶಿಸಲು ಹೋಗಿ, ಪ್ರೀತಿಯ ಶವವನ್ನು ಇಟ್ಟುಕೊಂಡು ಬದುಕುತ್ತಿದ್ದೇವೆಂದು ಬುದ್ಧಿಯಿದ್ದವರಿಗೆ ಗೊತ್ತಾಗಿ,ಆಗ ನನಗೆ ಅವಮಾನವಾಗಿ, ಆ ಅವಮಾನ ಸಹಿಸಿಕೊಳ್ಳಲೇಬೇಕಾದಾಗೆಲ್ಲ ಮುಖ ಬಾಡಿಸಿಕೊಂಡು ಮನೆಗೆ ಅಂದರೆ ಪುನಃ ನೀನಿದ್ದಲ್ಲಿಗೆ ಬರುವುದು, ಮತ್ತೆ ನಿನ್ನೊಂದಿಗೆ ಜಗಳವಾಡುತ್ತಾ ಅಡುಗೆ ಮಾಡುವುದು, ಸಿಟ್ಟಿನಿಂದ ಬೇಯಿಸಿದ್ದನ್ನೇ ಉಂಡು, ಇದರಿಂದೆಲ್ಲ ಮುಕ್ತಿ ಯಾವಾಗಪ್ಪ ಎಂದುಕೊಳ್ಳುತ್ತ ಮಲಗಿದಲ್ಲೇ ಧಾರಾಕಾರ ಕಣ್ಣೀರು ಹರಿದು, ಮೂಗಿನಿಂದಲೂ  ಒಂದಷ್ಟು ಸುರಿದು, ಸೊರಗುಡುತ್ತ, ಒರೆಸಿಕೊಳ್ಳುತ್ತಾ, ನಿದ್ರಿಸಿ, ಕನಸು ಕಂಡು, ಬೆಳಗೂ ಆಗಿ ಬಿಡುತ್ತದೆ. ಮತ್ತೆ ಇವೆಲ್ಲವುಗಳ ಪುನರಾವರ್ತನೆಯ ಹೊಸ ಆರಂಭ..ಮತ್ತದೇ ಹಳೆಯ ಅಂತ್ಯಕ್ಕೆ ಹೊಸ ನಾಂದಿ.. ಥೂ... ಜೀವನ ಗಬ್ಬೆದ್ದು ಹೋಗಿದೆ...ಹಳಿ ತಪ್ಪಿ ಹೋಗಿದೆ...
  ನನಗೂ ಒಂದು ಹೊಸ ಬದುಕನ್ನು ಬದುಕಿ ನೋಡಬೇಕಿದೆ. ಬಹುಶಃ ಅದು ಕೂಡ ಇದೇ ಕಡಲಿನ ಕಾಣದ ಮತ್ತೊಂದು ತೀರವೋ ಏನೋ.. ಕಂಡಿದ್ದು, ಕಾಣದ್ದು ಎಂಬಷ್ಟೇ ವ್ಯತ್ಯಾಸವಾಗಿದ್ದರೂ ಪರವಾಗಿಲ್ಲ. ಇದೇ ಬದುಕಿನ ಇನ್ನೊಂದು ತೀರವಾದರೂ ಪರವಾಗಿಲ್ಲ, ಇನ್ನೊಮ್ಮೆ ಹೊಸ ಬದುಕು ಬದುಕಿಬಿಡುತ್ತೇನೆ ಎನಿಸಿಬಿಟ್ಟಿದೆ.
   ಹೀಗೆಲ್ಲ ಅಂದಾಗ ಒಳಗ್ಯಾರೋ ನಕ್ಕಂತೆ, ನಕ್ಕು ನುಡಿದಂತೆ, "ಈಗ ಅಂತ್ಯಗೊಳಿಸಬೇಕೆಂದು ಹೊರಟ ಜೀವನವೂ ಕೂಡ ಹಿಂದೊಮ್ಮೆ ಆಸೆಪಟ್ಟು ಆರಂಭಿಸಿದ ಹೊಸ ಜೀವನವೇ ಆಗಿತ್ತು. ಇಬ್ಬರ ಮೆಲ್ಲುಸಿರುಗಳು ಸೇರಿ ಹಾಡಿದ ಸವಿ ಗಾನಗಳೆಷ್ಟು? ಈಗಿನ ನಿಟ್ಟುಸಿರುಗಳೆಲ್ಲ ಅವುಗಳದೇ ಪಳೆಯುಳಿಕೆಗಳಿರಬೇಕು.ಆಗೆಲ್ಲ ಕೈ ಕೈ ಹಿಡಿದು, ಕೊಂಚ ಹೆಚ್ಚಾಗೇ ಮೈಗೆ ಮೈ ತಾಕುತ್ತ ನಡೆದ ಹೆಜ್ಜೆಗಳೆಷ್ಟು? ಮನಸಿನಲ್ಲೇ ಮಾಡಿದ ಪ್ರಮಾಣಗಳೆಷ್ಟು, ಕೊನೆಯುಸಿರಿನವರೆಗೂ ಹೀಗೇ ನಡೆಯುತ್ತೇವೆ ಬಾಳ ಹಾದಿಯಲ್ಲಿ ಎಂದು ಕಣ್ತುಂಬಿ ಕೈಹಿಡಿದು ನುಡಿದ ಮಾತುಗಳೆಷ್ಟು? ಆಣೆಗಳೆಷ್ಟು? ಈಗಿನ ಕಿತ್ತಾಟಗಳು, ಪ್ರತಿದಿನದ ಅಳು, ಕಿರುಚಾಟಗಳು, ಅವುಗಳದೇ ಅವಶೇಷಗಳಿರಬೇಕು.ಇಂದಿನ ಬದುಕು ಸುಂದರ ಶಿಲ್ಪವೊಂದು ಭಗ್ನವಾದಂತಾಗಿದೆ!" ಎಂದಂತೆ ಭಾಸವಾಗಿ, ಬದುಕನ್ನು ಬದಲಿಸಲು ಹೊರಡುವ ನಿರ್ಧಾರ ಕೊಂಚ ಸಡಿಲಗೊಳ್ಳುತ್ತದೆ. ನಾಳೆಯಿಂದ ನಸುಕಿಗೆ ಎದ್ದು ಓದಿಕೊಳ್ಳುತ್ತೇನೆ ಎಂದು ದಿನವೂ ನಿರ್ಧರಿಸುವ ವಿದ್ಯಾರ್ಥಿಯಂತಾಗಿ ಹೋಗುತ್ತೇನೆ ನಾನು. ಹೌದಾ? ಇನ್ನು ಈ ಬದುಕನ್ನು ಹೊಸದು ಮಾಡಿಕೊಳ್ಳುವುದು ಸಾಧ್ಯವೇ ಇಲ್ಲವಾ? ಇನ್ನೇನಿದ್ದರೂ ಕೇವಲ ರಿಪೇರಿಯಷ್ಟೇನಾ? ಎನಿಸಿ ಖಿನ್ನಳಾಗುತ್ತೇನೆ.
    ದಿನವೂ ಹೀಗೇ ಆಗಿದ್ದರೆ,ಜೀವನ ಇಷ್ಟೇ ಎಂದಾಗಿದ್ದರೆ, ನನ್ನವರೊಡನೆ ನಾನು ದಿನವೂ ಹೀಗೆ ಜಗಳವಾಡುತ್ತಲೇ ಇರುತ್ತಿದ್ದರೆ ಜೀವನ ನಿಜವಾಗಲೂ ನರಕವಾಗಿ ಹೋಗುತ್ತಿತ್ತು. ಆದರೂ ಕೆಲವೊಮ್ಮೆ ಅಪರೂಪಕ್ಕೆ ಹೀಗೆಲ್ಲ ಅನ್ನಿಸಿಬಿಡುವುದು ಸುಳ್ಳಲ್ಲ. ಎಷ್ಟೋ ಶತ ವರ್ಷಗಳಿಂದ ಇದೇ ಜೀವನವನ್ನು ಬದುಕುತ್ತಿದ್ದೆನೇನೋ ಎನಿಸಿ, ಜೀವನ ಅಸಹನೀಯ ಅಂತೆಲ್ಲ ಅನಿಸಿ ಹೋಗುತ್ತದೆ. ಆದರೆ ಯಾವ ದೇವರ ಪುಣ್ಯವೋ ಗೊತ್ತಿಲ್ಲ, ದಿನವೂ ಹೀಗನಿಸುವುದಿಲ್ಲ. ಅಳುಮುಖ ಮಾಡಿಕೊಂಡು ಮುದುಡಿ  ಕೂತಾಗಲೂ ಗೊತ್ತಿಲ್ಲದ ಯಾವುದೋ ಒಂದು ಶಕ್ತಿ ಅಲ್ಲಿಂದ ಎತ್ತಿಕೊಂಡು ಬಂದು 'ಈ ಬದುಕು ನಿನಗಾಗಿ ಕೊಟ್ಟಿದ್ದು, ಬದುಕಿಬಿಡು' ಎಂದು ಜೀವನಾಭಿಮುಖವಾಗಿ ನಿಲ್ಲಿಸಿಬಿಡುತ್ತದೆ. ಮತ್ತೆ ಖುಷಿ ಉಕ್ಕಿ ಹರಿಯತೊಡಗುತ್ತದೆ. ಮತ್ತೆ ಹಳೆಯ ಬದುಕೇ ಹೊಸದಾಗಿ ಕಾಣತೊಡಗುತ್ತದೆ.ತಪ್ಪುಗಳ ರಿಪೇರಿ ಕೂಡ ನವಿರಾಗಿ ನಡೆಯತೊಡಗುತ್ತದೆ. ಚಿಕ್ಕ ಚಿಕ್ಕ ಖುಷಿಗಳೆಲ್ಲ ಸೇರಿ ಒಂದು ದೊಡ್ಡ ಮೊತ್ತದ ಧನ್ಯತೆ ಹೊಮ್ಮುತ್ತದೆ ಹೃದಯದಾಳದಿಂದ.  ಇದು ಹುಚ್ಚು ಮನಸ್ಸಿನ ಸ್ವಭಾವವಾ? ಅಥವಾ ಅಶಕ್ತಳಾದಾಗ  ಬದುಕನ್ನು ನೀಡಿದ ಶಕ್ತಿಯೇ ಹೀಗೆ ಆಧಾರಕ್ಕೆ ನಿಂತು ಪೊರೆಯುತ್ತದಾ? ಗೊತ್ತಿಲ್ಲ. ಅಂತೂ ಹೀಗೆಲ್ಲ ಆಗಿ ಬದುಕು ಮತ್ತೆ ಮತ್ತೆ ಹಳಿ ತಪ್ಪುತ್ತದೆ, ಮತ್ತೆ ಮತ್ತೆ ಹದಕ್ಕೆ ಬರುತ್ತದೆ. ಆದರೂ ಬದುಕು ತುಂಬ ಸುಂದರವಾಗಿದೆ ಅಥವಾ ಆದ್ದರಿಂದಲೇ ಇಷ್ಟು ಸುಂದರವಾಗಿದೆ.

Friday, 16 July 2010

ಹೇಳು ನಾ ಕಾಯಲೇನು?

ಎಲ್ಲಾದರೂ ಆದೀತು,
ಆ ನದಿಯ ದಂಡೆಯಾದರೂ
ಈ ತೀರದ ಬಂಡೆಯಾದರೂ
ನೀನೆಲ್ಲಿರುವೆಯೆಂದು ಗೊತ್ತಿಲ್ಲದಿರುವಾಗ...

ಮನವ ಹೊತ್ತೊಯ್ಯಲ್ಲಿ 
ಅಪ್ಪಳಿಸಿದ ಅಲೆಗಳಿಂದು
ಗುರಿಯೇ  ಇಲ್ಲದಿರುವಾಗ
ನಾವಿಕನೇಕೆ? ನೌಕೆಯೇಕೆ?
ಹೋಗಿ ಸೇರಲಿ ಎಲ್ಲಾದರೂ
ಮನಸು ಮೈಮರೆಯುವಲ್ಲಿಗೆ

ಬಯಕೆಗಳ ಭಾರಕ್ಕೆ
ಬೆನ್ನು ಬಾಗಿರುವಾಗ 
ಪಯಣ ಮಾಡಬೇಕೆ
ಬವಣೆಗಳ ಇನ್ನೊಂದು ತೀರಕ್ಕೆ?

ನಿನ್ನ ಇರುವಿಕೆಯ ಸುಳಿವಿಲ್ಲ
ನನ್ನೊಳಗೆ 'ನಾನು' ತುಂಬಿರುವಾಗ
ಬರುವಿಕೆಯ ಕಾಯುತಿರುವೆನೆಂದು 
ಹೇಳಿರುವುದು ಸುಳ್ಳಾಗಿರುವಾಗ
ನೀ ಬರುವ ಸೂಚನೆಯೂ ಇಲ್ಲ

ಆದರೂ ಕಾಯಲೇನು?
ಕ್ಷಮಿಸಲಾದರೂ ಒಮ್ಮೆ ಬರುವೆಯೇನು?
ಕರುಣೆಯಿಂದಾದರೂ..
ಪ್ರೀತಿಯಿಂದಾದರೂ...
ಭಿಕ್ಷೆಯೆಂದಾದರೂ...
ದಾನವೆಂದಾದರೂ..

ಹೇಗಾದರೂ ಸರಿ...
ಒಂದು ಹಿಡಿ ಪ್ರೀತಿಯ
ಕೊಡುವೆಯೇನು?
ಹೇಳು, ಹೇಳು,
ನಾ ಕಾಯಲೇನು?