ಕಲ್ಲು ಮಂಟಪದೊಳಗೆ
ನನ್ನೊಡನೆ ಕುಳಿತೆದ್ದು ಬಂದಾಗ
ಪರಧ್ಯಾನದೊಳಿದ್ದೆಯ?
ಎಂದು ನೀ ಕೇಳದಿರುತ್ತಿದ್ದರೆ...
ನಾನು ನಿನ್ನ ಮಡದಿಯಾಗಿ
ನಿನ್ನದೇ ಮಗುವಿನ ತಾಯಾಗಿ
ನಿನ್ನೊಡನೆ ಚಿತೆಯಲ್ಲಿ ಮಲಗಿರುವ
ಕನಸು ಕಂಡೆನೆಂದು
ಹೇಳದೇ ಇರುತ್ತಿರಲಿಲ್ಲ...
ಗಳಿಗೆ ಮುಂಚೆ ಮುತ್ತುದುರಿದ
ತುಟಿಗಳಿಂದಲೇ ಮರುಗಳಿಗೆ
ಕನಸೊಡೆಯುವ
ಮಾತುದುರಬಹುದೆಂದು
ಗೊತ್ತಾಗದೆ ಹೋಗಿದ್ದರೆ...
ನಿದಿರೆಯ ತುಂಬೆಲ್ಲ
ನಿನ್ನ ಲಾಲಿ ತುಂಬಿಕೊಂಡು
ಎದೆಗೂಡ ತುಂಬೆಲ್ಲ
ನಿನ್ನುಸಿರು ತುಂಬಿಕೊಂಡು
ಕಣ್ಣ ರೆಪ್ಪೆ ಮಿಟುಕಿಸದೆ
ಕಾದು ಕೂತುಬಿಡುತ್ತಿದ್ದೆನಲ್ಲೋ ಹುಡುಗ...
ಆದರೂ..
ಹಾಗಾಗದೇ ಇದ್ದಿದ್ದರೆ...
ನನಗೆ ಏನೇನೂ ತಿಳಿಯದೆ ಇದ್ದಿದ್ದರೆ
ತುಂಬ ಒಳ್ಳೆಯದಿತ್ತು
ಎಂದು ಕಣ್ಣು ಕಡಲಾಗಿಸುವ
ಹುಡುಗಿಗೆ..
ಕಡಲಿನಾಳದಂತಹ
ಅವಳ ಪ್ರಶಾಂತ ಪ್ರೇಮಕ್ಕೆ...
ಬುದ್ಧಿ ಎಂದಿಗೂ ಸವಾರಿ
ಮಾಡಲು ಸಾಧ್ಯವಿಲ್ಲದಂತಹ
ಅವಳ ಹೃದಯಕ್ಕೆ...
ಕರುಣೆ ಬೇಡವೆನ್ನುವ ಅವಳ
ಸ್ವಾಭಿಮಾನಕ್ಕೆ...
ನನ್ನಿಂದ ಏನೆಂದರೆ ಏನೂ
ಕೊಡಲಾಗದು..
ಆದರೂ ಮನ ಬಯಸುತ್ತದೆ
'ಹಾಗಾಗದೇ ಇದ್ದಿದ್ದರೆ..'
2 comments:
Tumba sundara vada baravanige.. bhavaneyannu kavana roopadalli chennagi hidididdiri.
please visit
www.vanishrihs.blogspot.com
ಮನಸ್ಸಿನನ ಭಾವನದ ಲೋಲುಕದಲ್ಲಿ ಸದಾ ಅತ್ತಿತ್ತ ತಿರುಗಿಸುವ "ಹಾಗಾಗದೇ ಇದ್ದಿದ್ದರೇ" ಎ೦ಬ ಪ್ರಶ್ನೆಯ ಸುತ್ತದ ಕವನ ತು೦ಬಾ ಆಪ್ತವಾಗಿದೆ. ಅದರೇ ನಾವು ಕೊರುತ್ತಿರುವದೇನೆ೦ದರೇ " ಉಳಿಯದಿರಲಿ ಹೆಜ್ಜೆ ಗುರುತು -ಲೋಲಕದ ಹಾದಿ".
Post a Comment