Saturday, 31 July 2010

ಆಗಾಗ ಹೊಸತಾಗುವ ಹಳೇ ಬದುಕು...


   ನಿನ್ನ ಅಹಂಕಾರವನ್ನುಬ್ಬಿಸುತ್ತ, ನಿನ್ನ ಹಿಂದೆ ಹಿಂದೆ ಅಲೆಯುತ್ತ, ನಮ್ಮ ಮಧ್ಯೆ ಇಲ್ಲದ ಪ್ರೀತಿಯನ್ನು ಪ್ರದರ್ಶಿಸಲು ಹೋಗಿ, ಪ್ರೀತಿಯ ಶವವನ್ನು ಇಟ್ಟುಕೊಂಡು ಬದುಕುತ್ತಿದ್ದೇವೆಂದು ಬುದ್ಧಿಯಿದ್ದವರಿಗೆ ಗೊತ್ತಾಗಿ,ಆಗ ನನಗೆ ಅವಮಾನವಾಗಿ, ಆ ಅವಮಾನ ಸಹಿಸಿಕೊಳ್ಳಲೇಬೇಕಾದಾಗೆಲ್ಲ ಮುಖ ಬಾಡಿಸಿಕೊಂಡು ಮನೆಗೆ ಅಂದರೆ ಪುನಃ ನೀನಿದ್ದಲ್ಲಿಗೆ ಬರುವುದು, ಮತ್ತೆ ನಿನ್ನೊಂದಿಗೆ ಜಗಳವಾಡುತ್ತಾ ಅಡುಗೆ ಮಾಡುವುದು, ಸಿಟ್ಟಿನಿಂದ ಬೇಯಿಸಿದ್ದನ್ನೇ ಉಂಡು, ಇದರಿಂದೆಲ್ಲ ಮುಕ್ತಿ ಯಾವಾಗಪ್ಪ ಎಂದುಕೊಳ್ಳುತ್ತ ಮಲಗಿದಲ್ಲೇ ಧಾರಾಕಾರ ಕಣ್ಣೀರು ಹರಿದು, ಮೂಗಿನಿಂದಲೂ  ಒಂದಷ್ಟು ಸುರಿದು, ಸೊರಗುಡುತ್ತ, ಒರೆಸಿಕೊಳ್ಳುತ್ತಾ, ನಿದ್ರಿಸಿ, ಕನಸು ಕಂಡು, ಬೆಳಗೂ ಆಗಿ ಬಿಡುತ್ತದೆ. ಮತ್ತೆ ಇವೆಲ್ಲವುಗಳ ಪುನರಾವರ್ತನೆಯ ಹೊಸ ಆರಂಭ..ಮತ್ತದೇ ಹಳೆಯ ಅಂತ್ಯಕ್ಕೆ ಹೊಸ ನಾಂದಿ.. ಥೂ... ಜೀವನ ಗಬ್ಬೆದ್ದು ಹೋಗಿದೆ...ಹಳಿ ತಪ್ಪಿ ಹೋಗಿದೆ...
  ನನಗೂ ಒಂದು ಹೊಸ ಬದುಕನ್ನು ಬದುಕಿ ನೋಡಬೇಕಿದೆ. ಬಹುಶಃ ಅದು ಕೂಡ ಇದೇ ಕಡಲಿನ ಕಾಣದ ಮತ್ತೊಂದು ತೀರವೋ ಏನೋ.. ಕಂಡಿದ್ದು, ಕಾಣದ್ದು ಎಂಬಷ್ಟೇ ವ್ಯತ್ಯಾಸವಾಗಿದ್ದರೂ ಪರವಾಗಿಲ್ಲ. ಇದೇ ಬದುಕಿನ ಇನ್ನೊಂದು ತೀರವಾದರೂ ಪರವಾಗಿಲ್ಲ, ಇನ್ನೊಮ್ಮೆ ಹೊಸ ಬದುಕು ಬದುಕಿಬಿಡುತ್ತೇನೆ ಎನಿಸಿಬಿಟ್ಟಿದೆ.
   ಹೀಗೆಲ್ಲ ಅಂದಾಗ ಒಳಗ್ಯಾರೋ ನಕ್ಕಂತೆ, ನಕ್ಕು ನುಡಿದಂತೆ, "ಈಗ ಅಂತ್ಯಗೊಳಿಸಬೇಕೆಂದು ಹೊರಟ ಜೀವನವೂ ಕೂಡ ಹಿಂದೊಮ್ಮೆ ಆಸೆಪಟ್ಟು ಆರಂಭಿಸಿದ ಹೊಸ ಜೀವನವೇ ಆಗಿತ್ತು. ಇಬ್ಬರ ಮೆಲ್ಲುಸಿರುಗಳು ಸೇರಿ ಹಾಡಿದ ಸವಿ ಗಾನಗಳೆಷ್ಟು? ಈಗಿನ ನಿಟ್ಟುಸಿರುಗಳೆಲ್ಲ ಅವುಗಳದೇ ಪಳೆಯುಳಿಕೆಗಳಿರಬೇಕು.ಆಗೆಲ್ಲ ಕೈ ಕೈ ಹಿಡಿದು, ಕೊಂಚ ಹೆಚ್ಚಾಗೇ ಮೈಗೆ ಮೈ ತಾಕುತ್ತ ನಡೆದ ಹೆಜ್ಜೆಗಳೆಷ್ಟು? ಮನಸಿನಲ್ಲೇ ಮಾಡಿದ ಪ್ರಮಾಣಗಳೆಷ್ಟು, ಕೊನೆಯುಸಿರಿನವರೆಗೂ ಹೀಗೇ ನಡೆಯುತ್ತೇವೆ ಬಾಳ ಹಾದಿಯಲ್ಲಿ ಎಂದು ಕಣ್ತುಂಬಿ ಕೈಹಿಡಿದು ನುಡಿದ ಮಾತುಗಳೆಷ್ಟು? ಆಣೆಗಳೆಷ್ಟು? ಈಗಿನ ಕಿತ್ತಾಟಗಳು, ಪ್ರತಿದಿನದ ಅಳು, ಕಿರುಚಾಟಗಳು, ಅವುಗಳದೇ ಅವಶೇಷಗಳಿರಬೇಕು.ಇಂದಿನ ಬದುಕು ಸುಂದರ ಶಿಲ್ಪವೊಂದು ಭಗ್ನವಾದಂತಾಗಿದೆ!" ಎಂದಂತೆ ಭಾಸವಾಗಿ, ಬದುಕನ್ನು ಬದಲಿಸಲು ಹೊರಡುವ ನಿರ್ಧಾರ ಕೊಂಚ ಸಡಿಲಗೊಳ್ಳುತ್ತದೆ. ನಾಳೆಯಿಂದ ನಸುಕಿಗೆ ಎದ್ದು ಓದಿಕೊಳ್ಳುತ್ತೇನೆ ಎಂದು ದಿನವೂ ನಿರ್ಧರಿಸುವ ವಿದ್ಯಾರ್ಥಿಯಂತಾಗಿ ಹೋಗುತ್ತೇನೆ ನಾನು. ಹೌದಾ? ಇನ್ನು ಈ ಬದುಕನ್ನು ಹೊಸದು ಮಾಡಿಕೊಳ್ಳುವುದು ಸಾಧ್ಯವೇ ಇಲ್ಲವಾ? ಇನ್ನೇನಿದ್ದರೂ ಕೇವಲ ರಿಪೇರಿಯಷ್ಟೇನಾ? ಎನಿಸಿ ಖಿನ್ನಳಾಗುತ್ತೇನೆ.
    ದಿನವೂ ಹೀಗೇ ಆಗಿದ್ದರೆ,ಜೀವನ ಇಷ್ಟೇ ಎಂದಾಗಿದ್ದರೆ, ನನ್ನವರೊಡನೆ ನಾನು ದಿನವೂ ಹೀಗೆ ಜಗಳವಾಡುತ್ತಲೇ ಇರುತ್ತಿದ್ದರೆ ಜೀವನ ನಿಜವಾಗಲೂ ನರಕವಾಗಿ ಹೋಗುತ್ತಿತ್ತು. ಆದರೂ ಕೆಲವೊಮ್ಮೆ ಅಪರೂಪಕ್ಕೆ ಹೀಗೆಲ್ಲ ಅನ್ನಿಸಿಬಿಡುವುದು ಸುಳ್ಳಲ್ಲ. ಎಷ್ಟೋ ಶತ ವರ್ಷಗಳಿಂದ ಇದೇ ಜೀವನವನ್ನು ಬದುಕುತ್ತಿದ್ದೆನೇನೋ ಎನಿಸಿ, ಜೀವನ ಅಸಹನೀಯ ಅಂತೆಲ್ಲ ಅನಿಸಿ ಹೋಗುತ್ತದೆ. ಆದರೆ ಯಾವ ದೇವರ ಪುಣ್ಯವೋ ಗೊತ್ತಿಲ್ಲ, ದಿನವೂ ಹೀಗನಿಸುವುದಿಲ್ಲ. ಅಳುಮುಖ ಮಾಡಿಕೊಂಡು ಮುದುಡಿ  ಕೂತಾಗಲೂ ಗೊತ್ತಿಲ್ಲದ ಯಾವುದೋ ಒಂದು ಶಕ್ತಿ ಅಲ್ಲಿಂದ ಎತ್ತಿಕೊಂಡು ಬಂದು 'ಈ ಬದುಕು ನಿನಗಾಗಿ ಕೊಟ್ಟಿದ್ದು, ಬದುಕಿಬಿಡು' ಎಂದು ಜೀವನಾಭಿಮುಖವಾಗಿ ನಿಲ್ಲಿಸಿಬಿಡುತ್ತದೆ. ಮತ್ತೆ ಖುಷಿ ಉಕ್ಕಿ ಹರಿಯತೊಡಗುತ್ತದೆ. ಮತ್ತೆ ಹಳೆಯ ಬದುಕೇ ಹೊಸದಾಗಿ ಕಾಣತೊಡಗುತ್ತದೆ.ತಪ್ಪುಗಳ ರಿಪೇರಿ ಕೂಡ ನವಿರಾಗಿ ನಡೆಯತೊಡಗುತ್ತದೆ. ಚಿಕ್ಕ ಚಿಕ್ಕ ಖುಷಿಗಳೆಲ್ಲ ಸೇರಿ ಒಂದು ದೊಡ್ಡ ಮೊತ್ತದ ಧನ್ಯತೆ ಹೊಮ್ಮುತ್ತದೆ ಹೃದಯದಾಳದಿಂದ.  ಇದು ಹುಚ್ಚು ಮನಸ್ಸಿನ ಸ್ವಭಾವವಾ? ಅಥವಾ ಅಶಕ್ತಳಾದಾಗ  ಬದುಕನ್ನು ನೀಡಿದ ಶಕ್ತಿಯೇ ಹೀಗೆ ಆಧಾರಕ್ಕೆ ನಿಂತು ಪೊರೆಯುತ್ತದಾ? ಗೊತ್ತಿಲ್ಲ. ಅಂತೂ ಹೀಗೆಲ್ಲ ಆಗಿ ಬದುಕು ಮತ್ತೆ ಮತ್ತೆ ಹಳಿ ತಪ್ಪುತ್ತದೆ, ಮತ್ತೆ ಮತ್ತೆ ಹದಕ್ಕೆ ಬರುತ್ತದೆ. ಆದರೂ ಬದುಕು ತುಂಬ ಸುಂದರವಾಗಿದೆ ಅಥವಾ ಆದ್ದರಿಂದಲೇ ಇಷ್ಟು ಸುಂದರವಾಗಿದೆ.

Friday, 16 July 2010

ಹೇಳು ನಾ ಕಾಯಲೇನು?

ಎಲ್ಲಾದರೂ ಆದೀತು,
ಆ ನದಿಯ ದಂಡೆಯಾದರೂ
ಈ ತೀರದ ಬಂಡೆಯಾದರೂ
ನೀನೆಲ್ಲಿರುವೆಯೆಂದು ಗೊತ್ತಿಲ್ಲದಿರುವಾಗ...

ಮನವ ಹೊತ್ತೊಯ್ಯಲ್ಲಿ 
ಅಪ್ಪಳಿಸಿದ ಅಲೆಗಳಿಂದು
ಗುರಿಯೇ  ಇಲ್ಲದಿರುವಾಗ
ನಾವಿಕನೇಕೆ? ನೌಕೆಯೇಕೆ?
ಹೋಗಿ ಸೇರಲಿ ಎಲ್ಲಾದರೂ
ಮನಸು ಮೈಮರೆಯುವಲ್ಲಿಗೆ

ಬಯಕೆಗಳ ಭಾರಕ್ಕೆ
ಬೆನ್ನು ಬಾಗಿರುವಾಗ 
ಪಯಣ ಮಾಡಬೇಕೆ
ಬವಣೆಗಳ ಇನ್ನೊಂದು ತೀರಕ್ಕೆ?

ನಿನ್ನ ಇರುವಿಕೆಯ ಸುಳಿವಿಲ್ಲ
ನನ್ನೊಳಗೆ 'ನಾನು' ತುಂಬಿರುವಾಗ
ಬರುವಿಕೆಯ ಕಾಯುತಿರುವೆನೆಂದು 
ಹೇಳಿರುವುದು ಸುಳ್ಳಾಗಿರುವಾಗ
ನೀ ಬರುವ ಸೂಚನೆಯೂ ಇಲ್ಲ

ಆದರೂ ಕಾಯಲೇನು?
ಕ್ಷಮಿಸಲಾದರೂ ಒಮ್ಮೆ ಬರುವೆಯೇನು?
ಕರುಣೆಯಿಂದಾದರೂ..
ಪ್ರೀತಿಯಿಂದಾದರೂ...
ಭಿಕ್ಷೆಯೆಂದಾದರೂ...
ದಾನವೆಂದಾದರೂ..

ಹೇಗಾದರೂ ಸರಿ...
ಒಂದು ಹಿಡಿ ಪ್ರೀತಿಯ
ಕೊಡುವೆಯೇನು?
ಹೇಳು, ಹೇಳು,
ನಾ ಕಾಯಲೇನು?

Friday, 18 June 2010

ಮತ್ತೆ ಕಡಲಿಗೆ ಮರಳಬೇಕು ...



ಕಡಲ ದಂಡೆಗೆ ಮರಳಿ..
ಮರಳಿನಾಟವ ಆಡಿ...
ಮತ್ತೆ ಕಡಲಿಗೆ ಮರಳಬೇಕು ...

ಮರಳ ಮನೆಯನು ಕಟ್ಟಿ
ಮೋಹದಲಿ ಮರುಳಾಗಿ
ನನ್ನದೆನ್ನುತ ಬೀಗಿ
ಕಳೆದುಕೊಂಡು ಮತ್ತೆ
ಮರುಗುವೆನು ಮರುಳನಂತೆ

ಕಡಲೊಳಗೆ  ಕಳೆದೊಡನೆ 
ದಂಡೆಯಲಿ ಹುಡುಕುವೆನು
ಸಿಗದೇ ಒದ್ದಾಡುವೆನು
ಹುಡುಕುತಲಿ ಕಳೆದದ್ದೇ
ಮರೆಯುವೆನು

ಆಟವಾಡಲು ಬಂದು
ಆಟವನೆ ಮರೆತು
ದಂಡೆಯಲೇ ಕಾಲೂರಿ 
ಮರಳಲೊಲ್ಲೇನೆಂದು 
ಕಣ್ಣೀರು ಕರೆವಾಗ

ಮೇಲೆ ನಿಂತವನು
ನೋಡಿ ನಸುನಕ್ಕನಂತೆ !!!!

ಹೌದು ಮರೆತಿದ್ದೆ,
ಕಡಲ ದಂಡೆಗೆ ಮರಳಿ..
ಮರಳಿನಾಟವ ಆಡಿ...
ಮತ್ತೆ ಕಡಲಿಗೆ ಮರಳಬೇಕು ...

Thursday, 17 June 2010

ಕಾರಣವೇನು?

ಅವನೊಡನೆ ಹೋಗಬೇಡವೆಂದ
ತಾಯ್ತಂದೆಯ ಕಾಳಜಿ
ಕಟ್ಟಳೆಯಂತೆ
ಅವರು ಒರೆಸಿಕೊಂಡ ಕಣ್ಣೀರು
ನಾಟಕದಂತೆ
ತೋರಿದ  ಹುಡುಗಿಗೆ,

ಹಳೆಯ ಗೆಳೆಯರೊಂದಿಗೆ
ಮಾತನಾಡಬೇಡವೆಂದು
ಸಿಡುಕಿದ ಪ್ರೇಮಿಯ
ಕಟ್ಟಳೆಗಳು
ಉತ್ಕಟ ಪ್ರೇಮವೆಂದು
ಭಾಸವಾದರೆ...

ಅದಕ್ಕೆ ಕಾರಣ
ವಯಸ್ಸೋ?
ಪ್ರೇಮವೋ?

Saturday, 12 June 2010

ಹೊಟ್ಟೆ ತುಂಬಿದ ಮೇಲೆ...

ಪ್ರೀತಿ ಪ್ರೆಮವೆಲ್ಲ
ಹೊಟ್ಟೆ ತುಂಬಿದ ಮೇಲೆ...
ಬಯಕೆ ತೀರಿದವರಿಗೆ
ಬದುಕು ಭಗವಂತನ ಲೀಲೆ...

ಮಣ್ಣಾದರೂ ಅನ್ನವಾಗಲೆಂದು
ಕನಸು ಕಾಣುವಾಗ,
ನಿನ್ನ ಹಸಿವೆಲ್ಲ ಕನಸು
ಈ ಜಗವೊಂದು ಮಾಯೆ
ಎಂದರೆ ಕೇಳಲಾಗುವುದೇ?

ಹಾಲು ಬತ್ತಿದೆದೆಯನು ತೆರೆದು
ಹಸಿದ ಕೂಸಿನ ಬಾಯಿಗಿಡುವಾಗ
ಹೊನ್ನು ಕಾಣದ ಕಣ್ಣು
ನೀರು ಬತ್ತಿದ ಕೂಸಿನ ಕಣ್ಣಲ್ಲಿ 
ಹೊಂಬೆಳಕ ಕಂಡಾಗ
ಹೊನ್ನೆಲ್ಲ ಮಣ್ಣು
ಎಂದರೆ ನಂಬಲಾಗುವುದೇ?


ಬಿಟ್ಟು ಹೋಗಲು ಏನೂ 
ಇಲ್ಲದವನಿಗೆ 
ಎಲ್ಲ ಬಿಟ್ಟು ಹೋಗಿ ಬುದ್ಧನಾಗು
ಎಂದರೆ ಬಿಡುವುದಾದರೂ ಏನನ್ನು?
ಬಿಡಲಾದರೂ ಕೂಡಿಸಬೇಕಲ್ಲ
ಎನಿಸದೇ ಇದ್ದೀತೆ?

Wednesday, 19 May 2010

ಹಾಗಾಗದೇ ಇದ್ದಿದ್ದರೆ..


ಕಲ್ಲು ಮಂಟಪದೊಳಗೆ
ನನ್ನೊಡನೆ ಕುಳಿತೆದ್ದು ಬಂದಾಗ
ಪರಧ್ಯಾನದೊಳಿದ್ದೆಯ?
ಎಂದು ನೀ ಕೇಳದಿರುತ್ತಿದ್ದರೆ...

ನಾನು ನಿನ್ನ ಮಡದಿಯಾಗಿ
ನಿನ್ನದೇ ಮಗುವಿನ ತಾಯಾಗಿ
ನಿನ್ನೊಡನೆ ಚಿತೆಯಲ್ಲಿ ಮಲಗಿರುವ
ಕನಸು ಕಂಡೆನೆಂದು 
ಹೇಳದೇ ಇರುತ್ತಿರಲಿಲ್ಲ...

ಗಳಿಗೆ ಮುಂಚೆ ಮುತ್ತುದುರಿದ
ತುಟಿಗಳಿಂದಲೇ ಮರುಗಳಿಗೆ 
ಕನಸೊಡೆಯುವ
ಮಾತುದುರಬಹುದೆಂದು 
ಗೊತ್ತಾಗದೆ ಹೋಗಿದ್ದರೆ...

ನಿದಿರೆಯ ತುಂಬೆಲ್ಲ
ನಿನ್ನ ಲಾಲಿ ತುಂಬಿಕೊಂಡು
ಎದೆಗೂಡ ತುಂಬೆಲ್ಲ 
ನಿನ್ನುಸಿರು ತುಂಬಿಕೊಂಡು
ಕಣ್ಣ ರೆಪ್ಪೆ ಮಿಟುಕಿಸದೆ 
ಕಾದು ಕೂತುಬಿಡುತ್ತಿದ್ದೆನಲ್ಲೋ ಹುಡುಗ...

ಆದರೂ..
ಹಾಗಾಗದೇ ಇದ್ದಿದ್ದರೆ...
ನನಗೆ ಏನೇನೂ ತಿಳಿಯದೆ ಇದ್ದಿದ್ದರೆ
ತುಂಬ ಒಳ್ಳೆಯದಿತ್ತು
ಎಂದು ಕಣ್ಣು ಕಡಲಾಗಿಸುವ
ಹುಡುಗಿಗೆ..

ಕಡಲಿನಾಳದಂತಹ 
ಅವಳ ಪ್ರಶಾಂತ ಪ್ರೇಮಕ್ಕೆ...
ಬುದ್ಧಿ ಎಂದಿಗೂ ಸವಾರಿ
ಮಾಡಲು ಸಾಧ್ಯವಿಲ್ಲದಂತಹ 
ಅವಳ ಹೃದಯಕ್ಕೆ...
ಕರುಣೆ ಬೇಡವೆನ್ನುವ ಅವಳ 
ಸ್ವಾಭಿಮಾನಕ್ಕೆ...

ನನ್ನಿಂದ ಏನೆಂದರೆ ಏನೂ 
ಕೊಡಲಾಗದು..
ಆದರೂ ಮನ ಬಯಸುತ್ತದೆ
'ಹಾಗಾಗದೇ ಇದ್ದಿದ್ದರೆ..'

Friday, 7 May 2010

ಹೇಗೆ ಹೇಳಲಿ ನಿನಗೆ?



ಸಾಗರದ ನಡುವೆ

ದೋಣಿಯ ತುದಿಗೆ ನಿಂತು

ಸಹಾಯ ಕೇಳುವಾಗ

ನೀ ಬಂದು,

ಸಖ್ಯ ಸುಖ ತಿಳಿಯಿತೆ?

ಎಂದು ಪಿಸುನುಡಿದರೆ

ಏನುತ್ತರಿಸಲಿ ನಿನಗೆ?



ನಿನ್ನನ್ನು ರಸಿಕನೆನ್ನಲೋ?

ಮೂರ್ಖನೆನ್ನಲೋ?



ನಾ ನಿನ್ನ ತಬ್ಬಿ ಅತ್ತಿದ್ದು

ಪ್ರೀತಿಗಲ್ಲ, ಭಯಕ್ಕೆ

ನಾನಂದು ನಕ್ಕಿದ್ದು

ನಿನ್ನ ಕಂಡ ಖುಷಿಗಲ್ಲ

ನನ್ನ ದುಃಖ ಮರಯಲಿಕ್ಕೆ

ಎಂದು ಹೇಳುವುದು

ಹೇಗೆ ನಿನಗೆ?


ಬಾಯ್ಬಿಟ್ಟು ನಾ ಸ್ವಾರ್ಥಿ

ಎನ್ನಲಾಗದೆ ತಳಮಳಿಸುತ್ತಿರುವಾಗ

ಹಸಿವಾಯಿತೆ? ಎಂದು ತುತ್ತಿಡಲು ಬಂದರೆ

ಏನೆನ್ನಲಿ ನಿನಗೆ?


ಬದುಕಿನಂಗಳದ ತುಂಬ

ನನ್ನದೇ ಬಿಂಬ

ತುಂಬಿಕೊಳ್ಳಬಯಸುವ ನೀನು

ನನ್ನ ಅಂಗಳದ ತರಗೆಲೆಯಂತೆ

ನನಗೆ ಕಂಡಾಗ

ಹೇಳುವುದು ಹೇಗೆ ನಿನಗೆ?