Thursday, 29 October, 2009

ಭಯಪಡುವರೇನು ಬಲ್ಲರು ಭರವಸೆಯ ಸುಖವ?
ದಟ್ಟ ಕಾನನದ ನಡುವೆಯೂ
ತೆರೆಯುವುದು ಕಾಲು ದಾರಿ ನನಗಾಗಿ.
ಹೆದ್ದಾರಿಯಲಿ ನಡೆವರೇನು ಬಲ್ಲರು
ಕಾಲು ದಾರಿಯಲಿ ಜಿಗಿವ ಸುಖವ?

ಆಸರೆಯಿಲ್ಲದೆಯೇ ಹಾಯಾಗಿ
ನಿಲ್ಲುವುದು ಸೇತುವೆ ನನಗಾಗಿ.
ಭಯಪಡುವವರೇನು ಬಲ್ಲರು
ಭರವಸೆಯ ಸುಖವ?

ಕಡುಗಪ್ಪನೆಯ ರಾತ್ರಿಯಲ್ಲೂ
ಬಾನ ಬೆಳಕೊಂದು ಮಿನುಗುವುದು ನನಗಾಗಿ
ಇರುಳಿಗಂಜಿ  ಕಣ್ಮುಚ್ಚಿದವರೇನು ಬಲ್ಲರು
ಕತ್ತಲು ಸುರಿವ ಸುಖವ?

ಅಲೆಗಳು ಕೂಡ ಕುಣಿಕುಣಿದು
ಬಂದು ಅಪ್ಪಿ ಮುದ್ದಾಡುವವು ನನ್ನ
ದೂರ ದಡದಲಿ ನಿಂತವರೇನು ಬಲ್ಲರು
ಅಲೆಗಳಪ್ಪುವ ಸುಖವ?

ಸುಳಿಗೆ ಸಿಲುಕಿ ಮುಳುಗಿದರೂ
ನಾನಿರುವಲ್ಲಿಗೆ ಬರುವುದು.
ಸೂರ್ಯರಶ್ಮಿ ಎಳೆಯಾಗಿ
ಕರೆತರಲು ನನ್ನ ಕಡಲಾಳದಿಂದ.


ಭಯಪಡುವರೇನು ಬಲ್ಲರು
ಭರವಸೆಯ ಸುಖವ?
 Wednesday, 28 October, 2009

ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ....
"ಅಮ್ಮಾ....
ಮನುಷ್ಯರ ಥರಹ ನಮಗೇಕೆ ಕೈಗಳಿಲ್ಲ?"
ಗೂಡು ಹೆಣೆಯುತ್ತಿರುವ ಅಮ್ಮನನ್ನು ಕೇಳಿತು ಮರಿ ಹಕ್ಕಿ.
ತಾಯಿ ಹಕ್ಕಿಗೆ ದಿಗಿಲಾಯಿತು. ಮರಿ ಮನುಷ್ಯರ ಹಾಗೆ ಬಯಕೆಗಳ ಹಿಂದೆ ಬೀಳುವುದೇನೋ ಎಂದು.
ತಾಯಿ ಹಕ್ಕಿ ಹೇಳಿತು, " ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಏನೇನು ಬೇಕೋ ಅದನ್ನ ನಿಸರ್ಗ ನಮಗೆ ಕೊಟ್ಟಿದೆ ಮಗು.ಇಲ್ಲದ್ದನ್ನು ಬಯಸುವುದು, ಇದ್ದಿದ್ದನ್ನು ಮರೆಯುವುದು ಮನುಷ್ಯರ ಕರ್ಮ.ಅವರ ಬಯಕೆಗಳು ಎಂದಿಗೂ ಮುಗಿಯುವುದೇ ಇಲ್ಲ. ಕೊಟ್ಟ ಕೈಗಳನ್ನು ಅವರು ಉಣ್ಣಲು, ದುಡಿಯಲು ಮಾತ್ರ ಬಳಸುವುದಿಲ್ಲ, ಕೊಲ್ಲಲು, ಕಡಿಯಲು ಕೂಡ ಬಳಸುತ್ತಾರೆ.ಅವರಂತೆ ನಾವು ಆಗದಿರಲೆಂದು ದೇವರು ನಮಗೆ ಕೈ ಕೊಟ್ಟಿಲ್ಲ."

ಆದರೂ ಮರಿ ಹಕ್ಕಿಗೆ ಸಮಾಧಾನವಾಗಲಿಲ್ಲ.ನಮಗೂ ಕೈ ಬೇಕಾಗಿತ್ತು ಎನಿಸಿತು.ನಾವು ಅವರಂತೆ ಕೆಟ್ಟ ಉದ್ದೇಶಕ್ಕೆ ಬಳಸುತ್ತಿರಲಿಲ್ಲ ಎನಿಸಿತು. ಮರಿಯ ಮುಖದ ತುಂಬಾ ಅಸಮಾಧಾನ. ತಾಯಿ ಹಕ್ಕಿ ಗಮನಿಸದಿರಲಿಲ್ಲ.ಅದಕ್ಕೆ ಗೊತ್ತು, ನಿಸರ್ಗ ತಮಗೆ ಕೊಟ್ಟ ಅದ್ಭುತ ದೇಹದ ಬಗ್ಗೆಯಾಗಲಿ, ಸೌಕರ್ಯದ ಬಗ್ಗೆಯಾಗಲಿ, ಅಸಂತೃಪ್ತಿ ವ್ಯಕ್ತಗೊಂಡರೆ ವಿನಾಶ ಕಾಲ ಹತ್ತಿರ ಬಂದಂತೆ ಎಂದು. ಬುದ್ಧಿ ಹೆಳೋಣವೆಂದರೆ ಅಂಥಹ ಅತೃಪ್ತ ಮನಸ್ಸು ಯಾರ ಬುಧ್ಧಿವಾದವನ್ನೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರುವುದಿಲ್ಲ ಎಂದು ಕೂಡ ಅದಕ್ಕೆ ತಿಳಿದಿತ್ತು. ಆದರೂ ತನ್ನದೇ ಮರಿಯನ್ನು ತಿದ್ದದಿರಲಾದೀತೆ?
ಅಂದು ಇಡೀ ರಾತ್ರಿ ಮರಿಗೆ ನಿದ್ದೆಯೇ ಇಲ್ಲ.ಹಾಗೆಯೇ ಅಲ್ಲವೇ, ಬಯಕೆಯ ಹುಚ್ಚು ಹತ್ತಿದ ಮನಸ್ಸು ತನಗೆ ಸಿಕ್ಕಿದ ಯಾವ ಸುಖವನ್ನೂ ಪರಿಗಣಿಸುವುದೇ ಇಲ್ಲ. ಮರಿಗೆ ತನ್ನ ಮೆತ್ತನೆಯ ಹಾಸಿಗೆ, ಬೆಚ್ಚನೆಯ ತಾಯ್ಮಡಿಲು ಯಾವುದನ್ನೂ ಅನುಭವಿಸಲಾಗಲೇ ಇಲ್ಲ ಅಂದು ರಾತ್ರಿ.ತಾಯಿ ಹಕ್ಕಿ ನೋಡುತ್ತಲೇ ಇತ್ತು. ಸಮಯ ಪಕ್ವವಾಗಲೆಂದು ಕಾಯುತ್ತಿತ್ತು.

ಸಿಗದೇ ಇರುವುದನ್ನು ಬಯಸುತ್ತ ಕಳೆದುಕೊಂಡ ಕ್ಷಣಗಳು ಮತ್ತೆ ಮರಳಿ ಬರುವುದಿಲ್ಲವೆಂಬುದನ್ನು ತಾಯಿ ಹಕ್ಕಿ ಮಗುವಿಗೆ ತಿಳಿಸಬಯಸಿತ್ತು. ಆದರೆ ಮರಿಗೆ ತಾಯಿ ಹಕ್ಕಿ ಪ್ರಯತ್ನಪಡದೆ ಕುಳಿತ ಸೋಮಾರಿಯಂತೆ ಕಾಣುತ್ತಿತ್ತು. ಸಹಜವೇ ಅಲ್ಲವೇ? ಬಿಸಿ ರಕ್ತಕ್ಕೆ ಅನುಭವದ ಮಾತುಗಳು ಅರ್ಥಹೀನವಾಗಿ ಕಾಣುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೂ ಅಮ್ಮಂದಿರು ಹಾಗೆಲ್ಲ ಸುಲಭವಾಗಿ ಬಿಡುವುದಿಲ್ಲವಲ್ಲ.
ತಾಯಿ ಹಕ್ಕಿ ನಿರ್ಧರಿಸಿತು. ಹೇಗಾದರೂ ಮಾಡಿ ಮರಿಗೆ ಬಯಕೆ ಮತ್ತು ಅಗತ್ಯಕ್ಕೆ ಇರುವ ವ್ಯತ್ಯಾಸವನ್ನು ತಿಳಿಸಬೇಕು ಮತ್ತು ಅವಶ್ಯಕತೆಗಳು ಪೂರೈಸಿದ ಮೇಲೆ ತನ್ನ ಅಂತರಂಗದ ಕರೆಗೆ ಓಗೊಡಬೇಕು ಎಂದು. ಅವುಗಳನ್ನೇ ಜೀವನದ ಗುರಿಯಾಗಿಸಿಕೊಂಡು ಹಿಂದೆ ಬಿದ್ದವರ ಬದುಕು ಅಟ್ಟ ಹತ್ತಲು ಹೋಗಿ ಏಣಿಯ ಮೋಹಕ್ಕೆ ಬಿದ್ದವನಂತಾಗುತ್ತದೆ ಎಂದೆಲ್ಲ ಹೇಳಬಯಸಿತು ತಾಯಿ ಮನಸ್ಸು. ಆದರೆ ತನ್ನ ಮಾತನ್ನು ಅರಗಿಸಿಕೊಳ್ಳುವ ಶಕ್ತಿ ಇನ್ನೂ ಬಂದಿಲ್ಲ ಮರಿಗೆ ಎಂಬುದರ ಅರಿವಿತ್ತು ತಾಯಿ ಹಕ್ಕಿಗೆ.ಅಸಮರ್ಥರ ಮುಂದೆ ಆಡಿದ ಮಾತುಗಳು ವ್ಯರ್ಥವಾಗುವವು, ಅಥವಾ ದುರುಪಯೋಗವಾಗುವವು ಎಂಬುದು ಕೂಡ ಗೊತ್ತಿತ್ತು ಹಕ್ಕಿಗೆ!

ಮರುದಿನ ಕೂಡ ಮರಿಯ ಮನಸ್ಸು ಏನನ್ನೋ ಯೋಚಿಸುತ್ತಿತ್ತು.ಗೊಂದಲದಲ್ಲಿತ್ತು. ಹಾರಲು ಕಲಿಯಬೇಕೆಂಬ ಹಂಬಲವೇ ಇಲ್ಲದಂತೆ ಕುಳಿತಿತ್ತು ಮರಿ. ತಾಯಿ ಹಕ್ಕಿ ಪ್ರೀತಿಯಿಂದ ಹತ್ತಿರ ಬಂದು, ಮರಿಯನ್ನು ತಬ್ಬಿಕೊಂಡಿತು. ಮರಿಗೆ ತಡೆ ಹಿಡಿದಿದ್ದ ದುಃಖವೆಲ್ಲ ಉಮ್ಮಳಿಸಿ ಬಂದಂತಾಯಿತು.ಬಿಕ್ಕಿ ಬಿಕ್ಕಿ ಅಳಲಾರಂಭಿಸಿತು ಮರಿ.ತಾಯಿ ಹಕ್ಕಿ ನಿಧಾನವಾಗಿ ಮರಿಯನ್ನು ಸಮಾಧಾನಗೊಳಿಸುತ್ತ, ಬುದ್ಧಿ ಹೇಳಲಾರಂಭಿಸಿತು.
"ನೋಡು ಮರೀ..,ನಿನಗೆ ಕೈಯ್ಯ ಬದಲಾಗಿ ರೆಕ್ಕೆಗಳಿಲ್ಲವೇ? ಇಲ್ಲದ ಕೈಗಳ ಬಗ್ಗೆ ಯೋಚಿಸುತ್ತ ಸಮಯ ವ್ಯಯ ಮಾಡಿಕೊಳ್ಳುತ್ತೀಯೇಕೆ? ಹಾರಬೇಕೆಂಬ ಬಯಕೆ ಇಲ್ಲವೇ ಮನಸ್ಸಿನಾಳದಲ್ಲಿ?ಕೈ ಏಕೆ ನಿನಗೆ? ನೀನೇನು ಮನುಷ್ಯರಂತೆ ಆಹಾರ ಸಂಗ್ರಹಿಸಿ ಗುಡ್ದೆ ಹಾಕಬೇಕೆ? ಆ ದಿನದ ಕೂಳನ್ನು ದೇವರು ಆ ದಿನವೇ ಕೊಡುತ್ತಾನೆಂಬ ಭರವಸೆಯಿಲ್ಲವೇ ನಿನಗೆ?ಅವರಂತೆ ಗುಡ್ದದಷ್ಟು ದೊಡ್ಡ ಮರಗಳನ್ನು ಕಡಿದು ಮನೆ ಕಟ್ಟಬೇಕೆ? ನಾವು ಕೊಕ್ಕಿನಿಂದ, ಕಾಲಿನಿಂದ ಕಟ್ಟುವಷ್ಟು ಚೆಂದದ ಮನೆಗಳನ್ನು ಕೈಯಿರುವ ಮನುಷ್ಯರು ತಲೆ ಕೆಳಗಾಗಿ ನಿಂತರೂ ಕಟ್ಟಲಾರರು. ಅವರೆಷ್ಟೆ ಮುಂದುವರಿದರೂ ನಮ್ಮಂತೆ ಸ್ವಚ್ಚಂದವಾಗಿ ಎಂದಿಗೂ ಹಾರಲಾರರು."
"ನಿಸರ್ಗದ ದೃಷ್ಟಿಯಲ್ಲಿ ಎಲ್ಲರೂ ಒಂದೇ ಮಗೂ, ಒಬ್ಬರಿಗೆ ಹೆಚ್ಚು ಒಬ್ಬರಿಗೆ ಕಮ್ಮಿ ಕೊಡುವ ಗುಣ ನಿಸರ್ಗಕ್ಕಿಲ್ಲ.ಒಂದಿಲ್ಲೊಂದು ರೀತಿಯಲ್ಲಿ ಸೃಷ್ಟಿಯ ತಕ್ಕಡಿ ಸರಿದೂಗಲೇಬೇಕು. ಇಲ್ಲದ್ದಕ್ಕೆ ಕೊರಗಬೇಡ. ಅದಕ್ಕೆ ಬದಲಾಗಿ ನಿನಗೆ ಇನ್ನೇನೋ ಸಿಕ್ಕಿರುತ್ತದೆ. ಹಾರಬೇಕೆಂಬುದು ನಿನ್ನ ಅಂತರಾಳದ ಕರೆ. ಅದನ್ನು ಕೇಳಿಸಿಕೋ...

ಅಗತ್ಯಕ್ಕಿಂತ ಹೆಚ್ಚು ಬಯಸುವುದು ಹೇಗೆ ತಪ್ಪೋ ಹಾಗೇ ಅವಶ್ಯಕತೆಗಳಿಗೇ ಅಂಟಿಕೊಂಡಿರುವುದೂ ತಪ್ಪು,ಅತಿಯಾದರೆ ಅವಶ್ಯಕತೆಗಳೇ ಬಯಕೆಗಳಾಗಿ ಹೋಗುತ್ತವೆ.ಮನುಷ್ಯರಂತೆ ನೀನು ಅವುಗಳ ಹಿಂದೆ ಬೀಳುತ್ತೀಯ... ಅಗತ್ಯಪೂರೈಸಿದೊಡನೆ ನಿನ್ನ ಅಂತರಾಳದ ಆಗಸದಲ್ಲಿ ಗರಿ ಬಿಚ್ಚಲೇಬೆಕೆಂಬುದನ್ನೂ ಮರೆಯಬಾರದು".
ಮರಿಗೆ ಸತ್ಯದ ಅರಿವಾಗಿ ಕಣ್ಣು ತುಂಬಿ ಬಂತು.ತಾಯಿಗೆ ಕೂಡ...
"ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ"
ಕೊನೆಗೂ "ಮರದ ಹಕ್ಕಿ ಮರಿ ರೆಕ್ಕೆ ಬೀಸಿತು, ಅದರ ಗರಿ ಮುಕ್ತವಾಯಿತು"


Wednesday, 21 October, 2009

ನಾನು ಸಾಯುವ ಮುನ್ನಾ ದಿನ...    
     ಮುದ್ದಿನ ಮಗಳಾಗಿ,ಅಕ್ಕರೆಯ ಅಕ್ಕನಾಗಿ, ತುಂಟ ತಂಗಿಯಾಗಿ, ಒಲುಮೆಯ  ಪತ್ನಿಯಾಗಿ, ಪ್ರೀತಿಯ ಅಮ್ಮನಾಗಿ ಒಟ್ಟಾರೆ ಎಲ್ಲ ಪಾತ್ರಗಳನ್ನೂ ಚೆನ್ನಾಗಿ ನಿರ್ವಹಿಸಿ, ಆದರೂ 'ನಾನು' ಎಲ್ಲೂ ಕಳೆದು ಹೋಗದಂತೆ ಕಾಪಾಡಿಕೊಂಡು ಬರಬೇಕೆಂಬ ಇರಾದೆಯಿತ್ತು. ಈಗ ಒಮ್ಮೆ ಹಿಂದಿರುಗಿ ನೋಡಿದರೆ... ನಾನು ಏನೇನು ಮಾಡಿದೆ? ಏನೇನಾದೆ? ಛೆ!

   ಬದುಕಿನ ಇಳಿಸಂಜೆಯ ಹೊಸ್ತಿಲಲ್ಲಿ ನಿಂತು ನೋಡಿದರೆ ದೊಡ್ಡ ಸದ್ದು ಗದ್ದಲದೊಂದಿಗೆ ಒಂದು ಸಂತೆಯೇ ಇದೆ ಬೆನ್ನ ಹಿಂದೆ. ತಿರುಗಿ ನೋಡಲು ಮನಸ್ಸೇ ಆಗುತ್ತಿಲ್ಲ. ಇಷ್ಟು ದಿನದಲ್ಲಿ ನಾನು ಸಾಧಿಸಿದ್ದೇನು ಎಂದು ಕೇಳಿಕೊಂಡರೆ ಮನಸ್ಸು ಬಿದ್ದು ಬಿದ್ದು ನಗುತ್ತಿದೆ, ಅಪಹಾಸ್ಯ ಮಾಡುತ್ತಿದೆ. ಬೇರೆ ಯಾರಾದರೂ ಕುಹಕವಾಡಿದಾಗ ಕಾಡುವ ನೋವಿಗೆ ಮನಸ್ಸು ಮದ್ದು ಕೊಟ್ಟು, ಮುದ್ದಿಸಿ, ತನ್ನಲ್ಲಿರುವ positive ಅಂಶಗಳನ್ನೋ, ಮಣ್ಣೋ, ಏನೋ ಒಂದು ಹೇಳಿ ಸಮಾಧಾನ ಮಾಡುತ್ತಿತ್ತು. ಇನ್ನೊಬ್ಬರಾಡಿದ ಅಣಕ ಎಲ್ಲಿಂದಲೋ ತಂದು ನೆಟ್ಟ ಗುಲಾಬಿ ಗಿಡದಂತೆ, ಎಲ್ಲೋ ಒಂದು ಕಡೆ ಮುಳ್ಳಿನಡಿಯಿ೦ದ ಹೂವು ಹುಟ್ಟುವ ಸಂಭವವಿದೆ. ನನ್ನ ಮನಸ್ಸೇ ನನಗಾಡಿದರೆ ಅಲ್ಲೇ ಗಟ್ಟಿ ಬೇರು ಬಿಟ್ಟ ಪಾರ್ಥೇನಿಯಂ ಗಿಡದಂತೆ.


   ಕಪ್ಪೆ ಚಿಪ್ಪಿನಲ್ಲಿ ಮುತ್ತಿದೆಯೆಂದು ಇಷ್ಟು ದಿನ ಜೋಪಾನ ಮಾಡಿದೆ, ಈಗ ಚಿಪ್ಪಿನೊಳಗೆ.. ಮುತ್ತಿದೆಯಾ? ಎಂದು ಇಣುಕಿದರೆ ಮುತ್ತಿಲ್ಲ ಹುಳುವಿದೆ ಎಂದು ತಿಳಿಯಿತು. ಎಷ್ಟು ದೊಡ್ಡ ಆಘಾತ! ಇದಕ್ಕೂ ಮನಸ್ಸು ನನ್ನನ್ನೇ ಅಣಕಿಸಿ ನಗುತ್ತದೆ. ಜಗತ್ತಿನಲ್ಲಿ ತುಂಬ ಎಚ್ಚರಿಕೆಯಿಂದ ಬಾಳುವವರು ತುಂಬ ಕಡಿಮೆ ಜನ, ಅಂಥವರಲ್ಲಿ ನಾನೂ ಒಬ್ಬಳು ಎಂದುಕೊಂಡೇ ಬಾಳಿದವಳ ಬಾಳು ಇಂದು ಕೊನೆಯ ಘಟ್ಟ ತಲುಪಿದೆ. ಇಂಥ ಪರಿಸ್ಥಿತಿಯಲ್ಲಿ ನನ್ನ ಮನಸ್ಸು ನಾನು ಯಾವುದಕ್ಕೂ ಕಾರಣವೇ ಅಲ್ಲ, ನಿನಗೆ ಕೊಟ್ಟ ಜೀವನವನ್ನು ನೀನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎನ್ನುತ್ತಾ, ತಪ್ಪುಗಳನ್ನೆಲ್ಲ ಬೊಟ್ಟು ಮಾಡಿ ತೋರಿಸುತ್ತಾ , ವ್ಯಂಗವಾಗಿ ನಗುತ್ತಿದ್ದರೆ, ಆಸರೆಯಿಲ್ಲದೇ ಬದುಕಿನ ಮುಸ್ಸಂಜೆಯ ಕೊನೇ ಕ್ಷಣಗಳನ್ನು ಕಂಬನಿ ತುಂಬಿಕೊಂಡು ಮಸುಕಾದ ಕಣ್ಣುಗಳಿಂದ ನೋಡುತ್ತಾ ನಿಂತವಳಿಗೆ ಹೇಗಾಗಬೇಡ? 

      
      ತೀರ ಅಸಹಾಯಕತೆಯ ಕ್ಷಣದಲ್ಲಿ ನಮ್ಮ ಮನಸ್ಸಾದರೂ ನಮ್ಮ ಜೊತೆಗಿರುತ್ತದೆ ಎಂಬ ಭರವಸೆಯಿಂದಲೇ ಅಲ್ಲವೇ ಜೀವನದುದ್ದಕ್ಕೂ ಮನಸಿನ ತಾಳಕ್ಕೆ ಹೆಜ್ಜೆ ಹಾಕಿದ್ದು. ಒಮ್ಮೆ ಕೊಂಚ ಗದರಿಸಿದರೂ ಮತ್ತೆ ನನ್ನದೇ ಮಗು ಎಂಬಂತೆ ಅದು ಹೇಳಿದ್ದನ್ನೆಲ್ಲ ನಡೆಸಿ ಕೊಟ್ಟಿಲ್ಲವೆ? ಅಷ್ಟಾಗಿಯೂ ಕೊನೇ ಘಳಿಗೆಯಲ್ಲಿ 'ನಿನ್ನ ಪಾಪ ಪುಣ್ಯಗಳಿಗೆ ನಾನು ಜವಾಬ್ದಾರನಲ್ಲ' ಎಂದು ಮನಸ್ಸು ಘೋಷಿಸಿಬಿಟ್ಟರೆ ಅದು ಮರಣ ಘಂಟೆಯ ಸದ್ದಿನಂತೆ ತೋರದೇ ಇರುವುದೇ?

     ಇಂದು ಮೊತ್ತ ಮೊದಲ ಬಾರಿಗೆ ಅನಿಸುತ್ತಿದೆ, ತೃಪ್ತಿಯ ಹೊರತಾಗಿ ನನಗೆ ಉಳಿದೆಲ್ಲವೂ ಸಿಕ್ಕಿವೆ ಎಂದು. ಅದೇಕೆ ತೃಪ್ತಿ ಸಿಗಲಿಲ್ಲವೆಂಬುದು ನನಗೂ ಗೊತ್ತಿಲ್ಲ. ಅವನನ್ನು ತುಂಬ ಇಷ್ಟಪಟ್ಟೆ, ಅವನನ್ನೇ ಮದುವೆಯಾದೆ. ನಾವು ಇಷ್ಟಪಟ್ಟವರು ನಮಗೆ ಸಿಗಲೇಬೆಕೆ೦ದೇನಿಲ್ಲ, ಅವರು ನಮ್ಮನ್ನು ಪ್ರೀತಿಸಲೇಬೇಕೆ೦ದೇನಿಲ್ಲ, ಎಂದೆಲ್ಲ ಹೇಳುವುದು ಕೇಳಿದ್ದೇನೆ. 'ಸಿಕ್ಕಿದರೆ ಅದೃಷ್ಟ' ಎನ್ನುತ್ತಾರಲ್ಲ. ಆ ಅದೃಷ್ಟ ನನ್ನದಾಯಿತು. 'ಸಿಗುವುದು' ಎಂದರೇನೆಂದು ನನಗೂ ಗೊತ್ತಿಲ್ಲ. ಆದರೂ ಅವನು ನನಗೆ ಸಿಕ್ಕಿದ್ದಾನೆ ಎಂದುಕೊಂಡೇ ಬದುಕಿಬಿಟ್ಟೆ. 

     
    ಬಹುಶಃ ಹತ್ತಿರವಿದ್ದ ಎನ್ನುವುದು ಸೂಕ್ತವಾದಿತೇನೋ.ಎಲ್ಲಿ ಹತ್ತಿರ? ಮನಸ್ಸಿಗೆ ಹತ್ತಿರವಿದ್ದನಾ? ಅವನ ಬಳಿ ನಾನು ಏನನ್ನೂ ಹೇಳಿಕೊಂಡಿಲ್ಲ. ಹೇಳಿಕೊಂಡದ್ದೂ ಅವನಿಗೆ ಅರ್ಥವೇ ಆಗಲಿಲ್ಲ ಕೊನೆಯವರೆಗೂ... ಕೊನೆಗೂ! ದೇಹಕ್ಕೆ ಹತ್ತಿರವಿದ್ದನಾ? ವರ್ಷದಲ್ಲಿ ೩ ತಿಂಗಳು ಮನೆಯಲ್ಲಿದ್ದರೆ ಹೆಚ್ಚಾಗಿತ್ತು. ಪಾಪ ನನಗೋಸ್ಕರ ತುಂಬ ಕಷ್ಟಪಟ್ಟು ದುಡಿಯುತ್ತಿದ್ದ. ಆದ್ದರಿಂದಲೇ ನನ್ನ ಜೊತೆಗಿರಲು ಅವನಿಗೆ ಎಂದೂ ಸಮಯ ಉಳಿಯಲೇ ಇಲ್ಲ! ಆದರೂ ಅವನು ನನಗೆ ಸಿಕ್ಕಿದ ಎಂದುಕೊಂಡು ನಾನು ಬದುಕಿದೆ!

     ಇಷ್ಟೆಲ್ಲಾ ಆದರೂ ನಾನು ಮಾತ್ರ ನಾನು ಬಯಸಿದವನು ನನಗೆ ಸಿಕ್ಕಿದನೆಂಬ ಖುಷಿಯಲ್ಲಿ ಬದುಕಿದೆನೆಂಬ ಧನ್ಯತೆಯಿತ್ತು ಇಷ್ಟು ದಿನ. ಇಂದೇಕೆ ಮನಸ್ಸು ಅತೃಪ್ತಿಯ ಕಡಲಲ್ಲೇ ಹುಟ್ಟಿ ಬೆಳೆದ ಮೀನಿನಂತೆ ಮಿಡುಕಾಡುತ್ತಿದೆ? ತಿಳಿಯುತ್ತಿಲ್ಲ ನನಗೆ. ಬಹುಶಃ ಇಷ್ಟು ದಿನವೂ ಮುಖವಾಡದ ಹಿಂದೆ ಬೆಚ್ಚಗೆ ಮುಚ್ಚಿಟ್ಟುಕೊ೦ಡಿದ್ದಿರಬೇಕು ನಾನು. ಪ್ರತಿ ದಿನವೂ ನಿನ್ನೆಯ ಮುಂದುವರಿದ ಭಾಗ ತಾನೇ? 'ಇವತ್ತು' ಎಂಬುದು ಯಾವುದೋ ಬೇರೆ ಗ್ರಹದಿಂದ ಉದುರಿ ಬೀಳುವುದಿಲ್ಲವಲ್ಲ. 

    
       ಇಷ್ಟು ದಿನ ತುಂಬ ಚೆನ್ನಾಗಿ ಬದುಕಿದೆ. ಆದರೂ ಕೊನೆಯೇಕೆ ಇಷ್ಟು ದಾರುಣವಾಗಿದೆ ಎಂದುಕೊಂಡರೆ ನಾನು ಇನ್ನೂ ನನ್ನನ್ನು ಪೂರ್ತಿಯಾಗಿ ತೆರೆದುಕೊಂಡಿಲ್ಲ ಎಂದೇ ಅರ್ಥ ಎ೦ದು ನಿರ್ಧರಿಸಿ ನನ್ನನ್ನು ನಾನು ಪೂರ್ತಿಯಾಗಿ ತೆರೆದಿಟ್ಟ ಪುಸ್ತಕದಂತಾಗಿಸ ಬಯಸಿದೆ. ಏನೂ ಬರೆಯದ ಸು೦ದರ ಪುಟಗಳು, ದೇವರು ನನಗಾಗಿ ಕೊಟ್ಟದ್ದು. ಅದನ್ನು ಅತ್ಯಂತ ಜತನದಿಂದ ಸಿಂಗರಿಸಿ ಮರಳಿಸಬಯಸಿದ್ದೆ. ಸಿಂಗರಿಸಲಂತೂ ಆಗಲಿಲ್ಲ. ಆದರೆ 'ಬದುಕಿನ ಕೊನೆ' ಎಂಬುದು ಅದನ್ನು ಮತ್ತಷ್ಟು ಬರಿದಾಗಿಸುತ್ತದೆ ಎಂದುಕೊಂಡಿರಲಿಲ್ಲ. ಪೂರ್ತಿ ಖಾಲಿಯಾಗಿಬಿಟ್ಟಿದ್ದೇನೆ ಎಂದು ಭಾಸವಾಗುತ್ತಿದೆ.

     ಸಾವಿನ ಭಯವಾ? ಇನ್ನು ಬದುಕಲು ಏನಿದೆ ನನಗೆ? ಜೀವನದಲ್ಲಿ ಒಂದು ಹೆಣ್ಣು ಏನೇನು ಅನುಭವಿಸಿ ಪರಿಪೂರ್ಣಳಾಗಬೇಕು ಎಂದು ಎಲ್ಲರೂ ಹೇಳುತ್ತಾರಲ್ಲ ಅದೆಲ್ಲ ನನಗೆ ಸಿಕ್ಕಿದೆ. ಇನ್ನಿಲ್ಲದಷ್ಟು ಸಂಭ್ರಮದಿ೦ದ ಬದುಕಿದ್ದೇನೆ ಎ೦ದುಕೊಡ್ಡಿದ್ದೆ. ಇನ್ನು ಮುಂದೆ ನಾನು ಬದುಕಿದರೆ ಬದುಕು ತುಂಬ ನೀರಸವಾಗಿ ಕೊನೆಗೊಳ್ಳುತ್ತದೆಯೆಂದೆನಿಸಿಯೇ ದೇವರು ನನ್ನನ್ನು   ತನ್ನ ತೆಕ್ಕೆಗೆ ತೆಗೆದುಕೊಳ್ಳಬಯಸಿದ್ದಿರಬೇಕು. 


      ಬದುಕಿನ ಪ್ರತಿಯೊ೦ದು ತಿರುವಿನಲ್ಲೂ, ಎ೦ಥ ಘೋರ ಪರಿಸ್ಥಿತಿಯಲ್ಲೂ ಸಕಾರಾತ್ಮಕವಾಗಿಯೇ ಯೋಚಿಸುತ್ತ ಬಂದವಳು, ಸಾವೆಂಬ ಸುಂದರ ಘಟನೆಯನ್ನು ಅಲ್ಲಗಳೆಯುತ್ತೇನಾ? ಖಂಡಿತ ಇಲ್ಲ ಎಂದುಕೊಂಡಿದ್ದೆ. ನಾನು ನನ್ನ ಬಗ್ಗೆ ಅಂದುಕೊಂಡಿದ್ದೇ ಸುಳ್ಳಾಗಬಹುದಾದರೆ ಇನ್ನೊಬ್ಬರಿಂದ ನಿರೀಕ್ಷಿಸಿದ್ದು ಸುಳ್ಳಾಗುವುದರಲ್ಲಿ ಆಶ್ಚರ್ಯವೇನಿದೆ? ಜೀವನವೆಂಬುದು ಎಷ್ಟು ದೊಡ್ಡ ಪಾಠ ಕಲಿಸುತ್ತದೆ. ಕೊನೇ ಪಕ್ಷ ಅಷ್ಟೊಂದು ಕಲಿತೆ ಎಂಬ ತೃಪ್ತಿಯಾದರೂ ಉಳಿಯುತ್ತದೆಂದುಕೊಂಡಿದ್ದೆ. ಅದೂ ಉಳಿಯಲಿಲ್ಲ. ಆದರೂ ನಾನು ಇಷ್ಟು ಅತೃಪ್ತಿಯಿಂದ ನನ್ನ ಬದುಕನ್ನು ಮುಗಿಸುತ್ತೇನೆಂದು ಯಾವತ್ತೂ ಭಾವಿಸಿರಲಿಲ್ಲ. 

    ಬದುಕನ್ನು ಮುಗಿಸಿದವರೆಲ್ಲ ಎಲ್ಲಿ ಹೋಗುತ್ತಾರೆಂದು ಗೊತ್ತಿಲ್ಲ ನನಗೆ. ಎಲ್ಲೆಲ್ಲೋ ಹೋಗುತ್ತಾರೆಂದು ಕೇಳಿದ್ದೇನೆ. ಅಲ್ಲಿಗೆ ಹೋಗಿ ನೋಡುತ್ತೇನೆ, ಅಲ್ಲಾದರೂ ಅವನು ನನಗೆ ಸಿಗುತ್ತಾನಾ?(ಸಿಗಬೇಕಾ?) ತೃಪ್ತಿ ಸಿಗುತ್ತದಾ? ನೋಡಿ ನಿಮಗೆ ಹೇಳುತ್ತೇನೆ ಸಾಧ್ಯವಾದರೆ!

Tuesday, 13 October, 2009

ದುಃಖವಾಗಿದೆ ಎನ್ನುತಿದೆ ದುಃಖಜಲಪಾತವಾಗಬಯಸಿದೆ ದುಃಖ
ಹರಿವ ನದಿಯಾಗಬಯಸಿದೆ ದುಃಖ
ಕಾನನದೊಡಲಿನ
ತರಗೆಲೆಯ೦ತಿದೆ ದುಃಖ

ಹರಿದರೆ ಸೇರಲು ಸಾಗರವಿಲ್ಲ
ಬಿಕ್ಕಳಿಸಲಿಕೊ೦ದು ತೆಕ್ಕೆಯಿಲ್ಲ
ದುಃಖವೇಕೆ೦ದು ಕೇಳಲಾರಿಲ್ಲವೆ೦ದೂ
ದುಃಖಪಡುತಿದೆ ದುಃಖ

ಬೀದಿಯೆ೦ಬ ಭಯವಿಲ್ಲದೇ
ಎಲ್ಲೆ೦ದರಲ್ಲಿ ಬೆತ್ತಲಾಗಬಯಸಿದೆ ದುಃಖ
ನಿರ್ಲಜ್ಜ ಹೆಣ್ಣಿನ೦ತೆ!

ಕಡಲ ಕಿನಾರೆಯಲ್ಲೊಮ್ಮೆ
ಬಿದ್ದು ಹೊರಳಾಡಬಯಸಿದೆ ದುಃಖ
ತ್ಸುನಾಮಿಯ ಹೊಡೆತಕ್ಕೆ
ಅನಾಥವಾದ ಮಗುವಿನ೦ತೆ!

ಕಾರಣೀಕರ್ತ ಜಗತ್ತಿನ ವಿರುದ್ಧ
ಮುಷ್ಕರ ಹೂಡುತ್ತದ೦ತೆ ದುಃಖ
ಜಗತ್ತನ್ನೇ ಜಗತ್ತಿನಿ೦ದ
ಬಹಿಷ್ಕರಿಸಬೇಕೆ೦ದಿದೆ ಈ ದುಃಖ!


Thursday, 8 October, 2009

ಮಗುವಾಗುವೆನೊಮ್ಮೆ ನಿನ್ನ ಮಡಿಲಲ್ಲಿ...
 ಇರಿಯದಿರೆನ್ನ ಹೃದಯವ 
ನಿನ್ನ ಕಣ್ಣ ರೆಪ್ಪೆಯಿಂದ
ಬಾನೊಡಲ ಇರಿದ೦ತೆ
ಮಿ೦ಚೊ೦ದು

ಬಾನು ಸುರಿಸಿದ ಕಣ್ಣೀರು
ಭರಿಸಲು ಭುವಿಯು೦ಟು
ನನ್ನ ಕಣ್ಣೊರೆಸಲು
ಯಾರಿಲ್ಲವೆ೦ಬ ದಿಗಿಲು


ತಾಯ೦ತೆ ಹಗಲು
ಮಡದಿಯ೦ತೆ ಇರುಳು
ಬಾನು-ಭುವಿಯ ಸ೦ಸಾರ
ಇಷ್ಟವಾಗಿದ್ದು ತಪ್ಪೇನೆ ಗೆಳತಿ?

ಭುವಿಯ ಮಡಿಲಲ್ಲಿ ಮುಗಿಲು
ಹಾಯಾಗಿ ಮಲಗಿರಲು
ಜೋಗುಳಕೊ೦ದು ಚ೦ದ್ರ
ಕನಸಿಗೊ೦ದಿಷ್ಟು ನಕ್ಷತ್ರ
ಬಯಸಿದ್ದು ತಪ್ಪೇನೆ ಗೆಳತಿ?

ತಪ್ಪಾದರಾಗಲಿ ಬಿಡು
ಜೀವನಪರ್ಯ೦ತ ಸರಿಯಾಗಿಯೇ
ಇರಬಯಸಿಲ್ಲ ನಾನು...

ನನಗೊಮ್ಮೆ ಮಡಿಲು ಕೊಡು
ಮಗುವಾಗುವೆನು
ಬೆಚ್ಚನೆಯ ಹೆಗಲು ಕೊಡು
ಅತ್ತು ಹಗುರಾಗುವೆನು


Wednesday, 7 October, 2009

ಹೀಗೊ೦ದು ಪ್ರೇಮವಿಲ್ಲದ ಪ್ರೇಮಪತ್ರನನ್ನ ಪ್ರೀತಿಯ (?) .....,

      'ನೀನು ಹೇಗಿದ್ದೀಯ' ಅಂತ ಕೇಳುವುದೇ ಇಲ್ಲ ನಾನು.. ಏಕೆಂದರೆ ನಿನ್ನ ಬದುಕು ಚಲಿಸುವುದೇ ಇಲ್ಲ. ನಿಂತ ನೀರಿನಂತೆ ಬದುಕೋದು ನಿನಗೆ ಮಾತ್ರ ಸಾಧ್ಯ ಅಂತ ತುಂಬಾ ಸಲ ಅನ್ನಿಸುತ್ತದೆ. ಯಾವಾಗಲೂ ಸತ್ತವರಂತೆ ಬದುಕುವುದಕ್ಕಿಂತ ಸಾಯುವುದೇ ಮೇಲು ಅಂತ ಹೇಳಿಬಿಡಬೇಕು ಅನ್ನಿಸಿದೆ ತುಂಬಾ ಸಲ.. ಆದರೆ ನಾನು ನಿನ್ನಲ್ಲಿ ಇಲ್ಲದ ಗುಣಗಳನ್ನೆಲ್ಲ ಕಲ್ಪಿಸಿಕೊಂಡು ಒಂದು ಸಲ ನಿನ್ನ ಪ್ರೀತಿಸಿಬಿಟ್ನಲ್ಲ, ಅದೊಂದೇ ಕಾರಣಕ್ಕೆ ನಿನ್ನ (ಇಲ್ಲದ - ಒಲ್ಲದ) ಮನಸ್ಸನ್ನ ನೋಯಿಸಲಾರೆ ಗೆಳೆಯಾ!!
     ಇವತ್ತು ಕೂಡ ನೀನು ಮುಂಜಾನೆಯ ಸೂರ್ಯನನ್ನು ನೋಡಿಲ್ಲಾ ಅಂತ ನಂಗೆ ಚೆನ್ನಾಗಿ ಗೊತ್ತು. ಈಗೀಗ ನಿನ್ನ ಬಗ್ಗೆ ನನಗೆ ಆಶ್ಚರ್ಯವಾಗುವುದೇ ಇಲ್ಲ. ಆದರೆ ಕೆಲವೊಮ್ಮೆ ಅಸಹ್ಯವಂತೂ ಆಗುತ್ತದೆ. ಇವತ್ತು ಕೂಡ ಅದೇ ಹೊಗೆ ಹಿಡಿದ ಮಾಡು ನೋಡುತ್ತಾ, ವರ್ಷಗಟ್ಟಲೆ ತೊಳೆಯದೇ ಗಬ್ಬು ನಾರುತ್ತಿರುವ ಹಳೆಯ ಚಾದರ ಹೊದ್ದು ಮಲಗಿದ್ದೀಯಾ? ನಿನ್ನ ಜೀವನದಲ್ಲಿ ಒಂದೇ ಒಂದು ದಿನ ಬೇಗ ಎದ್ದು, ಮಂಜು ಮುಸುಕಿದ ಮುಂಜಾನೆಯನ್ನು ನೋಡು, "ಅಹಹಹಾ" ಎಂದು ನಡುಗುತ್ತ ಒಂದು round walk ಹೋಗಿ ಬಾ.. ಮರುದಿನದಿಂದ ನಿನ್ನ ಬದುಕು ಖಂಡಿತ ಬದಲಾಗತ್ತೆ..
      'ಎಲ್ಲ ಪುಸ್ತಕದ ಬದನೇಕಾಯಿ' ಅಂತ ಗೊಣಗಬೇಡ. walk ಹೋಗಿದ್ದಕ್ಕೆ, ಅಥವಾ ಇಬ್ಬನಿಯ ನಸುಕು ನೋಡಿದ್ದಕ್ಕೆ ನಿನ್ನ ಬದುಕು ಬದಲಾಗುತ್ತದೆ ಅಂತ ನಾನು ಹೇಳುತ್ತಿಲ್ಲ . ನಿನ್ನಲ್ಲಿ ಅದಕ್ಕೆಲ್ಲ ಸ್ಪಂದಿಸುವ, ಸವಿಯುವ ಮನಸ್ಸು ಇಲ್ಲವೇ ಇಲ್ಲ ಅನ್ನೋದನ್ನ ಎಲ್ಲರಿಗಿಂತ ಚೆನ್ನಾಗಿ ಅರಿತವಳು ನಾನು. ಯಾಕೆ ಅಂದ್ರೆ ಅದನ್ನ ಎಲ್ಲರಿಗಿಂತ ಹೆಚ್ಚಾಗಿ ಬಯಸಿದ್ದು ನಾನು. ಯಾಕೆ ಬದಲಾಗಬಹುದು ನಿನ್ನ ಬದುಕು ಅಂತ ಊಹಿಸ್ತಿದಿನಿ ಅಂದ್ರೆ, ನೀನು walk ಮುಗಿಸಿ ಹಿಂದಿರುಗುವಾಗ ಒಂದೇ ಒಂದು ಸಲ Bus Stop ಕಡೆಗೆ ತಿರುಗಿ ನೋಡು. ಮುಂಜಾನೆಯ ಸೂರ್ಯ, ಇಬ್ಬನಿ ಎಲ್ಲವನ್ನು ನಾಚಿಸುವಷ್ಟು ಚೆಂದದ ಕಾಲೇಜು ಹುಡುಗಿಯರು ನಿಂತಿರುತ್ತಾರೆ ಕಣೋ.. ನಕ್ಷತ್ರ, ಬೆಳದಿಂಗಳು ಅಂತ ಸ್ವಲ್ಪ ಚೆನ್ನಾಗಿ ಮಾತಾಡು.. ದರಿದ್ರ ಭಾಷೆಯಲ್ಲಿ ಮಸ್ತ್ figure ಅಂತೆಲ್ಲ ಹೇಳಬೇಡ ಅಲ್ಲಿ.. ಪಾಪ ಕೆಲವರು ನೊಂದ್ಕೋತಾರೆ.
      ಯಾಕೆ ಇದನ್ನೆಲ್ಲಾ ಹೇಳ್ತಿದೀನಿ ಅಂದ್ರೆ ನೀನು ಎಳೋವಾಗಲೇ ಸುಮಾರು ಮಧ್ಯಾಹ್ನ ಆಗಿರತ್ತೆ. ಯಥಾ ಪ್ರಕಾರ ನಿನ್ನ ಆಲಸ್ಯ ಸಂಜೆಯ ತನಕ ಮುಂದುವರೆಯಲೇಬೇಕು. ಸಂಜೆ ಪಾಪ ಎಲ್ಲರು ಬಸವಳಿದು ಹಿಂತಿರುಗುವಾಗ ಹೋಗಿ ನೋಡಿ ಏನು ಮಾಡುತ್ತೀಯಾ ಮಾರಾಯ!!
ತಡವಾಗಿ ಹಿಂತಿರುಗುತ್ತಿರುವುದಕ್ಕೆ ಬಾಗಿಲಲ್ಲೇ ನಿಂತು ಗುರುಗುಟ್ಟುವ ಅಪ್ಪನಿಗೆ ಇವತ್ತು ಏನು ಕಾರಣ ಹೇಳಲಿ ಅಂತ ಹುಡುಗಿಯರು ತಲೆ ಕೆಡಿಸಿಕೊಂಡು ಅವಸರದಲ್ಲಿ ಬರುತ್ತಿರುತ್ತಾರೆ. ಜೋರಾಗಿ ನಡೆಯುತ್ತೇನೆಂದರೂ ನಡೆಯಲು ಬಿಡದ ಒಂದೊಂದು ಗೇಣೆತ್ತರ ಚಪ್ಪಲಿಯ ಮೇಲೆ ಕೋಪ, ಮುಖದ ಮೇಲೆ ನೇರವಾಗಿ ಬಿದ್ದು ಬೆಳಗಿನ ಮೇಕಪ್ ಪೂರ್ತಿ ಕರಗಿ ಹೋಗಿರುವುದನ್ನೇ ಎಲ್ಲರಿಗೂ ಎತ್ತಿ ತೋರಿಸುತ್ತಿರುವ ಬೀದಿ ದೀಪದ ಮೇಲೆ ಕೋಪ, ಇದೆಲ್ಲದರ ಮಧ್ಯೆ ನೀನು ಅವರ ಕಣ್ಣಿಗೆ ಬೀಳುವುದಿಲ್ಲ ಗೆಳೆಯಾ. 

      ಇಷ್ಟೆಲ್ಲಾ ಹೇಳಿ ನಿನ್ನನ್ನ ಸರಿಪಡಿಸಿ ನನಗೇನೂ ಆಗಬೇಕಿಲ್ಲ. ಮೊದಲಿನಂತೆ ಈಗ ನಿನ್ನ ಮೌನಕ್ಕೆ, ಮಾತಿಗೆ ಎಲ್ಲಕ್ಕೂ ಹೊಸ ಹೊಸ ಅರ್ಥ ಕಲ್ಪಿಸಿಕೊಂಡು ಖುಷಿಪಡುವ ಮುಗ್ಧ ಹುಡುಗಿಯಾಗಿ ಉಳಿದಿಲ್ಲ ನಾನು. ನೀನಲ್ಲದೆ ಬೇರೆ ಯಾರೇ ನಿನ್ನಂತೆ ಬದುಕುವುದನ್ನ ನೋಡಿದರೂ ಸಹಿಸೋದು ಕಷ್ಟವೇ ನನಗೆ. ಆದ್ದರಿಂದ ಹೇಳುತ್ತಿದ್ದೇನೆ.
      ಭಾವನೆ ಎಂಬ ಶಬ್ದವೇ ಇಲ್ಲದ ಶಬ್ದಕೋಶ ನಿನ್ನದು.ಭಾವನೆಯೇ ಬದುಕು ಎನ್ನುವವಳು ನಾನು. 'ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ' ಎಂಬುದು ನನಗೆ ಪ್ರೀತಿಯ ಉತ್ತುಂಗದಂತೆ ಕಂಡರೆ, ನಿನಗೆ ಬಲಹೀನತೆಯಾಗಿ ಕಾಣುತ್ತದೆ. ಆದರೆ ನಿನ್ನ ಅಸಡ್ಡೆಗಳಿಗೆ ನನ್ನದೊಂದು ಧನ್ಯವಾದ. ಆವತ್ತಿನ ನಿನ್ನ ತಿರಸ್ಕಾರವೇ ಇವತ್ತಿನ ನನ್ನ ಉತ್ತಮ ಸ್ಥಿತಿಗೆ ಕಾರಣ ಅಂತ ಕೆಲವೊಂದು ಸಲ ಅನ್ನಿಸುತ್ತದೆ ನನಗೆ. ಇದನ್ನೆಲ್ಲಾ ಹೇಳ್ತಿದಾಳೆ ಅಂದ್ರೆ ಮನಸ್ಸಲ್ಲಿ ಏನೋ ಇದೆ ಅಂತೆಲ್ಲ ಊಹಿಸಿಕೊಂಡು ಖುಷಿಪಡಬೇಡ. ಹೆಣ್ಣೆಂದರೆ ಹಾಗೇ..! ಭಾವನೆಗಳನ್ನೆಲ್ಲ ಜಲಪಾತದಂತೆ ಭೋರ್ಗರೆಸಲೂ ಗೊತ್ತು, ಬತ್ತಿದ ಮರುಭೂಮಿಯಂತಿರಲೂ ಗೊತ್ತು.
ಸಾಧ್ಯವಾದರೆ ಸಾಯುವ ತನಕ ಜೀವಂತಿಕೆಯಿಂದ ಬದುಕಲಿ ನೀನು ಎಂದು ಆಶಿಸುತ್ತೇನೆ..


ಇಂತಿ ನಿನ್ನ ಪ್ರೀತಿಯ (?)......