Tuesday 7 September, 2010

ಎಚ್ಚರಾಗುವೆನೆ ನಾನು?


ಒಂಟಿ ಮರದಲಿ ಉಲಿಯುತಿಹ ಹಕ್ಕಿಯಂತೆ
ಕಡುಗಪ್ಪು ರಾತ್ರಿಯಲಿ ಜೊತೆ ಬಯಸಿ
ಉಕ್ಕುತಿಹ ಕಡಲಿನಂತೆ
ಜಾತ್ರೆಯಲಿ ತಾಯ ಕೈ ಬೆರಳು
ತಪ್ಪಿಹೋಗಿರುವ ಮಗುವಿನಂತೆ
ರಾಗ ಬೆರೆಸುವರಿಲ್ಲ, ದಾರಿ ಹೇಳುವರಿಲ್ಲ
ಬದುಕು ಎಲ್ಲಿಹುದೋ ತೋರುವವರರಿಲ್ಲ

ಸಂಜೆ ಮಳೆಯಲ್ಲಿ ಮನೆಬಿಟ್ಟ
ಮದುವೆಯಿಲ್ಲದ ಬಸುರಿಯಂತೆ
ಹಸಿದ ಎಳೆ ಕರು ಸತ್ತ ತಾಯಿಯ ಬಯಸಿ
ಅಂಬಾ.. ಎಂದು ಕರೆಯುವಂತೆ
ಭಾರವೆಷ್ಟಿಹುದೋ ಇಳಿಸುವವರಾರಿಲ್ಲ
ಭಾವವೆಂತಿಹುದೋ ಕೇಳುವವರಾರಿಲ್ಲ

ಅರಿತಿಲ್ಲ ಏನಿಹುದೋ ನನ್ನ ಒಳಗೆ
ಒಂಟಿತನ ಕಾಡುತಿದೆ ಸಂತೆಯೊಳಗೆ
ನಿದ್ದೆಗಣ್ಣಲೇ ನಿತ್ಯ ವಿಶ್ವ ಪರ್ಯಟನೆ
ಅಮಲಿನಲಿ ನಾ ಸತತ ತೇಲುತಿಹೆನೆ?

ಅಂಟಿಕೊಂಡಿಹುದು ಜಗದ
ಕೊಳೆಯೆಲ್ಲ ನನಗೆ...
ಖಚಿತವಾಗದೆ ಹೋದುದು ಒಳಗಿರುವ ಭಾವ
ಮಸುಕಾದ ಕನ್ನಡಿಯ ಹಾಗೆ

ಕಾದಿರುವೆ ಯಾರೋ ಕನಿಕರಿಸುವಂತೆ
ಮರುಗುತಿಹೆ ನಾನಿಲ್ಲಿ ಜೊತೆ ಬಯಸಿ 
ನಲ್ಲೆ ಇನಿಯನ ಬಳಿಸಾರಿ ಬರುವಂತೆ
ಸಾವು ಬರುತಿದೆ ಸನಿಹ ನನ್ನ ಅರಸಿ 

ಹುಟ್ಟಿದಾಗಲೇ ಶುರುವಾಗಿದೆ ಕ್ಷಣಗಣನೆ...
ನೋಡಬೇಕಿದೆ,
ನಾ ಇನ್ನಾದರೂ ಎಚ್ಚರಾಗುವೆನೆ?