Friday 30 April, 2010

ಅಮ್ಮನಂತಹ ಅಕ್ಕನ ಒಡಲು ತಣ್ಣಗಿರಲಿ...




ಮೋಡದೊಳಗಿಂದ ಇಣುಕಿ ನೋಡುತ್ತಿರುವ ಮಳೆ ಹನಿಯಂತೆ ಭಾಗೀರತಕ್ಕ ಮಹಡಿ ಮೇಲಿಂದ ಇಣುಕಿದಾಗ ನನಗೆ ತುಂಬ ಸಂತೋಷವೇನಾಗಲಿಲ್ಲ. ಕಾರಣವೂ ಗೊತ್ತಿಲ್ಲ. ಅವಳಿಂದ ನಾನು ತುಂಬ ದೂರವಾಗಿ ಹೋಗಿದ್ದೇನೆ ಅನಿಸಿತು. ಮನುಷ್ಯ ಸಂಬಂಧಗಳೇ ಇಷ್ಟೇನೋ ಅನ್ನಿಸಿಹೋಗುತ್ತದೆ ಕೆಲವೊಮ್ಮೆ. ನಿಧಾನವಾಗಿ ದೂರವಾಗುತ್ತ ಆಗುತ್ತ ಕೆಲವರು ಮರೆತೇ ಹೋದದ್ದು ಯಾವಾಗ ಎಂದು ಗೊತ್ತೇ ಆಗುವುದಿಲ್ಲ. ಒಬ್ಬರ ಮೇಲೆ ಎಷ್ಟು ಅವಲಂಬಿತರಾಗಿದ್ದರೂ ಅವರು ದೂರವಾದರೆ ಅವಲಂಬಿಸಲು ಬೇರೆ ಯಾರೋ ಸಿಗುತ್ತಾರೆ, ಅಮ್ಮನ ಬದಲು ತಮ್ಮನಿಗೆ ಅಕ್ಕ ಸ್ನಾನ ಮಾಡಿಸತೊಡಗುತ್ತಾಳೆ, ಅಜ್ಜಿ ಕಡೆಯುತ್ತಿದ್ದ ಮೊಸರನ್ನು ಈಗ ತಂಗಿ ಶಾಲೆಗೆ ಹೋಗುವ ಮೊದಲು ಗಡಿಬಿಡಿಯಲ್ಲಿ ಬೆಣ್ಣೆ ಕಟ್ಟಿಟ್ಟು ಹೋಗತೊಡಗುತ್ತಾಳೆ. ಅವಳು ಗಂಡನ ಮನೆಗೆ ಹೋದೊಡನೆ ಅದೇ ಕೆಲಸವನ್ನು ಹೊಸ ಸೊಸೆ ಮಾಡತೊಡಗುತ್ತಾಳೆ, ಅವಳು ಬರುವವರೆಗೆ ಅಪ್ಪ ಹೇಗೋ ಸರಿದೂಗಿಸಿಕೊಳ್ಳುತ್ತಾರೆ.

ಇಷ್ಟೆಲ್ಲ ಗೊತ್ತಿದ್ದರೂ ಭಾಗಕ್ಕ ಮನೆ ಬಿಟ್ಟು ಭಾವನೊಂದಿಗೆ ಓಡಿಹೋಗುವಾಗ ಖಂಡಿತ ನನ್ನನ್ನು ನೋಡಿಕೊಳ್ಳುವವರು ಯಾರು ಇನ್ನು ಮುಂದೆ ಎಂಬುದನ್ನು ನೆನೆದು ಅತ್ತಿದ್ದಳು. ಪುಣ್ಯಕೋಟಿ ಕರುವನ್ನು ಬಿಟ್ಟು ಹುಲಿ ಗುಹೆಗೆ ಹೋಗುವಾಗ ಅತ್ತಂತೆ! ನನ್ನ ಕರುವನ್ನು ನೋಡಿಕೊಳ್ಳಿ, ನಿಮ್ಮವನೇ ಎಂದುಕೊಳ್ಳಿ ಎಂದು ಬೇಡಿಕೊಳ್ಳುವಂತೆ ಪುಟ್ಟಕ್ಕನ ಬಳಿ ಸಣ್ಣಗೆ ಗದರಿಸಿದಂತೆ ಬೇಡಿಕೊಂಡಿದ್ದಳು. ಆ ಗದರುವಿಕೆಯಲ್ಲಿ ಒಂದು ಆರ್ತತೆ ಇದ್ದಿದ್ದನ್ನು ಪುಟ್ಟಕ್ಕ ಗಮನಿಸಿದ್ದಳೋ ಇಲ್ಲವೋ ಗೊತಿಲ್ಲ, ಒಪ್ಪಿಕೊಂಡಿದ್ದಂತೂ ಹೌದು. ಅವಳ ಕಣ್ಣಲ್ಲಿ ಮೂಡಿದ ನೀರಿನ ಸಣ್ಣ ತೆರೆಯನ್ನು ಕಂಡು ನಾನು, ಪುಟ್ಟಕ್ಕ ಇಬ್ಬರೂ ಗಾಬರಿಗೊಂಡು ಮುಖ ಬಾಡಿಸಿಕೊಂಡದ್ದು ನೋಡಲಾಗದೇ ಭಾಗಕ್ಕ ಬಿಕ್ಕಿ ಬಿಕ್ಕಿ ಅಳತೊಡಗಿದಾಗ ಸಮಾಧಾನ ಮಾಡಲು ಯತ್ನಿಸಿದ ನಮ್ಮ ಕಪ್ಪೆ ಚಿಪ್ಪಿನಷ್ಟು ದೊಡ್ದ ಕೈಗಳು ಸೋತವು. ಅಪ್ಪನ ಕೈ ತುಂಬ ದೊಡ್ಡದಿತ್ತು, ಅದರಲ್ಲಿ ಸಾರಾಯಿ ಬಾಟಲಿಗಳಿಗಲ್ಲದೇ, ಕಣ್ಣೀರಿನಂತಹ ಕ್ಷುಲ್ಲಕ ವಸ್ತುಗಳಿಗೆಲ್ಲ ಜಾಗ ಕೊಡಲು ಸಾಧ್ಯವಿರಲಿಲ್ಲ.

ಆ ರಾತ್ರಿಯೆಲ್ಲ ಅಕ್ಕ ನಮ್ಮಿಬ್ಬರನ್ನು ಅಪ್ಪಿಕೊಂಡು ಬಹುಶಃ ಅಳುತ್ತಲೇ ಇದ್ದಿರಬೇಕು. ನನಗೆ ಎಚ್ಚರವಾದಾಗೆಲ್ಲ ಅವಳು ಬಿಕ್ಕುವ ಸದ್ದು ಕೇಳುತ್ತಿತ್ತು. ಅಥವಾ ಅವಳು ಬಿಕ್ಕುವ ಸದ್ದಿಗೇ ನನಗೆ ಎಚ್ಚರವಾಗಿತ್ತಾ? ನನ್ನ ಭಾಗೀರತಕ್ಕನನ್ನು ಅಳುವಾಗ ನಾನು ಯಾವತ್ತೂ ನೋಡಿರಲೇ ಇಲ್ಲ. ಅವಳು ನನಗೆ ’ಅಮ್ಮ’ ಆಗಿ ತುಂಬ ವರ್ಷಗಳಾಗಿದ್ದವು. ಅವಳು ಹಾಕುವ ನೀಲಿ ನೈಟಿ, ಕೆಂಪು ಪ್ಲಾಸ್ಟಿಕ್ ಬಳೆ, ಕಪ್ಪು ರಬ್ಬರ್ ಬ್ಯಾಂಡು ಎಲ್ಲದರ ಮೇಲೂ ನನಗೂ ಸ್ವಲ್ಪ ಹಕ್ಕಿದೆ ಎಂದು ಎಲ್ಲರ ಮುಂದೆ ತೋರಿಸಿಕೊಳ್ಳಬೇಕೆನಿಸುತ್ತಿತ್ತು. ಆದರೆ ಅವಳು ಅಳತೊಡಗಿದಾಗ ಮಾತ್ರ ನನ್ನ ಪಾಲಿಗೆ ಮುಚ್ಚಿದ ಯಾವುದೋ ಬಾಗಿಲ ಹಿಂದಿನ ಕತ್ತಲಲ್ಲಿ, ದೂರ ಲೋಕದಲ್ಲಿ ಅವಳೊಬ್ಬಳೇ ಇರುವಂತೆ ತೋರಿತ್ತು. ಆದರೆ ಇಷ್ಟೆಲ್ಲ ಸಚಿತ್ರ ವಿವರ ಮನದಲ್ಲಿ ತಂತಾನೆ ಮೂಡಿ ಬರುವ ವಯಸ್ಸಲ್ಲ ಅದು, ಹಾಗಾಗಿದ್ದರೆ ಆಗಿಂದಾಗಲೇ ಅದನ್ನೆಲ್ಲ ಭಾಗಕ್ಕನಿಗೆ ಹೇಳಿ ಅವಳ ಕಣ್ಣಲ್ಲಿ ನೀರಿನ ನಡುವೆಯೂ ನನ್ನ ಪ್ರತಿಭೆಯನ್ನು ಕಂಡು ಹೊಳೆಯುವ ಮೆಚ್ಚಿಗೆಯನ್ನು ನೋಡಿ, ಕಣ್ಣೀರನ್ನು, ಆನಂದ ಭಾಷ್ಪವನ್ನು ಬೇರ್ಪಡಿಸಲಾಗದೇ ಕಂಗಾಲಾಗುತ್ತಿದ್ದೆನೋ ಏನೋ! ಆಗ ಭಾಗಕ್ಕ ನನ್ನನ್ನು ಬಿಟ್ಟು ಹೋಗುತ್ತಿರಲಿಲ್ಲವಾ?!

ಶಾಲೆಯಿಂದ ಬಂದೊಡನೆ ಗಟ್ಟಿಯಾಗಿ ಸುತ್ತಿಟ್ಟ ಕಂಬಳಿ ಹಾಸಿಗೆಯ ಮೇಲೆ ಪಾಟಿಚೀಲ ಒಗೆದದ್ದೇ ಓಡುವುದು ಅಲ್ಲಿಗೇ. ಉದ್ದನೆಯ ಅಡಿಗೆ ಮನೆಯ ಈ ತುದಿಗೆ ಬಾಗಿಲು, ಆ ತುದಿಗೆ ದೀಪ ಇಟ್ಟುಕೊಂಡು ಅಕ್ಕಿ ಬೀಸುತ್ತ ಕೂರುವ ಭಾಗಕ್ಕನಲ್ಲಿಗೆ. ಮಳೆಗಾಲದಲ್ಲಿ ಮಾತ್ರ ಅಲ್ಲಿ ಅಕ್ಕಿ ಬೀಸಲು ಕೂರುವಂತಿರಲಿಲ್ಲ. ಬಾಳೆ ಗಿಡದಲ್ಲಿ ಭೂರಿ ಭೋಜನವನ್ನು ಸಂಪಾದಿಸಿಕೊಂಡ ಮಹಾ ಬುದ್ಧಿವಂತ ಕಪಿಗಳಿಗೆ ತೋಟದಿಂದ ಮನೆಗೆ ಮನೆಯಿಂದ ತೋಟಕ್ಕೆ ಓಡಾಡಲು ತೋಚುತ್ತಿದ್ದ ಏಕೈಕ ಕಾಲುದಾರಿ ಎಂದರೆ ನಮ್ಮ ಒರ‍ಳು ಕಲ್ಲಿನ ಮೇಲ್ಬಾಗದ ಮಾಡು ಮಾತ್ರ. ಗಂಡಸರು ಗಟ್ಟಿ ಇಲ್ಲದ ಮನೆ ಎಂದು ಗೊತ್ತಾಗಿರಬೇಕು ಅವಕ್ಕೆ ನೋಡು, ಎಷ್ಟು ಧೈರ್ಯವಾಗಿ ಕೂರುತ್ತವೆ ಎನ್ನುತ್ತಾ ಹೊಡೆದ ಕಲ್ಲುಗಳೆಲ್ಲ ಬೀಳುತ್ತಿದ್ದುದು ಹಂಚಿಗೆ. ’ಇದನ್ನೆಲ್ಲ ನೀನು ದೊಡ್ಡವನಾದ ಮೇಲೆ ಸರಿ ಮಾಡಬೇಕು ಪುಟ್ಟ, ಅಲ್ಲಿತನಕ ಮಳೆಗಾಲದಲ್ಲಿ ಹಿಟ್ಟು ಬೀಸುವುದಿಲ್ಲ, ದೋಸೆ ಮಾಡುವುದಿಲ್ಲ’ ಎಂದು ನಗುತ್ತಿದ್ದಳು ಭಾಗಕ್ಕ. ದೋಸೆಯ ಬದಲು ಅವಲಕ್ಕಿ ತಿನ್ನಬಹುದಿತ್ತು, ಆದರೆ ಹಿಟ್ಟು ಬೀಸುವಾಗ ಅವಳು ಹೇಳುತ್ತಿದ್ದ ಕಥೆಗಳು ತಪ್ಪಿ ಹೋಗುತ್ತಿದ್ದವು.ಮಳೆಗಾಲದಲ್ಲಿ ಮಾತ್ರ ತಪ್ಪಿ ಹೋಗುತ್ತಿದ್ದ ಕಥೆಗಳು ಆಮೇಲೆ ಶಾಶ್ವತವಾಗಿ ತಪ್ಪಿ ಹೋದವು ಮತ್ತು ಒಂದು ಕಥೆ ಮಾತ್ರ ಶಾಶ್ವತವಾಗಿ ಉಳಿದುಹೋಯಿತು ಎಲ್ಲರ ಬಾಯಲ್ಲಿ. ’ಭಾಗಕ್ಕ ಓಡಿ ಹೋದಳಂತೆ” ಎಂಬ ಶೀರ್ಷಿಕೆಯಡಿಯಲ್ಲಿ.

ಈಗ ನಾನು ಮನೆಯ ಹಂಚುಗಳನ್ನೆಲ್ಲ ಸರಿ ಮಾಡಿಸಿದ್ದೇನೆ.ಮಳೆಗಾಲದಲ್ಲಿ ನಮ್ಮ ಮನೆಯೀಗ ಸೋರುವುದಿಲ್ಲ.ಈಗ ನನ್ನ ಹೆಂಡತಿ ಗ್ರೈಂಡರಿನಲ್ಲಿ ಅಕ್ಕಿ ಬೀಸುತ್ತಾಳೆ.ಆದರೆ ನನಗೆ ಅವಳು ಕಥೆ ಹೇಳುವುದಿಲ್ಲ.ನನ್ನ ಮಗನಿಗೂ ಹೇಳುವುದಿಲ್ಲ.ನನ್ನ ಮಗಳು ಅವಳ ತಮ್ಮನಿಗೆ ಇಂಗ್ಲೀಷ್ ಪದ್ಯ ಬಾಯಿಪಾಠ ಮಾಡಿಸುವಾಗ ನನಗೆ ನನ್ನ ಅಕ್ಕ ನೆನಪಾಗುತ್ತಾಳೆ. ಹಾಗೆ ನೆನಪಾದಾಗೆಲ್ಲ ಹುಡುಕುವ ಯತ್ನ ಮಾಡಿ ಮಾಡಿ ಈಗ ಅವಳೆಲ್ಲೋ ಇದ್ದಾಳೆಂದು ಗೊತ್ತಾಗಿ ಇಲ್ಲಿ ಬಂದರೆ ನನಗೆ ಖುಷಿಯೇ ಆಗುತ್ತಿಲ್ಲ. ಓಡಿ ಹೋಗಿ ಅವಳನ್ನು ಅಪ್ಪಿಕೊಳ್ಳಬೇಕೆಂದು ಅನಿಸುತ್ತಿಲ್ಲ. ಬಹುಶಃ ನಾನು ಅವಳಿಂದ ದೂರವಾಗಿ ಬೆಳೆದಿದ್ದಕ್ಕೆ! ಅಥವಾ ಬೆಳೆದು ದೊಡ್ಡವನಾಗಿದ್ದರಿಂದ ದೂರವಾದೆನಾ?! ನನ್ನಲ್ಲಿ ಹಳೆಯ ತಮ್ಮನನ್ನು ಅವಳ ಕಣ್ಣುಗಳು ಹುಡುಕಲು ಹೋಗಿ ನಿರಾಸೆಯಾಗಬಹುದಾ ಅವಳಿಗೆ? ಅಥವಾ ಅವಳಿಗೂ ನನ್ನ ಹಾಗೇ ಆಗುತ್ತಿರಬಹುದಾ? ಪ್ರೀತಿ ಉಕ್ಕುತ್ತದೆ ಎಂದು ಕಲ್ಪನೆ ಮಾಡಿಕೊಂಡಿದ್ದೇ ಅತಿಯಾಯಿತೇನೋ. ಪರೀಕ್ಷೆ ಮುಗಿದ ದಿನ ತುಂಬ ಖುಷಿಯಾಗುತ್ತದೆ ಎಂದುಕೊಳ್ಳುತ್ತಿದ್ದೆ. ಆದರೆ ಪ್ರತೀಸಲವೂ ಪರೀಕ್ಷೆ ಮುಗಿದಾಗ ಏನೋ ಕಳೆದುಹೋದಂತೆ, ಎಲ್ಲ ಖಾಲಿ ಖಾಲಿ ಯಾಕೋ ಬೇಜಾರು ಎನಿಸಿಬಿಡುತ್ತಿತ್ತು. ಖುಷಿಯನ್ನು ಒತ್ತಾಯದಿಂದ ತಂದುಕೊಳ್ಳಬೇಕಾಗುತ್ತಿತ್ತು. ಈಗಲೂ ಹಾಗೇ ಆಗುತ್ತಿದೆಯೇನೋ ಎನಿಸುತ್ತಿದೆ.

ನನಗೆ ನನ್ನ ಹಳೇ ಭಾಗಕ್ಕ ಬೇಕು. ಅವಳಲ್ಲಿನ ಅಮ್ಮ ನನಗೆ ಬೇಕು, ಅವಳು ಹೇಳಿದ ಕಥೆ ಕೇಳುವ ಅವಳ ತಮ್ಮ ಮತ್ತೆ ನನ್ನಲ್ಲಿ ಹುಟ್ಟಬೇಕು, ನಾನು ತಪ್ಪಿ ಅವಳ ಬಗ್ಗೆ ಆಡಿದ ಮಾತುಗಳಿಗಾಗಿ ಅವಳಲ್ಲಿ ಕ್ಷಮೆ ಕೇಳಬೇಕು, ಎಂದೆಲ್ಲ ಯೋಚಿಸುತ್ತ ನಿಂತಾಗ ಬಂದು ಬಾಗಿಲು ತೆರೆದವಳಲ್ಲಿ ನನ್ನ ಭಾಗಕ್ಕನ ಕಿಂಚಿತ್ತು ಸುಳಿವು ಕೂಡ ಇಲ್ಲ. ಅವಳು ಅವಳ ದೊಡ್ಡ ಮನೆಯ, ಸುಖೀ ಸಂಸಾರದಲ್ಲಿ ಹೆಂಡತಿ, ಅಮ್ಮ ಎಲ್ಲ ಆಗಿ ’ಅಕ್ಕ’ನನ್ನು ಜನುಮದ ಹಿಂದೆಂಬಂತೆ ದಾರಿಯಲ್ಲೆಲ್ಲೋ ಬಿಟ್ಟು ಬಂದಿದ್ದಾಳೆ ಎನಿಸಿಹೋಯಿತು. ಅಥವಾ ನಾನು ಯಾರದೋ ಬಳಿ ಅವಳ ಬಗ್ಗೆ ಆಡಿದ ಮಾತುಗಳೆಲ್ಲ ಅವಳಿಗೆ ತಿಳಿದು ಹೋಗಿರಬಹುದಾ?ಹೇಗಾದರೂ ಮಾಡಿ ಅವೆಲ್ಲ ನಾನು ಆಡಿದ್ದೇ ಅಲ್ಲ ಎಂದು ವಾದಿಸಿ ಬಿಡಬೇಕು ಎನಿಸಿತು. ಆ ಮಾತುಗಳೆಲ್ಲ ಒಂದೊಂದಾಗಿ ಬಂದು ಕಿವಿಯಲ್ಲಿ ಗುಂಯ್ ಗುಟ್ಟಿ ಹೋಗುತ್ತಿರುವಂತೆ ಭಾಸವಾಗತೊಡಗಿದಾಗ ಕಣ್ಣಲ್ಲಿ ನೀರಾಡಿತು.ನನ್ನ ಮರ್ಯಾದೆ ಕಾಪಾಡಿಕೊಳ್ಳಲು ಹೋಗಿ, ಅವಳ ಮರ್ಯಾದೆಯನ್ನು ಸ್ವಲ್ಪ ಜಾಸ್ತಿಯೇ ಹರಾಜು ಹಾಕಿಬಿಟ್ಟಿದ್ದೇನೆ ಎನಿಸಿತು. ಎಲ್ಲರೂ ”ನಿನ್ನ ಅಕ್ಕ ಹೀಗಂತೆ’ ಎಂದಾಗ, ಅವಳು ನನ್ನ ಅಕ್ಕನೇ ಅಲ್ಲ ಎಂದುಬಿಟ್ಟಿದ್ದೇನೆ ಎಂಬುದೆಲ್ಲ ನೆನಪಾಯಿತು.

ಏನಾದರೂ ಆಗಲಿ ಅವಳ ಕಾಲಿಗೆ ಬಿದ್ದಾದರೂ ’ಕ್ಷಮಿಸು’ ಎಂದು ಕೇಳಿಬಿಡಬೇಕು ಎಂದರೆ, ಉಹೂಂ..ಅಲ್ಲಿ ನನ್ನನ್ನು ಕ್ಷಮಿಸುವ ಭಾಗಕ್ಕ ಇಲ್ಲ ಎನ್ನಿಸಿ ಕಣ್ಮುಚ್ಚಿ ಕುಳಿತ ಮರುಗಳಿಗೆ ಭಾಗಕ್ಕನ ಕೈ ನನ್ನ ಕೈಯ್ಯಲ್ಲಿತ್ತು, ಮತ್ತು ಅವಳ ಕಣ್ಣಲ್ಲೂ ನೀರಿತ್ತು. ಅವಳ ಮೌನ ’ಕ್ಷಮಿಸು’ ಎಂದು ಉಸುರಿತ್ತು. ನನ್ನ ಮೌನವೂ ಅವಳ ಮೌನದೊಡನೆ ಕ್ಷಮೆ ಕೇಳಿತ್ತು. ಅಮ್ಮ ಇಲ್ಲದ ಅಕ್ಕಂದಿರೆಲ್ಲ ಎಷ್ಟೊಂದು ಅಮ್ಮನಂತಿರುತ್ತಾರಲ್ಲ, ಅಲೆಯುಕ್ಕುವ ಕಡಲಿನಂತೆ ಇಂತಹ ಅಮ್ಮಂದಿರ ಕರುಣೆಯುಕ್ಕುವ ಒಡಲು ಎಂದಿಗೂ ಬರಡಾಗದಿರಲಿ ಎಂದು ಅಮ್ಮನಂತಹ ಅಕ್ಕನ ಮಡಿಲಿನಲ್ಲಿ ಮಲಗಿದ ಮನಸ್ಸು ಪಿಸುನುಡಿಯುತ್ತಿತ್ತು.