Wednesday 28 October, 2009

ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ....




"ಅಮ್ಮಾ....
ಮನುಷ್ಯರ ಥರಹ ನಮಗೇಕೆ ಕೈಗಳಿಲ್ಲ?"
ಗೂಡು ಹೆಣೆಯುತ್ತಿರುವ ಅಮ್ಮನನ್ನು ಕೇಳಿತು ಮರಿ ಹಕ್ಕಿ.
ತಾಯಿ ಹಕ್ಕಿಗೆ ದಿಗಿಲಾಯಿತು. ಮರಿ ಮನುಷ್ಯರ ಹಾಗೆ ಬಯಕೆಗಳ ಹಿಂದೆ ಬೀಳುವುದೇನೋ ಎಂದು.
ತಾಯಿ ಹಕ್ಕಿ ಹೇಳಿತು, " ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ಏನೇನು ಬೇಕೋ ಅದನ್ನ ನಿಸರ್ಗ ನಮಗೆ ಕೊಟ್ಟಿದೆ ಮಗು.ಇಲ್ಲದ್ದನ್ನು ಬಯಸುವುದು, ಇದ್ದಿದ್ದನ್ನು ಮರೆಯುವುದು ಮನುಷ್ಯರ ಕರ್ಮ.ಅವರ ಬಯಕೆಗಳು ಎಂದಿಗೂ ಮುಗಿಯುವುದೇ ಇಲ್ಲ. ಕೊಟ್ಟ ಕೈಗಳನ್ನು ಅವರು ಉಣ್ಣಲು, ದುಡಿಯಲು ಮಾತ್ರ ಬಳಸುವುದಿಲ್ಲ, ಕೊಲ್ಲಲು, ಕಡಿಯಲು ಕೂಡ ಬಳಸುತ್ತಾರೆ.ಅವರಂತೆ ನಾವು ಆಗದಿರಲೆಂದು ದೇವರು ನಮಗೆ ಕೈ ಕೊಟ್ಟಿಲ್ಲ."

ಆದರೂ ಮರಿ ಹಕ್ಕಿಗೆ ಸಮಾಧಾನವಾಗಲಿಲ್ಲ.ನಮಗೂ ಕೈ ಬೇಕಾಗಿತ್ತು ಎನಿಸಿತು.ನಾವು ಅವರಂತೆ ಕೆಟ್ಟ ಉದ್ದೇಶಕ್ಕೆ ಬಳಸುತ್ತಿರಲಿಲ್ಲ ಎನಿಸಿತು. ಮರಿಯ ಮುಖದ ತುಂಬಾ ಅಸಮಾಧಾನ. ತಾಯಿ ಹಕ್ಕಿ ಗಮನಿಸದಿರಲಿಲ್ಲ.ಅದಕ್ಕೆ ಗೊತ್ತು, ನಿಸರ್ಗ ತಮಗೆ ಕೊಟ್ಟ ಅದ್ಭುತ ದೇಹದ ಬಗ್ಗೆಯಾಗಲಿ, ಸೌಕರ್ಯದ ಬಗ್ಗೆಯಾಗಲಿ, ಅಸಂತೃಪ್ತಿ ವ್ಯಕ್ತಗೊಂಡರೆ ವಿನಾಶ ಕಾಲ ಹತ್ತಿರ ಬಂದಂತೆ ಎಂದು. ಬುದ್ಧಿ ಹೆಳೋಣವೆಂದರೆ ಅಂಥಹ ಅತೃಪ್ತ ಮನಸ್ಸು ಯಾರ ಬುಧ್ಧಿವಾದವನ್ನೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರುವುದಿಲ್ಲ ಎಂದು ಕೂಡ ಅದಕ್ಕೆ ತಿಳಿದಿತ್ತು. ಆದರೂ ತನ್ನದೇ ಮರಿಯನ್ನು ತಿದ್ದದಿರಲಾದೀತೆ?
ಅಂದು ಇಡೀ ರಾತ್ರಿ ಮರಿಗೆ ನಿದ್ದೆಯೇ ಇಲ್ಲ.ಹಾಗೆಯೇ ಅಲ್ಲವೇ, ಬಯಕೆಯ ಹುಚ್ಚು ಹತ್ತಿದ ಮನಸ್ಸು ತನಗೆ ಸಿಕ್ಕಿದ ಯಾವ ಸುಖವನ್ನೂ ಪರಿಗಣಿಸುವುದೇ ಇಲ್ಲ. ಮರಿಗೆ ತನ್ನ ಮೆತ್ತನೆಯ ಹಾಸಿಗೆ, ಬೆಚ್ಚನೆಯ ತಾಯ್ಮಡಿಲು ಯಾವುದನ್ನೂ ಅನುಭವಿಸಲಾಗಲೇ ಇಲ್ಲ ಅಂದು ರಾತ್ರಿ.ತಾಯಿ ಹಕ್ಕಿ ನೋಡುತ್ತಲೇ ಇತ್ತು. ಸಮಯ ಪಕ್ವವಾಗಲೆಂದು ಕಾಯುತ್ತಿತ್ತು.

ಸಿಗದೇ ಇರುವುದನ್ನು ಬಯಸುತ್ತ ಕಳೆದುಕೊಂಡ ಕ್ಷಣಗಳು ಮತ್ತೆ ಮರಳಿ ಬರುವುದಿಲ್ಲವೆಂಬುದನ್ನು ತಾಯಿ ಹಕ್ಕಿ ಮಗುವಿಗೆ ತಿಳಿಸಬಯಸಿತ್ತು. ಆದರೆ ಮರಿಗೆ ತಾಯಿ ಹಕ್ಕಿ ಪ್ರಯತ್ನಪಡದೆ ಕುಳಿತ ಸೋಮಾರಿಯಂತೆ ಕಾಣುತ್ತಿತ್ತು. ಸಹಜವೇ ಅಲ್ಲವೇ? ಬಿಸಿ ರಕ್ತಕ್ಕೆ ಅನುಭವದ ಮಾತುಗಳು ಅರ್ಥಹೀನವಾಗಿ ಕಾಣುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೂ ಅಮ್ಮಂದಿರು ಹಾಗೆಲ್ಲ ಸುಲಭವಾಗಿ ಬಿಡುವುದಿಲ್ಲವಲ್ಲ.
ತಾಯಿ ಹಕ್ಕಿ ನಿರ್ಧರಿಸಿತು. ಹೇಗಾದರೂ ಮಾಡಿ ಮರಿಗೆ ಬಯಕೆ ಮತ್ತು ಅಗತ್ಯಕ್ಕೆ ಇರುವ ವ್ಯತ್ಯಾಸವನ್ನು ತಿಳಿಸಬೇಕು ಮತ್ತು ಅವಶ್ಯಕತೆಗಳು ಪೂರೈಸಿದ ಮೇಲೆ ತನ್ನ ಅಂತರಂಗದ ಕರೆಗೆ ಓಗೊಡಬೇಕು ಎಂದು. ಅವುಗಳನ್ನೇ ಜೀವನದ ಗುರಿಯಾಗಿಸಿಕೊಂಡು ಹಿಂದೆ ಬಿದ್ದವರ ಬದುಕು ಅಟ್ಟ ಹತ್ತಲು ಹೋಗಿ ಏಣಿಯ ಮೋಹಕ್ಕೆ ಬಿದ್ದವನಂತಾಗುತ್ತದೆ ಎಂದೆಲ್ಲ ಹೇಳಬಯಸಿತು ತಾಯಿ ಮನಸ್ಸು. ಆದರೆ ತನ್ನ ಮಾತನ್ನು ಅರಗಿಸಿಕೊಳ್ಳುವ ಶಕ್ತಿ ಇನ್ನೂ ಬಂದಿಲ್ಲ ಮರಿಗೆ ಎಂಬುದರ ಅರಿವಿತ್ತು ತಾಯಿ ಹಕ್ಕಿಗೆ.ಅಸಮರ್ಥರ ಮುಂದೆ ಆಡಿದ ಮಾತುಗಳು ವ್ಯರ್ಥವಾಗುವವು, ಅಥವಾ ದುರುಪಯೋಗವಾಗುವವು ಎಂಬುದು ಕೂಡ ಗೊತ್ತಿತ್ತು ಹಕ್ಕಿಗೆ!

ಮರುದಿನ ಕೂಡ ಮರಿಯ ಮನಸ್ಸು ಏನನ್ನೋ ಯೋಚಿಸುತ್ತಿತ್ತು.ಗೊಂದಲದಲ್ಲಿತ್ತು. ಹಾರಲು ಕಲಿಯಬೇಕೆಂಬ ಹಂಬಲವೇ ಇಲ್ಲದಂತೆ ಕುಳಿತಿತ್ತು ಮರಿ. ತಾಯಿ ಹಕ್ಕಿ ಪ್ರೀತಿಯಿಂದ ಹತ್ತಿರ ಬಂದು, ಮರಿಯನ್ನು ತಬ್ಬಿಕೊಂಡಿತು. ಮರಿಗೆ ತಡೆ ಹಿಡಿದಿದ್ದ ದುಃಖವೆಲ್ಲ ಉಮ್ಮಳಿಸಿ ಬಂದಂತಾಯಿತು.ಬಿಕ್ಕಿ ಬಿಕ್ಕಿ ಅಳಲಾರಂಭಿಸಿತು ಮರಿ.ತಾಯಿ ಹಕ್ಕಿ ನಿಧಾನವಾಗಿ ಮರಿಯನ್ನು ಸಮಾಧಾನಗೊಳಿಸುತ್ತ, ಬುದ್ಧಿ ಹೇಳಲಾರಂಭಿಸಿತು.
"ನೋಡು ಮರೀ..,ನಿನಗೆ ಕೈಯ್ಯ ಬದಲಾಗಿ ರೆಕ್ಕೆಗಳಿಲ್ಲವೇ? ಇಲ್ಲದ ಕೈಗಳ ಬಗ್ಗೆ ಯೋಚಿಸುತ್ತ ಸಮಯ ವ್ಯಯ ಮಾಡಿಕೊಳ್ಳುತ್ತೀಯೇಕೆ? ಹಾರಬೇಕೆಂಬ ಬಯಕೆ ಇಲ್ಲವೇ ಮನಸ್ಸಿನಾಳದಲ್ಲಿ?ಕೈ ಏಕೆ ನಿನಗೆ? ನೀನೇನು ಮನುಷ್ಯರಂತೆ ಆಹಾರ ಸಂಗ್ರಹಿಸಿ ಗುಡ್ದೆ ಹಾಕಬೇಕೆ? ಆ ದಿನದ ಕೂಳನ್ನು ದೇವರು ಆ ದಿನವೇ ಕೊಡುತ್ತಾನೆಂಬ ಭರವಸೆಯಿಲ್ಲವೇ ನಿನಗೆ?ಅವರಂತೆ ಗುಡ್ದದಷ್ಟು ದೊಡ್ಡ ಮರಗಳನ್ನು ಕಡಿದು ಮನೆ ಕಟ್ಟಬೇಕೆ? ನಾವು ಕೊಕ್ಕಿನಿಂದ, ಕಾಲಿನಿಂದ ಕಟ್ಟುವಷ್ಟು ಚೆಂದದ ಮನೆಗಳನ್ನು ಕೈಯಿರುವ ಮನುಷ್ಯರು ತಲೆ ಕೆಳಗಾಗಿ ನಿಂತರೂ ಕಟ್ಟಲಾರರು. ಅವರೆಷ್ಟೆ ಮುಂದುವರಿದರೂ ನಮ್ಮಂತೆ ಸ್ವಚ್ಚಂದವಾಗಿ ಎಂದಿಗೂ ಹಾರಲಾರರು."
"ನಿಸರ್ಗದ ದೃಷ್ಟಿಯಲ್ಲಿ ಎಲ್ಲರೂ ಒಂದೇ ಮಗೂ, ಒಬ್ಬರಿಗೆ ಹೆಚ್ಚು ಒಬ್ಬರಿಗೆ ಕಮ್ಮಿ ಕೊಡುವ ಗುಣ ನಿಸರ್ಗಕ್ಕಿಲ್ಲ.ಒಂದಿಲ್ಲೊಂದು ರೀತಿಯಲ್ಲಿ ಸೃಷ್ಟಿಯ ತಕ್ಕಡಿ ಸರಿದೂಗಲೇಬೇಕು. ಇಲ್ಲದ್ದಕ್ಕೆ ಕೊರಗಬೇಡ. ಅದಕ್ಕೆ ಬದಲಾಗಿ ನಿನಗೆ ಇನ್ನೇನೋ ಸಿಕ್ಕಿರುತ್ತದೆ. ಹಾರಬೇಕೆಂಬುದು ನಿನ್ನ ಅಂತರಾಳದ ಕರೆ. ಅದನ್ನು ಕೇಳಿಸಿಕೋ...

ಅಗತ್ಯಕ್ಕಿಂತ ಹೆಚ್ಚು ಬಯಸುವುದು ಹೇಗೆ ತಪ್ಪೋ ಹಾಗೇ ಅವಶ್ಯಕತೆಗಳಿಗೇ ಅಂಟಿಕೊಂಡಿರುವುದೂ ತಪ್ಪು,ಅತಿಯಾದರೆ ಅವಶ್ಯಕತೆಗಳೇ ಬಯಕೆಗಳಾಗಿ ಹೋಗುತ್ತವೆ.ಮನುಷ್ಯರಂತೆ ನೀನು ಅವುಗಳ ಹಿಂದೆ ಬೀಳುತ್ತೀಯ... ಅಗತ್ಯಪೂರೈಸಿದೊಡನೆ ನಿನ್ನ ಅಂತರಾಳದ ಆಗಸದಲ್ಲಿ ಗರಿ ಬಿಚ್ಚಲೇಬೆಕೆಂಬುದನ್ನೂ ಮರೆಯಬಾರದು".
ಮರಿಗೆ ಸತ್ಯದ ಅರಿವಾಗಿ ಕಣ್ಣು ತುಂಬಿ ಬಂತು.ತಾಯಿಗೆ ಕೂಡ...
"ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ ಅದರ ಗರಿಗೆ ಮುಕ್ತಿ"
ಕೊನೆಗೂ "ಮರದ ಹಕ್ಕಿ ಮರಿ ರೆಕ್ಕೆ ಬೀಸಿತು, ಅದರ ಗರಿ ಮುಕ್ತವಾಯಿತು"


1 comment:

ವಿನಾಯಕ ಹೆಬ್ಬಾರ said...

ಜ್ಯೋತಿಯವರೇ ಲೇಖನ ಬೆಳಗುವಂತಿದೆ,
ನಿಮ್ಮ ಲೇಖನ ಇಡಿಯಾಗಿ ಮತ್ತು ಬಿಡಿಯಾಗಿ ತುಂಬಾ ಚೆನ್ನಾಗಿದೆ. ಓದಿದರೆ ಮತ್ತೆ ಮತ್ತೆ ಓದಬೇಕು ಅನ್ನಿಸುವಂತೆ ಬರೆಯುತ್ತೀರಿ....ವಾಸ್ತವವನ್ನು ಸುಂದರವಾಗಿ ಎಲ್ಲೂ ನೀರಸವಾಗದಂತೆ ಕೊಟ್ಟಿದ್ದೀರಿ....ಅಭಿನಂದನೆಗಳು.