Monday 9 November, 2009

ಬಿಟ್ಟು ಹೋದವರ ದುಃಖ




         ಉರಿ ಬಿಸಿಲ ಮಧ್ಯಾಹ್ನ ಸ್ಮಶಾನಕ್ಕೆ ಹೋಗಿ ಹೆಣದ ಖಮಟು ವಾಸನೆ ತಿಳಿಯುತ್ತಲೇ ಇಲ್ಲ ಎಂಬಂತೆ ಕೂತವನ ಮುಖದಲ್ಲಿ ಪೂರ್ತಿ ಬತ್ತಿ ಹೋದ ದುಃಖ ಪ್ರೇತ ಕಳೆಯನ್ನು ತಂದಿತ್ತು. ಇವನು ಹುಟ್ಟಿದ ಮೇಲೆ 'ವಿಷಾದ’ ಹುಟ್ಟಿತೇನೋ ಎಂಬಂತೆ ಭಾಸವಾಗುತ್ತಿತ್ತು. ಅವಳು ನೆನಪಾಗುತ್ತಿದ್ದಳು ಮರೆಯಲೆತ್ನಿಸಿದಷ್ಟೂ ನೆನಪಾಗುವ ಗಾಯದಂತೆ! ಆದರೂ ಇವನು ಅವಳನ್ನು ಹಾಗೆಂದು ದೂರಲಾರ.ಅದು ಪ್ರೀತಿ! ಅವನು ಅವಳನ್ನು ಪ್ರೀತಿಸಿದ...
       ನನ್ನನ್ನು ಜೀವಂತ ಸುಡುತ್ತಿರುವ ದುಃಖಕ್ಕಿಂತ ಇಲ್ಲಿ ಹೆಣಗಳನ್ನು ಸುಡುತ್ತಿರುವ ಬೆಂಕಿಯೇ ಪ್ರಾಣಕ್ಕೆ ಪ್ರಿಯವೇನೋ, ದಹಿಸುವ ಬೆಂಕಿಯನ್ನಾದರೂ ಸಹಿಸಿಯೇನು ಈ ದುಃಖವನ್ನಲ್ಲ ಎಂದುಕೊಂಡವನ ಕರುಳನ್ನ ಯಾರೋ ಕಿವುಚಿದಂತಾಯಿತು. ಮತ್ತೆ ಮತ್ತೆ ಉಕ್ಕಿ ಬರುವ ದುಃಖದ ಬಗ್ಗೆ ಆಶ್ಚರ್ಯವೋ, ಅಸಹ್ಯವೋ ಏನೋ ಗೊತ್ತಾಗದ ಭಾವ ಅವನಿಗೆ... ಎಷ್ಟು ಅತ್ತರೂ ಮುಗಿಯುವುದೇ ಇಲ್ಲವೇಕೆ ಈ ಕಣ್ಣೀರು? ಬಹುಶಃ ಒರತೆಯಿರಬೇಕು ಹೃದಯದಲ್ಲೊಂದು ಎನಿಸಿ ಜೀವವಿಲ್ಲದ ನಗುವೊಂದು ಸುಳಿದಾಡಿತು ಸ್ಮಶಾನದಲ್ಲಿ, ಸ್ಮಶಾನ ಮೌನದ ನಡುವೆ ಆರಲಿರುವ ದೀಪವೊಂದು ಜೋರಾಗಿ ಉರಿದಂತೆ...!
       ಬದುಕೆಂಬುದು ಭ್ರಮೆಯಲ್ಲವೆಂಬುದು ಅವನಿಗೂ ಗೊತ್ತಿತ್ತು. ಒಂದೇ ಕಡೆಯಿಂದ ಹರಿಯುತ್ತಿರುವ ಪ್ರೀತಿಗೆ ಅರ್ಥವಿಲ್ಲವೆಂದಲ್ಲ, ಆದರೂ ಸಾಗರವೇ ಇಲ್ಲದಿದ್ದರೆ ನದಿಯ ಹರಿಯುವಿಕೆಗೆ ಸಾರ್ಥಕತೆ ಇದೆಯೆ? ಆದರೂ ತನ್ನ ಹರಿಯುವಿಕೆಯನ್ನು ತಡೆಯಲು ನದಿಗಾದರೂ ಸಾಧ್ಯವಾದೀತೆ? ಬುದ್ಧಿ ಹೇಳುತ್ತದೆ. ಹೃದಯ ನಿಲ್ಲಬೇಕಲ್ಲ! ಗಟ್ಟಿ ಮನಸ್ಸು ಮಾಡಿಕೋ ಎನ್ನುತ್ತಾರೆ. ಮೃದುತ್ವವೇ ಅದರ ಗುಣ. ಗಟ್ಟಿಯಾಗೆಂದರೆ...? ಅವಳು ಇವನೆಡೆಗೆ ಹರಿವ ನದಿಯಾಗಲೂ ಇಲ್ಲ. ನದಿಯಾಗಿ ಹರಿದು ಹೋದರೂ ಇವನನ್ನು ಸೇರಿಸಿಕೊಳ್ಳುವ ಸಾಗರವಾಗಲೂ ಇಲ್ಲ.ಇವರಿಬ್ಬರ ನಡುವೆಯೇ ಹುಟ್ಟಿದ ಪ್ರೀತಿಗೆ ಇವನು ಹೆತ್ತಮ್ಮ. ಅವಳು ಮಲತಾಯಿ. ಪ್ರೀತಿಯನ್ನು ಇವನು ಪ್ರೀತಿಸಿದಷ್ಟು ಅವಳು ಪ್ರೀತಿಸಲಾಗಲಿಲ್ಲ.ಅದು ಅವಳ ತಪ್ಪಾ? ಹಾಗೆಂದು ಅವನಂತೂ ಎಂದಿಗೂ ಹೇಳಲಾರ.ಅದು ಪ್ರೀತಿ! ಕೊನೆಗೂ ತನ್ನದೇ ತಪ್ಪೇನೋ ಎಂದು ನೊಂದುಕೊಳ್ಳುತ್ತದೆ ಪ್ರೀತಿ.
       ತಾಯಿಯಂಥ ಹೆಣ್ಣೊಂದು ಬಂದು ಇವನನ್ನು ಮಡಿಲಿಗೆ ಹಾಕಿಕೊಂಡು ಮಲಗಿಸುವವರೆಗೆ ಇರಬಹುದು ಇಷ್ಟೊಂದು ದುಃಖ. ಆದರೆ ಹಾಗೆಲ್ಲ ಯೋಚಿಸಲಾದರೂ ಸಾಧ್ಯವೇ ಈಗ?ಗೊತ್ತು, ಕಾಲ ಎಲ್ಲಕ್ಕೂ ಮದ್ದೆಂದು.ಆದರೆ ಈ ಕ್ಷಣ ಹೃದಯ ಒಡೆದು ಹೋಗುತ್ತಿದೆ ಎಂದೆನಿಸುವಾಗ ಏನು ಮಾಡುವುದು?ಅದಕ್ಕೇ ಸ್ಮಶಾನಕ್ಕೆ ಬಂದಿದ್ದು. ದುಃಖವಾದಾಗ ಮರೆಯುವುದಕ್ಕಾಗಿ ವಾಸಸ್ಥಳ ಬದಲಿಸಬಯಸಿ ಪ್ರವಾಸಕ್ಕೆಲ್ಲ ಹೋಗುತ್ತಾರಲ್ಲ ಹಾಗೆ! ಎಲ್ಲಿಗೇ ಹೋದರೂ ಹಿಂಬಾಲಿಸುವ ನಾಯಿಯಂಥಹದು ತನ್ನ ಮನಸ್ಸು ಎನಿಸಿತವನಿಗೆ. ನೆರಳಾದರೂ ಕತ್ತಲಲ್ಲಿ ಬಿಟ್ಟು ಹೋಗುತ್ತದೆ.ಈ ಮನಸ್ಸು? ಊಹುಂ...
       ಅಪರಾಧಿ ಪ್ರಜ್ಞೆ ಇವನಿಗೆ.ಅವಳು ಬಿಟ್ಟು ಕೂಡ ಹೋಗಲಿಲ್ಲ. "ಹೋಗು, ನೀನು ಬೇಡ ನನಗೆ" ಎಂದು ಹೇಳುವಷ್ಟು ಗಮನ ಅವಳಿಗಿದ್ದಿದ್ದರೆ ಇವನು ಅವಳನ್ನು ಕನಸಲ್ಲೂ ಪೂಜಿಸುತ್ತಿದ್ದ.ಅವಳಿಗೆ ಅವನು ತನ್ನ ಜೀವನದ ಎಷ್ಟು ದೊಡ್ಡ ಪಾತ್ರ ಎಂಬುದು ಗೊತ್ತೇ ಆಗಲಿಲ್ಲ. ಎಲ್ಲರಿಗೂ ಆಗಿ ಉಳಿದರೆ ಅವಳ ಸಮಯದಲ್ಲಿ ಇವನಿಗೆ ಕೊಂಚ ಪಾಲು.ಅವಳ ಪ್ರಪಂಚದಿಂದ ಎಲ್ಲರೂ ಎದ್ದು ಹೋಗಿ ”ಬಿಕೋ’ ಎನಿಸತೊಡಗಿದಾಗ ಇವನಿಗೆ ಸ್ವಾಗತ. ಇವನ ಜಗತ್ತು ಅವಳಿಲ್ಲದೇ ಯವಾಗಲೂ”ಬಿಕೋ’ ಎನ್ನುತ್ತದೆ ಅವಳಿಗೆ ಅದೆಂದಿಗೂ ಅರ್ಥವಾಗುವುದೇ ಇಲ್ಲ. ಅರ್ಥವಾಗುವುದು ಇವನಿಗೂ ಬೇಕಿಲ್ಲ. ಏಕೆಂದರೆ ಅದು ಅರ್ಥವಾದ ದಿನ ಅವಳಿಗೆ ಖಂಡಿತ ನೋವಾಗುತ್ತದೆ ಎಂಬುದು ಇವನಿಗೆ ಗೊತ್ತು. ಅದೆಲ್ಲ ಅರ್ಥವಾಗದೆಯೇ, ಅವಳಿಗೆ ನೋವಾಗದೆಯೇ ಜೀವನ ಮುಗಿದು ಹೋಗಲೆಂದು ಆಶಿಸುತ್ತದೆ ಪ್ರೀತಿ.
        ಇವನು ಅವಳ ಜೀವನದಿಂದ ಎದ್ದು ಹೋದಾಗ ಅವಳಿಗೆ ಎಷ್ಟು ನೋವಾಗಬಹುದೆಂದು ಊಹಿಸಿಕೊಂಡು ಕರುಳು ಕಿತ್ತು ಬರುವಂತೆ, ನೆನೆ ನೆನೆದು ಅತ್ತಿದ್ದೆಲ್ಲ ಅವಳಿಗೆ ಎಂದಿಗೂ ಅರ್ಥವಾಗಲೇ ಇಲ್ಲ. ಯಾರು ಎಷ್ಟೇ ಸಲಹೆ ಕೊಟ್ಟರೂ, ನಾನೇ ಅವಳೆಂದುಕೊಂಡು ಪ್ರೀತಿಸಿದವನಿಗೆ ಅವಳನ್ನು ಬೇರೆಯಾಗಿ ನೋಡುವುದು ಒಂದು ಹಂತದಲ್ಲಿ ಸತ್ತೇ ಹೋಗುವಷ್ಟು ಸಂಕಟ ಕೊಟ್ಟಿತ್ತು. ಅದೆಲ್ಲ ಅವಳಿಗೆ ಎಂದಿಗೂ ತಿಳಿಯುವುದಿಲ್ಲ.ಅವಳಿಗೆ ತಾಯಾಗಿ, ಮಗುವಾಗಿ , ಪ್ರತಿಯಾಗಿ ಏನನ್ನೂ ಬಯಸದೇ ಪ್ರೀತಿಸಿದವನ ಪ್ರೀತಿಯ ಅಗಲುವಿಕೆ ಕೂಡ ಅವಳನ್ನು ಬದಲಾಯಿಸಲಾರದೆಂದರೆ, ಅವಳ ಬದುಕಿನಲ್ಲಿ ಇವನಿಗೆ ಇದ್ದ ಸ್ಥಾನವಾದರೂ ಎಷ್ಟಾಗಿತ್ತು? ಅವನು ಸತ್ತಾಗ ಅವಳಿಗೆ ನೋವಾಗುವುದಿಲ್ಲವೆಂದರೆ, ಬದುಕಿದ್ದಾಗ ಖುಷಿಯೂ ಆಗುವುದಿಲ್ಲವೆಂದು ತಾನೇ ಅರ್ಥ?! ಆದರೂ ಒಪ್ಪಲಾರದು ಪ್ರೀತಿ. ಇಲ್ಲ, ಅವಳಿಗೆ ನೋವಾಗುತ್ತದೆ ಎಂದೇ ಸುಳ್ಳಾಡುತ್ತದೆ ಮನಸು. ’ಪ್ರೇಮ ಕುರುಡು’ ತುಂಬ ಸತ್ಯವೆನಿಸಿತು ಮೊತ್ತ ಮೊದಲ ಬಾರಿಗೆ!
        ಆದರೂ ತನ್ನದೇ ತಪ್ಪಿರಬಹುದೆಂದು ಕೊರಗಿ ಮುದುಡಿಕೊಳ್ಳುತ್ತದೆ ಮನಸ್ಸು ಪದೇ ಪದೇ. ಅವಳು ತನ್ನ ಭಾವನೆಗಳು ಹೇಳದೆಯೇ ಅರ್ಥವಾದೀತೆಂದು ಭಾವಿಸಿರಬಹುದೆಂದು ಅವಳನ್ನು ಸಮರ್ಥಿಸುತ್ತದೆ ಮನಸ್ಸು. ಹೆತ್ತ ತಾಯಿ ತಂದೆಯ ಸಮಾಧಿಯ ಮೇಲಾದರೂ ಸರಿ, ಇವಳೊಡನೆ ಸಂಸಾರ ಕಟ್ಟಲೇಬೇಕೆಂದು ಹಾತೊರೆಯುತ್ತಿದ್ದ ಮನಸ್ಸು, ಕರುಳ ನಂಟಿಗೆ ದ್ರೋಹವೆಸಗಿದ್ದಕ್ಕೆ ಕೊರಗುತ್ತಿರಲೇ ಇಲ್ಲ. ಈಗ...ಅವಳಿಗೆ ನೋವಾದೀತೆಂದು,ಅವಳಿಗೆ ಆಗದಿರುವ ನೋವನ್ನು ತಾನೇ ಕಲ್ಪಿಸಿಕೊಂಡು ಸುಟ್ಟು ಸುಟ್ಟು ಸುಣ್ಣವಾಗುತ್ತಿದೆ ಹುಚ್ಚು ಮನಸ್ಸು. ಏನೆನ್ನುವುದು ಇದನ್ನ? ಪ್ರೀತಿಯಾ? ಅದನ್ನೇ ಏಕೆ ತಾಯ್ತಂದೆಗೆ ಕೊಡಲಾರೆಯೆಂದರೆ ಉತ್ತರ ಕೊಡಲಾರದೇ ಕಣ್ಣೀರಾಗುವ ಅಸಹಾಯಕ ಮನಸ್ಸನ್ನು ಬೈಯ್ಯುವುದಾದರೂ ಹೇಗೆ? ಆಕರ್ಷಣೆಯೆಂದರೆ ದೇವರು ಮೆಚ್ಚಲಾರನೇನೋ? ಅದು ದೇವರಿಗೆ ಬಿಟ್ಟ ವಿಷಯ. ಆದರೆ ಇವನ ಮನಸ್ಸಂತೂ ಒಪ್ಪಲಾರದು. ಆ ಪರಿ ಮೊಗೆಮೊಗೆದು ಕೊಟ್ಟ ಪ್ರೀತಿಗೆ ಇಟ್ಟ ಹೆಸರು ಯೌವ್ವನದ ಆಕರ್ಷಣೆಯೆಂದೇ? ಎಂದಿಗೂ ಸಹಿಸಲಾರದು ಮನಸ್ಸು. ಅದು ನಿಜವೋ ಸುಳ್ಳೋ ಯಾರಿಗೆ ಗೊತ್ತು? ಯಾರಿಗೆ ಬೇಕು?
       ಪ್ರೀತಿಯನ್ನು ಕಳೆದುಕೊಂಡವರಿಗೆ ಎಲ್ಲರಿಂದಲೂ ಒಂದು ಸಾಂತ್ವನವಾದರೂ ಸಿಗುತ್ತದೆ. ತೀರ ಅಸಹಾಯಕವಾಗಿ, ಅನಿವಾರ್ಯವಾಗಿ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಪ್ರೀತಿಯನ್ನು ಬಿಟ್ಟು ಹೋದವರ ಸಂಕಟ ಯಾರಿಗೆ ಅರ್ಥವಾಗುತ್ತದೆ? ಜೊತೆಗೆ ಕಾಡುವ ಅಪರಾಧಿ ಪ್ರಜ್ಞೆ ಬೇರೆ. ನಾವು ಬಿಟ್ಟು ಬಂದವರ ಬದುಕನ್ನು ಯೋಚಿಸಿ ಮನಸ್ಸೆಷ್ಟು ಕೊರಗುತ್ತದೆಂಬುದು, ’ದ್ರೋಹಿ’ ಎಂದು ಕೈ ತೋರಿಸಿ ಚುಚ್ಚುವ ಗೆಳೆಯ ಬಳಗಕ್ಕೆ ತಿಳಿಯುವುದಾದರೂ ಹೇಗೆ?
      ಮಿಡಿವ ತಂತಿ ಹರಿದಾಗ ವೈಣಿಕನಿಗೆ ಮಾತ್ರ ನೋವಾಗುತ್ತದೆಯೇ?ನುಡಿವ ವೀಣೆಯ ನೋವು ಏಕೆ ಯಾರಿಗೂ ತಿಳಿಯುವುದೇ ಇಲ್ಲ?
 
   

3 comments:

ಗೌತಮ್ ಹೆಗಡೆ said...

hm baraha tumbaa chennagide. barahada bhaava manamuttide:)

Jyoti Hebbar said...

dhanyavaada....

Anonymous said...

ಜೀವವಿಲ್ಲದ ನಗುವೊಂದು ಸುಳಿದಾಡಿತು ಸ್ಮಶಾನದಲ್ಲಿ emba maatu tumba ista vaayitu...manadolagina manda tumulada bhava vannu.. tumba channagi ... heliddira...