Friday, 22 January, 2010

ಈ ದಿನಾಂತ ಸಮಯದಲಿ...


                                 
     ’ಈ ದಿನಾಂತ ಸಮಯದಲಿ.....’ ಎಂದು ಪ್ರತೀ ದಿನಾಂತದಲ್ಲಿ ಗಟ್ಟಿ ದನಿಯಲ್ಲಿ ಹಾಡುವಾಗ ಬರೆದ ಕೆ.ಎಸ್.ನಿಸಾರ್ ಅಹ್ಮದ್ ರೆಡೆಗೆ ಅವಳ ಮನಸ್ಸಿನಲ್ಲಿ ಒಂದು ಧನ್ಯವಾದವಿರಲು ಸಾಧ್ಯವಿಲ್ಲ. ಬದುಕಿನ ಬಗ್ಗೆ ಕೂಡ! ಬದುಕು ತನಗೆ ಧನ್ಯವಾದ ಅರ್ಪಿಸುವಂತಹುದನ್ನು ಏನೇನೂ ಮಾಡಿಲ್ಲ ಎಂದೇ ಅವಳ ಭಾವನೆ.
          "ತನು ಮನದಲಿ ನೀನೆ ನೆಲೆಸಿ, ಕಣ ಕಣವೂ ನಿನ್ನ ಕನಸಿ....... ಬರದೆ ಹೋದೆ ನೀನು" ಎಂದು ಕಣ್ಣ ಮುಂದಿನ ಕಡಲಿನೆದುರು ಹಾಡಿಕೊಳ್ಳುತ್ತಾಳೆ.ಆಗೆಲ್ಲ ಕುಣಿಕುಣಿದು ಹತ್ತಿರ ಬರುವ ಕಡಲಿಗೆ, ’ಅಯ್ಯೋ..ಹೋಗು, ನಿನ್ನನ್ನಲ್ಲ ಕರೆದಿದ್ದು..’ ಎಂದು ಲಲ್ಲೆಗರೆಯುತ್ತಾಳೆ.’ನಾನಿಷ್ಟು ಬೇಡಿಕೊಂಡರೂ ಕನಿಕರ ಬಾರದೇ ಜೀವನವೇ?’ ಎಂದು ಕೂಡ ಎದುರಿಗಿದ್ದ ಸಮುದ್ರವನ್ನೇ ಕೇಳಿದರೆ, ಪಾಪ ಅದಾದರೂ ಏನೆಂದು ಉತ್ತರಿಸೀತು? ಕೆಲವೊಮ್ಮೆ ಅವಳಿಗೆ ಅನಿಸಿದ್ದಿದೆ,ಎಷ್ಟೋ ವರ್ಷದಿಂದ  ತನ್ನ ಕಣ್ಣೀರು ಹರಿದು ಈ ಕಡಲನ್ನು ಸೇರಿ ಸೇರಿಯೇ ಇಷ್ಟು ಉಪ್ಪಾಗಿರಬೇಕು ಇದರ ನೀರು ಎಂದು. ಆಗೆಲ್ಲ ಅವಳಿಗೆ ಹೆಮ್ಮೆಯಾಗುತ್ತದೆ, ದುಃಖದಲ್ಲೂ ಯಾರಿಗೋ ಏನನ್ನೋ ಕೊಟ್ಟ ಸಮಾಧಾನ. ಮರುಗಳಿಗೆ ’ಏನು ಕೊಟ್ಟೆ ನಾನು?’ ಎಂದು ತನ್ನಷ್ಟಕ್ಕೆ ತಾನೇ ವ್ಯಂಗ್ಯದ ನಗು ಬೀರಿಕೊಂಡು ಸುಮ್ಮನಾಗುತ್ತಾಳೆ.ಕೊಡಬೇಕಾದ್ದನ್ನು ಕೊಡಲಾಗಲಿಲ್ಲ.ಬೇರೆ ಏನಾದರೇನು? ತಾನು ಪಡೆಯಬೇಕಾದ್ದನ್ನು ಪಡೆಯಲಿಲ್ಲ, ತನಗೆ ಸಿಗಬೇಕಾದ್ದು ಸಿಗಲಿಲ್ಲ, ಆದ್ದರಿಂದ ಖಂಡಿತ ಜೀವನ ತನ್ನಿಂದ ಒಂದು ಧನ್ಯವಾದವನ್ನು ಕೂಡ ಬಯಸುವ ಹಕ್ಕನ್ನು ಹೊಂದಿಲ್ಲ ಎಂಬುದು ಅವಳ ಭಾವಕ್ಕೆ ಅವಳು ಕೊಡುವ ಸಮರ್ಥನೆ.
                                ****
    ಮಗುವಾಗಿದ್ದಾಗ ತಾಯಿಯನ್ನು ಕಿತ್ತುಕೊಂಡಿತು ಜೀವನ. ಈಗ ತಾಯಿಯಾಗುವ ಅವಕಾಶವನ್ನು ಕಿತ್ತುಕೊಂಡದ್ದು ಅದೇ ಜೀವನ. ಹೇಳು ನಾನೇನು ಪಾಪ ಮಾಡಿದ್ದೇನೆ? ಎಲ್ಲರ ಹಾಗೆ ನಾನೂ ಹೆಣ್ಣಲ್ಲವೇ? ನನಗೂ ಆಸೆಗಳಿಲ್ಲವೇ? ಅವರೇಕೆ ಬರುವುದಿಲ್ಲ ನನ್ನ ಬಳಿಗೆ? ನಿನ್ನ ಮಡಿಲಿಗೆ ಬಂದು ಸೇರುವ ನದಿಗಳಿಗೆ ಲೆಕ್ಕವಿಲ್ಲ, ಅವು ಹರಿಸುವ ಪ್ರೇಮ ಧಾರೆಯನ್ನುಂಡು ಸಂತುಷ್ಟವಾಗಿ ಉಕ್ಕಿ ನರ್ತಿಸುವ ನಿನ್ನ ನೋಡಿದರೆ ನನಗೆ ಹೊಟ್ಟೆಯಲ್ಲಿ ಹಸಿಸೌದೆ ಉರಿಯಲೆತ್ನಿಸಿದಂತೆ ಹೊಗೆ ಏಳುತ್ತದೆ. ಎಂಥ ಸಂಭ್ರಮ ನಿನ್ನದು! ಖಂಡಿತ ಜೀವನ ನನ್ನನ್ನೂ ನಿನ್ನಂತೆ ಸಂತುಷ್ಟಗೊಳಿಸಿದ್ದರೆ ನಾನೂ ನಿನ್ನಂತೆ ಹಾಡಿ ಕುಣಿಯುತ್ತಿದ್ದೆ. ನನ್ನಿನಿಯನನ್ನು ನೆನೆದು ನಾಚುತ್ತಿದ್ದೆ. ಅವನಿಗಾಗಿ ಭೋರ್ಗರೆವ ಜಲಪಾತವಾಗುತ್ತಿದ್ದೆ. ಸಂಭ್ರಮಿಸುತ್ತಿದ್ದೆ ಕ್ಷಣ ಕ್ಷಣಕ್ಕೂ!
    ಹೇಳುತ್ತಲೇ ಹೋಗುತ್ತೇನೆ.ಸಮುದ್ರಕ್ಕೆ ಏನೆನಿಸಿತೆಂದು ಅದು ಹೇಳುವುದಿಲ್ಲ.ನಾನೂ ಕೇಳುವುದಿಲ್ಲ.ಆ ದನಿಯಲ್ಲಿ ಇದ್ದದ್ದು ವೇದನೆಯೋ, ಆಕ್ಷೇಪಣೆಯೋ,ಅಥವಾ ವೇದನೆ ಆಕ್ಷೇಪಣೆಗಳು ತಂದ ಅಸಹಾಯಕತೆಯೋ ಕೇಳಿಸಿಕೊಳ್ಳುತ್ತಿದ್ದ ಕಡಲು ತಿಳಿಯಲೆತ್ನಿಸಿ ಹತ್ತಿರ ಬಂದು ನನ್ನೆಡೆಗೆ ಇಣುಕುತ್ತದೆ. ಉಹೂಂ..ನಾನು ಗುಟ್ಟು ಬಿಟ್ಟು ಕೊಡುವವಳಲ್ಲ.
    ಗಂಡಸು ಯಾಕೆ ತಾಯಿಯಂಥವಳು ಹೆಂಡತಿಯಾಗಿ ಸಿಗಲೆಂದು ಬಯಸುತ್ತಾನೆ ಎಂದು ಎಷ್ಟು ಯೋಚಿಸಿದರೂ ಅರ್ಥವೇ ಆಗಲಿಲ್ಲ ನನಗೆ. ಅಷ್ಟಕ್ಕೂ ’ತಾಯಿ’ಯ ಬಗ್ಗೆ ತನಗೆ ಇರುವಷ್ಟು ಪ್ರೀತಿ ಬಹುಶಃ ತಾಯಿಯಿದ್ದವರಿಗೂ ಇರಲಿಕ್ಕಿಲ್ಲ, ಯಾವಾಗಲೂ ಹಾಗೇ ಅಲ್ಲವೇ ಇಲ್ಲದಿದ್ದಾಗ ಅದರ ಬೆಲೆ ಚೆನ್ನಾಗಿ ಗೊತ್ತಾಗುತ್ತದೆ. ಅಷ್ಟಕ್ಕೂ ತಾಯ್ತನವೆಂಬುದು ಗೊತ್ತಿಲ್ಲದೇ ಹೆಣ್ಣಿನಲ್ಲಿ ಹುಟ್ಟಿನಿಂದಲೇ ಹುಟ್ಟಿ ಬಂದುಬಿಡುವ ಅಂಶವಲ್ಲವೇ ಎಂದುಕೊಳ್ಳುತ್ತೆನೆ. ಆದರೂ ನನ್ನಲ್ಲಿ ಏನೋ ಕೊರತೆಯಿದೆ ಎನ್ನುವುದು ಸುಳ್ಳಲ್ಲ. ಪ್ರೀತಿಯನ್ನು ಅಂದುಕೊಳ್ಳುವುದು ಬೇರೆ, ಅನುಭವಿಸುವುದು ಬೇರೆ ಅಲ್ಲವೇ? ತುಂಬ ಗಾಢವಾಗಿ ಗಂಡನನ್ನು ಮಗುವಿನಂತೆ ಪ್ರೀತಿಸಿ, ತನ್ನ ವ್ಯಕ್ತಿತ್ವಕ್ಕೆ ಪ್ರತ್ಯೇಕ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬಿಡದೇ ಪೂರ್ತಿಯಾಗಿ ಕಳೆದುಹೋಗುವುದು ಹೇಗೆಂಬುದು ನನಗೆ ಗೊತ್ತಿಲ್ಲವಂತೆ ಅವರು ಹೇಳುತ್ತಾರೆ ಹಾಗೆಂದು.ಇದ್ದರೂ ಇರಬಹುದು ಎನಿಸುತ್ತದೆ ತುಂಬ ಸಲ. ಆದರೆ ಅದಕ್ಕಿಂತ ಹೆಚ್ಚು ಬಾರಿ ನನಗೆ ನನ್ನತನವನ್ನು ಉಳಿಸಿಕೊಳ್ಳಲು ಬಿಡಬಾರದೆಂದು ಶಪಥ ಮಾಡಿದವರಂತೆ ಸಂಚು ಹೂಡುತ್ತಿದ್ದಾರೆ ಇವರು ಎನಿಸಿಬಿಡುತ್ತದೆ. ಆದ್ದರಿಂದ ಅದನ್ನೇ ಹೆಚ್ಚು ನಂಬಿಬಿಡುತ್ತೇನೆ. ಆದರೂ ಮನದಾಳದಲ್ಲೆಲ್ಲೋ ಒಂದು ಕರೆಯಿದೆ. ಅದು ತನ್ನನ್ನು ತಾನು ಕಳೆದುಕೊಂಡು ಅವರಲ್ಲಿ ಮುಳುಗಿಹೋಗಬಯಸುತ್ತದೆ.ಅದೇ ಇರಬಹುದು ತಾಯ್ತನದ ಕರೆ ಅಂತಲೂ ಅನಿಸುತ್ತದೆ ಕೆಲವೊಮ್ಮೆ. ಆದರೆ ನನ್ನ ಅಹಂಕಾರ ಯಾವತ್ತಿಗೂ ನನ್ನ ಸ್ವಂತಿಕೆಯನ್ನು ಕಳೆದುಕೊಂಡು ಪೂರ್ತಿಯಾಗಿ ಅವರ ಹೆಂಡತಿಯಾಗಲು ಬಿಡಲೇ ಇಲ್ಲ.
    ಹೌದು, ನನಗೆ ತಾಯಿಯಾಗಿಯೂ ಗೊತ್ತಿಲ್ಲ. ತಾಯಿಯ ಮಡಿಲಲ್ಲಿ ಮಗುವಾಗಿಯೂ ಗೊತ್ತಿಲ್ಲ. ಬಹುಶಃ ಅದಕ್ಕಾಗಿಯೇ ನಿನಗೆ ಪ್ರೀತಿಸಲು ಬರುವುದೇ ಇಲ್ಲ ಎಂದು ಹೇಳಿ ಇವರು ಹೊರಟು ಹೋದದ್ದಿರಬಹುದು. ಇಷ್ಟೊಂದು ಅಗಾಧ ಅಸಹಾಯಕತೆಯೊಂದು ಯಾವಾಗಲೂ ನನ್ನ ಜೊತೆಗಾತಿಯಾಗಿ ಉಳಿದುಬಿಡುತ್ತದೆ. ಬೇರೆ ಯಾರೂ ಕೂಡ ನನ್ನ ಜೊತೆ ತುಂಬ ದಿನ ಇರುವುದಿಲ್ಲವೆಂಬುದು ಸತ್ಯ. ನಾನೇನು ತಪ್ಪು ಮಾಡಿದ್ದೇನೆ? ಎಂದು ಎಂದಿಗೂ ಬಾಯಿಬಿಟ್ಟು ಯಾರನ್ನೂ ಕೇಳುವ ತಪ್ಪು ನಾನು ಮಾಡಲಾರೆ ಎಂಬುದು ನನಗೂ ಗೊತ್ತಿತ್ತು. ಆದರೆ ಅದಕ್ಕೆಲ್ಲ ನನ್ನ ಅಹಂಕಾರ ಕಾರಣ, ನನ್ನತನವನ್ನು ಉಳಿಸಿಕೊಳ್ಳಲು ಅತಿಯಾಗಿ ಹಪಹಪಿಸುವ ವ್ಯಕ್ತಿತ್ವ ಕಾರಣ ಎಂಬುದನ್ನು ನಾನು ಎಂದಿಗೂ ಒಪ್ಪಲಾಗದು. ಅದನ್ನು ಉಳಿಸಿಕೊಂಡು ಪಟ್ಟ ಸುಖವೇನು? ಕಳೆದುಕೊಂಡವರು ಪಡೆದುಕೊಂಡದ್ದೇನು ಎಂಬುದು ಕಣ್ಣ ಮುಂದಿನ ಸತ್ಯ, ಕಾಣದ ದೇವರನ್ನು ನೆನೆದು ಕೈ ಮುಗಿದಂತಲ್ಲ ಇದು. ಆದರೂ ನಾನು ಅದನ್ನು ಒಪ್ಪುವುದೇ ಇಲ್ಲ ಎಂದಿಗೂ. ನನಗನ್ನಿಸಿದೆ ಎಷ್ಟೋ ಸಲ, ಕಾಣುವ ವಾಸ್ತವಕ್ಕಿಂತ ಕಾಣದ ಕಲ್ಪನೆಯನ್ನು ನಂಬುವುದೇ ಸುಲಭವೆಂದು.
    "’ನೀನು’ ಕಳೆದುಹೋದಾಗ ಎಷ್ಟೊಂದು ಪಡೆದುಕೊಳ್ಳುತ್ತೀಯ ಗೊತ್ತೆ ನೀನು? ನಿನಗೆ ಕಳೆದು ಹೋಗಲು ಬರುವುದೇ ಇಲ್ಲ. ಕಳೆದು ಹೋಗುವವರೆಗೆ, ನಿನ್ನನ್ನು ನೀನು ಅರ್ಪಿಸಿಕೊಳ್ಳುವವರೆಗೆ ನಿನ್ನ ಪ್ರೀತಿ ಪ್ರೀತಿಯೇ ಅಲ್ಲ. ಮೈಮರೆತು ಪ್ರೀತಿಸಿಕೊಳ್ಳುವುದು ತಪ್ಪೆಂದು ಏಕೆ ಭಾವಿಸುತ್ತೀಯಾ? ಉಳಿದುಹೋಗುತ್ತಿರುವ ಅಹಂಕಾರವನ್ನೇಕೆ ಉಳಿಸಿಕೊಳ್ಳುತ್ತಿರುವ ವ್ಯಕ್ತಿತ್ವವೆಂದು ಸಮರ್ಥಿಸಿಕೊಳ್ಳುತ್ತೀಯಾ?" ತುಂಬ ದಿನ ಅವರು ಹೀಗೆಲ್ಲ ಕೇಳಿದಾಗ ನಾನು ಉರಿದುಹೋಗುತ್ತಿದ್ದೆ. ನನ್ನನ್ನು ಇವರು ಸಾಧಾರಣ ಹೆಂಗಸಿನಂತೆ ಇವರಿಗೆ ಶರಣಾಗಿಬಿಡಲೆಂದು ಬಯಸುತ್ತಿದ್ದಾರೆ ಎನಿಸುತ್ತಿತ್ತು. ನಾನು ಕೂಡ ಎಲ್ಲರಂತೆ ಸಾಧಾರಣ ಹೆಂಗಸು ಯಾಕಲ್ಲ ಎಂದು ಒಂದು ದಿನವೂ ನನ್ನನ್ನು ನಾನು ಕೇಳಿಕೊಂಡಿಲ್ಲ. ಅಸಾಧಾರಣ ಹೆಂಗಸಾದರೆ ಪ್ರೀತಿಯನ್ನು ಕೊಡುವ ಅಥವಾ ಪಡೆಯುವ ಸಾಧ್ಯತೆ ಯಾಕಿಲ್ಲ ಎಂದು ಕೂಡ ನಾನು ಯೋಚಿಸಲಿಲ್ಲ.
    ಪಾಪ! ಅವರಿಗೆ ಪ್ರೀತಿಯ ಅಗತ್ಯ ತುಂಬ ಇತ್ತು. ನನಗೆ ಗೊತ್ತಾಗಲೇ ಇಲ್ಲ. ಸರಿಯಾಗಿಯೇ ಇದೆ ಅವರು ಅವಳನ್ನು ಪ್ರೀತಿಸಿದ್ದು. ನನ್ನನ್ನು ಬಿಟ್ಟು ಹೋಗಿದ್ದು.ನನ್ನಿಂದ ಅವರನ್ನು ಪೂರ್ತಿಯಾಗಿ ಪ್ರೀತಿಸಲು ಆಗಲೇ ಇಲ್ಲ. ನಾನು ಭೋಜ್ಯೇಶು ಮಾತಾ ಆಗಲಿಲ್ಲ, ಕಾರ್ಯೇಶು ದಾಸಿಯಾಗಲಿಲ್ಲ, ಸಲಹೇಶು ಮಂತ್ರಿಯೂ ಆಗಲಿಲ್ಲ, ಶಯನೇಶು ವೇಶ್ಯಾ ಆಗಲೂ ನನ್ನಿಂದ ಸಾಧ್ಯವೇ ಆಗಲಿಲ್ಲ. ಬಹುಶಃ ನನಗೂ ತಾಯಿ ಇದ್ದಿದ್ದರೆ ಅವಳು ನನಗೆ ಎಲ್ಲ ಹೇಳಿಕೊಡುತ್ತಿದ್ದಳೇನೋ ಎನಿಸುತ್ತದೆ. ಆಗ ಹೀಗಾಗುತ್ತಿರಲಿಲ್ಲವೇನೋ ಎನಿಸುತ್ತದೆ.
     ನಾನು ಅವರಿಗೆ ಏನೇನೂ ಆಗಲಿಲ್ಲ. ಹೃದಯದ ಬಾಗಿಲನ್ನು ತಟ್ಟಿದರೂ ನಾನು ತೆರೆಯಲಿಲ್ಲ. ಅವರು ಅವಳನ್ನು ಮದುವೆಯಾದದ್ದು ಸುಮ್ಮನೇ ಅಲ್ಲ. ಅವಳು ಅವರನ್ನು ತಾಯಿಯಂತೆ ನೋಡಿಕೊಳ್ಳುತ್ತಾಳೆ. ಪರವಾಗಿಲ್ಲ ಅವರು ಅವಳೊಡನೆ ಸುಖವಾಗಿರಲಿ ಎನಿಸುತ್ತದೆ. ಆದರೂ ಮನದ ಮೂಲೆಯಲ್ಲೆಲ್ಲೋ ಆಸೆಯಿದೆ.ಅವರ ಮೇಲೆ ನನಗೆ ಅಧಿಕಾರವಿದೆ ಎಂದು ಮನಸು ಕೂಗುತ್ತದೆ. ನಾನು ಮೊದಲು ಬಂದವಳು ಎನ್ನುತ್ತದೆ. ಆದರೂ ನನಗೆ ಗೊತ್ತು, ಸಂಬಂಧಗಳೆಂದರೆ ಹಾಗೇ ಮೊದಲು ಆರಂಭವಾದದ್ದಾ ನಂತರವಾ ಎಂಬುದು ಮುಖ್ಯವಾಗುವುದೇ ಇಲ್ಲ. ಎಲ್ಲಿ ಹೆಚ್ಚು ಒಲವಿದೆ ಎಂದಷ್ಟೇ ನೋಡುತ್ತದೆ ಮನಸ್ಸು. ಬೇಕೆಂದೇ ಅವರು ಅವಳನ್ನು ಪ್ರೀತಿಸುವುದಿಲ್ಲ. ಹೃದಯ ಎಳೆದುಕೊಂಡು ಹೋಗಿಬಿಡುತ್ತದೆ ಒಲವಿದ್ದಲ್ಲಿಗೆ. ತಗ್ಗಿನ ಕಡೆಗೆ ಹರಿವ ನೀರಿನಂತೆ!
    ನನಗೆ ಈಗಲೂ ಇದೆಲ್ಲ ಅರ್ಥವಾಗಲೇಬಾರದಾಗಿತ್ತು. ಅರ್ಥವಾದಮೇಲೆ ಅವರನ್ನು ಬಿಟ್ಟು ಬದುಕುವುದು ಕಷ್ಟವಾಗುತ್ತಿದೆ. ಬಹುಶಃ ಹೀಗೆಯೇ ಅವರ ಮೇಲೆ ಕೋಪಿಸಿಕೊಂಡು ಇನ್ನೊಂದು ಇಪ್ಪತ್ತು ವರ್ಷ ಬದುಕಿದ್ದರೆ ಬದುಕೇ ಮುಗಿದು ಹೋಗುತ್ತಿತ್ತು ಅವರದು ಅಥವಾ ನನ್ನದು. ಆಗ ನನಗೆ ಅವರು ಬೇಕು ಎನ್ನಿಸಿದರೂ ಅಥವಾ ಅವರಿಗೆ ನಾನು ಬೇಕು ಎನಿಸಿದ್ದರೂ ಏನೂ ಮಾಡಲಾಗುತ್ತಿರಲಿಲ್ಲ. ಈಗ ಹಾಗಲ್ಲ, ಅವರು ಸಿಗಬೇಕಿತ್ತು ಎಂದು ಅನಿಸಿದಾಗ ಸಿಗಬಹುದಾ ಎಂಬ ಆಸೆ ಇಣುಕಿ ನೋಡುತ್ತದೆ ಮನದ ಕದ ಸರಿಸಿ.ಅದೇ ಕಷ್ಟ! ಅವರು ನನ್ನನ್ನೇ ಪ್ರೀತಿಸಲಿ ಎಂಬ ಆಸೆಯಿಲ್ಲ. ನನ್ನನ್ನೂ ಪ್ರೀತಿಸಲಿ ಎಂದು ಮನಸ್ಸು ಬಯಸುತ್ತಿದೆ. ಪ್ರತೀ ದಿನಾಂತದಲ್ಲೂ ಕಾಯತೊಡಗಿದ್ದೇನೆ. ಅವರು ನನ್ನನ್ನೂ ಪ್ರೀತಿಸುತ್ತಾರಾ? ಇಷ್ಟು ದಿನ ನಾನು ಅವರಿಗೆ ಕೊಟ್ಟ ನೋವನ್ನೆಲ್ಲ ಮರೆತು ನನ್ನನ್ನು ಸ್ವೀಕರಿಸುತ್ತಾರಾ?         
   
   

13 comments:

ಸಾಗರದಾಚೆಯ ಇಂಚರ said...

ಜ್ಯೋತಿ
ಬಹಳ ಅನುಭವಸ್ಥರ ಹಾಗೆ ಸುಂದರವಾಗಿ ಸಂಸಾರದ
ಎಲೆಗಳನ್ನು ಬಿಡಿಸಿದ್ದಿರಾ
ತುಂಬಾ ಚಂದದ ಬರಹ

ಗೌತಮ್ ಹೆಗಡೆ said...

wah.nimma ishtu dinada blog barahadalli idu the best:)

ಆನಂದ said...

ಭಾಷೆ, ಶೈಲಿ, ಭಾವನೆಗಳ ಓಘ ಎಲ್ಲವೂ ಹಿಡಿಸಿತು. ಮುಂದುವರೆಸಿ. :)

ನಾಳಿನ ದಿನಾಂತ ಸಮಯದಲಿ
ದೂರದ ಉಪವನದಲಿ
ಮೆಲ್ಲನೆ ತಂಗಾಳಿ ಬೀಸಿದಂತೆ
ಗೋಧೂಳಿ ಹೊನ್ನಿನ್ನಂತೆ
ಪ್ರೀತಿ ಮತ್ತೆ ಬಂದು ಮೈಗಡರಲಿ

(ನಿಸಾರ್ ಅಹಮದರ ಕ್ಷಮೆಯಿರಲಿ!)

ಮನಮುಕ್ತಾ said...

ಚೆನ್ನಾಗಿ ಬರದಿದ್ದೀರಿ.

ಬಾಲು ಸಾಯಿಮನೆ said...

ಚನ್ನಾಗಿದೆ. ಭಾವನೆಗಳೊಂದಿಗೆ ಒಂದಿಷ್ಟು nativity ಇದ್ದರೆ ಚೆನ್ನ ಎಂದು ನನ್ನ ಅನಿಸಿಕೆ. ಇಲ್ಲದಿದ್ದರೆ, ಬರೀ ಸ್ವಗತವಾಗುವ ಸಾದ್ಯತೆ ಹೆಚ್ಚು.

nannolagina nanu said...

nijvaglu superb dear..................

ದಿನಕರ ಮೊಗೇರ.. said...

ಜ್ಯೋತಿ ಮೇಡಂ,
ಸಕತ್ತಾಗಿದೆ...... ಎಳೆ ಎಳೆಯಾಗಿ ಬರೆದಿದ್ದೀರಿ....

tentcinema said...

ಮೇಡಂ, ತುಂಬಾ ಸಂಕೀರ್ಣವಾದ ಸಂಗತಿಗಳಿಲ್ಲಿ ಸಲಿಲಿತವಾಗಿ ತೆರೆದುಕೊಂಡಿವೆ. ಶೈಲಿ ಚೆನ್ನಾಗಿದೆ.
all the best..
-ಬದರಿನಾಥ ಪಲವಳ್ಳಿ
pl. visit Kannada poems blog:
www.badari-poems.blogspot.com

ಚುಕ್ಕಿಚಿತ್ತಾರ said...

ತಾಯಿಯಿಲ್ಲದ ಮಗುವಿನಲ್ಲಿ ಮ್ರುದುತ್ವದ ಕೊರತೆ ಇರುತ್ತದೆ...
ಹಾಗೆಯೇ ತ೦ದೆಯಿಲ್ಲದ ಮಗುವಿನಲ್ಲಿ ಹೆಣ್ಣಿಗ ಅ೦ಶ ಜಾಸ್ತಿಯಿರುತ್ತದೆ..
ನಿಮ್ಮ ನಿರೂಪಣೆ ಚೆನ್ನಾಗಿದೆ.
ವ೦ದನೆಗಳು.

ಗುರು-ದೆಸೆ !! said...

'ಜ್ಯೋತಿ ಶೀಗೆಪಾಲ್' ಅವರೇ..

ನಿಜ ಹೇಳಲೇ...

ನಿಮ್ಮ ಬ್ಲಾಗಿಗೆ ಬಂದ ಕೂಡಲೇ ನನ್ನು ಆಕರ್ಷಿಸಿದ್ದು ನಿಮ್ಮ ಮುಖಪುಟದ ಪಾದದ ಚಿತ್ರ..,ಶೀರ್ಷಿಕೆ..

ನಿಮ್ಮ ಬರಹ ತುಂಬಾನೇ ಚೆನ್ನಾಗಿ ಸಾಗಿರುವುದು ಕಾಣುತ್ತಿದ್ದಂತೆ.. ನಿಮ್ಮ ಬಗ್ಗೆ ಬರೆದ "ನಿಜ ಹೇಳಲೇ" ಇಷ್ಟ ಆಯ್ತು..

ನನ್ನ 'ಮನಸಿನಮನೆ'ಗೆ...:http//manasinamane.blogspot.com

ಜ್ಯೋತಿ ಶೀಗೆಪಾಲ್ said...

ಓದಿದ್ದಕ್ಕೆ ಮೆಚ್ಚಿದ್ದಕ್ಕೆ ಎಲ್ಲರಿಗೂ ಧನ್ಯವಾದ.

programers said...

excellent ............ no comments :)

BHANUPRAKASH said...

so nice & excellent i am happy