Wednesday 4 August, 2010

ಕನಸುಗಳು ಕಾದಿರಲಿ ಕೊಂಚ..


ಕಡುಗಪ್ಪು ರಾತ್ರಿಯಲಿ 
ಭೂತಾಯಿ ಮಡಿಲಲ್ಲಿ
ದಣಿದ ಜನಕೆಲ್ಲ 
ಬೆಚ್ಚಗಿನ ಸುಖನಿದ್ರೆ

ಧೋ ಮಳೆಯ ಜೋಗುಳಕೆ 
ಕಿವಿಯಾಗು ಎಂದೆ
ಸುರಿವ ಧಾರೆಗೆ ನೆನೆವ 
ಮೈಯ್ಯಾದೆ ಏಕೆ?

ಜುಳಜುಳನೆ ಹರಿವ 
ತೊರೆಯ ಗಾನವು ನಿನದು
ಸುಯ್ವ  ಗಾಳಿಯ ಹಾಡು
ನಿನಗೆಂದೇ ಹಾಡಿದ್ದು
ಕೇಳುತ್ತ ಹಿತವಾಗಿ 
ನೀ ಮಲಗು ಎಂದೆ

ತೊರೆಯ ತೀರಕೆ ನಡೆದು
ಕಡಲ ಸೇರುವ ನದಿಗೆ 
ಮೇಲ್ಮೇಲೆ ತಂಪು,
ಒಡಲೆಲ್ಲ ಬೆಂಕಿ 
ವಿರಹದುರಿಯನು ನೀನು ಬಲ್ಲೆಯೇನು?
ಎನುತ ಅಳುವೆಯೇಕೆ?

ಸಾಗರವ ಸೇರುವುದು 
ಸಹಜ ಧರ್ಮವು ಹೌದು
ಹುಟ್ಟಿ ಹರಿಯದೆಯೇ ಸೇರಿದರೆ
ಬದುಕು ಚೆಂದವಾಗುವುದೇನು?

ಆತುರತೆ ಬದಿಗಿರಲಿ
ಕನಸುಗಳು ಕಾದಿರಲಿ
ಸಹಜತೆಯು ಜೊತೆಗಿರಲಿ
ಮನದಾಳ ತಂಪಾಗಿ
ನದಿಯಂತೆ ನಲಿದಾಡಿ
ಸಾಗರದ ಕಡೆ ಪಯಣ ಸಾಗುತಿರಲಿ

18 comments:

ಮನದಾಳದಿಂದ............ said...

ಜ್ಯೋತಿಯವರೇ,
ಪ್ರಯಾಣ ಸಾಗುತಿರಲೇಬೇಕು........
ನೀವು ಹೇಳಿದ ಹಾಗೆ ಮನದಾಳ ತಂಪಾಗಿ ನದಿಯಂತೆ ನಲಿದಾಡಿ.........
ಚಂದದ ಕವನ,

Dr.D.T.Krishna Murthy. said...

ಕವನ ಸಹಜವಾಗಿ ,ಸುಂದರವಾಗಿ,ಮೂಡಿಬಂದಿದೆ.ಕೊನೆಯ ನಾಲ್ಕು ಸಾಲುಗಳು ತುಂಬಾ ಇಷ್ಟವಾದವು.

Vinay Hegde said...

maleya bagge varnane maadi.... maleyanna innu miss maado haage madta idira...nice lines... Miss U Rain..!!!

Dileep Hegde said...

ನಾವು ಹುಟ್ಟಬೇಕು.. ಹುಟ್ಟಿ ಹರಿಯಬೇಕು.. ಕನಸುಗಳನ್ನ ಕಟ್ಟಿ ನನಸಾಗಿಸಲು ಹೋರಾಡುತ್ತಲೇ ಒಂದು ದಿನ ಹೊರಟು ಬಿಡಬೇಕು..
ಹುಟ್ಟದೆ, ಹರಿಯದೇ ಸಾಗರನ ಸೇರುತ್ತೇನೆ ಎಂದರೆ ಆಗುತ್ತದೆಯೇ..?

ಅದ್ಭುತವಾಗಿದೆ ಜ್ಯೋತಿ ಕವನ..

ಸಾಗರಿ.. said...

ಹರಿಯದೆಯೆ ಸಾಗರ ಸೇರುವುದು ತರವಲ್ಲ,, ಹಾಗೆ ಸೆರುವುದೂ ಇಲ್ಲ,, ಹರಿಯುತ್ತಲೇ ಸಾಗಲಿ ಜೀವನದ ಸಿಹಿ ನೀರ ನದಿ,, ಸಾಗರವ ಸೇರಿ ಉಪ್ಪಾದರೇನಂತೆ,, ಅದರಲ್ಲೇ ಸಾರ್ಥಕವಿದೆ ನಿಂತು ನೀರಾಗುವುದಕ್ಕಿಂತ...ಅಲ್ಲಾವೇ?? ತಮ್ಮ ಕವನ ಬಹಳ ಚೆನ್ನಾಗಿದೆ

ನಾಗರಾಜ್ .ಕೆ (NRK) said...

"ಸಾಗರವ ಸೇರುವುದು
ಸಹಜ ಧರ್ಮವು ಹೌದು
ಹುಟ್ಟಿ ಹರಿಯದೆಯೇ ಸೇರಿದರೆ
ಬದುಕು ಚೆಂದವಾಗುವುದೇನು?

ಆತುರತೆ ಬದಿಗಿರಲಿ
ಕನಸುಗಳು ಕಾದಿರಲಿ
ಸಹಜತೆಯು ಜೊತೆಗಿರಲಿ
ಮನದಾಳ ತಂಪಾಗಿ
ನದಿಯಂತೆ ನಲಿದಾಡಿ
ಸಾಗರದ ಕಡೆ ಪಯಣ ಸಾಗುತಿರಲಿ"
ತುಂಬಾ ಇಷ್ಟಪಟ್ಟ ಸಾಲುಗಳು, ಕವನ ಸುಂದರವಾಗಿದೆ.

Jyoti Hebbar said...

ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ನಾನು ಋಣಿ

ವೆಂಕಟೇಶ್ ಹೆಗಡೆ said...

ತೊರೆಯ ತೀರಕೆ ನಡೆದು
ಕಡಲ ಸೇರುವ ನದಿಗೆ
ಮೇಲ್ಮೇಲೆ ತಂಪು,
ಒಡಲೆಲ್ಲ ಬೆಂಕಿ
ವಿರಹದುರಿಯನು ನೀನು ಬಲ್ಲೆಯೇನು?
ಎನುತ ಅಳುವೆಯೇಕೆ?
very nice feeling madam

Unknown said...

This is my first kannada poem I have read. Nice keep it up Miss Jothi

Raj Acharya

ಸಾಗರದಾಚೆಯ ಇಂಚರ said...

ಜ್ಯೋತಿ


ಚೆನ್ನಾಗಿದೆ ಕವನ


ಅದರ ಅರ್ಥ ಇಷ್ಟವಾಯಿತು

ಸೀತಾರಾಮ. ಕೆ. / SITARAM.K said...

ಸರಳಶಬ್ದ ಲಾಲಿತ್ಯದಲ್ಲಿ ಕವನ ಚೆನ್ನಾಗಿ ಮೂಡಿದೆ. ಬಾಳ ಪಯಣದಲ್ಲಿ ಆತುರತೆ ಸಲ್ಲ ಎಂಬುದನ್ನು ಮಾರ್ಮಿಕವಾಗಿ ಹೇಳಿದ್ದಿರಾ...
ಗಮ್ಯ ಮುಖ್ಯವಲ್ಲ ಅದೆರೆದೆಗಿನ ಪಯಣದ ಅನುಭವ ಮುಖ್ಯ ಅಲ್ಲವೇ! ಒಳ್ಳೆ ಒಲಾರ್ಥದ ಕವನ.

ಅನಂತ್ ರಾಜ್ said...

ನದಿಯಂತೆ ನಲಿದಾಡಿ
ಸಾಗರದ ಕಡೆ ಪಯಣ ಸಾಗುತಿರಲಿ..
..ಉತ್ತಮ ಸ೦ದೇಶ

ನಿರುತ ನಡೆವ ಜೀವ ಪಯಣ
ದೇವ ಬರೆದ ಜಗದ ನಿಯಮ..
ಅಲ್ಲವೆ?

ಶುಭಾಶಯಗಳು
ಅನ೦ತ್

ದಿನಕರ ಮೊಗೇರ said...

ಸಾಗರವ ಸೇರುವುದು
ಸಹಜ ಧರ್ಮವು ಹೌದು
ಹುಟ್ಟಿ ಹರಿಯದೆಯೇ ಸೇರಿದರೆ
ಬದುಕು ಚೆಂದವಾಗುವುದೇನು?

sundara saalugaLu madam.... dhanyavaada...

Ittigecement said...

ಜ್ಯೋತಿ..

ಚಂದದ ಕವನಕ್ಕೆ ಅಭಿನಂದನೆಗಳು...

kalavathi said...

jyotiyavare adbhutavada kavana.heege saagalee.....

Anonymous said...

ಮನದಲಿ ಹಳಿಸದೆ ಉಳಿಯುವ ಹೆಜ್ಜೆ ಗುರುತು..
ಭಾವನೆಗಳ ನೈಜತೆಗೆ ಕನ್ನಡಿ ನಿಮ್ಮ ಕವನಗಳು ಜ್ಯೋತಿಯವರೆ..
ನಿಲ್ಲದಿರಲಿ ನಮ್ಮ ಕಾವ್ಯ ಹೆಜ್ಜೆ...

Anonymous said...

kansglu kadirli koncha kavite knsugl kuritad kayuvekeyinid kudiddu kansuagla kalpaneynnu tumba uttamavagi hididittide.Prakash.B.Jalahalli

****PRUTHVIRAJ GANGOTRI***** said...

ಮಳೆ ಹನಿಯು ವಸ್ತು ಆದರೆ ಅದರ ಜೊತೆ ತರುವ ಸಂಬಂಧ, ಭಾವನೆಗಳು, ಕಲ್ಪನೆಗಳು ಅಭೂತಪೂರ್ವವಾದುದು. ಅದಕ್ಕೆ ತಮ್ಮ ಬರವಣಿಗೆಯ ಶೈಲಿ ಮತ್ತು ಕಲ್ಪನೆಗೆ ವಾಸ್ತವವನ್ನು ಕಟ್ಟಿಕೊಡುವ ಸನ್ನಿವೇಶ ತುಂಬಾ ಚೆನ್ನಾಗಿದೆ. ಆದರೆ ಅವಿಯು ಹನಿಯಾಗಿ ಭೂ ಸ್ಪರ್ಶಗೊಳ್ಳುವ ಸಮಯದಲ್ಲಿ ಭುವಿಯಲ್ಲಾಗುವ ಬದಲಾವಣೆ ಕೂಡ ವರ್ಣನಿಯವಾದುದು. ಇಲ್ಲಿ ನೀವು ಸಹಜ ಗುಣವನ್ನೇ ಹೇಳಿದ್ದಿರ... ಅಂದರೆ ಮಳೆ ನದಿಯಾಗಿ ಸಾಗರ ಸೇರುವ ಪ್ರಕ್ರಿಯೆ..ಇದು ಧರ್ಮವಲ್ಲ ಇದು ಅನಿವಾರ್ಯತೆ. ಮುಖ್ಯವಾಗಿ ಭುವಿ ಮಳೆಯನ್ನೂ ಹೀರಿಕೊಂಡು ಹಸಿರನ್ನು ಉಳಿಸಿಕೊಳ್ಳುವ ಪ್ರಕ್ರಿಯೆ ವಿಶೇಷವಾದುದು. ಬದುಕು ಒಬ್ಬರಿಗಿಂತ ಒಬ್ಬರದ್ದು ವಿಭಿನ್ನ. ನಿಮ್ಮ ಹಾಗೆ ಇನ್ನೊಬ್ಬರು ಚಿಂತಿಸಬೇಕಾಗಿಲ್ಲ್ಲ . ಹೀಗಾಗಿ ಬದುಕು ಕಟ್ಟಿಕೊಳ್ಳುವಾಗ ನಮ್ಮ ಆಕಾಂಕ್ಷೆಗಳು ಭಿನ್ನವಾಗಿದ್ದರೂ ಹೊಂದಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಪ್ರೀತಿಯ ಆರಂಭಕ್ಕೆ ,ಸಲ್ಲಾಪಗಳಿಗೆ, ವಿರಹದ ನೋವುಗಳಿಗೆ ಈ ಪ್ರಕೃತಿಯ ವೈಶಿಷ್ಟ್ಯಗಳೇ ಉತ್ತರ.... ಸಾಲುಗಳು ತುಂಬಾ ಚೆನ್ನಾಗಿವೆ... ಇಂತಹ ಉತ್ತಮ ಕಾವ್ಯವನ್ನು ನಿಮ್ಮ ಕಲ್ಪನೆಯ ಸೌಂದರ್ಯದಿಂದ ವಾಸ್ತವದೊಳು ಕೃಷಿ ಮಾಡಿದ್ದಕ್ಕೆ ಧನ್ಯವಾದಗಳು..