Tuesday, 7 September, 2010

ಎಚ್ಚರಾಗುವೆನೆ ನಾನು?


ಒಂಟಿ ಮರದಲಿ ಉಲಿಯುತಿಹ ಹಕ್ಕಿಯಂತೆ
ಕಡುಗಪ್ಪು ರಾತ್ರಿಯಲಿ ಜೊತೆ ಬಯಸಿ
ಉಕ್ಕುತಿಹ ಕಡಲಿನಂತೆ
ಜಾತ್ರೆಯಲಿ ತಾಯ ಕೈ ಬೆರಳು
ತಪ್ಪಿಹೋಗಿರುವ ಮಗುವಿನಂತೆ
ರಾಗ ಬೆರೆಸುವರಿಲ್ಲ, ದಾರಿ ಹೇಳುವರಿಲ್ಲ
ಬದುಕು ಎಲ್ಲಿಹುದೋ ತೋರುವವರರಿಲ್ಲ

ಸಂಜೆ ಮಳೆಯಲ್ಲಿ ಮನೆಬಿಟ್ಟ
ಮದುವೆಯಿಲ್ಲದ ಬಸುರಿಯಂತೆ
ಹಸಿದ ಎಳೆ ಕರು ಸತ್ತ ತಾಯಿಯ ಬಯಸಿ
ಅಂಬಾ.. ಎಂದು ಕರೆಯುವಂತೆ
ಭಾರವೆಷ್ಟಿಹುದೋ ಇಳಿಸುವವರಾರಿಲ್ಲ
ಭಾವವೆಂತಿಹುದೋ ಕೇಳುವವರಾರಿಲ್ಲ

ಅರಿತಿಲ್ಲ ಏನಿಹುದೋ ನನ್ನ ಒಳಗೆ
ಒಂಟಿತನ ಕಾಡುತಿದೆ ಸಂತೆಯೊಳಗೆ
ನಿದ್ದೆಗಣ್ಣಲೇ ನಿತ್ಯ ವಿಶ್ವ ಪರ್ಯಟನೆ
ಅಮಲಿನಲಿ ನಾ ಸತತ ತೇಲುತಿಹೆನೆ?

ಅಂಟಿಕೊಂಡಿಹುದು ಜಗದ
ಕೊಳೆಯೆಲ್ಲ ನನಗೆ...
ಖಚಿತವಾಗದೆ ಹೋದುದು ಒಳಗಿರುವ ಭಾವ
ಮಸುಕಾದ ಕನ್ನಡಿಯ ಹಾಗೆ

ಕಾದಿರುವೆ ಯಾರೋ ಕನಿಕರಿಸುವಂತೆ
ಮರುಗುತಿಹೆ ನಾನಿಲ್ಲಿ ಜೊತೆ ಬಯಸಿ 
ನಲ್ಲೆ ಇನಿಯನ ಬಳಿಸಾರಿ ಬರುವಂತೆ
ಸಾವು ಬರುತಿದೆ ಸನಿಹ ನನ್ನ ಅರಸಿ 

ಹುಟ್ಟಿದಾಗಲೇ ಶುರುವಾಗಿದೆ ಕ್ಷಣಗಣನೆ...
ನೋಡಬೇಕಿದೆ,
ನಾ ಇನ್ನಾದರೂ ಎಚ್ಚರಾಗುವೆನೆ?

23 comments:

ನನ್ನೊಳಗಿನ ಕನಸು.... said...

ಸಂಜೆ ಮಳೆಯಲ್ಲಿ ಮನೆಬಿಟ್ಟ
ಮದುವೆಯಿಲ್ಲದ ಬಸುರಿಯಂತೆ
ಹಸಿದ ಎಳೆ ಕರು ಸತ್ತ ತಾಯಿಯ ಬಯಸಿ
ಅಂಬಾ.. ಎಂದು ಕರೆಯುವಂತೆ
ಭಾರವೆಷ್ಟಿಹುದೋ ಇಳಿಸುವವರಾರಿಲ್ಲ
ಭಾವವೆಂತಿಹುದೋ ಕೇಳುವವರಾರಿಲ್ಲ

very matured lines madam nice poem. visit my blog also

ಸೀತಾರಾಮ. ಕೆ. / SITARAM.K said...

ಮನದ ಒಂಟಿತನವನ್ನ ಪರಾಕಾಷ್ಠೆಯಲ್ಲಿ ವಿವರಿಸಿದ್ದಿರಾ...ಜೊತೆಗೆ ಎಚ್ಚೆತ್ತೆಳುವ ಸಂದೇಶ!
ಚೆನ್ನಾಗಿದೆ ಕವನ.

shridhar said...

Chennagide kavana .

Dr.D.T.krishna Murthy. said...

'ಅನ್ವೇಷಣೆಯ'ತುಡಿತ ಅರ್ಥವತ್ತಾಗಿ ಬಿಂಬಿತವಾಗಿದೆ.ಒಳ್ಳೆಯ ಕವನ.ಧನ್ಯವಾದಗಳು.

ದಿನಕರ ಮೊಗೇರ.. said...

ಜ್ಯೋತಿ ಮೇಡಮ್,
ಹೌದು, ಹುಟ್ಟುತ್ತಲೇ ನಮ್ಮ ರೇಸ್ ಶುರು ಆಗತ್ತಂತೆ....ದಿನ ಕಳೆದಂತೆ ನಮಗೆ ಗುರಿ ಹತ್ತಿರ ತೋರಲೇಬೆಕು..... ಇಲ್ಲದಿದ್ದರೆ ಸಾವು ಸನಿಹ ಅನಿಸುತ್ತದೆ....

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ said...

manasiddare margavidae....tumba uttama salugalu ..manasu onti maradali uliyutiruva hakkiyagadirali.:)

ಅನಂತರಾಜ್ said...

ಬದುಕೇ ಎಚ್ಚರದ ಸ್ಥಿತಿಯಾದಾಗ, ಅರಿವೇ ದಾರಿ ತೋರುಗನಾದಾಗ ಯಾರಿಗೋ ಕನಕರಿಸಲೆ೦ದು ಮರುಗುವುದೇಕೆ? ಎಚ್ಚರವಾಗಿಯೇ ಇದ್ದೀರಿ..ಗುರಿಯು ಗುರುತಿಸಿ ಅಡಿ ಇಡಿ..
ಉತ್ತಮವಾಗಿ ಕವನವನ್ನು ರಚಿಸಿದ್ದೀರಿ..ಶುಭಾಶಯಗಳು.

ಅನ೦ತ್

ಆನಂದ said...

ಬರೆದಿರುವ ಧಾಟಿ, ಭಾವನೆಗಳನ್ನು ಅಕ್ಷರದಲ್ಲಿ ಹಿಡಿದಿಡುವ ಪ್ರಯತ್ನ ಇಷ್ಟವಾಯ್ತು.

ಸಾಗರಿ.. said...

ಭಾವನೆಯ ತೀವ್ರತೆಯಿಂದ ಕೂಡಿದ ಚೆಂದದ ಕವನ.

ಸಾಗರದಾಚೆಯ ಇಂಚರ said...

ಕೆಳಗಿನ ಸಾಲುಗಳು ಸೂಪರ್
ಕಾದಿರುವೆ ಯಾರೋ ಕನಿಕರಿಸುವಂತೆ
ನಾನಿಲ್ಲಿ ಮರುಗುತಿಹೆ ಜೊತೆ ಬಯಸಿ
ನಲ್ಲೆ ಇನಿಯನ ಬಳಿಸಾರಿ ಬರುವಂತೆ
ಸಾವು ಬರುತಿದೆ ಸನಿಹ ನನ್ನ ಅರಸಿ


ತುಂಬಾನೇ ಸುಂದರ ಕವನ

Badarinath Palavalli said...

ಅಂಟಿಕೊಂಡಿಹುದು ಜಗದ
ಕೊಳೆಯೆಲ್ಲ ನನಗೆ...
ಖಚಿತವಾಗದೆ ಹೋದುದು ಒಳಗಿರುವ ಭಾವ
ಮಸುಕಾದ ಕನ್ನಡಿಯ ಹಾಗೆ

very intensive poetry. good

ಜ್ಯೋತಿ ಶೀಗೆಪಾಲ್ said...

ಪ್ರತಿಕ್ರಿಯಿಸಿದವರ ಪ್ರೀತಿಗೆ ನನ್ನ ಧನ್ಯವಾದ...

prabhamani nagaraja said...

ಅದ್ಭುತ ಪ್ರಬುದ್ಧ ಕವನ. ಬಹಳ ಚೆನ್ನಾಗಿ ಬರೆದಿದ್ದೀರಿ ಜ್ಯೋತಿಯವರೇ. ಅಭಿನ0ದನೆಗಳು. ನನ್ನ ಬ್ಲಾಗ್ ಗೆ follower ಆಗಿದ್ದಕ್ಕಾಗಿ ಧನ್ಯವಾದಗಳು.

ಜಿ.ಎಸ್.ಬಿ. ಅಗ್ನಿಹೋತ್ರಿ said...

very nice....ಚೆನ್ನಾಗಿದೆ.

kalavathi said...

ಜ್ಯೋತಿಯವರೇ ತುಂಬಾ ಪ್ರಬುದ್ಧವಾಗಿದೆರೀ ,ನನಗೆ ತುಂಬಾ ಇಷ್ಟವಾಯಿತು,ನಮ್ಮಬ್ಲಾಗ್ ಗು ಭೇಟಿ ಕೊಡುತ್ತಿರಿ. ಧನ್ಯವಾದಗಳು.

ಕಲರವ said...

ಜ್ಯೋತಿಯವರೇ ತುಂಬಾ ಪ್ರಬುದ್ಧವಾಗಿದೆರೀ ,ನನಗೆ ತುಂಬಾ ಇಷ್ಟವಾಯಿತು,ನಮ್ಮಬ್ಲಾಗ್ ಗು ಭೇಟಿ ಕೊಡುತ್ತಿರಿ. ಧನ್ಯವಾದಗಳು.

ಸವಿಗನಸು said...

ಒಂಟಿತನವನ್ನು ಕವನ ಚೆನ್ನಾಗಿ ಹೇಳಿದೆ.....

ಶರಶ್ಚಂದ್ರ ಕಲ್ಮನೆ said...

ಚಂದದ ಭಾವಪೂರ್ಣ ಕವನ.. ಪದಗಳ ಬಳಕೆ ಹಾಗು ಅವುಗಳ ಮೇಲಿನ ಹಿಡಿತ ಇಷ್ಟವಾಯಿತು. :)

ಮನಮುಕ್ತಾ said...

ಕವನ ಚೆನ್ನಾಗಿದೆ.

ತೋಟೇ ಗೌಡ said...

Just WoW!

- : ಅಮರ ಕಾನುಗೋಡು : - said...

Chennagide. bhaavanegaLu uttamavaagi bimbitavaagide.

- http://kangod.blogspot.com

Krishnaprasad Hande said...

ನಿಮ್ಮ ಎಲ್ಲಾ ಬರಹಗಳನ್ನು ಓದಿದೆ. ನಿಮ್ಮ ಬರಹಗಳಲ್ಲಿ ಒಂದು ವಿಶಿಷ್ಟವಾದ , ಸದಭಿರುಚಿಯ ಭಾವನಾತ್ಮಕ,ಸಮೃದ್ಧ ಸಾಹಿತ್ಯವಿದೆ . ಹೀಗೆ ಬರೆಯುತ್ತಾ ಇರಿ. ನಿಮ್ಮ ಈ ಎಲ್ಲಾ ಬರಹಗಳು ಆದಷ್ಟು ಬೇಗ ಪುಸ್ತಕ ರೂಪದಲ್ಲಿ ಸಂಕಲನಗೊಂಡು ಚಿಮ್ಮಲಿ ಅನ್ನೋದು ನಮ್ಮ ಆಶಯ .

ಜ್ಯೋತಿ ಶೀಗೆಪಾಲ್ said...

ನಿಮ್ಮೆಲ್ಲರ ಪ್ರೀತಿಗೆ ನಾನು ಋಣಿ....