Thursday 24 December, 2009

ಸಾವಿನೊಂದಿಗೆ ನಿಶ್ಚಿತಾರ್ಥ.....


      
       ಕನಸು ನಿಜವಾದಾಗ ಆಗುವ ಸಂಭ್ರಮಕ್ಕಿಂತ ’ಕನಸು ನಿಜವಾದಂತೆ ಕನಸಾಗಿದೆ...’ ಎಂದು ಕನಸು ಕಾಣುವಾಗಲೇ ಸುಖ ಎಂದು ಅನಿಸಿದ್ದು ನಮ್ಮ ಮದುವೆ ಮುಗಿದು, ನೆಂಟರಿಗೆಲ್ಲ ತಮ್ಮ ತಮ್ಮ ಮನೆಗಳ ನೆನಪಾಗಿ, ನಮ್ಮ ಮನೆ ಖಾಲಿಯಾದಾಗ..ಜೊತೆಗೆ ಮನಸ್ಸೂ...
      ಅತ್ತೆಗೆ ಖಿನ್ನಳಾಗಿ ಕುಳಿತಿದ್ದ ಹೊಸ ಸೊಸೆಯನ್ನು ಸಂತೈಸಿ ತಾನೇ ಇನ್ನುಮೇಲೆ ನಿನ್ನ ಅಮ್ಮನಾಗಿ ಪೊರೆಯುತ್ತೇನೆ ಎಂಬುದನ್ನು ಧೃಢಪಡಿಸುವ ತವಕ. ಮದುವೆಯಾಗಿ ಮನೆಗೆ ಬಂದ ಹೊಸದರಲ್ಲಿ ತನಗೂ ಹೀಗೆ ಆಗಿತ್ತು, ತವರನ್ನು ಬಿಟ್ಟು ಬರುವದು ಕಷ್ಟ,ಹೊಸಬರೊಂದಿಗೆ ಹೊಂದಾಣಿಕೆ ಕಷ್ಟ, ಆದರೂ ಹೆಣ್ಣಿಗೆ ಸಾಧ್ಯ, ಎಂದೆಲ್ಲ ಹೇಳಿ ಧೈರ್ಯ ತುಂಬತೊಡಗಿದ್ದರು. ಸಮಾಧಾನ ನನ್ನ ತಲೆಯ ಮೇಲಿಂದ ಹಾದು ಹೋಗುತ್ತಿತ್ತು. ನಾಲ್ಕು ವರ್ಷಗಳಿಂದ ಕಾದು, ಕಾದು, ಪರಿತಪಿಸಿ, ಬಯಸಿ ಮದುವೆ ಆದಮೇಲೆ ಕಷ್ಟವೇನಿದೆ?  ಯಾವಾಗಲೂ ಇದ್ದದ್ದು ಹಾಸ್ಟೇಲುಗಳಲ್ಲೇ. ನನಗೊಂದು ತವರಿದೆ ಎಂಬುದು ನೆನಪಾದದ್ದೇ ಅವರು ಮದುವೆಯ ದಿನವನ್ನು ನಿಶ್ಚಯಿಸುವ ಕೆಲಸವನ್ನು ಮುಂದೂಡುತ್ತಾ ಹೋದಾಗ.ಸಿಟ್ಟು ಬಂದು, ಯಾವಾಗ ಬಿಟ್ಟು ಹೋಗುವೆನೋ ಎನಿಸಿರುವ ತವರನ್ನು ಬಿಟ್ಟು ಹೋಗಲೇನು ಕಷ್ಟ?
       ಊಹುಂ,ನನಗೆ ಯಾರು ಸಮಾಧಾನ ಮಾಡುವುದೂ ಬೇಕಾಗಿರಲಿಲ್ಲ.ನೀನು ಕೂಡ! ಕೇವಲ ನಿನಗೆ ಏನಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಾಗಿತ್ತು.ನೀನು ನನಗೆ ಹೇಳದೇ ಯಾವ ಕೆಲಸವನ್ನು ಮಾಡುವುದಿಲ್ಲ, ಅಥವಾ ಮಾಡಿದ ಮೇಲಾದರೂ ಹೇಳದೇ ಇರುವುದಿಲ್ಲ ಎಂಬುದು ಗೊತ್ತಿತ್ತು, ಗೊತ್ತಿದ್ದದ್ದು ಅದು.ಭಾವಿಸಿದ್ದಲ್ಲ.ಆದರೆ ಮದುವೆಯ ಮರುದಿನ ನನಗೆ ಗೊತ್ತಿಲ್ಲದೇ ನೀನು ಆಸ್ಪತ್ರೆಗೆ ಹೋಗಿ ಬಂದಿದ್ದೆ. ಅಲ್ಲಿರುವವರೆಲ್ಲ ನನ್ನ ಹಿತೈಷಿಗಳೆಂದು ಹೇಳಿಕೊಳ್ಳುವವರೇ, ನನಗೆ ಸುದ್ದಿ ತಿಳಿಯದೇ ಇರುತ್ತದಾ? ಆದರೆ ನಿನ್ನ ಮುಖದಲ್ಲಿ ತುಂಬಿದ ಅಪರಾಧಿ ಪ್ರಜ್ಞೆಯನ್ನು ನಾನು ಆಶ್ಚರ್ಯದಿಂದ ನೋಡುತ್ತಲೇ ಇದ್ದೆ. ನಿನ್ನ ಮೇಲೆ ಕೋಪ ಅನುಮಾನ ಎಲ್ಲಕ್ಕಿಂತ ಹೆಚ್ಚಾಗಿ ಆಶ್ಚರ್ಯ ಮೂಡಿತ್ತು.  ನೀನು ಎರಡು ದಿನದಿಂದ ನನ್ನ ಕಣ್ಣಿಗೂ ಬೀಳಬಾರದೆಂಬಂತೆ, ಮದುವೆಗೆ ತಂದಿದ್ದ ಕಂಬಳಿ, ಗುಡಾರಗಳನ್ನು ಸಾಗಿಸುವ, ಚಪ್ಪರ ಬಿಚ್ಚಿಸುವ ಕೆಲಸದಲ್ಲಿ ತೊಡಗಿ, ನಾನು ಮಲಗಿದ ಮೇಲೆ ಒಳಗೆ ಬರತೊಡಗಿದ್ದು ನೋಡಿ ತುಂಬ ಆಶ್ಚರ್ಯವಾಗತೊಡಗಿತ್ತು. ನಿನಗೆ ಸಾವಿನ ಮುನ್ಸೂಚನೆ ಸಿಕ್ಕಿಯಾಗಿತ್ತೆಂದು ತೋರುತ್ತದೆ. ನನಗೂ ನೀನು ದೂರವಾಗುತ್ತಿರುವುದರ ಸೂಚನೆ ಸಿಕ್ಕಿಯಾಗಿತ್ತು. ಆದರೆ ಖಂಡಿತ ಹೀಗಾಗುತ್ತದೆಯೆಂದು ಕನಸಿನಲ್ಲೂ ಎಣಿಸಿರಲಿಲ್ಲ.ಕನಸಿನಲ್ಲಿ ಏನು ಎಣಿಸುವುದು? ನೀನು ಮಾತನಾಡದೇ ಉಳಿದ ದಿನಗಳನ್ನು ನಿಜವಾಗಿಯೂ ಎಣಿಸಿ ಎಣಿಸಿ ಸುಸ್ತಾಗಿದ್ದೆ. ಬಾಯಿಬಿಟ್ಟು ಕೇಳಲು ಸ್ವಾಭಿಮಾನ (ಅಹಂಕಾರ ಎಂದರೆ ಸಮಂಜಸವಾಗಬಹುದು). ವಿನಾಕಾರಣ ಹೀಗೆ ಮಾಡುತ್ತಿದ್ದೀಯ ಎನಿಸಿದರೂ ಹಾಗಲ್ಲ ಎಂದು ಗೊತ್ತಿತ್ತು.
    ಪ್ರತಿ ಕ್ಷಣ ನಿನ್ನ ಹೃದಯ ಬಡಿತದೊಂದಿಗೇ ನಾನು ಉಸಿರಾಡಿದ್ದೆ ನಾಲ್ಕು ವರ್ಷಗಳಿಂದ! ಆದರೂ ನೀನು ಹೀಗೆ ಮಾಡಬಹುದೇ? ನೀನು ನನ್ನ ಪಾವಿತ್ರ್ಯತೆಯನ್ನು ಉಳಿಸಿ, ನಾನು ಬೇರಾರನ್ನೋ ಮದುವೆಯಾಗಿ ಸುಖವಾಗಿರಲೆಂದು ಬಯಸಿದ್ದು ತಪ್ಪಲ್ಲ, ಆದರೆ ನನ್ನಿಂದ ಅದು ಸಾಧ್ಯ ಎಂದು ಯೋಚಿಸಲು ಮನಸ್ಸಾದರೂ ಹೇಗೆ ಬಂತು ನಿನಗೆ? ನಿನ್ನ ಜಾಗದಲ್ಲಿ ನಾನಿದ್ದರೂ ಹಾಗೆಯೇ ಮಾಡುತ್ತಿದ್ದೆನೇನೋ. ಆದರೂ...ಅಷ್ಟೆಲ್ಲ ಮಾಡುವ ಅಗತ್ಯವಿರಲಿಲ್ಲ. ನೀನು ನನ್ನನ್ನು ಮುಟ್ಟಿದ್ದರೆ ನಾನು ಖಂಡಿತ ಮತ್ತಷ್ಟು ಪವಿತ್ರಳಾಗುತ್ತಿದ್ದೆ, ರಾಮ ಮುಟ್ಟಿದ ಬಂಡೆ ಅಹಲ್ಯೆಯಾದಂತೆ.ನೀನು ಅಷ್ಟೊಂದು ಅಪರಾಧಿ ಪ್ರಜ್ಞೆ ಇಟ್ಟುಕೊಂಡು ಹೊರಟು ಹೋಗಿದ್ದು ಸರಿಯಾ? ಇಷ್ಟೊಂದು ಪ್ರೀತಿಸಿದ ನನ್ನನ್ನು ಬಿಟ್ಟು ಹೋಗಲು ನಿನಗೂ ಮನಸಿರಲಿಲ್ಲವೆಂದು ಗೊತ್ತು ನನಗೆ. ಆದರೆ ಅದನ್ನು ನೀನು ಮಾಡಿದ ತಪ್ಪೆಂದು ಹೇಗೆ ಅಂದುಕೊಂಡೆ ನೀನು? ಸಾವು ನಮ್ಮ ಕೈಯಲ್ಲಿಲ್ಲ ಎಂದು ನನಗೆ ಗೊತ್ತಿರುವ ಹಾಗೇ ನಿನಗೂ ಗೊತ್ತಿತ್ತು. ’ಕೊನೆವರೆಗೂ ಜೊತೆಗಿರುತ್ತೇನೆ’ ಎಂಬ ಮಾತನ್ನು ಉಳಿಸಿಕೊಳ್ಳಲಾಗಲಿಲ್ಲವೆಂದು ನೀನು ಕೊನೆ ಗಳಿಗೆಯಲ್ಲಿ ಎಷ್ಟೊಂದು ನೊಂದುಕೊಂಡೆಯಲ್ಲವೇ? ಹೊಸ ಜೀವನದ ಆರಂಭದ ದಿನವೇ ಜೀವನ ಅಂತ್ಯದ ದಿನವನ್ನು ಕೂಡ ತಿಳಿಸಿಬಿಟ್ಟಿತು. ಅದರಲ್ಲಿ ನಿನ್ನ ತಪ್ಪೇನು?ಬೇರೆಯವರಿಗೆ ಆ ದಿನದ ನಿಶ್ಚಯವಾಗಿರುವುದು ಗೊತ್ತಾಗಿರುವುದಿಲ್ಲ, ನಿನಗೆ ಗೊತ್ತಾಗಿತ್ತು ಅಷ್ಟೇ ತಾನೇ ವ್ಯತ್ಯಾಸ? ನಿಶ್ಚಯವಂತೂ ಆಗಿಯೇ ಇರುತ್ತದೆಯಲ್ಲವೇ?
ನನ್ನ-ನಿನ್ನ ಮದುವೆಯ ಮರುದಿನ ನಿನಗೆ ಇನ್ನೊಬ್ಬರೊಂದಿಗೆ ನಿಶ್ಚಿತಾರ್ಥ. ಅದೂ ಸಾವಿನೊಂದಿಗೆ! ನಾನು ನೊಂದುಕೊಳ್ಳುತ್ತೇನೆ ಎಂದುಕೊಂಡೆ ಅಲ್ಲವೇ?ಅಥವಾ ಸಾವನ್ನು ನನ್ನ ಸವತಿಯಂತೆ ತಿಳಿದು ಅಸೂಯೆ ಪಡುತ್ತೇನೆ ಎಂದುಕೊಂಡೆಯೇನೋ? ಇಲ್ಲ, ನಿನಗೆ ಗೊತ್ತಿತ್ತು ನನಗೆ ’Possessiveness’ ಯಾವತ್ತಿಗೂ ಇರಲಿಲ್ಲವೆಂದು.
    ಒಂದು ಖುಷಿಯ ವಿಷಯ ಹೇಳಬೇಕು ನಿನಗೆ, ನೀನು ನನಗೆ ಕೊಟ್ಟ ಮಾತು, ನಾನು ನಿನಗೆ ಕೊಟ್ಟ ಮಾತು ಎರಡೂ ಉಳಿಯುತ್ತಿದೆ. ಮಾತು ಉಳಿಸುವ ಸಲುವಾಗಿಯಲ್ಲ, ನಿನ್ನನ್ನು ಬಿಟ್ಟು ಹೇಗೆ ಬದುಕುವುದೆಂಬುದು ನನಗೆ ಮರೆತು ಹೋಗಿದೆ ಆದ್ದರಿಂದ ನಿನ್ನ ಹಿಂದೆಯೇ ಬರುತ್ತಿದ್ದೇನೆ. ನೀನು ಹೋರಟು ಒಂದು ಘಂಟೆಯಾಗಿರಬಹುದು ಅಲ್ಲವೇ? ಅದನ್ನು ಅರ್ಥಮಾಡಿಕೊಳ್ಳಲು ನನಗೆ ಸ್ವಲ್ಪ ಸಮಯ ಹಿಡಿಯಿತು.ತಡವಾದದ್ದಕ್ಕೆ ಕ್ಷಮಿಸು ನನ್ನನ್ನು. ನಂಬಲಾಗಲಿಲ್ಲ ನೀನು ನನ್ನನ್ನು ಬಿಟ್ಟು ಹೊರಟುಬಿಟ್ಟೆಯೆಂದು.ಯಾವಾಗಲೂ ಹಾಗೆ ಮಾಡುತ್ತಿರಲಿಲ್ಲ.ಇವತ್ತು ಯಾಕೆ ಅಷ್ಟು ಅವಸರ ಮಾಡಿದೆ? ಯಾವಾಗಲೂ ನಾನು ಸಿಂಗರಿಸಿಕೊಂಡು ಬರಲು ಎಷ್ಟು ತಡವಾದರೂ ಕಾಯುತ್ತಿದ್ದೆ. ನನಗಿಂತ ಸಾವಿನ ಮೇಲೆಯೇ ಹೆಚ್ಚು ಪ್ರೀತಿ ಬಂದಿತಾ ನಿನಗೆ? ಗೊತ್ತು ನನಗೆ, ನಿನಗೂ ಕಷ್ಟವಾಗುತ್ತದೆ ಅಲ್ಲಿ, ಮೊದಲೇ ಆರೊಗ್ಯ ಸರಿಯಿಲ್ಲ ನಿನಗೆ. ನಿನ್ನ ಕೆಲಸಗಳನ್ನು ನಾನಲ್ಲದೇ ಬೇರೆ ಯಾರೋ ಮಾಡುವುದು, ಅದು ಸರಿಯಾಗದೇ ನೀನು ಬೇಸರಿಸಿಕೊಂಡು ಕಣ್ಣಲ್ಲಿ ನೀರು ತುಂಬಿಕೊಳ್ಳುವುದು, ಇದನ್ನೆಲ್ಲ ನನ್ನಿಂದ ಸಹಿಸಲಾಗುವುದಿಲ್ಲ.
    ನೀನು ಮಾಡಿದ್ದರಲ್ಲಿ ಒಂದೇ ಒಂದು ನನಗೆ ತಪ್ಪೆಂದು ಕಂಡಿದ್ದು. ಪ್ರತಿಯೊಂದನ್ನೂ ಹೇಳುತ್ತೇನೆ ಎಂದು ಹೇಳಿ ಸಾವಿನೊಡನೆ ನಿನ್ನ ನಿಶ್ಚಿತಾರ್ಥವಾಗಿ ಒಂದು ವರ್ಷವಾದರೂ ನನಗೆ ಹೇಳಲೇ ಇಲ್ಲ ನೀನು.ಗೊತ್ತಾಗಿದ್ದರೆ ಆವತ್ತೇ ನಾನೂ ಮಾಡಿಕೊಳ್ಳುತ್ತಿದ್ದೆ. ಪರವಾಗಿಲ್ಲ ಬಿಡು, ಅವಸರವಸರವಾಗಿ ನನ್ನ ಮದುವೆಯೇ ಆಗುತ್ತಿದೆ ಅದರೊಂದಿಗೆ.ನನ್ನ ಎರಡನೆಯ ಮದುವೆ ನಿಶ್ಚಿತಾರ್ಥವಿಲ್ಲದೆಯೇ ಆಗುತ್ತಿದೆ! ನೀನು ಹೊರಟಕೂಡಲೇ ಸಿಂಗರಿಸಿಕೊಳ್ಳುತ್ತೇನೆಂದು ಹೇಳಿ ಒಳಗೆ ಬಂದುಬಿಟ್ಟೆ ನಾನು, ಅದನ್ನು ನೋಡಿ, ಅವರೆಲ್ಲ ಭಯಪಟ್ಟರು ಎನಿಸುತ್ತದೆ ಹುಚ್ಚು ಹಿಡಿದಿದೆಯೆಂದು.ಏನೋ... ಗೊತ್ತಾಗುತ್ತಿಲ್ಲ ನನಗೆ, ಇದ್ದರೂ ಇರಬಹುದು ಎನಿಸುತ್ತಿದೆ. ಬೇರೆ ಯಾರಿಗೂ ಸರಿಯಾಗಿ ಗೊತ್ತಾಗುವುದಿಲ್ಲ ನನ್ನ ಮನಸ್ಸಿನಲ್ಲಿ  ಏನಾಗುತ್ತಿದೆಯೆಂದು. ನನಗೆ ಗೊತ್ತಾಗದಿದ್ದರೂ ನಿನಗೆ ಗೊತ್ತಾಗುತ್ತದೆ.ಆದ್ದರಿಂದಲೇ ಬರುತ್ತಿದ್ದೇನೆ. ಹೌದು, ನಾನೂ ಬರುತ್ತಿದ್ದೇನೆ.ದಯವಿಟ್ಟು ಎಲ್ಲಿದ್ದೀಯೋ ಅಲ್ಲಿಯೇ ನಿಲ್ಲು...ಒಂದು ಘಂಟೆ ತಡವಾದದ್ದಕ್ಕೆ ಬೇಸರಿಸಿಕೊಳ್ಳಬೇಡ. ನಿನ್ನ ಕಣ್ಣಲ್ಲಿ ಒಂದು ಹನಿ ನೀರು ಬಂದರೂ ಅದನ್ನು ನಾನೇ ಒರೆಸಬೇಕು.

4 comments:

ಆನಂದ said...

ಬರಹ, ಶೈಲಿ ಚೆನ್ನಾಗಿದೆ.
ಆದರೆ ದುರಂತವನ್ನಪ್ಪುವ ನಿರ್ಧಾರಕ್ಕೆ ನನ್ನ ಸಹಮತವಿಲ್ಲ. ಬದುಕೆಂಬುದು ಬೇಕೆಂದಾಗ ಮುಗಿಸಿಬಿಡುವಷ್ಟು ನಿಕೃಷ್ಟವಲ್ಲ. ಒಬ್ಬರಿಲ್ಲವೆಂದಾಕ್ಷಣ ಬದುಕು ಮುಗಿಯುವುದಿಲ್ಲ. ಹಾಗಿಲ್ಲದಿದ್ದಲ್ಲಿ ಸ್ಟಾನ್ ಫೋರ್ಡ್ ನಂತಹ ವಿಶ್ವವಿದ್ಯಾಲಯಗಳು ಹುಟ್ಟುತ್ತಿರಲಿಲ್ಲ.

ಒಂದು ಬರಹವಾಗಿ ನಾನಿದನ್ನು ಮೆಚ್ಚುತ್ತೇನೆ, ಆದರೂ ಯಾಕೋ ಇದನ್ನೆಲ್ಲ ಹೇಳೋಣವೆನಿಸಿತು.

Jyoti Hebbar said...

ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು ಆನಂದ್..
ಈ ಬರಹ ಬದುಕಾಗುವುದೂ ಇಲ್ಲ... ಖಂಡಿತ ಇದು ಬರಹ ಮಾತ್ರ... ಆ ಕ್ಷಣಕ್ಕೆ ಅನಿಸುವ ಭಾವವಿರಬಹುದು, ಆದರೆ ಆ ಭಾವ ಜೀವನವನ್ನು ಮುಗಿಸುವಷ್ಟು ಆಳವಾಗುವುದು ಸಾಧ್ಯವಿಲ್ಲ.

ದಿನಕರ ಮೊಗೇರ said...

ಜ್ಯೋತಿ ಮೇಡಂ,
ಸೂಪರ್ ತುಂಬಾ ನೋವಿನಿಂದ ಕೂಡಿದ ಉತ್ತಮ ಬರಹ....... ನೋವನ್ನು ಉಣ್ಣೋದು, ಹೇಳಿದಷ್ಟು ಸುಲಭ ಅಲ್ಲ...... ಆತುರದ ನಿರ್ಧಾರವೂ ಸಹ ಎಲ್ಲಾ ಸಮಯದಲ್ಲಿ ಬರೋಲ್ಲ....... ಆ ಕ್ಷಣದ ನೋವು ಅಷ್ಟೇ..... sundara barahakke , novina abhivyaktige abhinandanegalu.....

ಅವಿನಾಶ್ ಅಗ್ನಿಹೋತ್ರಿ said...

super writing..!! Can't comment on the story, b'cos this is something which we can only imagine..!!