Friday 12 February, 2010

ಬದುಕು ಸಂಭ್ರಮವಾಯಿತು ಮತ್ತೆ...!


       ಬದುಕು ಇಷ್ಟು ದೊಡ್ಡ ಸಂಭ್ರಮವಾಗಬಹುದೆಂದು ಅಂದು ಅಂದುಕೊಂಡಿರಲಿಲ್ಲ. ಮನೆಯ ಮೆತ್ತಿನ ಕತ್ತಲಲ್ಲಿ, ಮೊಣಕಾಲುಗಳ ಮಧ್ಯೆ ಮುಖ ಹುದುಗಿಸಿ ಕುಳಿತು ಬಿಕ್ಕಿ ಬಿಕ್ಕಿ ಅಳುವಾಗ ನಾನು ಕೂಡ ಮುಂದೊಂದು ದಿನ ಎಲ್ಲರಂತೆ ಮನಸಾರೆ ನಗುತ್ತೇನೆ ಎಂದು ಖಂಡಿತ ಅನ್ನಿಸಿರಲಿಲ್ಲ. ಬಹುಶಃ ತುಂಬ ದೊಡ್ಡ ದೊಡ್ಡ ದುಃಖಗಳನ್ನು ಅನುಭವಿಸಿದ ಮೇಲೆ ಅರ್ಥವಾಗಬಹುದೇನೋ, ಬದುಕೆಂದರೆ ಹೀಗೆ, ಹಗಲು-ರಾತ್ರಿ, ಕಷ್ಟ-ಸುಖ ಎಂದು. ಆದರೆ ಅದು ನನ್ನ ಮೊದಲ ದುಃಖ ಮತ್ತು ಅವನು ನನ್ನ ಮೊದಲ ಹುಡುಗ! ಇಂಥ ದುಃಖಗಳೆಲ್ಲ ಅಷ್ಟಷ್ಟಾಗಿ ಕಡಿಮೆಯಾಗಿ, ಕೊನೆಗೆ ಮರೆತು ಹೋಗುತ್ತವೆ ಒಂದು ದಿನ ಎಂದೆಲ್ಲ ನನಗೆ ಗೊತ್ತಿರಲಿಲ್ಲ. ತುಂಬ ದೊಡ್ಡವರು, ಅನುಭವಿಗಳು ಹೇಳಿದ್ದನ್ನೆಲ್ಲ ಅರ್ಥ ಮಾಡಿಕೊಳ್ಳಲು ನಾವು ಕೂಡ ಸ್ವಲ್ಪ ದೊಡ್ಡವರಾಗಬೇಕಲ್ಲ! ನಾನಾಗ ಚಿಕ್ಕವಳು. ಪ್ರೀತಿಸುವಷ್ಟು ದೊಡ್ಡವಳು, ಆದರೆ ಪ್ರೀತಿಯನ್ನು ಮರೆಯುವಷ್ಟು, ಆ ಪ್ರೀತಿ ನನ್ನನ್ನು ಮರೆಯುವುದನ್ನೆಲ್ಲ ಸಹಜವೆಂದು ಸ್ವೀಕರಿಸುವಷ್ಟು ದೊಡ್ಡವಳಾಗಿರಲಿಲ್ಲ.
    ದುಃಖವೆಂದರೆ ಹೇಗೆ, ತಿರಸ್ಕಾರವೆಂದರೆ ಹೇಗೆ ಎಂಬುದನ್ನೆಲ್ಲ ಅವನು ನನಗೆ ಅರ್ಥ ಮಾಡಿಸಿದ. ನನಗೆ ತಿರಸ್ಕರಿಸುವುದು ಹೇಗೆ ಎಂಬುದು ಮಾತ್ರ ಗೊತ್ತಿತ್ತು. ಅವಮಾನ ಮಾಡುವುದು ಹೇಗೆ ಎಂಬುದು ಗೊತ್ತಿತ್ತು. ಅವಮಾನ ಮಾಡಿಸಿಕೊಳ್ಳುವುದನ್ನು ಕಲಿಸಿದವನು ಅವನು.ಅದು ಕೂಡ ಬಲಿಯುವ ಮೊದಲೇ ಚಿವುಟಿದ ಚಿಗುರಿನಂತಲ್ಲ, ನೀರುಣಿಸಿ ಮರವಾದ ಮೇಲೆ ಕಡಿದ ಹಾಗೆ.ತುಂಬ ದಿನ ಪ್ರೀತಿಸಿ, ನಂತರ ’ಅಯ್ಯೋ ಯಾಕೆ ಹಿಂದೆ ಬರ್ತಿಯಾ?’ ಎಂದಾಗ ಆಗುವ ಅವಮಾನವನ್ನು ಸಹಿಸಿಕೊಳ್ಳುವುದನ್ನು ಕಲಿಸಿದ.  ಯಾರಾದರೂ ಒಂದು ಮಾತು ಆಡಿದರೆ ನಾನು ಹತ್ತು ಮಾತು ತಿರುಗಿಸಿ ಆಡಿ ಬರುತ್ತಿದ್ದೆ. ಆದರೆ ಅವನು ನನಗೆ ಯಾವತ್ತೂ ತಿರುಗಿ ಮಾತನಾಡುವ ಅವಕಾಶ ಕೊಡಲಿಲ್ಲ. ಅನ್ನಿಸಿಕೊಂಡು, ಅವಮಾನಿಸಿಕೊಂಡು, ಸಹಿಸಿಕೊಳ್ಳುವುದನ್ನು ಕಲಿಸಿದ. ಅಪ್ಪ- ಅಮ್ಮನ ಎದುರು ಎಂದಿಗೂ ನಾನು ತಲೆ ತಗ್ಗಿಸುವಂತ ಕೆಲಸ ಮಾಡಿರಲಿಲ್ಲ, ಇವನನ್ನು ಪ್ರೀತಿಸುವವರೆಗೆ! ಇವನು ನನಗೆ ತಲೆತಗ್ಗಿಸುವುದನ್ನು ಕಲಿಸಿದ. ಸುಳ್ಳು ಹೇಳುವುದನ್ನು ಕಲಿಸಿದ. ಕಲಿತದ್ದು ನನ್ನದೇ ತಪ್ಪು ಹೌದು. ಆದರೂ ಕಲಿಸಿದ್ದು ಅವನು.
    ’ಇ’ ಅಕ್ಷರ ಬರೆಯಲು ಬಾರದೆ ಅಮ್ಮನ ಕೈಲಿ ಹೊಡೆಸಿಕೊಂಡಿದ್ದೆ, ಅದರ ನಂತರ ಯಾವತ್ತೂ ನಾನು ಹೊಡೆತ ತಿನ್ನುವಂಥ ತಪ್ಪು ಮಾಡಲಿಲ್ಲ, ಅಥವಾ ಪ್ರೀತಿಯಿದ್ದುದರಿಂದ ಯಾರೂ ನನಗೆ ಹೊಡೆಯಲಿಲ್ಲ ಇವನನ್ನು ಪ್ರೀತಿಸುವವರೆಗೆ! ಅವನು ನನಗೆ ಹೊಡೆಸಿಕೊಂಡು ಸುಮ್ಮನಿರುವುದು ಹೇಗೆಂದು ಕಲಿಸಿದ.ಮೊದಲು ನನ್ನ ಮೇಲೆ ಅವನ ಅಧಿಕಾರ,ನಂತರದ ಅವನ ತಿರಸ್ಕಾರ ಇವೆಲ್ಲ ನನ್ನ ಸ್ವಾಭಿಮಾನಕ್ಕೆ ಬಿದ್ದ ಮೊದ ಮೊದಲ ಪೆಟ್ಟುಗಳು. ಅದರಿಂದ ಚೇತರಿಸಿಕೊಂಡು ಪೂರ್ತಿ ’ನಾನು’
ಏಳಲು ಸಾಧ್ಯ ಮುಂದೊಂದು ದಿನ ಎಂದು ಅನ್ನಿಸಿರಲೇ ಇಲ್ಲ ಆವತ್ತು. ಬಹುಶಃ ರೋಗ ಬಂದಾಗ ಆರೋಗ್ಯ ಎಂದರೇನು ಎಂದು ಊಹಿಸಿಕೊಳ್ಳಲು ಕಷ್ಟವಾಗುವ ಹಾಗೆ ಇದು ಕೂಡ! ನಾನು ಹೇಳುತ್ತಿದ್ದೆ, ನನ್ನಿಂದ ಬಹುಶಃ ಹೀಗೆ ಇನ್ಯಾರನ್ನೂ ಪ್ರೀತಿಸಲು ಸಾಧ್ಯವಿಲ್ಲ,ಕೊಡಲು ನನ್ನ ಬಳಿ ಮತ್ತೊಂದು ಹೃದಯವಿಲ್ಲ ಎಂದೆಲ್ಲ. ಈಗ ಅವೆಲ್ಲ ಎಲ್ಲಿಂದಲೋ ಕದ್ದು ಆಡಿದ ಮಾತುಗಳಂತೆ ಕ್ಷುಲ್ಲಕವಾಗಿ ಕಾಣುತ್ತವೆ. ಆದರೆ ಆ ವಯಸ್ಸಿಗೆ ಆ ಭಾವನೆಯ ಭಾರ ತುಂಬ ದೊಡ್ಡದು. ಒಬ್ಬರ ತಿರಸ್ಕಾರಕ್ಕೆ ನಮ್ಮ ಆತ್ಮವಿಶ್ವಾಸವನ್ನೆಲ್ಲ ಹೀರಿ ಗಹಗಹಿಸುವಷ್ಟು ಶಕ್ತಿಯಿದೆ, ಕನಸಿನಲ್ಲೂ ಪ್ರೀತಿಸಲು ಭಯಪಡುವ ಹಾಗೆ ಮಾಡುವಷ್ಟು ಶಕ್ತಿಯಿದೆ, ಮನುಷ್ಯರನ್ನು ನಂಬುವುದಕ್ಕೆ ಹಿಂಜರಿಯುವ ಹಾಗೆ ಮಾಡುವ ಶಕ್ತಿಯಿದೆ ಎಂದೆಲ್ಲ ಅನ್ನಿಸಿತ್ತು. ಆದರೆ ಯಾರೂ ಕೂಡ ತಮ್ಮ ಇಲ್ಲದಿರುವಿಕೆಯಿಂದ ಮತ್ತೊಬ್ಬರ ಪ್ರಪಂಚವನ್ನು ಪೂರ್ತಿ ಬರಡು ಮಾಡಿ ಹಾಕುವುದು ಸಾಧ್ಯವೇ ಇಲ್ಲ ಎಂದು ಚೇತರಿಸಿಕೊಂಡ ಮೇಲೆ ಅರ್ಥವಾಯಿತು.
    ಬದುಕು ಇಷ್ಟು ಬೇಗ ಮೊದಲಿಗಿಂತ ಹಚ್ಚ ಹಸಿರಾಗಿ ತೊನೆಯತೊಡಗುತ್ತದೆ ಎಂದು ಆವತ್ತು ಸ್ವಲ್ಪವೂ ಅನಿಸಿರಲಿಲ್ಲ. ಕಳೆದುಹೋದ ಪ್ರೇಮ, ರಾಶಿ ರಾಶಿ ನೆನಪುಗಳೊಂದಿಗೆ, ಪ್ರಬುದ್ಧತೆಯನ್ನು ತಂದು ಕೊಡುತ್ತದೆಯೆಂದು ಗೊತ್ತಿರಲಿಲ್ಲ. ಅದರ ನಂತರ ’ಯಾವತ್ತೂ ನಿನ್ನ ಜೊತೆಗೇ ಬದುಕುತ್ತೇನೆ, ನೀನಿಲ್ಲದೇ ನಾನು ಖಂಡಿತ ಬದುಕಲಾರೆ’ ಎಂಬ ಮಾತುಗಳೆಲ್ಲ ಆ ಕ್ಷಣಕ್ಕೆ ಹೃದಯದಿಂದ ಉಕ್ಕಿ ಬರುವ ಪ್ರೀತಿಯನ್ನು ಸ್ಪಷ್ಟವಾಗಿ ಅಭಿವ್ಯಕ್ತಿಸಲು ಮಾತ್ರ ಬಳಸುವ ಶಬ್ದಗಳೇ ಹೊರತು ಸಾರ್ವಕಾಲಿಕ ಸತ್ಯಗಳಲ್ಲ ಎಂದು ಅರ್ಥವಾಯಿತು. ಆವತ್ತು ನೆನಪಾಗುತ್ತಿದ್ದ ಒಡೆದ ಕನಸುಗಳೆಲ್ಲ ಒಡೆದೇ ಇಲ್ಲ, ನಾನು ಕಟ್ಟಿರಲೇ ಇಲ್ಲ ಎನಿಸತೊಡಗಿತು. ಆದರೂ ಆಗಿನ ಪುಟ್ಟ ’ನಾನು’ ಈಗಿನ ದೊಡ್ಡ ’ನನ್ನ’ ಒಳಗೆ ಕರುಣೆ ಉಕ್ಕಿಸುವ ಹುಡುಗಿಯ ಚಿತ್ರವಾಗಿ ಸುಳಿದು ಹೋಗುತ್ತೇನೆ. ಆ ನೆನಪುಗಳಿಗೆ ಈಗ ಕೊಡುವ ಸಮಯ, ಪ್ರಾಮುಖ್ಯತೆ ಎಲ್ಲ ಅಷ್ಟಕ್ಕಷ್ಟೆ!
    ಒಂದು ದಿನವೂ ನನ್ನನ್ನು ಬಿಟ್ಟಿರಲಾಗದ ಇವರಿದ್ದಾರೆ, ಪ್ರೀತಿಯ ಜೊತೆಗೆ ನಮ್ಮಿಬ್ಬರಿಗೂ ಪರಸ್ಪರರ ಅಗತ್ಯ, ಅನಿವಾರ್ಯತೆ, ಅವಲಂಬನೆ ತುಂಬ ಇದೆ. ಒಬ್ಬರನ್ನೊಬ್ಬರು ತಿರಸ್ಕರಿಸುವ ಸಾಧ್ಯತೆ ತೀರ ಕಡಿಮೆ ಇದೆ. ಹಾಗೆ ತಿರಸ್ಕರಿಸಿದರೂ ಪುನಃ ಬೆಸೆಯಲು ಮದುವೆಯೆಂಬ ಬಂಧನ ಅಥವಾ ಅನುಬಂಧವಿದೆ ನಮ್ಮ ನಡುವೆ. ಮಾತು ಮನೆಯ ಜಗುಲಿ ದಾಟುವುದಿಲ್ಲ,ಅಕಸ್ಮಾತ್ ದಾಟಿದರೆ ಅಂಗಳಕ್ಕೆ ಹೋಗುವಷ್ಟರಲ್ಲಿ ಮದುವೆ ಮಾಡಿಸಿದ ಹಿರಿಯರು ಹಾಜರಾಗುತ್ತಾರೆ ಅನುಸಂಧಾನ ಮಾಡಿಸಲು. ನೆನಪುಗಳನ್ನು ನೆನಪಿಸಿಕೊಳ್ಳಲು ಕೂಡ ನೆನಪಾಗದಷ್ಟು ಪ್ರೀತಿಸಲು ಮಗುವಿದೆ. ಈಗ ಅಪರೂಪಕ್ಕೆ ಹಳೆಯ ದುಃಖವೆಲ್ಲ ನೆನಪಾದರೆ ನಗು ಬರುತ್ತದೆ.ಅದನ್ನೆಲ್ಲ ಎಷ್ಟು ದೊಡ್ಡದೆಂದುಕೊಂಡು ಅತ್ತಿದ್ದೆ. ಮರೆಯಲು ಸಾಧ್ಯವೇ ಇಲ್ಲವೆಂದುಕೊಂಡಿದ್ದೆ ಎಂದು! ಆದರೂ ಗೊತ್ತು ಅದು ದೊಡ್ಡದಾಗಿತ್ತು ಭರಿಸಲಾಗದ ಪುಟ್ಟ ಮನಸಿಗೆ ಎಂದು.
    ಬಹುಶಃ ಇವರು ಅವನಿಗಿಂತ ಹೆಚ್ಚು ಪ್ರೀತಿಸಿದ್ದಕ್ಕೆ ಮರೆತೆನೋ, ಅಥವಾ ಕಾಲಕ್ಕೆ ಎಲ್ಲವನ್ನೂ ಮರೆಸುವ ಶಕ್ತಿಯಿದೆಯೋ ಏನೋ ಗೊತ್ತಿಲ್ಲ. ಬಹುಶಃ ಕೆಟ್ಟ ಗಂಡ ಸಿಕ್ಕಿದ್ದರೆ ಅವನ ನೆನಪಾಗುತ್ತಿತ್ತೋ ಏನೋ ಅದೂ ಗೊತ್ತಿಲ್ಲ. ಬದುಕು ಎಂದಿಗಿಂತ ದೊಡ್ಡ ಸಂಭ್ರಮವಾಯಿತು ಅನ್ನೋದು ಮಾತ್ರ ತುಂಬ ಆಶ್ಚರ್ಯದ ಸಂಗತಿ ನನಗೆ!

12 comments:

ಸಾಗರದಾಚೆಯ ಇಂಚರ said...

ಮದುವೆಯಾದ ಅನುಭವಸ್ಥರಂತೆ ಸುಂದರವಾಗಿ ಬರೆಯುತ್ತಿರಾ
ಬಹಳ ಚೆನ್ನಾಗಿದೆ
ಮುಂದುವರೆಯಲಿ

-ರವೀಂದ್ರ ಮಾವಖಂಡ said...

" ಒಬ್ಬರ ತಿರಸ್ಕಾರಕ್ಕೆ ನಮ್ಮ ಆತ್ಮವಿಶ್ವಾಸವನ್ನೆಲ್ಲ ಹೀರಿ ಗಹಗಹಿಸುವಷ್ಟು ಶಕ್ತಿಯಿದೆ, ಮನುಷ್ಯರನ್ನು ನಂಬುವುದಕ್ಕೆ ಹಿಂಜರಿಯುವ ಹಾಗೆ ಮಾಡುವ ಶಕ್ತಿಯಿದೆ. ಆದರೆ ಯಾರೂ ಕೂಡ ತಮ್ಮ ಇಲ್ಲದಿರುವಿಕೆಯಿಂದ ಮತ್ತೊಬ್ಬರ ಪ್ರಪಂಚವನ್ನು ಪೂರ್ತಿ ಬರಡು ಮಾಡಿ ಹಾಕುವುದು ಸಾಧ್ಯವೇ ಇಲ್ಲ."
ಈ ಸಾಲುಗಳು ಬಹಳ ಅರ್ಥಪೂರ್ಣವಾಗಿವೆ. ಇವೆಲ್ಲ ನಿಮ್ಮ ಸ್ವಂತ ಅನುಭವವಾ ?
- ರವೀಂದ್ರ ಮಾವಖಂಡ

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಜ್ಯೋತಿಯವರೆ,ನಿಮ್ಮ ನವಿರಾದ ನಿರೂಪಣೆ ಸೊಗಸಾಗಿದೆ.
ಭಾವನೆಗಳನ್ನು ಮೊಗೆ ಮೊಗೆದು ಪ್ರಸ್ತುತಪಡಿಸಿದ್ದೀರಿ..ನಿಜ ಹೇಳಲಾ,ಮನಸು ಸ೦ಭ್ರಮಿಸಿತು ಮತ್ತೆ.....

SANTA said...

ಪ್ರೀತಿಸಲು ಕಾರಣ ಬೇಕಿಲ್ಲ ಹಾಗೆಯೇ ತಿರಸ್ಕರಿಸಲೂ! ಒಮ್ಮೊಮ್ಮೆ ಪ್ರೀತಿ ಒರತೆ ಉಕ್ಕಿ ಹರಿಯುತ್ತದೆ ನಾವು ಬೊಗಸೆಯಲ್ಲಿ ಒಡ್ಡುಕಟ್ಟುವ ಸಾಹಸ ಮಾಡುತ್ತೇವೆ! ಮುಗದೊಮ್ಮೆ ಅದು ಮರೀಚಿಕೆಯಾಗಿ ಕಾಡಿ ಮರಳುಗಾಡಾಗುತ್ತದೆ. ಆ ಝಳಕ್ಕೆ ಕಣ್ಣೀರು ಹರಿಯುತ್ತದೆ. ಪ್ರೀತಿಕೊಡುವ ಸುಖದ ನೆರಳಿನಲ್ಲೇ ನೋವೂ ಹುದುಗಿರುತ್ತದೆ ಗೆಳತಿ! ಒಟ್ಟಾರೆ ಪ್ರೀತಿ ಬದುಕು ತೆರೆದು ತೋರುತ್ತದೆ...ಕಾಲಕ್ಕೆ ರೆಕ್ಕೆಪುಕ್ಕ ನೀಡಿ ಮೇಲಕ್ಕೆ ಹಾರಿಸಿ ಕಾಲಮರೆಸುವಷ್ಟೇ ತೀವ್ರವಾಗಿ ಕೆಳಕ್ಕೆ ಕೆಡಗಿ ನೆಲಕಾಣಿಸುತ್ತದೆ! ಹಾಗಾಗಿ ಪ್ರೀತಿಯೆಂದರೆ ನದಿಯಂತೆ! ಹರಿಯುತ್ತಿರಲಿ....ಬದುಕು ಹಸಿರಾಗಿರಲಿ......
ಒಂದು ಒಳ್ಳೆಯ ಬರಹ ಓದಲು ಸಿಕ್ಕಿದ್ದಕ್ಕೆ.....ಅದಕ್ಕೆ ಪ್ರತಿಕ್ರಿಯಿಸಲು ಸಾಧ್ಯಮಾಡಿದ್ದಕ್ಕೆ ಧನ್ಯವಾದಗಳು.

ದಿನಕರ ಮೊಗೇರ said...

ಜ್ಯೋತಿ ಮೇಡಂ,
ತುಂಬಾ ಚೆನ್ನಾಗಿದೆ.... ಯಾರದೋ ಅನುಭವ ಕೇಳಿ ಬರೆದ ಹಾಗಿದೆ....

nannolagina nanu said...

ಗೆಳತೀ....
ಹಳೆಯ ನೋವುಗಳು ನಮ್ಮ ಬದುಕಿಗೆ ಒಂದು ಪಾಠವಾಗ ಬೇಕೇ ಹೊರತು ನಮ್ಮ ವರ್ತಮಾನ , ಭವಿಷ್ಯವನ್ನು ಕಾಡುವ ನೆನಪುಗಳಾಗಬಾರದು.ನೀನನ್ನೋದು ನಿಜ ಯಾರಿಗೂ ತಮ್ಮ ಇಲ್ಲದಿರುವಿಕೆಯಿಂದ ನಮ್ಮ ಪ್ರಪಂಚವನ್ನು ಬರಡಾಗಿಸಲು ಸಾಧ್ಯವಿಲ್ಲ.ಅದ್ಭುತ ಬರಹ.

ವಿನಾಯಕ ಹೆಬ್ಬಾರ said...

ಬೇರೆ ಯಾರ ಬರಹದಲ್ಲೂ ಕಾಣದಂಥ ನೂತನ ಶೈಲಿ ನಿಮಗಿದೆ.... ನಿಜ ಹೇಳಲಾ? ಪ್ರತಿ ಮಲ್ಲಿಗೆಯ ದಂಡೆಯೂ ಅನುಭವದ ಇಬ್ಬನಿಯಿಂದಾಗಿ ಸುಂದರವಾಗಿ ಕಾಣುತ್ತಿದೆ...

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಜ್ಯೊತಿ,
ತುಂಬಾ ಆಪ್ತವಾಗುವಂತೆ ಬರೆಯುತ್ತೀರಿ.ನಿಮ್ಮ ಬ್ಲಾಗನ್ನು ಇತ್ತೀಚೆಗೆ ಓದಲು ಆರಂಭಿಸಿದೆ.ಈಗ ಎಲ್ಲ ಬರೆಹಗಳನ್ನು ತಪ್ಪದೆ ಓದುತ್ತಿರುವೆ.ಬರೆಯುತ್ತಿರಿ...

ಮನಮುಕ್ತಾ said...

a very touching story...very nice!

Jyoti Hebbar said...

ನಿಮ್ಮ ಅಭಿಪ್ರಾಯ ಕೇಳಿ ಮನಸು ನಿಜಕ್ಕೂ ಸಂಭ್ರಮಿಸುತ್ತಿದೆ... ಧನ್ಯವಾದಗಳು..

ಸೀತಾರಾಮ. ಕೆ. / SITARAM.K said...

ಚೆ೦ದದ ಅಭಿವ್ಯಕ್ತಿ. ನವಿರಾಗಿ ಎಳೆ-ಎಳೆಯಾಗಿ ಹೆಣೆದ ಭಾವಗಳ ದ೦ಡೆ. ಕಾಲಕ್ಕೆ ಎಲ್ಲವನ್ನು ಮರೆಸುವ-ಮೆರೆಸುವ ಶಕ್ತಿ ಇದೆ. ಆಪ್ತತೆಯ ಬರಹ.

ಜಿ.ಎಸ್.ಬಿ. ಅಗ್ನಿಹೋತ್ರಿ said...

chennagide....
pakshigala melina priti innstu khushi kottitu...